IPL 2026: ಸತತ 4 ಪಂದ್ಯ ಗೆದ್ದಿರುವ ಕೆಕೆಆರ್ ಬಗ್ಗೆ ಸಂಜಯ್ ಬಾಂಗರ್ ದೊಡ್ಡ ಹೇಳಿಕೆ!
ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದ್ದು, ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಎಂಟು ತಂಡಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಮಾಜಿ ಕ್ರಿಕೆಟಿಗ ಸಂಜಯ್ ಬಾಂಗರ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
ಕೆಕೆಆರ್ ತಂಡದ ಬಗ್ಗೆ ಸಂಜಯ್ ಬಾಂಗರ್ ದೊಡ್ಡ ಹೇಳಿಕೆ. -
ನವದೆಹಲಿ: ಪ್ರಸ್ತುತ ಸಾಗುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ನಿರ್ಣಾಯಕ ಹಂತಕ್ಕೆ ತಲುಪಿದೆ. ಎಂಟು ತಂಡಗಳ ನಡುವೆ ಇದೀಗ ಪ್ಲೇಆಫ್ಸ್‌ಗೆ ಭಾರಿ ಪೈಪೋಟಿ ನಡೆಯುತ್ತಿದೆ. ಈ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಬಾಂಗರ್ (Sanjay Bangar) ಪ್ರತಿಕ್ರಿಯೆ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ ಈ ಸೀಸನ್‌ನ ಕೊನೆಯ ಹಂತದಲ್ಲಿ ತನ್ನ ಗೆಲುವಿನ ವೇಗವನ್ನು ಕಳೆದುಕೊಳ್ಳುತ್ತಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡ, ಸೂಕ್ತ ಸಮಯದಲ್ಲಿ ಲಯ ಕಂಡುಕೊಂಡು ವೇಗ ಪಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ 2026ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಆರಂಭ ಪಡೆದಿತ್ತು, ಒಂದು ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೂ ಇತ್ತು. ಆದರೆ ನಂತರ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಸೋಮವಾರ ಧರ್ಮಶಾಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸೋತು ಒತ್ತಡಕ್ಕೆ ಒಳಗಾಗಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಪ್ಲೇಆಫ್ ಪ್ರವೇಶದ ಅವಕಾಶ ಉಳಿಸಿಕೊಳ್ಳಬೇಕಾದರೆ ಇನ್ನುಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡು ಗೆಲುವು ಸಾಧಿಸಲೇಬೇಕು ಎಂದು ಬಾಂಗರ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಗುಜರಾತ್ ಟೈಟನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇಆಫ್‌ಗೆ ಒಂದು ಹೆಜ್ಜೆ ಹತ್ತಿರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
RCB vs KKR ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಪ್ಲೇಯಿಂಗ್ XI ವಿವರ!
“ಡೆಲ್ಲಿ ವಿರುದ್ಧದ ಈ ಸೋಲು ಪಂಜಾಬ್ ತಂಡದ ಟಾಪ್-2 ಅವಕಾಶಕ್ಕೆ ದೊಡ್ಡ ಹೊಡೆತ ನೀಡಿದೆ. ಆರಂಭದಲ್ಲಿ ಅವರು ಭರ್ಜರಿ ಲಯದಲ್ಲಿದ್ದರು. ಆದರೆ ಈಗ ಸಂಪೂರ್ಣವಾಗಿ ಸನ್ನಿವೇಶ ಬದಲಾಗಿದೆ. ಉಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡು ಗೆಲುವುಗಳನ್ನು ಪಡೆಯಲೇಬೇಕು, ಇಲ್ಲವಾದರೆ ನಾಕೌಟ್ ಹಂತ ತಲುಪುವುದು ಕಷ್ಟವಾಗಬಹುದು. ಮಂಗಳವಾರದ ಜಿಟಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯ ಅತ್ಯಂತ ಮಹತ್ವದ್ದು. ಗೆಲ್ಲುವ ತಂಡ ಪ್ಲೇಆಫ್ ಪೈಪೋಟಿಯಲ್ಲಿ ಸ್ಪಷ್ಟ ಮುನ್ನಡೆ ಪಡೆಯಲಿದೆ. ಇಂದಿನಿಂದ ಪ್ರತಿಯೊಂದು ಪಂದ್ಯವೂ ಇನ್ನಷ್ಟು ಕಠಿಣವಾಗುತ್ತಿದೆ,” ಎಂದು ಜಿಯೊಸ್ಟಾರ್‌ನಲ್ಲಿ ಮಾತನಾಡುತ್ತಾ ಸಂಜಯ್ ಬಂಗಾರ್ ಹೇಳಿದ್ದಾರೆ.
