ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳೆಯರ ಅವಹೇಳನ ಸರಿಯಲ್ಲ: ವಿಧಾನಸಭೆಯಲ್ಲಿ ತ್ರಿಷಾ ಪರ ಸಿಎಂ ವಿಜಯ್ ಬ್ಯಾಟಿಂಗ್; ಉದಯನಿಧಿ ಸ್ಟಾಲಿನ್‌ ವಿರುದ್ಧ ಗುಡುಗು

ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹಾಗೂ ಟಿವಿಕೆ ನಾಯಕ ವಿಜಯ್, ವಾಕ್ ಸ್ವಾತಂತ್ರ್ಯವನ್ನು ರಾಜಕೀಯ ಟೀಕೆಗೆ ಬಳಸಬಹುದು, ಆದರೆ ಮಹಿಳೆಯರನ್ನು ಅವಹೇಳನ ಮಾಡುವ ಅಥವಾ ದ್ವಂದ್ವಾರ್ಥದ ಹೇಳಿಕೆಗಳಿಗೆ ಬಳಸುವುದು ಸರಿಯಲ್ಲ ಎಂದು ಹೇಳಿದರು. ನಟಿ ತ್ರಿಷಾ ಕುರಿತ ಉದಯನಿಧಿ ಸ್ಟಾಲಿನ್ ಹೇಳಿಕೆಗಳ ವಿವಾದದ ಹಿನ್ನೆಲೆಯಲ್ಲಿ ವಿಜಯ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಇದೇ ವೇಳೆ ಡಿಎಂಕೆ ವಿರುದ್ಧ ಭ್ರಷ್ಟಾಚಾರ ಮತ್ತು ಪಕ್ಷದ ನಿಧಿ ಸಂಗ್ರಹದ ಆರೋಪಗಳನ್ನೂ ಅವರು ಪ್ರಸ್ತಾಪಿಸಿದರು.

ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಿಳೆಯರ ಅವಹೇಳನ ಸಲ್ಲದು: ವಿಜಯ್

ತಮಿಳುನಾಡು ಸಿಎಂ ವಿಜಯ್ (ಸಂಗ್ರಹ ಚಿತ್ರ) -

Profile
Sushmitha Jain Sep 7, 2026 3:02 PM

ಚೆನ್ನೈ, ಸೆಪ್ಟೆಂಬರ್ 7: ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ನಾಯಕ ಸಿ. ಜೋಸೆಫ್ ವಿಜಯ್ (Vijay) ಅವರು ಸೋಮವಾರ ವಿಧಾನಸಭೆಯಲ್ಲಿ ರಾಜಕೀಯ ಶಿಷ್ಟಾಚಾರ (Political Decency) ಮತ್ತು ಮಹಿಳೆಯರ ಗೌರವದ ಕುರಿತು ಮಾತನಾಡಿದರು. ರಾಜಕೀಯ ಟೀಕೆಗಳಿಗೆ ಸ್ವಾತಂತ್ರ್ಯವಿದ್ದರೂ, ಅದನ್ನು ಮಹಿಳೆಯರನ್ನು ಅವಹೇಳನ ಮಾಡುವ ಅಥವಾ ದ್ವಂದ್ವಾರ್ಥದ ಹೇಳಿಕೆಗಳಿಗೆ ಬಳಸಬಾರದು ಎಂದು ಹೇಳಿದರು.

“ವಾಕ್ ಸ್ವಾತಂತ್ರ್ಯವನ್ನು ಹೇಗೆ ಬಳಸಬೇಕು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮಹಿಳೆಯರನ್ನು ಅವಹೇಳನ ಮಾಡುವ ಅಥವಾ ದ್ವಂದ್ವಾರ್ಥದಲ್ಲಿ ಬಿಂಬಿಸುವುದು ಸರಿಯಲ್ಲ,” ಎಂದು ವಿಜಯ್ ಹೇಳಿದರು.

