Bypoll Result: ಮೊದಲ ಅಗ್ನಿ ಪರೀಕ್ಷೆ ಗೆದ್ದ ಸುವೇಂದು ಅಧಿಕಾರಿ, ವಿಜಯ್; ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿಯಲ್ಲಿ ಆಡಳಿತ ಪಕ್ಷಗಳಿಗೆ ಜೈ ಎಂದ ಮತದಾರ
ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿಯ ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತರೂಢ ಪಕ್ಷಗಳು ಜಯ ಸಾಧಿಸಿವೆ. ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಮತ್ತೊಂದೆಡೆ, ತಮಿಳುನಾಡಿನ ಧಾರಾಪುರಂ ಮತ್ತು ಮಧುರಾಂತಕಂ ಕ್ಷೇತ್ರಗಳಲ್ಲಿ ವಿಜಯ್ ನೇತೃತ್ವದ ಟಿವಿಕೆ ಜಯಭೇರಿ ಬಾರಿಸಿದೆ. ಪುದುಚೇರಿಯ ತಟ್ಟಂಚಾವಡಿ ಕ್ಷೇತ್ರದಲ್ಲೂ ಆಡಳಿತಾರೂಢ ಎಐಎನ್‌ಆರ್‌ಸಿ ಗೆಲುವು ಸಾಧಿಸಿದೆ. ಇನ್ನು ಅಸ್ಸಾಂನ ನಾಗೋನ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.
ಸುವೇಂದು ಅಧಿಕಾರಿ-ವಿಜಯ್ (ಸಂಗ್ರಹ ಚಿತ್ರ) -
ದೆಹಲಿ, ಅ. 9: ತಮಿಳುನಾಡು, ಪಶ್ಚಿಮ ಬಂಗಾಳದ ತಲಾ 2, ಪುದುಚೇರಿಯ 1 ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ 1 ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತರೂಢ ಪಕ್ಷಗಳು ಭರ್ಜರಿ ಜಯ ದಾಖಲಿಸಿವೆ. ಪಶ್ಚಿಮ ಬಂಗಾಳದಲ್ಲಿ 2 ಕಡೆಗಳಲ್ಲಿ ಬಿಜೆಪಿ ದಾಖಲೆಯ ಗೆಲುವು ದಾಖಲಿಸಿದ್ದರೆ, ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Joseph Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಎರಡೂ ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಾರುಪತ್ಯ
ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಸಿ ರಾಣಿ ರಥ್ ಸಮೀಪದ ಪ್ರತಿಸ್ಪರ್ಧಿ, ಕಾಂಗ್ರೆಸ್‌ನ ಮಿಲನ್ ಪ್ರಧಾನ್ ವಿರುದ್ಧ 1.22 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಐತಿಹಾಸಿಕ ಜಯ ಸಾಧಿಸಿದ್ದಾರೆ. ಹಸಿ ರಾಣಿ ರಥ್ 1,64,227 ಮತಗಳನ್ನು ಗಳಿಸಿದರೆ, ಮಿಲನ್ ಪ್ರಧಾನ್ 41,674 ಮತಗಳಿಗೆ ತೃಪ್ತಿಪಟ್ಟರು. ಈ ಮೂಲಕ 1967ರ ನಂತರದ ಅತಿ ದೊಡ್ಡ ಅಂತರದ ಗೆಲುವಿನ ದಾಖಲೆ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಿಂದ ಗೆದ್ದು, ಬಳಿಕ ನಂದಿಗ್ರಾಮವನ್ನು ತೆರವುಗೊಳಿಸಿದ್ದರಿಂದ ಈ ಉಪಚುನಾವಣೆ ನಡೆದಿತ್ತು.
ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಅಧಿಸೂಚನೆ ಪ್ರಕಟ
ಮತ್ತೊಂದೆಡೆ, ಶೇಕಡಾ 70ರಷ್ಟು ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ರೆಜಿನಗರ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಶಂಖರವ್ ಸರ್ಕಾರ್ 75,000ಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. ಇವರು 1,29,914 ಮತಗಳನ್ನು ಗಳಿಸಿ, ಆಮ್ ಜನತಾ ಉನ್ನಯನ್ ಪಾರ್ಟಿಯ ಗುಲಾಂ ನಬಿ ಆಜಾದ್ (54,098 ಮತಗಳು) ಅವರನ್ನು ಸೋಲಿಸಿದರು. ಹುಮಾಯೂನ್ ಕಬೀರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ರಾಜ್ಯದಲ್ಲಿ ಅಲ್ಪಸಂಖ್ಯಾತರು ಮತ್ತು ಅನ್ನಪೂರ್ಣ ಯೋಜನೆಯ ಫಲಾನುಭವಿಗಳು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.
ತಮಿಳುನಾಡು, ಪುದುಚೇರಿಯಲ್ಲಿ ಆಡಳಿತ ಪಕ್ಷಗಳ ಜಯಭೇರಿ
ತಮಿಳುನಾಡಿನ ಧಾರಾಪುರಂ ಮತ್ತು ಮಧುರಾಂತಕಂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಆಡಳಿತಾರೂಢ ಟಿವಿಕೆ ಕ್ಲೀನ್ ಸ್ವೀಪ್ ಮಾಡಿದೆ. ಧಾರಾಪುರಂನಲ್ಲಿ ಟಿವಿಕೆ ಅಭ್ಯರ್ಥಿ ಪಿ. ಸತ್ಯಭಾಮಾ (66,841 ಮತಗಳು) ಡಿಎಂಕೆಯ ಸುಕನ್ಯಾ (57,370 ಮತಗಳು) ಎದುರು 9,471 ಮತಗಳಿಂದ ಗೆದ್ದರೆ, ಮಧುರಾಂತಕಂನಲ್ಲಿ ಟಿವಿಕೆಯ ಮರಗತಂ ಕುಮಾರವೇಲ್ (74,048 ಮತಗಳು) ಡಿಎಂಕೆಯ ಐ. ಪರಂತಮೆನ್ ವಿರುದ್ಧ 20,040 ಮತಗಳ ಅಂತರದಿಂದ ಭರ್ಜರಿ ವಿಜಯ ದಾಖಲಿಸಿದರು. ಈ ಗೆಲುವಿನೊಂದಿಗೆ 234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ ಶಾಸಕರ ಸಂಖ್ಯೆ ಏರಿಕೆಯಾಗಿದ್ದು, ಮೈತ್ರಿಕೂಟದ ಆಡಳಿತಕ್ಕೆ ಇನ್ನಷ್ಟು ಬಲ ಬಂದಿದೆ.
ಇದೇ ವೇಳೆ, ನೆರೆಯ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ತಟ್ಟಂಚಾವಡಿ ಉಪಚುನಾವಣೆಯಲ್ಲಿ ಆಡಳಿತಾರೂಢ ಎಐಎನ್‌ಆರ್‌ಸಿ ಅಭ್ಯರ್ಥಿ ಅಶೋಕ್ ಆನಂದ್ ಕಾಂಗ್ರೆಸ್‌ನ ಇ. ವಿನಾಯಗಂ ಅವರನ್ನು 8,000ಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಅಧಿಕಾರ ಉಳಿಸಿಕೊಂಡಿದ್ದಾರೆ.
ಇನ್ನು ಅಸ್ಸಾಂನ ನಾಗೌನ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಮುಸ್ಲಿಂ ಜನಸಂಖ್ಯೆ ಅಧಿಕವಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೇವಾಶಿಷ್ ಶರ್ಮಾ ಸುಮಾರು 1.7 ಲಕ್ಷ ಮತಗಳ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದಾರೆ. ಅವರು ಎಐಯುಡಿಎಫ್‌ನ ಬದ್ರುದ್ದೀನ್ ಅಜ್ಮಲ್ ಅವರನ್ನು ಸೋಲಿಸಿದ್ದಾರೆ. ದೇವಾಶಿಷ್ ಶರ್ಮಾ 6,77,258 ಮತ ಗಳಿಸಿದರೆ, ಅಜ್ಮಲ್ ಪರ 5,04,731 ವೋಟು ಚಲಾವಣೆಗೊಂಡಿದೆ.