World's Most Corrupt Countries: ವಿಶ್ವದ ಭ್ರಷ್ಟ ದೇಶಗಳ ಪಟ್ಟಿ ಬಿಡುಗಡೆ- ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?
ಭ್ರಷ್ಟಾಚಾರವೆಂಬುದು ಸರ್ವವ್ಯಾಪಿಯಾಗಿರುವ ಒಂದು ಸಮಸ್ಯೆಯಾಗಿದೆ. ಇಡೀ ವಿಶ್ವವನ್ನೇ ಕಾಡುತ್ತಿರುವ ಈ ಭ್ರಷ್ಟಾಚಾರದ ಪೆಡಂಭೂತ ಹಲವು ದೇಶಗಳ ಅಭಿವೃದ್ಧಿಗೆ ತೊಡಕಾಗಿದೆ. ಇದೀಗ ಪ್ರಪ್ರಂಚದ ಭ್ರಷ್ಟ ದೇಶಗಳ ಪಟ್ಟಿ ಹೊರಬಿದ್ದಿದ್ದು, ಯಾವ ದೇಶದ ಯಾವ ಸ್ಥಾನದಲ್ಲಿದೆ ಎಂಬುದರ ವಿವರ ಇಲ್ಲಿದೆ...

ಸಾಂದರ್ಭಿಕ ಚಿತ್ರ

ನವದೆಹಲಿ: ವಿಶ್ವದ ಅತ್ಯಂತ ಭ್ರಷ್ಟಾಚಾರಯುಕ್ತ ದೇಶಗಳ (World's Most Corrupt Countries) ಪಟ್ಟಿ ಹೊರಬಿದ್ದಿದೆ. ಇದರಲ್ಲಿ ಯುರೊಪಿನ (Europe) ಸುಂದರ ರಾಷ್ಟ್ರಗಳಲ್ಲಿ ಒಂದಾಗಿರುವ ಡೆನ್ಮಾರ್ಕ್ (Denmark) ಅತಿ ಕಡಿಮೆ ಭ್ರಷ್ಟಾಚಾರ ಇರುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ಅದರ ನಂತರದ ಸ್ಥಾನದಲ್ಲಿ ಫಿನ್ ಲ್ಯಾಂಡ್ (Finland), ಸಿಂಗಾಪುರ (Singapore) ಮತ್ತು ನ್ಯೂಝಿಲ್ಯಾಂಡ್ (New Zealand) ದೇಶಗಳಿವೆ. ಈ ಪಟ್ಟಿಯನ್ನು ಭ್ರಷ್ಟಾಚಾರ ಊಹನಾ ಮಾಪನ (Corruption Perceptions Index) (CPI) ಬಿಡುಗಡೆಗೊಳಿಸಿದ್ದು, 2024ರ ಸಾಲಿನ ಪಟ್ಟಿ ಇದೀಗ ಬಿಡುಗಡೆಗೊಂಡಿದೆ. ಇದು ಸಾರ್ವಜನಿಕ ವಲಯದಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ಗುರುತಿಸುವ ಒಂದು ಮಾಪನವಾಗಿ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಈ ಪಟ್ಟಿಯಲ್ಲಿ ಭಾರತ (India) 96ನೇ ಸ್ಥಾನದಲ್ಲಿದೆ. ನಮ್ಮ ನೆರೆ ರಾಷ್ಟ್ರಗಳಾದ ಪಾಕಿಸ್ತಾನ (Pakistan) ಮತ್ತು ಶ್ರೀಲಂಕಾ (Sri Lanka) ಕ್ರಮವಾಗಿ 135 ಹಾಗೂ 121ನೇ ಸ್ಥಾನಗಳನ್ನು ಅಲಂಕರಿಸಿವೆ.
ತಜ್ಞರು ಮತ್ತು ಉದ್ಯಮಿಗಳ ಅಭಿಪ್ರಾಯಗಳನ್ನು ಆಧರಿಸಿ ಸಾರ್ವಜನಿಕ ವಲಯದಲ್ಲಿನ ಭ್ರಷ್ಟಾಚಾರ ಮಟ್ಟವನ್ನು ಈ ಇಂಡೆಕ್ಸ್ ಅಳೆಯುತ್ತದೆ ಮತ್ತಿದು 180 ದೇಶಗಳಲ್ಲಿ ಇದನ್ನು ಮಾಪನ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇಲ್ಲಿ, ಭ್ರಷ್ಟಾಚಾರ ಮಾಪನಕ್ಕಾಗಿ 0 ಯಿಂದ 100 ಸಂಖ್ಯೆಯನ್ನು ಬಳಸಲಾಗುತ್ತದೆ. ‘0’ ಎಂದರೆ ಅತೀ ಭ್ರಷ್ಟಾಚಾರವಿದೆ ಎಂದರ್ಥ ಮತ್ತು 100 ಅಂದರೆ ಭ್ರಷ್ಟಾಚಾರ ರಹಿತವಾಗಿರುವುದು ಎಂದಾಗಿದೆ. 2024ರ ವರದಿಗಳ ಪ್ರಕಾರ, ವಿಶ್ವದ ಎಲ್ಲಾ ಭಾಗಗಳಲ್ಲೂ ಭ್ರಷ್ಟಾಚಾರವೆಂಬುದು ಬಹಳ ಅಪಾಯಕಾರಿಯಾಗಿರುವ ಸಮಸ್ಯೆಯಾಗಿದೆ. ಆದರೆ, ಆಶಾವಾದದ ವಿಚಾರವೆಂದರೆ ಹಲವು ರಾಷ್ಟ್ರಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ.
ಇದನ್ನೂ ಓದಿ: Ceasefire Violation: ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ
ಈ ಪಟ್ಟಿಯ ಪ್ರಕಾರ, 2024ರಲ್ಲಿ ಭಾರತದ ಒಟ್ಟು ಅಂಕ 38 ಆಗಿದೆ. 2023ರಲ್ಲಿ ಇದು 39 ಮತ್ತು 2022ರಲ್ಲಿದು 40 ಆಗಿತ್ತು. ಭಾರತದ ರ್ಯಾಂಕ್ 93 ಆಗಿದೆ. ಭಾರತದ ನೆರೆ ರಾಷ್ಟ್ರ ಪಾಕಿಸ್ತಾನದ ರ್ಯಾಂಕ್ 135 ಆಗಿದ್ದರೆ, ಶ್ರೀಲಂಕಾ 121ನೇ ಸ್ಥಾನದಲ್ಲಿದೆ, ಬಾಂಗ್ಲಾದೇಶ 149ನೇ ಸ್ಥಾನದಲ್ಲಿದ್ದರೆ, ಚೀನಾದ ಸ್ಥಾನ 76 ಆಗಿದೆ.
Where Corruption Is Rampant! Most corrupt countries: South Sudan, Somalia, Venezuela and Syria … Least corrupt: Denmark, Finland, Singapore and New Zealand ……https://t.co/rGrmoQBROt pic.twitter.com/SlTPBrfcnP
— Adv. Jean-Paul IBAMBE (@IbambePaul) February 11, 2025
ಕೆಲವು ರಾಷ್ಟ್ರಗಳು ಕಳೆದ ಒಂದು ದಶಕಗಳಿಂದಲೂ ಅತೀ ಕಳಪೆ ಸ್ಥಾನವನ್ನೇ ಕಾಯ್ದುಕೊಂಡಿವೆ. ಇದರಲ್ಲಿ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಾದ ಅಮೆರಿಕಾ ಮತ್ತು ಫ್ರಾನ್ಸ್ ಸಹ ಸೇರಿದೆ. ಮಾತ್ರವಲ್ಲದೇ ರಷ್ಯಾ ಹಾಗೂ ವೆನೆಜುವೆಲಾ ರಾಷ್ಟ್ರಗಳ ಸ್ಥಾನಗಳೂ ಸಹ ಕಳಪೆ ಮಟ್ಟದಲ್ಲಿದೆ.