ಕೆಕೆಆರ್ ಪರ ಬ್ಯಾಟ್ ಬೀಸಿದ ಬಾಂಗರ್
ಒಂದು ಹಂತದಲ್ಲಿ ಅಂಕಪಟ್ಟಿಯ ತಳಭಾಗದಲ್ಲಿದ್ದ ಕೆಕೆಆರ್, ಇದೀಗ ಸತತ ನಾಲ್ಕು ಗೆಲುವುಗಳೊಂದಿಗೆ ಪ್ಲೇಆಫ್ಸ್ ಪೈಪೋಟಿಯಲ್ಲಿ ಬಲವಾಗಿ ಮರಳಿದೆ. ಮೂರು ಬಾರಿ ಚಾಂಪಿಯನ್ಸ್ ಈ ಅದ್ಭುತ ಕಮ್‌ಬ್ಯಾಕ್ ಬಂಗಾರ್ ಅವರನ್ನು ಮೆಚ್ಚಿಸಿದ್ದು, ಕೆಕೆಆರ್ ಪ್ಲೇಆಫ್‌ಗೆ ಅರ್ಹತೆ ಪಡೆದರೆ ಅದು ಐಪಿಎಲ್ ಇತಿಹಾಸದಲ್ಲೇ ಶ್ರೇಷ್ಠ ಕಮ್‌ಬ್ಯಾಕ್‌ಗಳಲ್ಲಿ ಒಂದಾಗಬಹುದು ಎಂದು ಹೇಳಿದ್ದಾರೆ.
IPL 2026: ಮುಂಬೈ ಇಂಡಿಯನ್ಸ್‌ಗೆ ನೂತನ ನಾಯಕನನ್ನು ಸೂಚಿಸಿದ ಸಂಜಯ್ ಮಾಂಜ್ರೇಕರ್!
“ರಾಜಸ್ಥಾನ್ ರಾಯಲ್ಸ್ ಇನ್ನೂ ಪೈಪೋಟಿಯಲ್ಲಿ ಉಳಿದಿದೆ. ಅದೇ ರೀತಿ ಕೆಕೆಆರ್ ಕೂಡ ಬಲವಾಗಿ ಸ್ಪರ್ಧೆಯಲ್ಲಿದೆ. ಅವರು ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದಾರೆ. ತಂಡದ ಸಮತೋಲನ ಅತ್ಯಂತ ಗಟ್ಟಿಯಾಗಿ ಕಾಣಿಸುತ್ತಿದೆ. ಸ್ಪಿನ್ ದಾಳಿ ಮತ್ತೆ ಪರಿಣಾಮಕಾರಿಯಾಗಿದೆ ಮತ್ತು ಬ್ಯಾಟಿಂಗ್ ಘಟಕವೂ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ದೀರ್ಘಾವಧಿ ಟೂರ್ನಿಯಲ್ಲಿ ಕೊನೆಯ ಹಂತದಲ್ಲಿ ಲಯ ಕಂಡುಕೊಳ್ಳುವುದು ಅತ್ಯಂತ ಮುಖ್ಯ. ಸಾಮಾನ್ಯವಾಗಿ ಅಂತಿಮ ಹಂತದಲ್ಲಿ ವೇಗ ಪಡೆಯುವ ತಂಡಗಳು ಪ್ಲೇಆಫ್ ಹಾದಿಯಲ್ಲಿ ಸಾಗುತ್ತವೆ. ಈಗ ಕೆಕೆಆರ್ ಅತ್ಯುತ್ತಮ ಸ್ಥಿತಿಯಲ್ಲಿದೆ. ಅದಕ್ಕಾಗಿಯೇ ಅವರ ಪ್ಲೇಆಫ್ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಿವೆ. ಉಳಿದ ನಾಲ್ಕು ಪಂದ್ಯಗಳನ್ನೂ ಗೆದ್ದರೆ, ಐಪಿಎಲ್ ಇತಿಹಾಸದಲ್ಲೇ ಅದ್ಭುತ ಕಮ್‌ಬ್ಯಾಕ್‌ಗಳಲ್ಲಿ ಒಂದನ್ನು ಕೆಕೆಆರ್ ಸಾಧಿಸಲಿದೆ. ಅಂಕಪಟ್ಟಿಯ ಕೆಳಹಂತದಿಂದ ಅಗ್ರ ನಾಲ್ಕಕ್ಕೆ ಪ್ರವೇಶಿಸುವುದು ನಿಜಕ್ಕೂ ಅಸಾಧಾರಣ ಸಾಧನೆ. ಅದಕ್ಕೆ ವಿಶೇಷ ಪ್ರಯತ್ನ ಬೇಕಾಗುತ್ತದೆ, ಆದರೆ ಕೆಕೆಆರ್ ಇರುವ ಫಾರ್ಮ್ ನೋಡಿದರೆ ಅದು ಸಾಧ್ಯವೆನಿಸುತ್ತದೆ,” ಎಂದು ಸಂಜಯ್ ಬಾಂಗರ್ ಹೇಳಿದ್ದಾರೆ.