ಮೂಗು ತೂರಿಸೋದು

ಮೂಗು ತೂರಿಸೋದು

Profile Vishwavani News January 23, 2022
image-5e9eee3e-64ee-465d-a1ea-036c329ce9b8.jpg
ಸುಲಲಿತ ಪ್ರಬಂಧ ಬಿ.ಕೆ.ಮೀನಾಕ್ಷಿ, ಮೈಸೂರು ಮೂಗು ತೂರಿಸುವುದು ಬಹಳ ಜನರ ಚಟ. ಇಬ್ಬರು ಮಾತನಾಡುತ್ತಾ ಕುಳಿತಿದ್ದಾಗ ಮೂಗು ತೂರಿಸುವವರು ಜಾಸ್ತಿ. ಆದರೆ ಕರೋನಾ ಸಮಯದಲ್ಲಿ ಈ ಚಟ ಒಳ್ಳೆಯದಲ್ಲ! ಇತ್ತೀಚೆಗೆ ಮೂಗಿನ ಬಗ್ಗೆ ಬಹಳ ಮಾತುಗಳು ಕೇಳಿಬರುತ್ತಿವೆ. ಈ ಕರೋನಾ ಕಾಲದಲ್ಲಿ ಮೂಗಿನ ಘನತೆ ಮತ್ತು ಗೌರವದ ಪ್ರಶ್ನೆ ಮತ್ತದರ ಬಳಕೆಯ ಪ್ರಶ್ನೆಗಳು ಎಲ್ಲರನ್ನೂ ಸಿಕ್ಕಾಪಟ್ಟೆ ಕಾಡುತ್ತಾ ಎಲ್ಲರ ಬಾಯಲ್ಲೂ ನಲಿದಾಡುತ್ತಿವೆ. ಮೂಗಿನಿಂದ ಅನೇಕ ವಿಷಯಗಳು ಮಾರಾಮಾರಿಯವರೆಗೂ ಹೋಗಿವೆ. ಈ ಮೂಗೇ ಇಲ್ಲದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ನೂರಾರು ಬಾರಿ ಯೋಚಿಸಿದ್ದೇನೆ.(ಅಪಾರ್ಥ ಮಾಡ್ಕೊಬೇಡಿ, ಮುಖಕ್ಕಲ್ಲ). ಮೂಗು ‘ಈ ಸಮಯದಲ್ಲಿ’ ಅವಶ್ಯಕತೆ ಇರಲಿಲ್ಲವೇನೋ. ಏಕೆಂದರೆ ಮೂಗಿನಿಂದ ಆಗುತ್ತಿರುವ ಅನಾಹುತಗಳನ್ನು ಸಾವು ನೋವುಗಳನ್ನು ನೋಡಿದರೆ ಈ ರಾದ್ಧಾಂತ ಕ್ಕೆಲ್ಲ ಮೂಗೇ ಮೂಲವೆಂದು ಮೂಢಾತ್ಮರಿಗೂ ಮನದಟ್ಟಾಗಿದೆ. ಮೂಗಿದೆ ಎಂದರೆ, ಎಲ್ಲದಕ್ಕೂ ಮೂಗನ್ನೇ ಬೈಯ್ಯಲು ಸಾಧ್ಯವಿಲ್ಲ. ಮೂಗಿಲ್ಲದಿದ್ದರೆ ಬದುಕುವುದಾದರೂ ಹೇಗೆ ಎಂಬ ಸಮಸ್ಯೆ ಕೂಡ ಎಲ್ಲರಿಗೂ ವೇದ್ಯವೇ. ಆದರೆ ಈಗ, ಈ ಸಮಯದಲ್ಲಿ, ಇರಬಾರದಿತ್ತು ಅಷ್ಟೆ. ಮೂಗಿನಿಂದ ಉಸಿರಾಡಿ, ಉಸಿರಿನಿಂದ ವೈರಸ್ಸು ಶ್ವಾಸಕೋಶಗಳನ್ನು ಆಕ್ರಮಿಸಿ, ಆ ಆಕ್ರಮಿತ ಪ್ರದೇಶದ ರಕ್ಷಣೆಗೆ ಸಾವಿರ, ಕೋಟಿಗಳಲ್ಲಿ ಖರ್ಚು ಮಾಡಿ, ಅದೂ ಸಾಲದೆ ಹೊಲ, ಮನೆ, ಗದ್ದೆಗಳನ್ನು ಮಾರಿ ಹುಷ್ ಅಪ್ಪಾ......