ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ಮುಚ್ಚಿಸಲು ಸರ್ಕಾರ ಸೂಚಿಸಿದ್ದೇಕೆ?

ರಾಜಕೀಯ ವ್ಯಂಗ್ಯ ಹಾಗೂ ವಿಡಂಬನೆಗಾಗಿ ಪ್ರಸಿದ್ಧಿಯಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆಯನ್ನು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಐಬಿ ವರದಿ ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69(ಎ) ಅಡಿಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಯುವಕರಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದ ಈ ಖಾತೆ ಕೆಲವೇ ದಿನಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿತ್ತು.

ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ಭಾರತದಲ್ಲಿ ಬ್ಯಾನ್ ಆಗಿದ್ದೇಕೆ?

ಸಿಜೆಪಿ ಲೋಗೋ -

Profile
Sushmitha Jain May 22, 2026 3:10 PM

ನವದೆಹಲಿ, ಮೇ 22: ರಾಜಕೀಯ ವ್ಯಂಗ್ಯಚಿತ್ರ ಹಾಗೂ ವಿಡಂಬನೆಗೆ ಹೆಸರಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಸಂಸ್ಥೆಯ 'ಎಕ್ಸ್' (ಟ್ವಿಟರ್) ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಇಂಟೆಲಿಜೆನ್ಸ್ ಬ್ಯೂರೋ ಈ ಖಾತೆಯು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಹುದು ಎಂಬ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಆದೇಶ ನೀಡಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ 'ದಿ ಇಂಡಿಯನ್ ಎಕ್ಸ್‌ಪ್ರೆಸ್ (The Indian Express)' ವರದಿ ಮಾಡಿದೆ.

ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಭೀತಿಯನ್ನು ಐಬಿ ಉಲ್ಲೇಖಿಸಿದ ನಂತರ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69 (ಎ) ಅಡಿಯಲ್ಲಿ ಈ ವಿಡಂಬನಾತ್ಮಕ ಖಾತೆಯನ್ನು ತಡೆಹಿಡಿಯುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಎಕ್ಸ್ ಸಂಸ್ಥೆಗೆ ಸೂಚಿಸಿದೆ.

ಸರ್ಕಾರದ ಕಳವಳಕ್ಕೆ ಕಾರಣವೇನು?

ಉದ್ರೇಕಕಾರಿ ವಿಷಯ: ಈ ಖಾತೆಯು ಸಮಾಜದಲ್ಲಿ ಉದ್ರೇಕ ಉಂಟುಮಾಡುವಂತಹ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದು, ಇದು ದೇಶದ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಐಬಿ ನಂಬಿತ್ತು.

ಯುವಕರ ಮೇಲೆ ಪ್ರಭಾವ: ಈ ಖಾತೆಯ ವಿಡಂಬನಾತ್ಮಕ ಪೋಸ್ಟ್‌ಗಳು ದೇಶದ ಯುವ ಪೀಳಿಗೆಯಲ್ಲಿ ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವುದು ಸರ್ಕಾರದ ಕಳವಳವನ್ನು ಮತ್ತಷ್ಟು ಹೆಚ್ಚಿಸಿತ್ತು.

ಕಾಕ್ರೋಚ್ ಜನತಾ ಪಕ್ಷವು 'ಜಿರಳೆ' ಚುನಾವಣಾ ಚಿಹ್ನೆ ಪಡೆಯಬಹುದೇ? ಈ ಬಗ್ಗೆ ತಜ್ಞರು ಹೇಳೋದೇನು?

ವೇಗದ ಬೆಳವಣಿಗೆ: ಈ ಖಾತೆಯು ಸುಮಾರು 90,000 ಫಾಲೋವರ್ಸ್‌ ಹೊಂದಿದ್ದಾಗ ಮೊದಲ ಬಾರಿಗೆ ತಡೆಹಿಡಿಯುವ ಆದೇಶವನ್ನು ಕಳುಹಿಸಲಾಗಿತ್ತು. ಆದರೆ ಗುರುವಾರ ಸಂಜೆಯ ವೇಳೆಗೆ ಇದು ಎಕ್ಸ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ದಾಟಿತ್ತು. ಭಾರತದಲ್ಲಿ ಇದು ನಿರ್ಬಂಧಿಸಲ್ಪಟ್ಟಿದ್ದರೂ, ವಿದೇಶಗಳಲ್ಲಿ ಇಂದಿಗೂ ಲಭ್ಯವಿದೆ.

ಏನಿದು 'ಕಾಕ್ರೋಚ್ ಜನತಾ ಪಾರ್ಟಿ'?

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನ್ಯಾಯಾಲಯದ ವಿಚಾರಣೆಯೊಂದರಲ್ಲಿ ದೇಶದ ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮೇ 16ರಂದು ಈ ವೈರಲ್ ರಾಜಕೀಯ ವಿಡಂಬನಾ ಚಳುವಳಿ 'ಸಿಜೆಪಿ' ಆರಂಭವಾಯಿತು.

ಸ್ಥಾಪಕ ಅಭಿಷೇಕ್ ದಿಪ್ಕೆ

ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ 30 ವರ್ಷದ ಅಭಿಷೇಕ್ ದಿಪ್ಕೆ ಇದನ್ನು ಪ್ರಾರಂಭಿಸಿದರು.

ಅದ್ಭುತ ಜನಪ್ರಿಯತೆ

ಗೂಗಲ್ ಫಾರ್ಮ್ ಮೂಲಕ ನೋಂದಣಿ ಆರಂಭಿಸಿದ ಕೆಲವೇ ಗಂಟೆಗಳಲ್ಲಿ 15,000 ಜನರು ಸೇರಿಕೊಂಡರು. ಕೆಲವೇ ದಿನಗಳಲ್ಲಿ ಸಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ 6 ಲಕ್ಷ ನೋಂದಣಿಗಳನ್ನು ಪಡೆಯಿತು. ಇನ್‌ಸ್ಟಾಗ್ರಾಮ್‌ನಲ್ಲಿ ಇದರ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 1.3 ಕೋಟಿ (13 ಮಿಲಿಯನ್) ದಾಟಿದೆ. ಇದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಇನ್‌ಸ್ಟಾಗ್ರಾಮ್ ಫಾಲೋವರ್ಸ್ (87 ಲಕ್ಷ) ಸಂಖ್ಯೆಗಿಂತಲೂ ದೂಡ್ಡದಾಗಿದೆ.