ಮಹಿಳೆಯರನ್ನು ಅವಮಾನಿಸಿದರೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ ಅವರು, ಪ್ರತಿಯೊಬ್ಬರ ಮನೆಯಲ್ಲೂ ತಾಯಿ, ಸಹೋದರಿ ಮತ್ತು ಹೆಣ್ಣುಮಕ್ಕಳಿದ್ದಾರೆ ಎಂಬುದನ್ನು ರಾಜಕಾರಣಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಜಯಲಲಿತಾ ಘಟನೆ ನೆನಪಿಸಿದ ವಿಜಯ್

ರಾಜಕೀಯ ಚರ್ಚೆಯಲ್ಲಿ ಮಹಿಳೆಯರ ಗೌರವ ಕಾಪಾಡುವ ಅಗತ್ಯವನ್ನು ಒತ್ತಿಹೇಳಿದ ವಿಜಯ್, ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ವಿಧಾನಸಭೆಯಲ್ಲಿ ಎದುರಿಸಿದ್ದ ಅವಮಾನಗಳನ್ನು ಕೂಡ ಪ್ರಸ್ತಾಪಿಸಿದರು.

ರಾಜಕೀಯವಾಗಿ ಟೀಕೆ ಮಾಡಬಹುದು, ಆದರೆ ಮಹಿಳೆಯರನ್ನು ಅವಹೇಳನಿಸುವ ಮಟ್ಟಕ್ಕೆ ರಾಜಕೀಯ ಭಾಷೆ ಇಳಿಯಬಾರದು ಎಂದು ಅವರು ಹೇಳಿದರು.

ಈ ಹೇಳಿಕೆಗಳು ಡಿಎಂಕೆ ನಾಯಕ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ನಟಿ ತ್ರಿಷಾ ಕುರಿತಾಗಿ ಎನ್ನಲಾದ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಬಂದಿವೆ. ತಂಜಾವೂರಿನಲ್ಲಿ ಕಾವೇರಿ ನೀರಿನ ವಿವಾದದ ಕುರಿತು ನಡೆದ ಸಾರ್ವಜನಿಕ ಸಭೆಯಲ್ಲಿ ಕೆಲವರು “ತ್ರಿಷಾ, ತ್ರಿಷಾ” ಎಂದು ಘೋಷಣೆ ಕೂಗಿದ ಬಳಿಕ ಉದಯನಿಧಿ ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.

ದೆಹಲಿ ಪಿಜಿ ದುರಂತ ಪ್ರಕರಣ: ಈಗಲೋ, ಆಗಲೋ ಎನ್ನುವಂತಿದ್ದ 50 ವರ್ಷ ಹಿಂದಿನ ಹಳೆಯ ಕಟ್ಟಡ, ಮಾಲೀಕನ ದುರಾಸೆಯೇ ಅವಘಡಕ್ಕೆ ಕಾರಣ

ಈ ಸಂಬಂಧ ಟಿವಿಕೆ ಮಹಿಳಾ ಘಟಕ ನೀಡಿದ ದೂರಿನ ಮೇರೆಗೆ ತಂಜಾವೂರು ಪೊಲೀಸರು ಉದಯನಿಧಿ ವಿರುದ್ಧ ವಿವಿಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಅವರನ್ನು ಚೆನ್ನೈನ ನಿವಾಸದಿಂದ ವಶಕ್ಕೆ ಪಡೆದು ತಂಜಾವೂರಿಗೆ ಕರೆದೊಯ್ಯಲಾಗಿತ್ತು.

ಉದಯನಿಧಿ ಈ ಕ್ರಮವನ್ನು “ಕಾಮಿಡಿ” ಎಂದು ಟೀಕಿಸಿ, ತಾವು ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಮ್ಮ ಹೇಳಿಕೆಯನ್ನು ಎಡಿಟ್ ಮಾಡಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಅವರು ಆರೋಪಿಸಿದ್ದರು.

ರಾಜಕೀಯ ಶಿಷ್ಟಾಚಾರ ಕಾಪಾಡುವಂತೆ ವಿಜಯ್ ಕರೆ

ರಾಜಕೀಯದಲ್ಲಿ ಶಿಷ್ಟಾಚಾರ ಮತ್ತು ಸಭ್ಯತೆ ಕುಸಿಯುತ್ತಿರುವ ಬಗ್ಗೆ ವಿಜಯ್ ಅಸಮಾಧಾನ ವ್ಯಕ್ತಪಡಿಸಿದರು. ಜನರ ತೀರ್ಪನ್ನು ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದ ಅವರು, ರಾಜಕೀಯ ಭಾಷೆ ಒಂದು ಮಿತಿಯನ್ನು ಮೀರಿ ಹೋಗಬಾರದು ಎಂದು ಹೇಳಿದರು.