ಸುಸ್ತಾಗುತ್ತದೆ ಹೇಳಲು ಶುರುವಿಟ್ಟರೆ. ಅದಕ್ಕೇ ನಾನು ಹೇಳಿದ್ದು ಮೂಗು ಇರಬಾರದಿತ್ತೆಂದು. ಆದರೆ ಮುಖ್ಯ ಸಮಸ್ಯೆ ಏನೆಂದರೆ ಮಾಸ್ಕ್‌ದು. ಹಾಗಾಗಿ ಮಾಸ್ಕ್ ಹಾಕಲಿಕ್ಕಾದರೂ ಮೂಗಿನ ಅವಶ್ಯಕತೆ ಇದ್ದೇಇದೆ ಅಲ್ವೇ? ಜಂಬದ ಕೋಳಿ ಇಂತಹ ಅನಾಹುತಕ್ಕೆಲ್ಲ ಕಾರಣವಾದ ಮೂಗಿಗೇನೂ ಕಡಿಮೆ ಕೊಬ್ಬಿಲ್ಲ! ದುರಹಂಕಾರದ ಮೊಟ್ಟೆಯದು. ಯಾಕೆ ಅನ್ನಿ.. ತಾನು ಉದ್ದವಿದ್ದರೆ ಉನ್ನತ ಮಟ್ಟಕ್ಕೇರುತ್ತಾರೆ ಎಂಬ ವಿಶೇಷ ಪಟ್ಟವಿದೆಯಲ್ಲ, ಇದರಿಂದ ಅರ್ಧ ಈ ಮೂಗು ಕೊಬ್ಬಿ ಹೋಗಿದೆ. ಉದಾಹರಣೆಯನ್ನೂ ತೋರಿಸುತ್ತೆ ಅಂತೀನಿ. ಅದೇ ನಮ್ಮ ವರನಟ ರಾಜಕುಮಾರರ ಮೂಗನ್ನೇ ಮುಂದಿಟ್ಟು ಕುಣಿದಾಡುತ್ತದೆ. ಇಷ್ಟವಿಲ್ಲದವರು ಮೇಲೆ ಹೋದರೆ, ಅರ್ಥಾತ್ ಅಭಿವೃದ್ಧಿ ಹೊಂದಿದರೆ ಈ ಮೂಗಿಗೇ ಮೊದಲು ವಾಸನೆ ಬಡಿದು ಅವರ ಮೇಲೆ ಜಿದ್ದು ಸಾಧಿಸುತ್ತಾ ಮೂಗು ತಿರುವುತ್ತದೆ. ಬೇರೆಯವರ ಕೆಲಸ ಕಾರ್ಯಗಳ ಬಗ್ಗೆ ಮೂಗು ಮುರಿಯುತ್ತದೆ. ಇನ್ನೊಬ್ಬರ ಒಳ್ಳೆಯತನವನ್ನು ಹೇಳಬೇಕಾಗುತ್ತದಲ್ಲ ಎಂದು ಮಾತಿಲ್ಲದ ಮೂಗ ನಂತೆ ನಟಿಸುತ್ತದೆ. ಈ ಮೂಗು ಎಷ್ಟು ಜಂಭ ಕೊಚ್ಚಿಕೊಳ್ಳುತ್ತದೆಂದರೆ, ತಾನೇ ಮುಖಕ್ಕೆ ಅಲಂಕಾರವೆಂದು ಭಾವಿಸಿ, ಮೂಗಿನ ತುದಿಯಲ್ಲೇ ನಗುತ್ತದೆ. ಮೂಗಿನ ತುದಿ ಎಂದಾಗ ನೆನಪಾಯಿತು. ಯಾರಾದರೂ ಬೇಡವಾದ ಕೆಲಸ ಮಾಡಿದಾಗ ಈ ಮೂಗೇನೇ ತನ್ನ ತುದಿಯಲ್ಲಿ ಕೋಪ ತುಂಬಿಕೊಂಡು ಕಿಡಿ ಕಾರು ತ್ತದೆ. ಅದಕ್ಕೆ ಇತ್ತೀಚೆಗೆ ನನಗೆ ಮೂಗಿನ ಬಗ್ಗೆ ಬಹಳ ದ್ವೆಷ ಶುರುವಾಗಿದೆ. ಈ ಮೂಗಿನ ಇನ್ನೊಂದು ಮಹಾ ಮಹಾ ಅವಗುಣ ಹೇಳುತ್ತೇನೆ ಮುಂದಕ್ಕೆ, ಓದಿ ಕೊಳ್ಳುತ್ತಾ ಹೋಗಿ ಇದರ ಅಧಿಕಪ್ರಸಂಗದ ಗುಣಕ್ಕೆ ಮನುಷ್ಯನ ಸ್ವಭಾವ ಕಾರಣವಾಗುವುದರಿಂದ ಅನಿವಾರ್ಯವಾಗಿ ಅವನಿಲ್ಲಿ ಮೂಗು ತೂರಿಸಿದ್ದಾನೆ, ಕ್ಷಮಿಸಿ. ಮೂಗು ತುರಿಸಿದ್ದಾನೆ ಅಲ್ಲಪ್ಪಾ, ಹಾಗೇನಾದರೂ ತುರಿಸಿದರೆ ನೆಗಡಿಯಾಗಿರಬೇಕು ಅಷ್ಟೆ! ಮೂಗು ತೂರಿಸುವ ವಿಷಯ ನಿಮಗೆ ಗೊತ್ತೇ? ನಿಮಗೇನು, ಎಲ್ಲರಿಗೂ, ಮೂಗಿದ್ದವರೆಲ್ಲರಿಗೂ, ವಿನಾಕಾರಣ ಮೂಗು ತೂರಿಸುವವರಿಗೂ, ಗುಟ್ಟಿನ ಮಾತಾಡು ವಾಗ ಕಿವಿಗೊಟ್ಟು ಗುಟ್ಟಾಗಿ ಕೇಳುವವರಿಗೂ, ಇಬ್ಬರು ಜಗಳವಾಡುವಾಗ ತಕ್ಷಣ ಪಂಚಾಯ್ತಿಕಟ್ಟೆಯಾಗುವವರಿಗೂ, ಹೀಗೆ ಎಲ್ಲರಿಗೂ ಗೊತ್ತೇ ಗೊತ್ತಿರುತ್ತದೆ. ಮೂಗು ತೂರಿಸುವ ವಿಷಯದಲ್ಲಿ, ಎಂತಹ ಬಡಪಾಯಿಗಳು ಕೂಡ ಕುತೂಹಲವುಳ್ಳವರಾಗೇ ಇರುತ್ತಾರೆ. ನಮಗೇಕೆ ಎಂದು ಯಾರೂ ಸುಮ್ಮನಾ ಗುವುದಿಲ್ಲ. ಅಂದಹಾಗೆ ಮೂಗು ತೂರಿಸುವುದು ಯಾಕೆ? ಕುತೂಹಲದಿಂದ! ಎಲ್ಲೋ ಜಗಳವೋ, ಮಾತು ಕತೆಯೋ ನಡೆಯುತ್ತಿದೆ ಎಂದು ಗೊತ್ತಾದಾಕ್ಷಣವೇ ಅಲ್ಲಿಗೆ ಓಡಿಹೋಗಿ ಮೂಗು ತೂರಿಸುತ್ತಾರೆ. ಇನ್ನೂ ಕೆಲವೊಮ್ಮೆ ನಮ್ಮ ಬಗ್ಗೆ ಮಾತಾಡುತ್ತಿದ್ದಾರಾ ಎಂದು ಪರೀಕ್ಷಿಸಲು ಮೂಗು ತೂರಿಸುತ್ತಾರೆ. ಮನರಂಜನೆಗಾಗಿಯೂ ಮೂಗು ತೂರಿಸಿ ವಿಷಯವನ್ನು ತಿಳಿದು, ಇನ್ನು ಮೂರ‍್ನಾಲ್ಕು ದಿನ ತಮ್ಮ ಹರಟೆಗೆ ಗ್ರಾಸವೊದಗಿಸಿಕೊಳ್ಳುತ್ತಾರೆ. ಮೂಗು ತೂರಿಸುವಾಗ ಹೇಗಾದರೂ ಸರಿ ಎಲ್ಲೋ ಮಧ್ಯದಲ್ಲಿ ನುಸುಳಿ ಮೂಗು ಉದ್ದಮಾಡಿ ಕಿವಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಪರರ ಬಗೆಗಿನ ಆಕರ್ಷಣೆ ಇವರಿಗೆ ನಿರಂತರವಾದದ್ದು. ಅದರಲ್ಲೂ. ಕೆಲವರು ಏನೂ ಕೆಲಸವಿರದೆ, ವಿನಾಕಾರಣ ಮೆಲ್ಲಗೆ ಸುಳಿದಾಡುತ್ತಿರುತ್ತಾರೆ. ಅದು ಯಾವಾಗ? ಇಬ್ಬರು ಕುಳಿತು ಗುಟ್ಟಾಗಿ ಮಾತನಾಡುವಾಗ. ಇವರುಗಳು ಗಮನಿಸದೆ ಮಾತಾಡುತ್ತಲೇ ಇದ್ದರೆನ್ನಿ, ಅಲ್ಲೇ ಎಲ್ಲೋ ಏನೋ ಮಾಡುವವರಂತೆ ಠಿಕಾಣಿ ಹಾಕಿಬಿಡುತ್ತಾರೆ.. ಪಕ್ಕದ ಮನೇಲಿ ಜಗಳವಾಗುತ್ತಿದೆಯೆಂದರೆ ಸಾಕು, ಇವರಿಗೆ ಹಬ್ಬ! ಕಿಟಕಿ ಮರೆಯಲ್ಲಿ, ಕರ್ಟನ್ ಸಂದಿಯಲ್ಲಿ, ಬಾಗಿಲ ಹಿಂದೆ ಹೀಗೆ ಅವಿತುಕೊಳ್ಳಬಹುದಾದ ಜಾಗದಲ್ಲೆಲ್ಲ ಅವಿತು ಈ ಸಂದರ್ಭವನ್ನು ಕಣ್ತುಂಬಿಕೊಂಡು ಆನಂದ ಪರವಶರಾಗುತ್ತಾರೆ. ಇವರು ನಿಂದಕರೂ ಹೌದು, ಹೊಗಳುಭಟ್ಟರೂ ಹೌದು, ವಂದಿಮಾಗಧರೂ ಹೌದು, ಏನೂ ದಕ್ಕದಿದ್ದಾಗ ಹಿಡಿಶಾಪ ಹಾಕುವವರೂ ಹೌದು! ಕದನ ಕುತೂಹಲಿಗಳು ಇನ್ನು ಕೆಲವರನ್ನು ಗಮನಿಸಿದ್ದೀರಾ? ಅಥವಾ ನೀವೇ ಅವರೋ! ಇಲ್ಲ ಬಿಡಿ, ನೀವಲ್ಲ. ಅವರು ಯಾರು ಗೊತ್ತೇ? ಕದನಕುತೂಹಲಿಗಳು. ಕಲಹಪ್ರಿಯರು, ನಾರದಪ್ರಿಯರು, ನಾರದಭಕ್ತರು! ಲೋಕಕಲ್ಯಾಣಾರ್ಥವಾಗಿ ನಾರದರು ತಮ್ಮ ಸೇವಾಕೈಂಕರ್ಯ ಕೈಗೊಂಡರೆ ಪರಪೀಡನಾರ್ಥ ಮೂಗು ತೂರಿಸುವವರು ಈ ಕೆಲಸ ಮಾಡಿ ವಿಘ್ನಸಂತೋಷಿಗಳೆಂಬ ಅಭಿಧಾನಕ್ಕೆ ಅರ್ಹರಾಗುತ್ತಾರೆ. ಇಂತಹ ನೂರಾರು ಘಟನೆಗಳನ್ನು ಜನರನ್ನು ನಾವು