ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

International Women's Day 2025: ಮಹಿಳಾ ಸಬಲೀಕರಣಕ್ಕೆ ಸರಕಾರ ಜಾರಿ ಮಾಡಿರುವ ಯೋಜನೆಗಳಾವ್ಯಾವು ಗೊತ್ತಾ?

ಕೇವಲ ನಾಲ್ಕುಗೋಡೆಗೆ ಸೀಮಿತ ವಾಗಿದ್ದ ಮಹಿಳೆ ಈಗ ಅಂತಾರಾಷ್ಟ್ರೀಯ ಮಟ್ಟದ ವರೆಗೂ ಸಾಧನೆ ಮಾಡುತ್ತಿದ್ದು ಈ ಸಾಧನೆ ಇತರರಿಗೂ ಪ್ರೇರಣೆ ದಾಯಕವಾಗುತ್ತಿದೆ. ಹಾಗಾಗಿ ಮಹಿಳೆಯರ ಅಭಿವೃದ್ಧಿಗಾಗಿ ಸರಕಾರ ಕೂಡ ಕೆಲವು ವಿಶೇಷ ಯೋಜನೆಯನ್ನು ಜಾರಿ ಮಾಡಿದ್ದು ಈ ಯೋಜನೆಗಳಿಂದಲೂ ಅನೇಕ ಮಹಿಳೆಯರ ಸ್ಥಾನಮಾನ ಸುಧಾರಿಸಿದ್ದು ಅವುಗಳ ಪ್ರಾಮುಖ್ಯತೆ ಬಗ್ಗೆ ಮಾಹಿತಿ ಇಲ್ಲಿದೆ.

ಸ್ತ್ರೀ ಸಬಲೀಕರಣಕ್ಕೆ ಸರ್ಕಾರ ಕೈಗೊಂಡ ಯೋಜನೆಗಳಿವು

womens day 2025

Profile Pushpa Kumari Mar 6, 2025 4:37 PM

ನವದೆಹಲಿ: ಪ್ರತೀ ವರ್ಷ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women's Day 2025)ಆಚರಿಸಲಾಗುತ್ತಿದ್ದು, ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವ ಸಲ್ಲಿಸುವ ವಿಶೇಷ ದಿನವಾಗಿದೆ. ಒಂದು ಕುಟುಂಬದ ಅಭಿವೃದ್ಧಿಯಿಂದ ಹಿಡಿದು ಸಮಾಜದಲ್ಲಿ ಗೌರವಯುತ ಸ್ಥಾನಮಾನ ತಲುಪುವವರೆಗೂ ಮಹಿಳೆಯರ ಪಾತ್ರ ಸಮಾಜದಲ್ಲಿ ಬಹಳಷ್ಟಿದೆ. ಮಹಿಳೆಯರು ದೇಶದ ಆರ್ಥಿಕತೆಗೆ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು ಮಹಿಳಾ ಸಬಲೀಕರಣ ಉದ್ದೇಶಕ್ಕಾಗಿ ಸರಕಾರವು ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಯೋಜನೆ ಜಾರಿ ಮಾಡಿದೆ. ಹಾಗಾಗಿ ಸರಕಾರ ಸ್ತ್ರೀ ಸಬಲೀಕರಣಕ್ಕಾಗಿ ಯಾವೆಲ್ಲ ಯೋಜನೆ ಪರಿಚಯಿಸಿದೆ. ಯಾವ ಉದ್ದೇಶಕ್ಕಾಗಿ ಜಾರಿಗೆ ತಂದಿದೆ ಇತ್ಯಾದಿ ಮಾಹಿತಿಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕೇವಲ ನಾಲ್ಕುಗೋಡೆಗೆ ಸೀಮಿತವಾಗಿದ್ದ ಮಹಿಳೆ ಈಗ ಅಂತಾ ರಾಷ್ಟ್ರೀಯ ಮಟ್ಟದವರೆಗೂ ಸಾಧನೆ ಮಾಡುತ್ತಿದ್ದು ಈ ಸಾಧನೆ ಇತರರಿಗೂ ಪ್ರೇರಕದಾಯಕವಾಗುತ್ತಿದೆ. ಹಾಗಾಗಿ ಮಹಿಳೆಯರ ಅಭಿವೃದ್ಧಿಗಾಗಿ ಸರಕಾರ ಕೂಡ ಕೆಲವು ವಿಶೇಷ ಯೋಜನೆಯನ್ನು ಜಾರಿ ಮಾಡಿದ್ದು ಈ ಯೋಜನೆಗಳಿಂದಲೂ ಅನೇಕ ಮಹಿಳೆಯರ ಸ್ಥಾನಮಾನ ಸುಧಾರಿಸಿದ್ದು ಅವುಗಳ ಪ್ರಾಮುಖ್ಯತೆ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ (PMUY)

