ಪ್ರಧಾನಿ ನರೇಂದ್ರ ಮೋದಿಯನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ಗೆ ಹೋಲಿಸಿದ ಬಾಲಕ; ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಎಂದು ಬಣ್ಣನೆ
Student Compares Modi to Radhakrishnan: ಪ್ರಧಾನಿ ನರೇಂದ್ರ ಮೋದಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಯೊಬ್ಬ ಅವರನ್ನು ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಹೋಲಿಸಿ ಗಮನ ಸೆಳೆದಿದ್ದಾನೆ. ರಾಧಾಕೃಷ್ಣನ್ ಅವರಂತೆಯೇ ಪ್ರಧಾನಿ ಸಹ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ಬಾಲಕ ಹೇಳಿದ್ದಾನೆ.
ದೆಹಲಿ ಮೆಟ್ರೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ -
ನವದೆಹಲಿ, ಸೆ. 6: ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಅವರು ಪ್ರಯಾಣಿಕರೊಂದಿಗೆ ಮಾತುಕತೆ ನಡೆಸುವ ಮೂಲಕ ಗಮನ ಸೆಳೆದರು. ಮಾತುಕತೆ ವೇಳೆ ವಿದ್ಯಾರ್ಥಿಯೊಬ್ಬ ಅವರನ್ನು ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ (Dr. Sarvepalli Radhakrishnan) ಅವರಿಗೆ ಹೋಲಿಸಿದ್ದಾನೆ.
ಪ್ರಧಾನಿ ಮೋದಿ ಅವರೊಂದಿಗಿನ ಈ ಸಂವಹನದ ಸಂದರ್ಭದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರಂತೆಯೇ ಪ್ರಧಾನಿ ಮೋದಿ ಸಹ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ಬಾಲಕ ಹೇಳಿದ್ದಾನೆ. “ನಾವು ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ನಮ್ಮೊಂದಿಗೆ ಸರ್ವಪಲ್ಲಿ ರಾಧಾಕೃಷ್ಣನ್ ಇಲ್ಲ. ಅವರು ತಮ್ಮ ಅವಧಿಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದ್ದರು. ಆದರೆ ಇಂದು, ಇಡೀ ಭಾರತಕ್ಕೆ ಸ್ಫೂರ್ತಿ ನೀಡುವ ನೀವು ನಮ್ಮೊಂದಿಗಿದ್ದೀರಿ. ಅದಕ್ಕಾಗಿ, ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಪ್ರಧಾನಿ ಮೋದಿ ಬಳಿ ವಿದ್ಯಾರ್ಥಿ ಹೇಳಿದ್ದಾನೆ.
ಪ್ರಧಾನಮಂತ್ರಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಮೆಟ್ರೋ ಪ್ರಯಾಣದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿವಿಧ ವಯೋಮಾನದ ಜನರೊಂದಿಗೆ ಸಂವಹನ ನಡೆಸಿದರು. ಪ್ರಧಾನಿ ಮೋದಿ ಮಕ್ಕಳ ಬಳಿ ಹಸ್ತಲಾಘವ ಮಾಡಿದರು. ಒಂದು ಮಗುವಿಗೆ ಜನ್ಮದಿನದ ಶುಭಾಶಯ ಕೂಡ ತಿಳಿಸಿದರು.
ಇಲ್ಲಿದೆ ವಿಡಿಯೊ:
Metro moments…
— Narendra Modi (@narendramodi) September 6, 2026
Conversations during last evening’s journey to SRCC and back. pic.twitter.com/GHIuPqYAKI
ನೀವು ದೇಶದಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ಚರ್ಚಿಸುತ್ತೀರಾ? ಎಂದು ಪ್ರಧಾನಿ ಮೋದಿ ಅಲ್ಲಿನ ವಿದ್ಯಾರ್ಥಿಯೊಬ್ಬರನ್ನು ಪ್ರಶ್ನಿಸಿದರು. ಇದರೊಂದಿಗೆ, ಪಠ್ಯಕ್ರಮದ ಹೊರತಾದ ಪುಸ್ತಕಗಳನ್ನು ಓದಿದ್ದೀರಾ ಎಂದು ವಿದ್ಯಾರ್ಥಿಗಳನ್ನು ವಿಚಾರಿಸಿದರು. ಪ್ರಸಿದ್ಧ ವ್ಯಕ್ತಿಗಳ ಜೀವನಚರಿತ್ರೆ ಮತ್ತು ಆತ್ಮಚರಿತ್ರೆಗಳನ್ನು ಓದುವಂತೆ ಸಲಹೆ ನೀಡಿದರು. ಅದು ಯಾರ ಬಗ್ಗೆಯಾದರೂ ಇರಬಹುದು. ಕ್ರೀಡಾಪಟುಗಳು, ಕಲಾವಿದರು ಅಥವಾ ವಿಜ್ಞಾನಿಗಳು ಯಾರದ್ದಾದರೂ ಪುಸ್ತಕಗಳನ್ನು ಓದಿ ಎಂದು ಪ್ರಧಾನಿ ಮೋದಿ ಹೇಳಿದರು.
ಮೆಟ್ರೋದಲ್ಲಿ ಎಸ್‌ಆರ್‌ಸಿಸಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ; ಜೆನ್ ಝೀ ಮಕ್ಕಳೊಂದಿಗೆ ಮುಕ್ತ ಮಾತು, ಹರಟೆ
ನಂತರ ಉತ್ತರ ಪ್ರದೇಶದ ಕಾಶಿ ಮೂಲದ ಮಹಿಳೆಯೊಂದಿಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಅಲ್ಲಿನ ನಿವಾಸಿಗಳು ಏನಾದಾರೂ ಸಮಸ್ಯೆ ಎದುರಿಸುತ್ತಿದ್ದಾರೆಯೇ ಎಂದು ಮೋದಿ ವಿಚಾರಿಸಿದರು.
ಇನ್ನು ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನ (SRCC) ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 13 ವರ್ಷಗಳಲ್ಲಿ ಭಾರತವು ಸಾಧಿಸಿರುವ ಬದಲಾವಣೆಯನ್ನು ಪ್ರತಿಪಾದಿಸಿದರು. ದೇಶವು ಈ ಹಿಂದೆ ಎದುರಿಸುತ್ತಿದ್ದ ನೀತಿ ಪಾರ್ಶ್ವವಾಯು ಅಥವಾ ನಿಷ್ಕ್ರಿಯತೆಯ ಪರಿಸ್ಥಿತಿಯಿಂದ ಹೊರಬಂದು, ನೀತಿ ಚಲನಶೀಲತೆ ಕಡೆಗೆ ಯಶಸ್ವಿಯಾಗಿ ಮುನ್ನಡೆದಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.