ನೋಡಿದ್ದೇವಲ್ಲವೇ? ಶಕುನಿಯು ಪಾಂಡವರನ್ನು ಮುಳುಗಿಸಲು ಕಂಕಣಬದ್ಧನಾಗಿ ನಿಲ್ಲುವುದನ್ನು ಓದುತ್ತಾ, ನೋಡುತ್ತಾ ಅವನಿಗೆ ಹಿಡಿಶಾಪ ಹಾಕುತ್ತಲೇ ನಾವೂ ಕೆಲವೊಮ್ಮೆ ಅವನಿಗೆ ಹೊರ ತಲ್ಲವೇನೋ ಎಂಬುದನ್ನು ಸಾಬೀತು ಪಡಿಸಿದ್ದೇವೆ. ಚಲನಚಿತ್ರಗಳಲ್ಲಿ ಇಂತಹ ಮನೆಮುರುಕ ಪಾತ್ರಗಳಲ್ಲಿ ದಿವಂಗತ ಬಾಲಕೃಷ್ಣರವರು ನಮಗೆಲ್ಲ ಪ್ರಿಯ ರಾದವರು. ಪಾಪಮ್ಮ, ರೇಡಿಯೋ ರಂಗಮ್ಮನ ಪಾತ್ರಧಾರಿ, ಎಮ್ ಎನ್ ಲಕ್ಷ್ಮಿದೇವಿ ಇವರೆಲ್ಲರ ಪಾತ್ರಗಳನ್ನು ನೋಡುವಾಗ ಯಾಕಾದರೂ ಹೀಗೆಲ್ಲ ಮಾಡಿ ಮನೆ ಮುರಿ ಯುತ್ತಾರೋ ಎಂದು ನೊಂದುಕೊಂಡಿದ್ದೂ ಸತ್ಯವೇ. ಅದರಲ್ಲೂ ಧರ್ಮಸೆರೆಯಲ್ಲಿ ಮುಸುರಿಯವರ ಪಾತ್ರವಂತೂ ಅಸಾಧ್ಯ! ಹೀಗೆ ನಾವು ಬೈದು ಕೊಳ್ಳುವ ಹಾಗೆ ನಟಿಸುವ ಈ ಕಲಾವಿದರೆಲ್ಲ ಎಂಥಹ ಅಭಿನಯಚತುರರಲ್ಲವೇ? ಕಡಲೆಪುರಿ ತಿಂದಷ್ಟು ಸಲೀಸು ಈಗಿನ ಧಾರಾವಾಹಿಗಳ ವಿಲನಿಣಿಯರು ಅವರವರೇ ಅದೇ ನೇನೋ ಪ್ಲಾನ್ ಮಾಡಿಕೊಂಡು ಮನೆಮುರಿಯುವ ಕೆಲಸವನ್ನು ಕಡಲೆಪುರಿ ತಿಂದಷ್ಟು ಸಲೀಸಾಗಿ ಮಾಡುತ್ತಿರುತ್ತಾರೆ. ಇದು ಹೇಗೆ ಸಾಧ್ಯ? ನೀವು ಇಲ್ಲಿಗೆ ಇದು ಅಸಂಬದ್ಧ ಎಂದುಕೊಂಡರೂ ಪರವಾಗಿಲ್ಲ, ಹೇಳಿಬಿಡ್ತೇನೆ. ಮನೇಲಿ ಉಪ್ಪು ಖಾಲಿಯಾಯ್ತು, ಮಗು ಪಕ್ಕದ ಮನೆಗೆ ಹೋಗಿತ್ತು, ಇವತ್ತು ಈ ಸೀರೆ ಉಟ್ಟುಕೊಳ್ಳಲಾ ಎಂದೆಲ್ಲ ನಾವು ಗಂಡನಿಗೆ ಮನೆಯವರಿಗೆ ಹೇಳುತ್ತಲೇ ಇರುತ್ತೇವೆ. ಆದರೆ ನೀವು ಈ ಸೀರಿಯಲ್‌ಗಳನ್ನು ನೋಡಬೇಕು, ಅಯ್ಯಪ್ಪಾ! ಹೋಗಿ ಅವನನ್ನು ಮುಗಿಸು, ಅವಳನ್ನು ಕಿಡ್ನಾಪ್ ಮಾಡು, ಅವರನ್ನು ಕತ್ತರಿಸು, ಎಂಬು