Vishwavani Editorial: ಯೋಜನೆ ಪ್ರಚಾರದ ಸರಕಾಗದಿರಲಿ
ಸಸಿ ನೆಡುವ ನೆಪದಲ್ಲಿ ನೂರಾರು ಕೋಟಿ ವ್ಯಯಿಸಿದರೂ ನಿರ್ವಹಣೆಯ ಕೊರತೆಯಿಂದ ಯೋಜನೆ ವಿಫಲವಾದ ಉದಾಹರಣೆ ಕಣ್ಣ ಮುಂದಿದೆ. ಹೀಗಾಗಿ ಎಷ್ಟು ಗಿಡ ನೆಟ್ಟೆವು ಎನ್ನುವು ದಕ್ಕಿಂತ ಎಷ್ಟು ಗಿಡಗಳನ್ನು ಉಳಿಸಿದೆವು ಎಂಬುದು ಯೋಜನೆಯ ಯಶಸ್ಸಿನ ಮಾನದಂಡ ವಾಗಬೇಕು.
-
ರಾಜಧಾನಿ ಬೆಂಗಳೂರು ಈಗ ಗಾರ್ಡನ್ ಸಿಟಿಯಿಂದ ಕಾಂಕ್ರೀಟ್ ಸಿಟಿಯಾಗಿ ಬದಲಾಗಿದೆ. ಬೇಸಿಗೆಯಲ್ಲೂ ತಂಪಾಗಿರುತ್ತಿದ್ದ ಸಿಲಿಕಾನ್ ನಗರ ಈಗ 37 ಸೆಂಟಿಗ್ರೇಡ್ ತನಕದ ತಾಪಮಾನಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಏರಬಹುದು. ವೇಗವಾಗಿ ವಿಸ್ತರಿಸುತ್ತಿರುವ ಕಾಂಕ್ರೀಟ್ ಕಾಡು, ಕುಗ್ಗುತ್ತಿರುವ ಹಸಿರು ವಲಯ, ಏರುತ್ತಿರುವ ತಾಪಮಾನ ಮತ್ತು ಕುಸಿಯುತ್ತಿರುವ ವಾಯು ಗುಣಮಟ್ಟ ನಗರದ ಪರಿಸರ ಸಮತೋಲನ ಕ್ಕೆ ದೊಡ್ಡ ಸವಾಲಾಗಿವೆ.
ನಗರದ ತಾಪಮಾನವು ಕಳೆದ ಎರಡು ದಶಕಗಳಲ್ಲಿ ಸರಾಸರಿ 2 ರಿಂದ 2.5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಮತ್ತೊಂದೆಡೆ ವಾಹನಗಳ ಸಂಖ್ಯೆ 1.2 ಕೋಟಿಗೂ ಮೀರಿ ವಾಯು ಮಾಲಿನ್ಯ ಹೆಚ್ಚಿಸುತ್ತಿದೆ. ದಿನವೊಂದಕ್ಕೆ ಸುಮಾರು ಎರಡೂವರೆ ಸಾವಿರ ವಾಹನಗಳು ರಾಜಧಾನಿಯ ಬೀದಿಗಿಳಿಯುತ್ತಿವೆ.
ಇಂತಹ ಸಂದರ್ಭದಲ್ಲಿ ಬಿಡಿಎ 15 ಲಕ್ಷ ಸಸಿ ನೆಡುವ ಯೋಜನೆಯನ್ನು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಇದು ಕೇವಲ ಮತ್ತೊಂದು ಪ್ರಚಾರದ ಸರಕಾಗದೇ ಫಲಿತಾಂಶ ನೀಡುವ ಕಾರ್ಯ ಯೋಜನೆಯಾಗಬೇಕಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಹಾಗೂ ಇತರ ಸಂಸ್ಥೆಗಳು ದಶಕಗಳಿಂದ ಲಕ್ಷಾಂತರ ಸಸಿಗಳ ನೆಡುವ ಕಾರ್ಯಕ್ರಮ ನಡೆಸುತ್ತಲೇ ಬಂದಿವೆ. ಆದರೆ ಘೋಷಿಸಿ, ಬೆಳೆಸಿದ ಸಸಿಗಳ ಪ್ರಮಾಣಕ್ಕಿಂತ ಕತ್ತರಿ ಹಾಕಿದ ಸಸಿಗಳ ಪ್ರಮಾಣವೇ ಹೆಚ್ಚು.
