ಕಾಡುತಿದೆ ನಿನ್ನ ನೆನಪು
ಕಾಡುತಿದೆ ನಿನ್ನ ನೆನಪು
Vishwavani News
August 3, 2022
ನೀನು ಬಳಿ ಇಲ್ಲದೆ ಹಗಲುಗಳು ಭಾರ ಎನಿಸುತ್ತವೆ, ರಾತ್ರಿಗಳು ದೀರ್ಘ ಎನಿಸುತ್ತಿವೆ. ನನ್ನ ಮನದ ತುಂಬಾ ನಿನ್ನದೇ ಸವಿ ಸಿಹಿ ನೆನಪು!
ನಾಗೇಶ್ ಜೆ. ನಾಯಕ
ಹೃದಯ ಪಾರಿಜಾತವೇ.....
ಮುಸ್ಸಂಜೆಯ ಮೋಡಿಯಲ್ಲಿ ಮನಸ್ಸು ಅರಳುತ್ತಿರುವಾಗ, ಸೂರ್ಯಾಸ್ತದ ಸಂಜೆ ಗೆಂಪನ್ನು ಕಂಗಳು ಆಸ್ವಾದಿಸುತ್ತಿರುವಾಗ, ನನ್ನೊಳಗಿನ ಭಾವನೆಗಳಿಗೆ ಹೊಸ ರೂಪ ಕೊಡಲು ಚಡಪಡಿಸುತ್ತಿರುವ ಸಂದರ್ಭದಲ್ಲಿ ನಿನ್ನ ಭಾವಚಿತ್ರ ಮಿಂಚಿನಂತೆ
ಮನದ ಮುಂದೆ ಮೂಡಿ ಮಾಯವಾಗಿ ಬಿಡುತ್ತದೆ. ಹಾಗೇ ಮಾಯವಾಗಿದ್ದರೆ ಸುಧಾರಿಸಿ ಕೊಳ್ಳುತ್ತಿದ್ದೆನೇನೋ? ಆದರೆ ಮೊಗದಲ್ಲೊಂದು ಚಂದದ, ಮಾಟದ ನಗೆಯನ್ನು ತುಳುಕಿಸಿ, ಹೃದಯಕ್ಕೆ ಕಿಚ್ಚು ಹೊತ್ತಿಸಿ ಮರೆಯಾಗುತ್ತದೆ ನೋಡು? ಇದು ಸಹಿಸಿಕೊಳ್ಳ ಲಾಗದ ನೋವಿನುರಿ!
ವಿರಹದ ಬೇಗೆ ಸುಡಲು
ಎದೆಯಲಿ ಬೇಸಿಗೆ ಕಾಲ...
ಇನ್ನೆಲ್ಲಿ ನನಗೆ ಉಳಿಗಾಲ....?
ಮನಸ್ಸು ಎಲ್ಲವನ್ನು ಬಿಟ್ಟು, ನಿನ್ನ ನಿಷ್ಕಲ್ಮಶ ನಗೆಯ ಹಿಂದುಗಡೆ ಹುಚ್ಚುಗುದುರೆ ಯಂತೆ ನಾಗಾಲೋಟದಿ ಓಡತೊಡಗುತ್ತದೆ. ಹೆಣ್ಣು, ಹೊನ್ನು, ಮಣ್ಣು ಮೂರು ಮಾಯೆಯನ್ನುವರು. ನಿಜಕ್ಕೂ ನಾನು ಹೇಳುವದು ನಿನ್ನ ನಗೆಯೇ ಒಂದು ದಿವ್ಯ ಮಾಯೆ. ನಿನ್ನ ನಗೆಯ ಸಮ್ಮುಖ ಬೆಳದಿಂಗಳ ಸೂಸುವ ಚಂದ್ರ ಕೂಡ ಮಂಕಾದ ವನಂತೆ ಕಾಣುತ್ತಾನೆ.
ಅದಿರಲಿ, ಆ ನಿನ್ನ ಪುಟ್ಟ ಬೊಗಸೆ ಕಂಗಳ ಆಳದಲ್ಲಿ ಯಾವ್ಯಾವ ಕನಸು, ಭಾವನೆಗಳನ್ನು ಅಡಗಿಸಿಟ್ಟಿದ್ದೀಯಾ? ಓದಿಕೊಳ್ಳಲು ಶತಪ್ರಯತ್ನ ಪಡುತ್ತೇನೆ. ಊಹುಂ! ಕಡಲಿನಾಳಕ್ಕೆ ಇಳಿದು ಅದರ ಗರ್ಭದಲ್ಲಿ ಹುದುಗಿದ ರಹಸ್ಯಗಳನ್ನು ಕ್ಷಣಾರ್ಧದಲ್ಲಿಯೇ ಸೋಟಿಸಬಹುದು, ನಿನ್ನ ಕೋಮಲ, ಕುತೂಹಲಭರಿತ ಕಂಗಳ ಆಳಕ್ಕಿಳಿದು ಅದರೊಳಗಿನ ಭಾವನೆಗಳ ಕಣಜವನ್ನು
ಹೆಕ್ಕಲ ಸಾಧ್ಯ. ಇಂತಹ ಮೋಹಕ ಸಾಯಂಕಾಲಗಳು, ಅವುಗಳಿಗಿಂತ ಮೋಹಕವಾದ ನಿನ್ನನ್ನು ನೆನೆಯುವದರಲ್ಲಿಯೇ ಕಳೆದು ಹೋಗಿಬಿಡುತ್ತವೆ.
ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯೂ ತುಂಬಿದೆ ನನ್ನಲಿ.. ನನ್ನಲಿ...
ನಿನ್ನ ಮೇಲೆ ಪ್ರೀತಿ ಚಿಗುರೊಡೆದ ದಿನಗಳತ್ತ ಮೆಲುಕು ಹಾಕುತ್ತೇನೆ. ನಿನ್ನನ್ನು ನಾನು ಮೊಟ್ಟಮೊದಲು ಕಂಡದ್ದು ದೇವರ ಸನ್ನಿಧಿಯಲ್ಲಿ ತನ್ಮಯಳಾಗಿ, ಭಕ್ತಿಭಾವದಿಂದ ಘಂಟಾನಾದ ಮೊಳಗಿಸುತ್ತಿದ್ದಾಗ. ಅಂದು ಶುರುವಾದ ಪ್ರೀತಿಯ ಘಂಟಾನಾದದ ಸದ್ದು ನನ್ನೆದೆಯೊಳಗೆ ಇಂದಿಗೂ ಮೊಳಗುತ್ತಲೇ ಇದೆ. ದಟ್ಟ ಕೆಂಪು ಚೂಡಿಯಲ್ಲಿ, ಮೇಲೊಂದು ಮೊಲದ ಬಿಳುಪಿನ
ವೇಲ್ ಧರಿಸಿ ನೀಳಕಾಯದ ನೀನು ಜಿಂಕೆಯಂತೆ ನೆಗೆಯುತ್ತ ಬರುತ್ತಿದ್ದರೆ ಹೇಳು ಹುಚ್ಚನಾಗದವನು ಯಾರು? ಕಾಲ್ಗೆಜ್ಜೆಯ ಕಿರುನಾದ, ಕೈಬಳೆಗಳ ಘಲ್ ಘಲ್, ಹಣೆಯ ಮೇಲೆ ಅರಳಿನಿಂತ ಹೆಬ್ಬೆಟ್ಟಿನ ಗಾತ್ರದ ಕೆಂಪು ಬಿಂದಿ, ಸೂರ್ಯನ ಕಿರಣಕ್ಕೆ ಹೊಳೆಯುತ್ತಿದ್ದ ನಿನ್ನ ಕಿವಿಯೋಲೆಗಳು, ಗಾಳಿಯ ಸಂಗೀತಕ್ಕೆ ತಲೆದೂಗುತ್ತಿದ್ದ ಹಣೆಯ ಮುಂಗುರುಳು, ಮಾತನಾಡಿದರೆ ಸಾವಿರ ವೀಣೆಗಳು ಒಟ್ಟಿಗೆ ಮೊಳಗಿದಂತಿದ್ದ ಧ್ವನಿ, ನಕ್ಕರೆ ಸುತ್ತ ಬೆಳದಿಂಗಳು ಚೆಲ್ಲಿದಂತೆ ಮೋಡಿ ಮಾಡುತ್ತಿದ್ದ ನಿನ್ನ ನಗೆ.
ನಿಜಕ್ಕೂ ನಾನು ಅದೃಷ್ಟವಂತ; ನಿನ್ನ ಪ್ರೀತಿಯ ಪಾಲುದಾರನಾಗಿದ್ದಕ್ಕೆ. ನಿಜ ಹೇಳಲೇ....? ಅಂದು ನಿನ್ನ ಮೇಲೆ ಅರಳಿದ ಪ್ರೀತಿ ಇಂದಿಗೂ ಕರಗಿಲ್ಲ, ಕರಗುವದೂ ಇಲ್ಲ. ನನ್ನ ಪಾಲಿಗೆ ನೀನೊಂದು ಅಚ್ಚರಿ, ಬೆರಗು. ಸೃಷ್ಟಿಕರ್ತ ಪುರುಸೊತ್ತಿನಿಂದ ಕೆತ್ತಿದ ದಂತದ ಗೊಂಬೆ. ನೀನು ಜೊತೆ ಇಲ್ಲದೆ ಹಗಲುಗಳು ಭಾರ ಎನಿಸುತ್ತವೆ, ರಾತ್ರಿಗಳು ದೀರ್ಘವಾಗುತ್ತವೆ. ನಿನ್ನ ನೆನಪುಗಳ ಚೈತನ್ಯವೊಂದೇ ನನ್ನಲ್ಲಿ ಆತ್ಮವಿಶ್ವಾಸದ ಅಲೆಯೆಬ್ಬಿಸಿ ಮುನ್ನಡೆಸುತ್ತಿರುವದು. ಜೀವ ಸಂಜೀವಿನಿ ನೀನು!