ದನ್ನೆಲ್ಲಾ ಊಟ ಮಾಡಿದಷ್ಟು ಸಲೀಸಾಗಿ ಹೇಳುತ್ತಾರಲ್ಲಾ ಇದು ಹೇಗೆ? ಮುಂದೆ ಹೆಂಗಸರು ಹೀಗೆ ತಯಾರಾಗಲಿ ಎಂಬುದು ಅವರ ಅಭಿಲಾಷೆಯೇ? ಮಹಿಳೆ ಯರ ಅಭಿವೃದ್ಧಿಗಾಗಿ ದೂರಾ(ದುರಾ)ಲೋಚನೆಯೇ? ಅಯ್ಯೋ! ಈ ಹಾಳು ಕರೋನಾ ಬಂದಾಗ್ಲಿಂದ ಈ ಧಾರಾವಾಹಿಗಳನ್ನು ನೋಡಿ, ನೋಡಿ, ತಲೆಕೆಟ್ಟು ಹೋಗಿದೇರಿ. ನೀವು ಯಾಕೆ ನೋಡುತ್ತೀರಿ? ನೋಡಬೇಡಿ ಅಂತೀರಾ, ಒಪ್ಪಿಕೊಳ್ಳುತ್ತೇನೆ. ಆದರೆ ವಾಟ್ಸಾಪ್, ಫೇಸ್‌ಬುಕ್‌ನೇ ಎಷ್ಟೂಂತ ನೋಡುವುದು? ಈ ಓದೋ ಬುದ್ಧಿ ಬರ‍್ಯೋ ಬುದ್ಧಿಯೆಲ್ಲ ನನ್ನನ್ನು ನೋಡಿ ಹೆದರಿಕೊಂಡು ದೂರ ಹೋಗಿ ಬಚ್ಚಿಟ್ಟುಕೊಳ್ಳುತ್ತವೆ. ಏನು ಮಾಡುವುದು ನೀವೇ ಹೇಳಿ? ಈ ಮೂಗು ತೂರಿಸುವವರಿಗೆ ಇನ್ನೂ ಒಂದು ಆಯ್ಕೆಯಿದೆ. ಅದೆಂದರೆ ಮಕ್ಕಳು! ತಾವು ಹೋಗಲಾಗ ದಿದ್ದಾಗ, ಎದುರಾಳಿಗಳೊಂದಿಗೆ, ಮನಸ್ತಾಪವೋ ಇನ್ನೇನೋ ಆಗಿದ್ದಾಗ, ಅಲ್ಲಿಗೆ ಮಕ್ಕಳನ್ನು ಅಟ್ಟಿ, ಮಕ್ಕಳಿಂದ ವಿಷಯ ತಿಳಿದುಕೊಳ್ಳುವುದು. ಅವರು ಏನ್ಮಾಡ್ತಿದ್ರು? ಏನೇನ್ಮಾತಾಡ್ತಿದ್ರು? ಯಾರ‍್ಯಾರಿದ್ರು? ಹೀಗೆ ಮಕ್ಕಳಿಂದ ವಿಷಯಗಳನ್ನು ಸಂಗ್ರಹಿಸುವುದು. ಆಕಸ್ಮಿಕ ಮಕ್ಕಳು ಯಾವಾಗಾದರೂ, ‘ಅಮ್ಮಾ ಅವರ ಮನೇಲೀ..’ ಎನ್ನುತ್ತಿದ್ದಂತೆ ‘ಕಂಡೋರ್ ಮನೆ ವಿಷ್ಯ ನಿಂಗ್ಯಾಕೋ’ ಎಂದು ಬಾಯಿ ಮುಚ್ಚಿಸಿಬಿಡುವುದು ಸಭ್ಯರಂತೆ. ಕೆಲವೊಮ್ಮೆ ಸಂತೋಷವೋ ದುಃಖವೋ ಏನಾದರೂ ಅತಿಯಾದಾಗ ಅದನ್ನು ಹಂಚಿಕೊಳ್ಳುವವರೆಗೆ ಸಮಾಧಾನವಿರುವುದಿಲ್ಲ. ಮಿತ್ರರೊಬ್ಬರು, ಏನಿವತ್ತೂ? ಎಂದಕೂಡಲೇ ನೋಡಿ, ಕಟ್ಟೆಯೊಡೆದ ಒಡ್ಡಿನಂತೆ ಇದ್ದದ್ದು ಇಲ್ಲದ್ದು ಎಲ್ಲವನ್ನೂ ಹೇಳಿಕೊಂಡು ನಿರಾಳವಾಗಿಬಿಡುವ ಸಂದರ್ಭಗಳು ಎಲ್ಲರಿಗೂ ಇರುತ್ತವೆ. ಎದುರಿನವರು ಉತ್ತಮರಾಗಿದ್ದರೆ, ಅವರು ಕೇಳಿಸಿಕೊಂಡ ವಿಷಯ ಅನ್ಯರ ಕಿವಿ ತಲುಪದೇ, ಅವರ ಮನದಲ್ಲೇ ಸ್ಥಿರವಾಗಿರುತ್ತವೆ. ಪರರ ಮನೆಯ ಸುಖದುಃಖಗಳಿಗೆ ಒಗ್ಗರಣೆ ಹಾಕುವವರಾದರೆ ಅವರ ಸಂತೋಷ ಮೇರೆ ಮೀರಿದ್ದು! ಎಲ್ಲರ ಮನೆ ಬಾಗಿಲಿಗೂ ಇವರೇ ಎಡತಾಕಿ, ವಿಷಯಕ್ಕೆ ಇನ್ನಷ್ಟು ಉಪ್ಪುಖಾರ ಸೇರಿಸಿ ಹಂಚಿ ಪಾವನರಾಗುತ್ತಾರೆ. ಫೇಸ್‌ಬುಕ್‌ನಲ್ಲೂ ಮೂಗು ತೂರಿಸುವಿಕೆ ಈಗಂತೂ ಫೇಸ್‌ಬುಕ್ ನೋಡಿ, ಎಲ್ಲರೂ......ಎ..ಲ್ಲ..ರೂ.. ಮೂಗು ತೂರಿಸುವವರೇ! ಎಲ್ಲ ವಿಷಯಕ್ಕೂ! ತರಾಟೆಗೆ ತೆಗೆದುಕೊಳ್ಳುವುದೇನು ಕೇಳ್ತೀರಾ? ಯಾರೋ ಯಾರನ್ನೋ ಬೈದರೆಂದು ಇವರು ಮೂಗು ತೂರಿಸಿ ಇವರ ಬೇಳೆ ಬೇಯಿಸಿಕೊಳ್ಳುವುದೇನು ಕೇಳ್ತೀರಾ? ಎಲ್ಲರೂ ತಪ್ಪು ತಿಳಿದಿದ್ದಾರೆ ಹೆಂಗಸರೇ ಮೂಗು ತೂರಿಸುವುದು ಜಾಸ್ತಿಯೆಂದು! ಇದು ತಪ್ಪು! ಗಂಡಸರು ಹೆಂಗಸರನ್ನು ಮೀರಿಸುತ್ತಾರೆ. ಬೇಡ, ಹೀಗೆ ಯೋಚಿಸೋದೇ ಬೇಡ. ಗಂಡಸರಿಗೂ ಹೆಂಗಸರಷ್ಟೇ ಇನ್ನೊಬ್ಬರ ಬಗ್ಗೆ ಮಾತಾಡುವ ಚಪಲವಿದ್ದೇ ಇದೆ. ಚಪಲ ಚೆನ್ನಿಗರಾಯ ಎಂದು ಯಾತಕ್ಕಾಗಿ ಕರೆದರೋ ನನಗಂತೂ ಗೊತ್ತಿಲ್ಲ. ಆದರೆ ಅವಳನ್ನೂ ಈ ಜಗತ್ತು ಬಿಟ್ಟಿಲ್ಲ, ಗಯ್ಯಾಳಿ, ಮನೆಮುರುಕಿ, ಚಾಡಿಕೋರಿ, ಎಂಬೆಲ್ಲ ಅನ್ವರ್ಥಗಳಿವೆ. ಇವುಗಳನ್ನೇ ಗಂಡಸರಿಗೂ ಅನ್ವಯಿಸಿಕೊಂಡು ಹೇಳಿಕೊಳ್ಳಿ. ಮೂಗು ತೂರಿಸುವ ಒಳ್ಳೆಯವರು ಇದಿಷ್ಟೇ ಅಲ್ಲಾ, ‘ಒಳ್ಳೆಯ ಮೂಗು ತೂರಿಸುವವರೂ’ ಇದ್ದಾರೆ ಕಣ್ರೀ. ಎಲ್ಲವನ್ನೂ ಇವರಿಂದ ಕೇಳಿಕೊಂಡು, ಯಾರಿಗೆ ತಲುಪಿಸಿ ಯಾರಿಂದ ಸರಿಯಾಗ ಬಹುದೋ ಅವರ ಬಳಿ ಹೋಗಿ ಸಂಧಾನ ಮಾಡಿ ಜೊತೆಗೂಡಿಸುವ ಒಳ್ಳೆಯವರೂ ಇದ್ದಾರೆ. ಆದರೆ ಬೆರಳೆಣಿಕೆಯೆಂದರೆ ಸರಿಯಾದೀತೇನೋ! ಏನಾದ ರಾಗಲಿ, ಇರೋದೊಂದು ಮೂಗು! ಕೋಪದ ಕೈಗೆ ಮೂಗನ್ನು ಕೊಡದೆ ರಕ್ಷಿಸಿಕೊಳ್ಳಿ. ಕರೋನಾ ವೈರಸ್‌ಗೆ ಮೂಗನ್ನು ದಾನ ಮಾಡಬೇಡಿ. ಬಹಳ ಅಪಾಯಕಾರಿ. ಈಗಂತೂ ಕಲರ್ ಕಲರ್ ಕರೋನಾಗಳು ಬಂದಿವೆಯಂತೆ. ನನಗಾಕಲರ್ ಇಷ್ಟ, ನನಗೀಕಲರ್ ಇಷ್ಟ ಎಂದು ಮಾಸ್ಕ್ ಹಾಕಿಕೊಳ್ಳದೆ ಇರಬೇಡಿ. ಕೆಲವರನ್ನು ನೋಡಬೇಕು ನೀವು, ಬಾಯಿಗೆ ಮಾಸ್ಕ್ ಹಾಕ್ಕೊಂಡಿರ‍್ತಾರೆ. ಆದರೆ ನೀವು ಅಂಥವರಿಗೂ ತಿಳಿವಳಿಕೆ ನೀಡಿ, ಮೂಗಿಗೆ ಮಾಸ್ಕ್ ಹಾಕಿಕೊಳ್ಳಿ. ಇರೋದೊಂದೇ ಮೂಗು. ಕರೋನ ಬರುತ್ತೆ ಅಂತ ಮೂಗು ತೆಗೆದಿಟ್ಟು ಆಮೇಲೆ ಹಾಕಿಕೊಳ್ಳೋಣ ಎಂದರಾಗುತ್ತದೆಯೇ? ಮೂಗಿಲ್ಲದ ನಿಮ್ಮ ಮುಖವನ್ನು ಕಲ್ಪನೆ ಮಾಡಿಕೊಳ್ಳಿ? ಅಬ್ಬಾ! ಬೇಡಪ್ಪಾ ಬೇಡ, ಆ ರೂಪ ಬೇಡ ಅಲ್ಲವಾ? ಅದಕ್ಕೇ ಹೇಳಿದ್ದು, ಮಾಸ್ಕ್ ಹಾಕ್ಕೊಳ್ಳಿ. ಹೋಗಿ ಹೋಗಿ ಯಾರ‍್ಯಾರ ಮೇಲೋ ಬಿದ್ದು ಅರ್ಜೆಂಟಾಗಿ ತರಕಾರಿ ತೊಗೋಬೇಡಿ, ಅಂತರ ಕಾಪಾಡಿಕೊಳ್ಳಿ. ಐದುನಿಮಿಷದಲ್ಲಿ ಗಂಟೇನೂ ಹೋಗೋಲ್ಲ ಅಲ್ವೇ? ಹೊರಗೆ ಹೋಗಿ ಬಂದ ಕೂಡ್ಲೇ ಕೈ ತೊಳ್ಕೊಳ್ಳಿ. ಎಲ್ಲೆಲ್ಲೋ ಮೂಗು ತೂರಿಸಲು ಈ ಕೆಟ್ಟ ಸಮಯದಲ್ಲಿ ಆಚೆ ಹೋಗಬೇಡಿ. ಮೂಗು ಮುಚ್ಚಿಕೊಂಡು ಮನೆಯಲ್ಲಿ ಕೂರಿ ಆಯ್ತಾ?
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