Ashwini Vaishnaw: ರೈಲಿನ ಲೋವರ್ ಬರ್ತ್ ಹಿರಿಯ ನಾಗರಿಕರು, ಮಹಿಳೆಯರಿಗೆ ಮೀಸಲು; ಸಚಿವ ಅಶ್ವಿನಿ ವೈಷ್ಣವ್
Indian Railways: ಭಾರತೀಯ ರೈಲ್ವೆ ಪ್ರತಿ ಬೋಗಿಯಲ್ಲಿ ಲೋವರ್ ಬರ್ತ್‌ಗಳನ್ನು ಹಿರಿಯ ನಾಗರಿಕರು, 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಮತ್ತು ಗರ್ಭಿಣಿಯರಿಗೆ ಮೀಸಲಿಟ್ಟಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಲೋಕಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಭಾರತೀಯ ರೈಲ್ವೆ (Indian Railways) ಸ್ಲೀಪರ್ ಕ್ಲಾಸ್‌ನ ಪ್ರತಿ ಬೋಗಿಯಲ್ಲಿ ಆರರಿಂದ ಏಳು ಲೋವರ್ ಬರ್ತ್‌ಗಳು, 3ಎಸಿಯ ಪ್ರತಿ ಬೋಗಿಯಲ್ಲಿ ನಾಲ್ಕರಿಂದ ಐದು ಲೋವರ್ ಬರ್ತ್‌ಗಳು ಮತ್ತು 2ಎಸಿ ಕ್ಲಾಸ್‌ನ ಬೋಗಿಯಲ್ಲಿ ಮೂರರಿಂದ ನಾಲ್ಕು ಲೋವರ್ ಬರ್ತ್‌ಗಳನ್ನು ಹಿರಿಯ ನಾಗರಿಕರು, 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಮತ್ತು ಗರ್ಭಿಣಿಯರಿಗೆ ಮೀಸಲಿಟ್ಟಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ. ಲೋಕಸಭೆಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಸಮಾಜವಾದಿ ಪಕ್ಷದ ಸಂಸದ ಉತ್ಕರ್ಷ್ ವರ್ಮಾ ಅವರಿಗೆ ಲಿಖಿತ ಉತ್ತರ ನೀಡಿದ ವೈಷ್ಣವ್, ʼʼಭಾರತೀಯ ರೈಲ್ವೆ 2022-23ರಲ್ಲಿ ಪ್ರಯಾಣಿಕರ ಟಿಕೆಟ್‌ಗೆ 56,993 ಕೋಟಿ ರೂ.ಗಳ ಸಬ್ಸಿಡಿ ಒದಗಿಸಿದೆ. ಈ ಮೂಲಕ ಪ್ರತಿ ರೈಲ್ವೆ ಪ್ರಯಾಣಿಕನಿಗೆ ಸರಾಸರಿ ಶೇ. 46 ರಿಯಾಯಿತಿ ನೀಡಿದಂತಾಗಿದೆʼʼ ಎಂದು ಹೇಳಿದ್ದಾರೆ. ವಿಶೇಷ ಚೇತನರು, 11 ವರ್ಗದ ರೋಗಿಗಳು ಮತ್ತು 8 ವರ್ಗದ ವಿದ್ಯಾರ್ಥಿಗಳಿಗೆ ಈ ಸಬ್ಸಿಡಿಯನ್ನು ಮೀರಿ ಹೆಚ್ಚಿನ ರಿಯಾಯಿತಿ ದೊರೆಯುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಅಶ್ವಿನಿ ವೈಷ್ಣವ್ ಹೇಳಿದ್ದೇನು?
ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಕೈಗೊಂಡ ವಿವಿಧ ಕ್ರಮಗಳನ್ನು ಅವರು ವಿವರಿಸಿದ್ದಾರೆ. "ಹಿರಿಯ ನಾಗರಿಕರು ಮತ್ತು 45 ವರ್ಷ ಮತ್ತು ಅದಕ್ಕಿಂತ ಹಿರಿಯ ಮಹಿಳಾ ಪ್ರಯಾಣಿಕರಿಗೆ ಲಭ್ಯತೆಗೆ ಒಳಪಟ್ಟು ಸ್ವಯಂಚಾಲಿತವಾಗಿ ಲೋವರ್ ಬರ್ತ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. ಹಿರಿಯ ನಾಗರಿಕರಿಗೆ ಸ್ಲೀಪರ್ ಕ್ಲಾಸ್‌ನಲ್ಲಿ ಪ್ರತಿ ಬೋಗಿಗೆ 6-7, ಎಸಿ 3-ಟೈರ್ (3ಎಸಿ)ನಲ್ಲಿ ಪ್ರತಿ ಬೋಗಿಗೆ 4-5 ಮತ್ತು ಎಸಿ 2-ಟೈರ್ (2ಎಸಿ)ನಲ್ಲಿ ಪ್ರತಿ ಬೋಗಿಗೆ 3-4 ಲೋವರ್ ಬರ್ತ್‌ಗಳನ್ನು ಮೀಸಲಿಡಲಾಗುತ್ತದೆʼʼ ಎಂದು ಹೇಳಿದ್ದಾರೆ.
''ರಾಜಧಾನಿ ಮತ್ತು ಶತಾಬ್ದಿ ಸೇರಿದಂತೆ ಎಲ್ಲ ಮೇಲ್ / ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್‌ನಲ್ಲಿ 4 ಬರ್ತ್‌ಗಳು, 3ಎಸಿ / 3 ಇಯಲ್ಲಿ 4 ಬರ್ತ್‌ಗಳು ಮತ್ತು ಕಾಯ್ದಿರಿಸಿದ ಎರಡನೇ ಸಿಟ್ಟಿಂಗ್ (2 ಎಸ್) ಅಥವಾ ಎಸಿ ಚೇರ್ ಕಾರ್ (ಸಿಸಿ)ನಲ್ಲಿ ವಿಶೇಷ ಚೇತನರಿಗೆ 4 ಸೀಟುಗಳನ್ನು ಕಾಯ್ದಿರಿಸಲಾಗಿದೆ'' ವೈಷ್ಣವ್ ತಿಳಿಸಿದ್ದಾರೆ.
ಆಸನಗಳಿರುವ ಸಂಖ್ಯೆಯಷ್ಟೇ ಟಿಕೆಟ್ ವಿತರಣೆ
ʼʼಪ್ರಯಾಣದ ವೇಳೆ ಲೋವರ್ ಬರ್ತ್‌ಗಳು ಖಾಲಿ ಇದ್ದರೆ ಹಿರಿಯ ನಾಗರಿಕರು, ವಿಶೇಷ ಚೇತನರು ಮತ್ತು ಗರ್ಭಿಣಿಯರಿಗೆ ಆದ್ಯತೆ ನೀಡಲಾಗುತ್ತದೆʼʼ ಎಂದಿದ್ದಾರೆ. ಅಲ್ಲದೆ ʼʼರೈಲ್ವೆ ಇಲಾಖೆಯಿಂದ ಆಸನಗಳಿರುವ ಸಂಖ್ಯೆಯಷ್ಟೇ ಟಿಕೆಟ್‌ಗಳನ್ನು ನೀಡಲಾಗುವುದು. ಇದರಿಂದಾಗಿ ಪ್ರಯಾಣಿಕರ ಸಂಖ್ಯೆಯನ್ನು ನಿಯಂತ್ರಿಸಬಹುದು. ರೈಲು ಟಿಕೆಟ್ ಕನ್ಫರ್ಮ್ ಇದ್ರೆ ಮಾತ್ರ ನಿಲ್ದಾಣಕ್ಕೆ ಎಂಟ್ರಿ ಕೊಡಬಹುದು. ಆಸನಗಳು ಫುಲ್ ಆಗುತ್ತಿದ್ದಂತೆ ಟಿಕೆಟ್ ವಿತರಣೆ ನಿಲ್ಲಿಸಲಾಗುತ್ತದೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರ ಪರಿಶೀಲನೆಗಾಗಿ ರೈಲ್ವೆ ಸಿಬ್ಬಂದಿಗೆ ಹೊಸ ವಿನ್ಯಾಸದ ಕಾರ್ಡ್‌ಗಳು ಮತ್ತು ಸಮವಸ್ತ್ರಗಳನ್ನು ರೈಲ್ವೆ ಇಲಾಖೆಯಿಂದ ತಯಾರಿಸಲಾಗುತ್ತಿದೆ ಎನ್ನಲಾಗಿದೆ.