ತಮ್ಮ ಸರ್ಕಾರ ಯಾವುದೇ ವ್ಯಕ್ತಿ ಅಥವಾ ಪ್ರತ್ಯೇಕ ಗುರುತಿನ ಸರ್ಕಾರವಾಗಿರುವುದಿಲ್ಲ. ತಮಿಳುನಾಡಿನ ಎಂಟು ಕೋಟಿ ಜನರ ಸರ್ಕಾರವಾಗಿರಲಿದೆ ಎಂದು ವಿಜಯ್ ಹೇಳಿದರು.

ಡಿಎಂಕೆ ವಿರುದ್ಧ ಭ್ರಷ್ಟಾಚಾರ ಆರೋಪ

ಇದೇ ವೇಳೆ ವಿಜಯ್ ಅವರು ಡಿಎಂಕೆ ವಿರುದ್ಧ ಭ್ರಷ್ಟಾಚಾರ ಮತ್ತು ಪಕ್ಷದ ನಿಧಿ ಸಂಗ್ರಹಕ್ಕೆ ಸಂಬಂಧಿಸಿದ ಆರೋಪಗಳನ್ನೂ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.

ಜಾರಿ ನಿರ್ದೇಶನಾಲಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಉಲ್ಲೇಖಿಸಿದ ಅವರು, ಶೇ.7.5ರಿಂದ ಶೇ.10ರವರೆಗೆ ಕಮಿಷನ್ ಅನ್ನು ಪಕ್ಷದ ನಿಧಿಯಾಗಿ ಸಂಗ್ರಹಿಸಲಾಗಿದೆ ಎಂದು ಆರೋಪಿಸಿದರು. ಈ ಅವಧಿಯಲ್ಲಿ ಅಧಿಕಾರದಲ್ಲಿದ್ದವರು ಯಾರು ಎಂದು ಪ್ರಶ್ನಿಸಿದ ವಿಜಯ್, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಅಂದಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಹೆಸರನ್ನೂ ಪ್ರಸ್ತಾಪಿಸಿದರು.

ಮಾಜಿ ಸಚಿವ ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರರಿಗೆ ಸಂಬಂಧಿಸಿದ ಆರೋಪಗಳನ್ನೂ ವಿಜಯ್ ಪ್ರಸ್ತಾಪಿಸಿದರು. TASMAC ವ್ಯವಹಾರಗಳಲ್ಲಿ ಕರುರ್ ಪ್ರದೇಶದ ರಾಜಕೀಯ ಮುಖಂಡರು ಪಕ್ಷದ ನಿಧಿ ಸಂಗ್ರಹದಲ್ಲಿ ಭಾಗಿಯಾಗಿದ್ದರು ಎಂದು ಅವರು ಆರೋಪಿಸಿದರು.

ಮದ್ಯದ ಪ್ರತಿ ಬಾಟಲಿಗೆ ₹10ರಷ್ಟು ಲಂಚವನ್ನು ವ್ಯವಸ್ಥಿತವಾಗಿ ಸಂಗ್ರಹಿಸಲಾಗುತ್ತಿತ್ತು ಎಂದು ವಿಜಯ್ ಆರೋಪಿಸಿ, “ನಿಮಗೆ ಸಾಕ್ಷಿ ಬೇಕಿತ್ತು. ಇದು ಸಾಕ್ಷಿಯಾಗುವುದಿಲ್ಲವೇ?” ಎಂದು ಪ್ರಶ್ನಿಸಿದರು.

“ಡಿಎಂಕೆ ಇರುವಲ್ಲೆಲ್ಲಾ ತಪ್ಪುಗಳು ನಡೆಯುತ್ತವೆ. ತಪ್ಪುಗಳು ನಡೆಯುವಲ್ಲೆಲ್ಲಾ ಡಿಎಂಕೆ ಇರುತ್ತದೆ,” ಎಂದು ವಿಜಯ್ ಆರೋಪಿಸಿದರು.