ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲು ಕಾರಣ ತಿಳಿಸಿದ ಎಬಿ ಡಿ ವಿಲಿಯರ್ಸ್‌!

2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ರಿಷಭ್‌ ಪಂತ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮರಳಿದ್ದಾರೆ. ಟ್ರೇಡ್‌ ಡೀಲ್‌ ಮೂಲಕ ಅವರು ತಮ್ಮ ತವರು ತಂಡಕ್ಕೆ ಮರಳಿದ್ದು, ಇದಕ್ಕೆ ಕಾರಣವೇನೆಂದು ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ತಿಳಿಸಿದ್ದಾರೆ.

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲು ಕಾರಣ ತಿಳಿಸಿದ ಎಬಿಡಿ!

ರಿಷಭ್‌ ಪಂತ್‌ ಡೆಲ್ಲಿಗೆ ಮರಳಲು ಕಾರಣ ತಿಳಿಸಿದ ಎಬಿಡಿ. -

Profile
Ramesh Kote Jun 27, 2026 2:50 PM

ನವದೆಹಲಿ: ಮುಂಬರುವ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಯಲ್ಲಿ ರಿಷಭ್‌ ಪಂತ್‌ (Rishabh Pant) ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಲಿದ್ದಾರೆ. ಅವರು 2025 ಹಾಗೂ 2026ರ ಐಪಿಎಲ್‌ ಟೂರ್ನಿಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಪರ ಆಡಿದ ಬಳಿಕ ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟ್ರೇಡ್‌ ಡೀಲ್‌ ಮೂಲಕ ಮರಳಿದ್ದಾರೆ. 27 ಕೋಟಿ ರು. ಗಳಿಂದ 15 ಕೋಟಿ ರು. ಗಳಿಗೆ ಡೆಲ್ಲಿ ಫ್ರಾಂಚೈಸಿಗೆ ಮರಳಿದ್ದಾರೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ (ABD) ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪಂತ್‌ ಡೆಲ್ಲಿಗೆ ಮರಳಲು ಬಲವಾದ ಕಾರಣವೇನೆಂದು ವಿವರಿಸಿದ್ದಾರೆ.

ಭಾರತದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿರುವ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಪ್ರತಿಕ್ರಿಯೆ ನೀಡಿದ್ದು, ಈ ನಿರ್ಧಾರದ ಹಿಂದಿನ ಕಾರಣವನ್ನೂ ವಿವರಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಡಿ ವಿಲಿಯರ್ಸ್, "ಈ ಬೆಳವಣಿಗೆ ನನಗೆ ಅಚ್ಚರಿಯೇನೂ ಅಲ್ಲ. ಕಳೆದ ಋತುವಿನಲ್ಲಿ ತಂಡದ ಪ್ರದರ್ಶನವನ್ನು ನೋಡಿದರೆ ಮತ್ತು ಪಂತ್ ಅವರ ಪಂದ್ಯಗಳ ನಂತರದ ಕೆಲವು ಸಂದರ್ಶನಗಳನ್ನು ಗಮನಿಸಿದರೆ, ಅವರು ನಿರಾಶೆಗೊಂಡಿರುವ ಸೂಚನೆಗಳು ಆಗಲೇ ಕಂಡುಬಂದಿದ್ದವು. ಆದ್ದರಿಂದ ಅವರು ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ್ದಾರೆ," ಎಂದು ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ ಬೆನ್ನಲ್ಲೆ ಎಲ್‌ಎಸ್‌ಜಿಗೆ ರಿಷಭ್‌ ಪಂತ್‌ ಕೊನೆಯ ಸಂದೇಶ!

ಎಬಿ ಡಿ ವಿಲಿಯರ್ಸ್ 2008ರಿಂದ 2010ರವರೆಗೆ ಆಗಿನ ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದ ಪರ ಆಡಿದ್ದರು. ನಂತರ 2011ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸೇರಿದ್ದ ಅವರು, 2021ರಲ್ಲಿ ನಿವೃತ್ತಿಯಾಗುವವರೆಗೆ ಆ ತಂಡವನ್ನೇ ಪ್ರತಿನಿಧಿಸಿದ್ದರು.

ರಿಷಭ್ ಪಂತ್ ಅವರಿಗೆ ಲಖನೌ ಸೂಪರ್ ಜಯಂಟ್ಸ್‌ (ಎಲ್‌ಎಸ್‌ಜಿ) ಪರ ಕಳೆದ ಎರಡು ಐಪಿಎಲ್ ಋತುಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ತಂದುಕೊಡಲಿಲ್ಲ. ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಅವರು ಸಂಕಷ್ಟ ಅನುಭವಿಸಿದರು. 2025ರ ಐಪಿಎಲ್‌ ಟೂರ್ನಿಯಲ್ಲಿ ಪಂತ್ 13 ಇನಿಂಗ್ಸ್‌ಗಳಲ್ಲಿ ಕೇವಲ 269 ರನ್ ಗಳಿಸಿದರು. ಎಲ್‌ಎಸ್‌ಜಿ ಪ್ಲೇಆಫಫ್ಸ್‌ ಸ್ಪರ್ಧೆಯಿಂದ ಹೊರಬಿದ್ದ ಬಳಿಕ ಅವರು ಶತಕ ಸಿಡಿಸಿದ್ದರು. 2026ರ ಋತುವಿನಲ್ಲಿ 312 ರನ್ ಗಳಿಸಿದರೂ, ಒಂದೇ ಒಂದು ಅರ್ಧಶತಕ ಮಾತ್ರ ದಾಖಲಿಸಲು ಸಾಧ್ಯವಾಯಿತು.

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ಅಕ್ಷರ್‌ಗೆ ನಾಯಕತ್ವ ಕೈ ತಪ್ಪಲಿದೆಯಾ?

ತಂಡದ ಪ್ರದರ್ಶನವೂ ನಿರಾಸೆ ಮೂಡಿಸಿತು. 2025ರ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ 14 ಪಂದ್ಯಗಳಲ್ಲಿ ಕೇವಲ 6 ಜಯಗಳಿಸಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 2026ರಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಕೇವಲ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಎಲ್‌ಎಸ್‌ಜಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು.

2026ರ ಐಪಿಎಲ್ ಮುಕ್ತಾಯಗೊಳ್ಳುವ ಮುನ್ನವೇ ರಿಷಭ್ ಪಂತ್ ಅವರು ಲಖನೌ ಸೂಪರ್ ಜಯಂಟ್ಸ್‌ (ಎಲ್‌ಎಸ್‌ಜಿ) ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಬಳಿಕ ಅವರು ತ್ವರಿತವಾಗಿ ತಮ್ಮ ಹಳೆಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ಗೆ ಮರಳಿದರು. ಪಂತ್ ಈ ಹಿಂದೆ 2021ರಿಂದ 2024ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಮತ್ತೊಮ್ಮೆ ತಮ್ಮ ಹಳೆಯ ಫ್ರಾಂಚೈಸಿಗೆ ಸೇರುವ ಮೂಲಕ ಹೊಸ ಆರಂಭಕ್ಕೆ ಸಜ್ಜಾಗಿದ್ದಾರೆ.