ಅಮೆರಿಕಾದ ಅಂಕ 69 ರಿಂದ 65ಕ್ಕೆ ಕುಸಿಯುವ ಮೂಲಕ ಇದು ಈ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದೆ, ಈ ಹಿಂದೆ ಇದು 24ನೇ ಸ್ಥಾನದಲ್ಲಿತ್ತು. ಇನ್ನು ಸ್ಥಾನ ಕುಸಿತವಾಗಿರುವ ಇತರೇ ಪ್ರಮುಖ ಪಾಶ್ಚಿಮಾತ್ಯ ದೇಶಗಳೆಂದರೆ, ಫ್ರಾನ್ಸ್ 25ನೇ ಸ್ಥಾನದಲ್ಲಿದೆ ಮತ್ತು ಜರ್ಮನಿ 15ನೇ ಸ್ಥಾನದಲ್ಲಿದೆ. ಕೆನಡಾ ದೆಶವೂ ಸಹ 15ನೇ ಸ್ಥಾನದಲ್ಲಿದೆ.
ಪ್ರಮುಖ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಲ್ಲಿ ನ್ಯಾಯಾಂಗ ವಿಫಲಗೊಂಡಿರುವ ಕಾರಣದಿಂದ ಮೆಕ್ಸಿಕೋ ದೇಶದ 5 ಅಂಕ ಕುಸಿತ ಕಂಡಿದೆ.
ಅತೀ ಹೆಚ್ಚಿನ ಭ್ರಷ್ಟಾಚಾರ ಇರುವ ದೇಶವೆಂಬ ಕುಖ್ಯಾತಿಗೆ ದಕ್ಷಿಣ ಸೂಡಾನ್ ಪಾತ್ರವಾಗಿದೆ. ಇದು ಕೇವಲ 8 ಅಂಕಗಳನ್ನು ಮಾತ್ರವೇ ಪಡೆದುಕೊಂಡಿದೆ. ಸೊಮಾಲಿಯಾವನ್ನು ಹಿಂದಿಕ್ಕಿ ಈ ದೇಶ ಕಡು ಭ್ರಷ್ಟ ದೇಶವೆಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ವೆನುಜುವೆಲಾ ಮತ್ತು ಸಿರಿಯಾ ಕ್ರಮವಾಗಿ 10 ಮತ್ತು 12 ಅಂಕಗಳನ್ನು ಪಡೆದುಕೊಂಡಿದೆ.
ಅಂತರಾಷ್ಟ್ರೀಯ ಪಾರದರ್ಶಕತೆ ಹೇಳೋ ಪ್ರಕಾರ, ‘ಜಾಗತಿಕ ಭ್ರಷ್ಟಾಚಾರ ಮಟ್ಟ ಗಮನಾರ್ಹವಾಗಿ ಏರಿಕೆ ಕಂಡಿದೆ. ಇದನ್ನು ಕಡಿಮೆಗೊಳಿಸುವ ಪ್ರಯತ್ನಗಳು ಫಲ ನೀಡಿಲ್ಲ.’ 2012ರ ಬಳಿಕ 2024ರಲ್ಲಿ 32 ದೇಶಗಳು ತಮ್ಮ ಭ್ರಷ್ಟಾಚಾರ ಮಟ್ಟವನ್ನು ಗಮನಾರ್ಹವಾಗಿ ಕಡಿಮೆಗೊಳಿಸಿಕೊಂಡಿವೆ. ಆದರೆ 148 ದೇಶಗಳ ಅಂಕ ಗಳಿಕೆ ಈ ಅವಧಿಯಲ್ಲಿ ತಟಸ್ಥವಾಗಿದ್ದು, ಈ ನಿಟ್ಟಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ವಿಚಾರದಲ್ಲಿ ಇನ್ನಷ್ಟು ಕಠಿಣ ಕ್ರಮಗಳು ಅಗತ್ಯವಿದೆ ಎಂದು ಇದು ಅಭಿಪ್ರಾಯಪಟ್ಟಿದೆ.