ಮನೆಯಲ್ಲಿ ಕಟ್ಟಿಗೆ ಒಲೆ ಉರಿಸುವ ಮಹಿಳೆಯರಿಗೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ಮನಗಂಡ ಸರಕಾರ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಜಾರಿಗೆ ತಂದಿದೆ. ಬಡಕುಟುಂಬಗಳಿಗೆ ಉಚಿತ LPG ಸಿಲಿಂಡರ್ ಒದಗಿಸಿ ಮಹಿಳೆಯರ ಆರೋಗ್ಯ ಮತ್ತು ಸ್ಥಿತಿ ಸುಧಾರಿಸುವ ಉದ್ದೇಶ ಹೊಂದಿದ್ದ ಈ ಯೋಜನೆಯು 2019ರಿಂದ ಬಹಳ ಸಕ್ರಿಯ ಯೋಜನೆಯಲ್ಲಿ ಯಶಸ್ವಿ ಯೋಜನೆ ಎಂಬ ಹೆಗ್ಗಳಿಕೆ ಗಳಿಸಿದೆ.

ಸ್ಟ್ಯಾಂಡ್ ಅಪ್ ಇಂಡಿಯಾ ಮಿಷನ್

ಎಸ್ ಸಿ/ಎಸ್ ಟಿ ಮಹಿಳಾ ಉದ್ಯಮಿಗಳಿಗೆ ಸ್ವ ಉದ್ಯೋಗ ಮಾಡಲು ಬೇಕಾದ ಆರ್ಥಿಕ ಬಲ ನೀಡಲು ಸಾಲ ಸೌಲಭ್ಯ ಒದಗಿಸುವ ಯೋಜನೆ ಇದಾಗಿದ್ದು ಇದರಲ್ಲಿ ಸಬ್ಸಿಡಿ ಮೊತ್ತ ಸಹ ಸಿಗುತ್ತದೆ. ಒಟ್ಟು ಯೋಜನೆ ವೆಚ್ಚದ 75%ರಷ್ಟನ್ನು ಸರಕಾರವೇ ಬರಿಸಲಿದ್ದು ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಸಾಕಷ್ಟು ಸಹಕಾರ ಒದಗಿಸಲಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ

ಸಣ್ಣ ಪ್ರಮಾಣದಲ್ಲಿ ವ್ಯಾಪಾರ ವ್ಯವಹಾರ, ಉದ್ದಿಮೆ, ಸ್ವ ಉದ್ಯೋಗ ಹೊಂದುವ ನಿರೀಕ್ಷೆ ಇದ್ದ ಮಹಿಳೆಯರಿಗೆ ಆರ್ಥಿಕ ಸಾಲದ ನೆರವು ನೀಡುವ ಯೋಜನೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಾಗಿದೆ. ಇದರಲ್ಲಿ ಸಬ್ಸಿಡಿ ಸೌಲಭ್ಯ ಸಹ ಇದೆ. 2024-25ರಲ್ಲಿ ಬಜೆಟ್ ನಲ್ಲಿ ಸಾಲದ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಬೇಟಿ ಬಚಾವೊ ಬೇಪ ಪಡಾವೊ(BBBP)

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಹೆಣ್ಣಿನ ಜೀವನದಲ್ಲಿ ಶಿಕ್ಷಣಕ್ಕೆ ಬಹುಮುಖ್ಯ ಸ್ಥಾನವಿದ್ದು ಹೆಣ್ಣು ಮಕ್ಕಳ ಶಿಕ್ಷಣ ಉತ್ತೇಜಿಸುವ ನಿಟ್ಟಿನಲ್ಲಿ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಜಾರಿಗೆ ತಂದಿದೆ. ಇದರಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಸುಧಾರಿಸುವ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಸೇರಿದೆ. ನವಜಾತ ಹೆಣ್ಣು ಮಗುವಿಗೆ ಉಳಿತಾಯ ಖಾತೆ ತೆರೆಯಲು ಈ ಯೋಜನೆ ಜಾರಿಗೆ ತರಲಾಗಿದೆ.