ಇದನ್ನೂ ಓದಿ: Heatwave Alert: ಏಪ್ರಿಲ್-ಜೂನ್ ಅವಧಿಯಲ್ಲಿ ತಾಪಮಾನ ಇನ್ನಷ್ಟು ಹೆಚ್ಚಲಿದೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ
ಸಸಿ ನೆಡುವ ನೆಪದಲ್ಲಿ ನೂರಾರು ಕೋಟಿ ವ್ಯಯಿಸಿದರೂ ನಿರ್ವಹಣೆಯ ಕೊರತೆಯಿಂದ ಯೋಜನೆ ವಿಫಲವಾದ ಉದಾಹರಣೆ ಕಣ್ಣ ಮುಂದಿದೆ. ಹೀಗಾಗಿ ಎಷ್ಟು ಗಿಡ ನೆಟ್ಟೆವು ಎನ್ನುವುದಕ್ಕಿಂತ ಎಷ್ಟು ಗಿಡಗಳನ್ನು ಉಳಿಸಿದೆವು ಎಂಬುದು ಯೋಜನೆಯ ಯಶಸ್ಸಿನ ಮಾನದಂಡವಾಗಬೇಕು.
ಅಲ್ಲದೇ, ಕೇವಲ ನೆರಳು ಕೊಡುವ, ಗಾಳಿ ಮಳೆಗೆ ಉರುಳುವ ಅಲಂಕಾರಿಕ ಮರಗಳ ಬದಲು, ಮಳೆ,ಗಾಳಿಯನ್ನು ತಾಳಿಕೊಂಡು ಬೆಳೆಯಬಲ್ಲ, ಪ್ರಾಣಿ-ಪಕ್ಷಿಗಳಿಗೂ ಆಸರೆ ಯಾಗಬಲ್ಲ ಗಿಡಗಳನ್ನು ನೆಡುವುದು ಅಗತ್ಯ. ದೇವದಾರು, ಮಾವು, ನೇರಳೆ, ಹುಣಿಸೆ, ಹಲಸು ಮುಂತಾದ ಸ್ಥಳೀಯ ಜಾತಿಯ ಗಿಡಗಳು ಪರಿಸರಕ್ಕೆ ಅನುಕೂಲಕರ.
ಇವು ಜೀವ ವೈವಿಧ್ಯ ಉಳಿಸಲು ಸಹಕಾರಿಯಾಗುತ್ತವೆ. ನಗರದಲ್ಲಿ ಪಕ್ಷಿಗಳ ಸಂತತಿ ಕುಸಿಯುತ್ತಿರುವ ಸಂದರ್ಭದಲ್ಲಿ ಇದು ಪರಿಸರಪೂರಕ ಹೆಜ್ಜೆಯಾಗಲಿದೆ. ಬೆಂಗಳೂರು ತಂಪಾಗಬೇಕಾದರೆ ಘೋಷಣೆ ಮಾಡುವಾಗ ತೋರಿದ ಉತ್ಸಾಹ ಯೋಜನೆಯ ಕೊನೆಯ ವರೆಗೂ ಇರುವಂತೆ ನೋಡಿಕೊಂಡಾಗ ಮಾತ್ರ ಸಾಧ್ಯ. ಕೋಟಿಗಟ್ಟಲೆ ಹಣ ವ್ಯಯಿಸುವ ಪ್ರಚಾರದ ಸರಕಾಗದೇ ಪರಿಸರ ಪುನರುಜ್ಜೀವನದ ಮಾದರಿಯಾಗಬೇಕು.