ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಸುದ್ದಿಗಳ ಪ್ರಸಾರಕ್ಕೆ ತಾಲಿಬಾನ್ ನಿಷೇಧ? ರೇಡಿಯೋ ಕೇಂದ್ರಗಳಿಗೆ ಹೊಸ ಆದೇಶ!
ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಸುದ್ದಿ, ಪಂದ್ಯಗಳ ವರದಿ ಹಾಗೂ ಫಲಿತಾಂಶಗಳನ್ನು ಪ್ರಸಾರ ಮಾಡದಂತೆ ತಾಲಿಬಾನ್ ಆಡಳಿತ ರೇಡಿಯೋ ಕೇಂದ್ರಗಳಿಗೆ ಆದೇಶಿಸಿದೆ. ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿದ್ದು, ದೇಶದ ಕ್ರೀಡಾ ವಲಯದಲ್ಲಿ ಆತಂಕ ಹೆಚ್ಚಾಗಿದೆ.
ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಪ್ರಸಾರ ನಿಷೇಧ? -
ನವದೆಹಲಿ: ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಕಂದಹಾರ್ ಪ್ರಾಂತ್ಯದ ರೇಡಿಯೋ ಕೇಂದ್ರಗಳಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ಸುದ್ದಿಗಳು ಹಾಗೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ತಾಲಿಬಾನ್ ಆಡಳಿತ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ಎಎಫ್‌ಪಿ (AFP) ಸುದ್ದಿಸಂಸ್ಥೆ ಈ ಕುರಿತು ವರದಿ ಮಾಡಿದ್ದು, ತಾಲಿಬಾನ್‌ನ ಈ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ದೇಶದಲ್ಲಿ ಕ್ರಿಕೆಟ್‌ಗೆ ಅಪಾರ ಅಭಿಮಾನಿಗಳಿದ್ದು, ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಕೂಡ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಸುದ್ದಿಗಳ ಪ್ರಸಾರವನ್ನೇ ನಿಷೇಧಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಶನಿವಾರ (ನವೆಂಬರ್ 14) ಪ್ರಾಂತೀಯ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ರೇಡಿಯೋ ಕೇಂದ್ರಗಳಿಗೆ ಈ ಕುರಿತು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಇನ್ನು ಮುಂದೆ ಪ್ರಸಾರ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
IND vs NZ: 5 ರನ್‌ಗೆ ಔಟ್ ಆಗಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ವಿರಾಟ್ ಕೊಹ್ಲಿ!
"ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ (ಕಾಮೆಂಟರಿ), ಸುದ್ದಿಗಳ ಪ್ರಸಾರ ಮಾತ್ರವಲ್ಲದೆ, ಪಂದ್ಯದಲ್ಲಿ ತಂಡ ಗೆಲುವು ಸಾಧಿಸಿದ ಸುದ್ದಿಯನ್ನು ವರದಿ ಮಾಡುವುದಕ್ಕೂ ಅನುಮತಿ ಇಲ್ಲ," ಎಂದು ಪ್ರಾಂತೀಯ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಮೂಲವೊಂದು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿರುವುದಾಗಿ ವರದಿಯಾಗಿದೆ.
ಈ ಆದೇಶದ ಕುರಿತು ಪ್ರತಿಕ್ರಿಯೆ ಪಡೆಯಲು ಸ್ಪೋರ್ಟ್ಸ್ ನೌ (Sports Now) ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿದೆ. ಆದರೆ, ಈವರೆಗೆ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈಗಾಗಲೇ ಹಲವು ಕ್ರೀಡೆಗಳಿಗೆ ತಾಲಿಬಾನ್ ನಿರ್ಬಂಧ
ತಾಲಿಬಾನ್ ಆಡಳಿತವು ಈ ಹಿಂದೆಯೂ ಅಫ್ಘಾನಿಸ್ತಾನದಲ್ಲಿ ಕೆಲವು ಕ್ರೀಡೆಗಳಿಗೆ ನಿರ್ಬಂಧ ವಿಧಿಸಿದೆ. ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (MMA) ಸೇರಿದಂತೆ ಕೆಲವು ಕ್ರೀಡೆಗಳನ್ನು ನಿಷೇಧಿಸಿದೆ. ಆದರೆ ಪುರುಷರು ಮತ್ತು ಬಾಲಕರು ಕ್ರಿಕೆಟ್ ಆಡುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಮಹಿಳೆಯರು ಮತ್ತು ಬಾಲಕಿಯರಿಗೆ ಕ್ರೀಡೆಯಲ್ಲಿ ಭಾಗವಹಿಸಲು ತಾಲಿಬಾನ್ ಆಡಳಿತ ಸಂಪೂರ್ಣ ನಿರ್ಬಂಧ ವಿಧಿಸಿದೆ. ವಿಶೇಷವಾಗಿ ಮಹಿಳಾ ಕ್ರಿಕೆಟ್‌ಗೆ ಸಂಬಂಧಿಸಿದಂತೆ ತಾಲಿಬಾನ್‌ನ ನೀತಿ ಅಫ್ಘಾನಿಸ್ತಾನದಲ್ಲಿ ಕ್ರೀಡೆಯ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿದೆ. ಅಫ್ಘಾನಿಸ್ತಾನ ಪುರುಷರ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರೂ, ಮಹಿಳೆಯರಿಗೆ ಕ್ರೀಡೆಯಲ್ಲಿ ಅವಕಾಶ ನೀಡದಿರುವ ವಿಚಾರ ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.
5ನೇ ಪಂದ್ಯದಲ್ಲಿ 3 ವಿಕೆಟ್ ಕಿತ್ತ ಅರ್ಷದೀಪ್ ಸಿಂಗ್ ಬಗ್ಗೆ ಶ್ರೇಯಸ್ ಅಯ್ಯರ್ ದೊಡ್ಡ ಹೇಳಿಕೆ!
ಅಫ್ಘಾನಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಗಳಿಗೆ ಕೆಲವು ದೇಶಗಳ ನಿರ್ಬಂಧ
ಮಹಿಳಾ ಕ್ರಿಕೆಟ್‌ಗೆ ಅವಕಾಶ ನೀಡದ ತಾಲಿಬಾನ್ ಆಡಳಿತದ ನೀತಿಯನ್ನು ವಿರೋಧಿಸಿ ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಪ್ರಮುಖ ಕ್ರಿಕೆಟ್ ರಾಷ್ಟ್ರಗಳು ಅಫ್ಘಾನಿಸ್ತಾನ ವಿರುದ್ಧ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಆಡದಿರಲು ನಿರ್ಧರಿಸಿವೆ. ಸ್ಕಾಟ್ಲೆಂಡ್ ಕೂಡ ಈ ನಿಲುವು ಹೊಂದಿದೆ. ಆದರೆ, ದ್ವಿಪಕ್ಷೀಯ ಸರಣಿಗಳಿಗೆ ನಿರ್ಬಂಧವಿದ್ದರೂ, ಐಸಿಸಿ ಆಯೋಜಿಸುವ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಈ ತಂಡಗಳು ಅಫ್ಘಾನಿಸ್ತಾನ ವಿರುದ್ಧ ಪಂದ್ಯಗಳನ್ನು ಆಡುತ್ತಿವೆ.