ಕಿಶೋರಿ ಶಕ್ತಿ ಯೋಜನೆ

ಹದಿಹರೆಯದ ಮಹಿಳೆಯರ ಆರೋಗ್ಯ, ಪೋಷಣೆ ಮತ್ತು ಜೀವನ ಕೌಶಲ್ಯ ಸುಧಾರಿಸುವ ನೆಲೆಯಲ್ಲಿ ಜಾರಿಗೆ ತಂದ ಕಿಶೋರಿ ಶಕ್ತಿ ಯೋಜನೆಯು 11 ವರ್ಷದಿಂದ 18 ವರ್ಷದ ಹೆಣ್ಣು ಮಕ್ಕಳಿಗೆ ವೃತ್ತಿಪರ ತರಬೇತಿ ಹಾಗೂ ಶಿಕ್ಷಣ ಒದಗಿಸುವ ಮುಖ್ಯ ಉದ್ದೇಶ ಹೊಂದಿರುವುದನ್ನು ಕಾಣಬಹುದು.

ಮಿಷನ್ ಇಂದ್ರ ಧನುಷ್ ಯೋಜನೆ

ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಹುಟ್ಟಿ ಕೊಂಡ ಮಿಷನ್ ಇಂದ್ರ ಧನುಷ್ ಯೋಜನೆಯನ್ನು ಜಾರಿಗೆ ತರಲಾಗಿದೆ. ತಾಯಿ ಮತ್ತು ಮಗುವಿನ ಆರೈಕೆಗೆ ಬೆಂಬಲಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇಕಾದ ಸೌಲಭ್ಯಗಳನ್ನು ಒದಗಿಸುವುದು ಈ ಯೋಜನೆಯ ಒಂದು ಸ್ವರೂಪವಾಗಿದೆ.

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ

ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಾಗಿದೆ. ಗರ್ಭಿಣಿಯರಿಗೆ ತಮ್ಮ ತಾಯ್ತನದ ಪೋಷಣೆಗೆ ಹಾಗೂ ಮಗುವಿನ ಆರೈಕೆಗೆ ಹಣಕಾಸಿನ ಅಗತ್ಯ ಮನಗಂಡು ಈ ಯೋಜನೆ ಜಾರಿಗೆ ತರಲಾಗಿದೆ. 2025ರ ಜನವರಿಯಂದು 3.81 ಕೋಟಿ ಮಹಿಳೆಯರಿಗೆ 17,362 ಕೋಟಿ ರೂಪಾಯಿ ನೀಡಲಾಗಿದೆ ಎಂದು ವರದಿಯೊಂದರಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

ಇದನ್ನು ಓದಿ: International Women's Day: ಆರಾಮ, ಪೌಷ್ಠಿಕಾಂಶಯುಕ್ತ ಆಹಾರ: ಅಮ್ಮ ನಿನಗಿದು ಅತ್ಯಗತ್ಯ

ಇತರ ಯೋಜನೆ

ಈ ಯೋಜನೆ ಜೊತೆಗೆ ಕೆಲ ರಾಜ್ಯವಾರು ಯೋಜನೆಗಳು ಕೂಡ ಇರಲಿದೆ. ಮಹಿಳೆಯರಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರ ಆರ್ಥಿಕ ಸ್ಚಾತಂತ್ರಕ್ಕೆ ಸಹಕಾರ ನೀಡಲಾಗುತ್ತಿದೆ. ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರನ್ನು ರಕ್ಷಿಸಲು ಉತ್ತರ ಪ್ರದೇಶದಲ್ಲಿ ಮಿಷನ್ ಶಕ್ತಿ ಯೋಜನೆ ಜಾರಿಗೆ ತರ ಲಾಗಿದೆ. ಇದೇ ತರ ಕರ್ನಾಟಕದಲ್ಲಿ ಗೃಹಲಕ್ಷ್ಮೀ, ಶಕ್ತಿ ಯೋಜನೆಗಳು ಮಹಿಳೆಯರಿಗಾಗಿ ಜಾರಿಗೆ ತರಲಾಗಿದೆ‌. ರಾಷ್ಟ್ರೀಯ ಮಟ್ಟದಲ್ಲಿ ವಿಧವಾ ವೇತನ, ಮಹಿಳೆಯರ ಸಹಾಯಕ್ಕಾಗಿ ಟೋಲ್ ಫ್ರೀ 181 ಅನ್ನು ಕೂಡ ಜಾರಿ ಮಾಡಲಾಗಿದೆ. ಅನೇಕ ರಾಜ್ಯದಲ್ಲಿ ಕೂಡ ಮಹಿಳೆಯರಿಗೆ ಪ್ರತ್ಯೇಕ ಯೋಜನೆಗಳಿದ್ದು ಇವೆಲ್ಲವೂ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶವಾಗಿದೆ.