Spying for Pakistan: ಪಾಕಿಸ್ತಾನಕ್ಕೆ ಬೇಹುಗಾರಿಕೆ; ನೌಕಾಪಡೆ ಪ್ರಧಾನ ಕಚೇರಿ ಗುಮಾಸ್ತನ ಬಂಧನ
ದೆಹಲಿಯ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ ಗುಮಾಸ್ತನಾಗಿದ್ದ ವಿಶಾಲ್, ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮತ್ತು ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆಯಲ್ಲಿಯೂ ಸಹ ಬೇಹುಗಾರಿಕೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.


ನವದೆಹಲಿ: ಪಾಕಿಸ್ತಾನಕ್ಕೆ ಬೇಹುಗಾರಿಕೆ (Spying for Pakistan) ನಡೆಸುತ್ತಿದ್ದ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ (Navy headquarter) ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಪಹಲ್ಗಾಮ್ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಗೆ (Terror attack) ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಅಪರೇಶನ್ ಸಿಂದೂರ್ (Operation Sindoor) ಕಾರ್ಯಾಚರಣೆ ವೇಳೆ ದೆಹಲಿಯ ಭಾರತೀಯ ನೌಕಾಪಡೆಯ ಪ್ರಧಾನ ಕಚೇರಿ ಗುಮಾಸ್ತನಾಗಿರುವ ಹರಿಯಾಣ ನಿವಾಸಿ ವಿಶಾಲ್ ಯಾದವ್ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ಇದೀಗ ರಾಜಸ್ಥಾನ ಪೊಲೀಸರ ಗುಪ್ತಚರ ವಿಭಾಗವು ಬಂಧಿಸಿದೆ.
ದೆಹಲಿಯ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ ಗುಮಾಸ್ತನಾಗಿದ್ದ ವಿಶಾಲ್, ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮತ್ತು ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆಯಲ್ಲಿಯೂ ಸಹ ಬೇಹುಗಾರಿಕೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಪಾಕಿಸ್ತಾನದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ವಿಶಾಲ್ ನೌಕಾಪಡೆ ಮತ್ತು ಇತರ ರಕ್ಷಣಾ ಘಟಕಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹಣಕ್ಕಾಗಿ ಹಂಚಿಕೊಂಡಿದ್ದಾನೆ ಎಂಬುದು ಆತನ ಮೊಬೈಲ್ನಿಂದ ಬಹಿರಂಗವಾಗಿದೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ವಿಷ್ಣುಕಾಂತ್ ಗುಪ್ತಾ, ʼʼರಾಜಸ್ಥಾನದ ಸಿಐಡಿ ಗುಪ್ತಚರ ಘಟಕವು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ನಡೆಸುವ ಬೇಹುಗಾರಿಕೆ ಚಟುವಟಿಕೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ವಿಶಾಲ್ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ಮಹಿಳಾ ನಿರ್ವಾಹಕಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದʼʼ ಎಂದು ತಿಳಿಸಿದ್ದಾರೆ.
ಪ್ರಿಯಾ ಶರ್ಮಾ ಎಂಬ ಹೆಸರಿನ ಮಹಿಳೆಯು ಗೌಪ್ಯ ಮಾಹಿತಿಯನ್ನು ಪಡೆಯಲು ಅವನಿಗೆ ಹಣ ನೀಡುತ್ತಿದ್ದಳು. ವಿಶಾಲ್ ಯಾದವ್ಗೆ ಆನ್ಲೈನ್ ಗೇಮ್ ಆಡುವ ಚಟವಿತ್ತು. ಅದರಿಂದ ಆರ್ಥಿಕ ನಷ್ಟವನ್ನು ಅನುಭವಿಸಿದ್ದ. ಅದನ್ನು ಸರಿದೂಗಿಸಲು ಆತನಿಗೆ ಹಣದ ಅಗತ್ಯವಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯಾದವ್ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಖಾತೆ ಮತ್ತು ನೇರವಾಗಿ ಬ್ಯಾಂಕ್ ಖಾತೆ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದ ಎಂದು ವಿಷ್ಣುಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: Spying for Pakistan: ಐಎಸ್ಐ ಪರ ಬೇಹುಗಾರಿಕೆ, ಪಾಕಿಸ್ತಾನಕ್ಕೆ 7 ಬಾರಿ ಭೇಟಿ; ರಾಜಸ್ಥಾನ ಸರ್ಕಾರಿ ನೌಕರನ ಬಂಧನ
ವಿಶಾಲ್ ಯಾದವ್ನನ್ನು ಜೈಪುರದ ಕೇಂದ್ರ ವಿಚಾರಣಾ ಕೇಂದ್ರದಲ್ಲಿ ವಿವಿಧ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ವಿಚಾರಣೆ ನಡೆಸುತ್ತಿವೆ. ಈ ದಂಧೆಯಲ್ಲಿ ಬೇರೆ ಯಾರು ಭಾಗಿಯಾಗಿದ್ದಾರೆ ಮತ್ತು ಎಷ್ಟು ಸೂಕ್ಷ್ಮ ಮಾಹಿತಿ ಸೋರಿಕೆಯಾಗಿದೆ ಎಂಬುದರ ಕುರಿತು ತಿಳಿಯಲು ಭದ್ರತಾ ಸಂಸ್ಥೆ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ಬೇಹುಗಾರಿಕೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆ ಕಂಡು ಬಂದರೆ ತಕ್ಷಣ ವರದಿ ಮಾಡುವಂತೆ ಭದ್ರತಾ ಸಂಸ್ಥೆಗಳು ತಿಳಿಸಿದೆ.