ಸಿಎಸ್‌ಕೆ ವಿರುದ್ಧ ಕಬ್ಬನ್ ಪಾರ್ಕ್‌ಗೆ ಸಿಕ್ಸ್ ಹೊಡೆಯಲು ತಯಾರಿ ಹೇಗಿತ್ತೆಂದು ತಿಳಿಸಿದ ಟಿಮ್ ಡೇವಿಡ್!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಿಮ್ ಡೇವಿಡ್ 106 ಮೀಟರ್ ಸಿಕ್ಸರ್ ಬಾರಿಸಿದ್ದರು. ಅವರು ಚೆಂಡನ್ನು ಚಿನ್ನಸ್ವಾಮಿ ಅಂಗಣದಿಂದ ಹೊರಕ್ಕೆ ಹೊಡೆದಿದ್ದರು. ಈ ಬಗ್ಗೆ ಆರ್‌ಸಿಬಿ ಬ್ಯಾಟ್ಸ್‌ಮನ್ ಪ್ರತಿಕ್ರಿಯೆ ನೀಡಿದ್ದಾರೆ.
106 ಮೀಟರ್ ಸಿಕ್ಸರ್ ಬಗ್ಗೆ ಟಿಮ್ ಡೇವಿಡ್ ಹೇಳಿಕೆ. -
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬ್ಯಾಟ್ಸ್‌ಮನ್ ಟಿಮ್ ಡೇವಿಡ್ (Tim David) ಸಿಡಿಸಿದ್ದ 106 ಮೀಟರ್ ಸಿಕ್ಸರ್ ಅನ್ನು ಇನ್ನೂ ಅಭಿಮಾನಿಗಳು ಮರೆತಿಲ್ಲ. ಅವರು ಸಿಡಿಸಿದ್ದ ಸಿಕ್ಸರ್‌ನಲ್ಲಿ ಚೆಂಡು ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ದಾಟಿ ರಸ್ತೆಗೆ ತಲುಪಿತ್ತು. ಆರ್‌ಸಿಬಿ ಅಭಿಮಾನಿಗಳಿಗೆ ಟಿಮ್ ಡೇವಿಡ್ ಹೊಡೆದಿದ್ದ ಚೆಂಡು ಸಿಕ್ಕಿದ್ದ ವಿಡಿಯೊ ಕೂಡ ವೈರಲ್ ಆಗಿತ್ತು. ಅಂದ ಹಾಗೆ ತಮ್ಮ 106 ಮೀಟರ್ ಸಿಕ್ಸರ್ ಬಗ್ಗೆ ಟಿಮ್ ಡೇವಿಡ್ ಸ್ವತಃ ಪ್ರತಿಕ್ರಿಯಿಸಿದ್ದಾರೆ.
ಏಪ್ರಿಲ್ 5 ರಂದು ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆರ್‌ಸಿಬಿ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಟಿಮ್ ಡೇವಿಡ್ ಅವರು ಸ್ಪೋಟಕ ಬ್ಯಾಟ್ ಮಾಡಿದರು. ಅವರು ಆಡಿದ 25 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್‌ಗಳ ಮೂಲಕ ಅಜೇಯ 70 ರನ್‌ಗಳನ್ನು ಬಾರಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ಅವರು ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದು ಎಲ್ಲರ ಗಮನ ಸೆಳೆಯಿತು. ತಮ್ಮ ಎಂಟು ಸಿಕ್ಸರ್‌ಗಳ ಪೈಕಿ ಒಂದು ಸಿಕ್ಸರ್‌ನಲ್ಲಿ ಚೆಂಡನ್ನು ಸ್ಟೇಡಿಯಂನಿಂದ ಹೊರಕ್ಕೆ ಕಳುಹಿಸಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
IPL 2026: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ತುಂಬಾ ಬದಲಾಗಿದೆ ಎಂದ ದೇವದತ್ ಪಡಿಕ್ಕಲ್!
ಸಿಎಸ್‌ಕೆ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ್ದ ಟಿಮ್ ಡೇವಿಡ್, "ಸಹ ಆಟಗಾರರ ಜೊತೆ ತರಬೇತಿ ಪಡೆಯುವ ವೇಳೆ ನಾನು ತೊಂದರೆಗೆ ಸಿಲುಕಿದ್ದೆ. ಅಭ್ಯಾಸದ ವೇಳೆ ಆನ್ ಸೈಡ್ ಕಡೆಗೆ ನಮ್ಮ ನಡುವೆ ಸ್ಟೇಡಿಯಂನ ಮೇಲ್ಛಾವಣಿಗೆ ಚೆಂಡನ್ನು ಹೊಡೆಯುವ ಸ್ಪರ್ಧೆ ನಡೆದಿತ್ತು ಹಾಗೂ ನಾವು ಸಾಕಷ್ಟು ಪ್ರಯತ್ನ ನಡೆಸಿದ್ದೆವು. ಅದರಂತೆ ಪಂದ್ಯದಲ್ಲಿಯೂ ಅದೇ ರೀತಿಯ ಎಸೆತ ಬಂತು ಹಾಗೂ ಅದು ಬ್ಯಾಟ್‌ಗೆ ಸರಿಯಾಗಿ ಸಿಕ್ಕಿತ್ತು. ಆ ವೇಳೆ ಜೇಮಿ ಓವರ್ಟನ್ ಕ್ವಿಕರ್ ಒನ್ ಹಾಕಿದ್ದರು. ಹಾಗಾಗಿ ಅದನ್ನು ಸರಿಯಾಗಿ ಸ್ಟೇಡಿಯಂನ ಮೇಲ್ಛಾವಣಿಗೆ ಹೊಡೆದು. ನಿಜಕ್ಕೂ ಇದು ಅದ್ಭುತವಾಗಿತ್ತು," ಎಂದು ಆರ್‌ಸಿಬಿ ಆಲ್‌ರೌಂಡರ್ ತಿಳಿಸಿದ್ದಾರೆ.
Tim David sent the Ball out of the ground and said Bye Bye Ball 👋🏻 pic.twitter.com/MnoSxqZp7I
— Vitamin K(ohli) (@TheeDefender) April 6, 2026
43 ರನ್‌ಗಳಿಂದ ಗೆದ್ದು ಬೀಗಿದ್ದ ಆರ್‌ಸಿಬಿ
ಟಿಮ್ ಡೇವಿಡ್ ಕ್ರೀಸ್‌ಗೆ ಬರುವುದಕ್ಕೂ ಮುನ್ನ ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟಿದಾರ್ ಅವರು ಸ್ಪೋಟಕ ಬ್ಯಾಟ್ ಮಾಡಿದ್ದರು. ಆದರೆ, ಟಿಮ್ ಡೇವಿಡ್ ಡೆತ್ ಓವರ್‌ಗಳಲ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶವನ್ನು ತೋರಿದ್ದರು. ರಜತ್ ಅಜೇಯ 48 ರನ್, ಪಡಿಕ್ಕಲ್ 50 ರನ್‌ಗಳ ಸಹಾಯದಿಂದ ಆರ್‌ಸಿಬಿ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 250 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಸಿಎಸ್‌ಕೆಗೆ 251 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ 207 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಆರ್‌ಸಿಬಿ 43 ರನ್‌ಗಳಿಂದ ಗೆದ್ದು ಬೀಗಿತ್ತು.