ಚಹಾ ಸೇವಿಸಿದರೆ ಲಾಭವಿದೆಯೆ ?
ಚಹಾ ಸೇವಿಸಿದರೆ ಲಾಭವಿದೆಯೆ ?




ಅಜಯ್ ಅಂಚೆಪಾಳ್ಯ
ಬೆಳಗ್ಗೆ ಎದ್ದ ಕೂಡಲೇ ಚಹಾ ಸೇವಿಸುವುದು ಕೆಲವರ ಅಭ್ಯಾಸ. ಇದರಿಂದ ಲಾಭಗಳಿವೆಯೆ? ಕೆಲವು ಅಧ್ಯಯನಗಳು ಚಹಾ ಸೇವನೆಯಿಂದ ದೇಹಕ್ಕೆ ಅನುಕೂಲ ಎನ್ನುತ್ತವೆ. ಹಾಲು, ಸಕ್ಕರೆ ಬೆರೆಸದೇ, ಲಿಂಬೆ ರಸ ಬೆರೆಸಿದ ಗ್ರೀನ್ ಟೀ ಉತ್ತಮ ಎನ್ನುತ್ತವೆ ಇನ್ನು ಕೆಲವು ಅಧ್ಯಯನಗಳು. ಹಲ್ಲಿನ ಆರೋಗ್ಯ: ಟೀ ಎಲೆಗಳು ಫ್ಲೋರೈಡ್ ನ್ನು ಹೀರುವ ಗುಣ ಹೊಂದಿವೆ.
ಫ್ಲೋರೈಡ್ ಅಧಿಕವಾದರೆ ಹಲ್ಲುಗಳು ದುರ್ಬಲವಾಗಬಹುದು. ಆದ್ದರಿಂದ, ಟೀ ಸೇವಿಸಿದರೆ ಹಲ್ಲು ಹುಳುಕು ಆಗುವ ಸಂಭವ ಕಡಿಮೆಯಾಗುತ್ತದೆ ಎನ್ನುತ್ತದೆ ಒಂದು ಅಧ್ಯಯನ.
ಕಣ್ಣಿನ ಆರೋಗ್ಯ: ಬ್ರಿಟಿಷ್ ಜರ್ನಲ್ ಆಫ್ ಆಪ್ತಾಮ್ಲಜಿಯು ನಡೆಸಿದ ಒಂದು ಅಧ್ಯಯನವು ಚಹಾ ಸೇವನೆಗೂ, ಕಣ್ಣಿನ ಆರೋಗ್ಯಕ್ಕೂ ಸಂಬಂಧವಿದೆ ಎನ್ನುತ್ತದೆ. ಪ್ರತಿದಿನ ಒಂದು ಕಪ್ ಚಹಾ ಸೇವಿಸಿದರೆ, ಗ್ಲೂಕೋಮಾ ಬರುವ ಸಾಧ್ಯತೆ ಶೇ.೭೪ರಷ್ಟು ಕಡಿಮೆಯಾಗುತ್ತದೆ ಎನ್ನುತ್ತದೆ ಆ ವರದಿ.
ಮಿದುಳಿನ ಆರೋಗ್ಯ: ಚಹಾ ಎಲೆಯಲ್ಲಿ ಹಲವು ಆಂಟಿ ಆಕ್ಸಿಡೆಂಟ್‌ಗಳಿವೆ. ಇವು ದೇಹದ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ.ಸಿಂಗಪುರದಲ್ಲಿರುವ ನ್ಯಾಷನಲ್ ಯೂನಿವರ್ಸಿಟಿಯ ಒಂದು ಅಧ್ಯಯನದ ಪ್ರಕಾರ, ನಿಯಮಿತವಾಗಿ ಪರಿಶುದ್ಧ ಚಹಾವನ್ನು ಪಾನೀಯ ರೂಪದಲ್ಲಿ ಸೇವಿಸಿದರೆ, ಮರೆವು ರೋಗ (ಡೆಮೆನ್ಶಿಯಾ) ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
ಹೃದಯದ ಆರೋಗ್ಯ: ಪ್ರತಿ ದಿನ ಚಹಾ ಸೇವಿಸಿದರೆ, ಹೃದಯದ ಆರೋಗ್ಯವನ್ನು ಕಾಪಾಡಬಹುದು ಎಂದು ಒಂದು ಡಚ್ ಅಧ್ಯಯನ ತಿಳಿಸಿದೆ. ಚಹಾದಲ್ಲಿರುವ ಫ್ಲೇವನಾಯ್ಡ್ ಎಂಬ ಆಂಟಿಆಕ್ಸಿಡೆಂಟ್‌ನಿಂದಾಗಿ, ಹೃದಯ ಆರೋಗ್ಯವಂತ ವಾಗಿರುತ್ತದೆ ಎನ್ನುತ್ತದೆ ಆ ಅಧ್ಯಯನ.
