ಮೇ 9ರ ರವೀಂದ್ರನಾಥ್ ಟ್ಯಾಗೋರ್ ಜನ್ಮ ದಿನಾಚರಣೆಯಂದೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಪ್ರಮಾಣ ವಚನ
BJP government in Bengal: ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನದಂದೇ ಅಂದರೆ ಮೇ 9ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಕೂಡ ಈ ದಿನಾಂಕವನ್ನು ದೃಢಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಂಭ್ರಮಾಚರಣೆ -
ಕೋಲ್ಕತ್ತಾ, ಮೇ 5: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದು ಬೀಗಿದೆ. ಮಮತಾ ಬ್ಯಾನರ್ಜಿ (Mamatha Banerjee) ನೇತೃತ್ವದ ಟಿಎಂಸಿಗೆ ಸೋಲಾಗಿದ್ದು, ಕಮಲ ಅರಳಿದೆ. ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಟ್ಯಾಗೋರ್ (Rabindranath Tagore) ಅವರ ಜನ್ಮದಿನದಂದೇ ಅಂದರೆ ಮೇ 9ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ (BJP government in Bengal) ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಈ ದಿನಾಂಕವನ್ನು ರಾಜ್ಯದಲ್ಲಿ ಹೊಸ ಆರಂಭವನ್ನು ಗುರುತಿಸಲು ಪರಿಗಣಿಸಲಾಗಿದೆ. ಹೀಗಾಗಿ ಅಂದೇ ಸರ್ಕಾರ ರಚಿಸಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಕೂಡ ದಿನಾಂಕವನ್ನು ದೃಢಪಡಿಸಿದ್ದಾರೆ. ʼʼಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೇ 9ರಂದು ನಡೆಯಲಿದೆʼʼ ಎಂದು ಭಟ್ಟಾಚಾರ್ಯ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಬ್ಯಾರಕ್‌ಪೋರ್‌ನಲ್ಲಿ ನಡೆದ ತಮ್ಮ ಅಂತಿಮ ಪ್ರಚಾರ ರ‍್ಯಾಲಿಯಲ್ಲಿ ಈ ಬಗ್ಗೆ ಬಲವಾದ ಸೂಚನೆ ನೀಡಿದ್ದರು. ಮೇ 4ರಂದು ಫಲಿತಾಂಶಗಳ ನಂತರ ಬಿಜೆಪಿಯ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ನಾನು ಇಲ್ಲಿಗೆ ಹಿಂತಿರುಗುತ್ತೇನೆ ಎಂಬ ವಿಶ್ವಾಸದೊಂದಿಗೆ ನಾನು ಹಿಂತಿರುಗುತ್ತಿದ್ದೇನೆ ಎಂದು ಅವರು ಘೋಷಿಸಿದ್ದರು.
"ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ": ಬಂಗಾಳದ ಆಘಾತಕಾರಿ ಸೋಲಿಗೆ ಮಮತಾ ಬ್ಯಾನರ್ಜಿ ಹತಾಶೆ
ಬಂಗಾಳದ ಐತಿಹಾಸಿಕ ತೀರ್ಪಿನ ನಂತರ, ಪ್ರಧಾನಿ ಮೋದಿ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಟ್ಯಾಗೋರ್ ಅವರ ಆದರ್ಶಗಳನ್ನು ಉಲ್ಲೇಖಿಸಿದರು.
ಚುನಾವಣಾ ಫಲಿತಾಂಶಗಳ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಅವರಿಗೆ ಹಸ್ತಾಂತರಿಸಲು ಭಾರತೀಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಎಸ್‌ಬಿ ಜೋಶಿ ಮತ್ತು ಕಾರ್ಯದರ್ಶಿ ಸುಜಿತ್ ಕುಮಾರ್ ಮಿಶ್ರಾ ಮೇ 5ರಂದು ದೆಹಲಿಯಿಂದ ಕೋಲ್ಕತ್ತಾಗೆ ಆಗಮಿಸಲಿದ್ದಾರೆ.
ಸಿಇಒ ಮೇ 6ರಂದು ರಾಜ್ಯಪಾಲ ಆರ್.ಎನ್. ರವಿ ಅವರಿಗೆ ಔಪಚಾರಿಕವಾಗಿ ಮಾಹಿತಿ ನೀಡುವ ನಿರೀಕ್ಷೆಯಿದೆ. ನಂತರ ರಾಜ್ಯಪಾಲರು ಸಾಂವಿಧಾನಿಕ ಶಿಷ್ಟಾಚಾರದ ಪ್ರಕಾರ ನಿರ್ಗಮಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಜೀನಾಮೆ ನೀಡಲು ಆಹ್ವಾನಿಸುತ್ತಾರೆ. ಇದರ ನಂತರ, ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲ ಆರ್.ಎನ್. ರವಿ ಮಮತಾ ಬ್ಯಾನರ್ಜಿ ಅವರನ್ನು ವಿನಂತಿಸಲಿದ್ದಾರೆ.
ಬೈಶಾಖ್ ತಿಂಗಳ 25ರಂದು ರಾಜ್ಯಾದ್ಯಂತ ಅಪಾರ ಭಕ್ತಿಯಿಂದ ಆಚರಿಸಲಾಗುವ ಈ ದಿನವು ಬಹಳ ಮಹತ್ವದ್ದಾಗಿದೆ. ಇದು ಬಂಗಾಳಿಯತೆಯ ಹಬ್ಬ. ಟ್ಯಾಗೋರ್ ಅವರ ಕಾವ್ಯ, ಹಾಡುಗಳು (ರವೀಂದ್ರ ಸಂಗೀತ), ಸಾಹಿತ್ಯ ಮತ್ತು ಮಾನವತಾವಾದಿ ತತ್ವಶಾಸ್ತ್ರವು ಬಂಗಾಳಿ ಸಂಸ್ಕೃತಿಯಲ್ಲಿ ಹಾಸು ಕೊಕ್ಕಿದೆ. ನಾಲ್ಕೂವರೆ ದಶಕಗಳ ಎಡಪಂಥೀಯ ಮತ್ತು ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಬಿಜೆಪಿ ಕೊನೆಗೊಳಿಸಿದ್ದು, ಪ್ರಮಾಣ ವಚನ ಸ್ವೀಕಾರವು ಬಂಗಾಳದ ರಾಜಕೀಯ ಇತಿಹಾಸದಲ್ಲಿ ಒಂದು ಹೆಗ್ಗುರತಾಗಲಿದೆ.