ಬ್ಲಾಕ್ ಟೀ ಅಥವಾ ಗ್ರೀನ್ ಟೀ?: ಚಹಾ ಸೇವನೆ ಮತ್ತು ರಕ್ತದೊತ್ತಡ ನಿಯಂತ್ರಣದ ಕುರಿತು ಸಾಕಷ್ಟು ಅಧ್ಯಯನಗಳಾಗಿವೆ. ಬ್ಲಾಕ್ ಟೀ ಕುಡಿದರೆ ಶೇ.೧೦ರಷ್ಟು ನಿಯಂತ್ರಣ ಆದರೆ, ಗ್ರೀನ್ ಟೀ ಸೇವಿಸಿದರೆ ಶೇ.೪೬ರಷ್ಟು ನಿಯಂತ್ರಣವಾಗಬಹುದು ಎನ್ನುತ್ತವೆ ಅಧ್ಯಯನಗಳು. ಆದ್ದರಿಂದ, ಪರಿಶುದ್ಧ ಗ್ರೀನ್ ಟೀ (ಏನನ್ನೂ ಬೆರೆಸದೇ) ಸೇವಿಸುವುದು ಹಿತಕರ.
ಬಾಯಿಯ ಆರೋಗ್ಯ: ಬ್ರಿಟಿಷ್ ನ್ಯೂಟ್ರಿಷನ್ ಫೌಂಡೇಶನ್ ನಡೆಸಿದ ಒಂದು ಅಧ್ಯಯನದ ಪ್ರಕಾರ, ಪ್ರತಿದಿನ ಮೂರು ಕಪ್ ಚಹ ಸೇವಿಸಿದರೆ, ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳು ನಿಯಂತ್ರಣದಲ್ಲಿರುತ್ತವೆ.
ಮಧುಮೇಹ: ಪ್ರತಿದಿನ ಮೂರು ಕಪ್ ಚಹಾ ಸೇವಿಸಿದರೆ, ಟೈಪ್-೨ ಮಧುಮೇಹ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಪಿತ್ತಜನಕಾಂಗ: ಗ್ರೀನ್ ಟೀ ಸೇವಿಸಿದರೆ, ಪಿತ್ತಜನಕಾಂಗದ ಆರೋಗ್ಯವೂ ಉತ್ತಮಗೊಳ್ಳಬಹುದು ಎಂದು ಕೆಲವು ಅಧ್ಯಯನಗಳು ಗುರುತಿಸಿವೆ. ಚಹಾ ಸೊಪ್ಪಿನಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ ಎಂಬುದು ಸ್ಪಷ್ಟ. ಆದರೆ, ನಮ್ಮ ದೇಶದಲ್ಲಿ ಹೆಚ್ಚಿನವರು ಸೇವಿಸುವಂತೆ ಹಾಲು ಮತ್ತು ಸಕ್ಕರೆ ಬೆರೆಸಿದ ಚಹಾ ಕುಡಿದರೆ, ಲಾಭಕ್ಕಿಂತ ಹಾನಿಯೇ ಹೆಚ್ಚು.
ಸಕ್ಕರೆಯು ಹೃದಯದ ಆರೋಗ್ಯವನ್ನು ಕೆಡಿಸುತ್ತದೆ ಎಂಬುದು ವೈಜ್ಞಾನಿಕವಾಗಿ ಋಜುವಾತಾಗಿದೆ. ಆದ್ದರಿಂದ, ಚಹಾವನ್ನು ಸೇವಿಸುವಾಗ, ಹಾಲು ಮತ್ತು ಸಕ್ಕರೆ ಬೆರೆಸದೇ, ಹಾಗೆಯೇ ಸೇವಿಸುವುದು ಒಳ್ಳೆಯದು. ಬ್ಲಾಕ್ ಟೀ ಗಿಂತಲೂ, ಗ್ರೀನ್ ಟೀ ಸೇವಿಸುವುದು ಉತ್ತಮ ಎಂಬುದು ಸಾರ್ವತ್ರಿಕ ಅಭಿಪ್ರಾಯ.