ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಭಾರತ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕುʼ: ಪಾಕ್‌ ಮಾಜಿ ಕ್ರಿಕೆಟಿಗರಿಗೂ ಮೊಹ್ಸಿನ್‌ ನಖ್ವಿ ಕಾಟ!

ನಿವೃತ್ತಿ ಕ್ರಿಕೆಟಿಗರು ಆಡುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ ಮೂರನೇ ಆವೃತ್ತಿಯಿಂದ ಪಾಕಿಸ್ತಾನ ಚಾಂಪಿಯನ್ಸ್ ತಂಡ ಹಿಂದೆ ಸರಿದಿದೆ. ಭಾರತ-ಪಾಕಿಸ್ತಾನ ನಡುವಿನ ಕಳೆದ ಆವೃತ್ತಿಯ ವಿವಾದದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ವಿಧಿಸಿದ್ದ ಕೆಲವು ಷರತ್ತುಗಳನ್ನು ಡಬ್ಲ್ಯುಸಿಎಲ್‌ ಆಯೋಜಕರು ಒಪ್ಪಿಕೊಳ್ಳದ ಕಾರಣ ತಂಡ ಟೂರ್ನಿಯಿಂದ ಹೊರಗುಳಿದಿದೆ ಎಂದು ವರದಿಯಾಗಿದೆ.

ಭಾರತ ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕೆಂದ ಮೊಹ್ಸಿನ್‌ ನಖ್ವಿ!

ಭಾರತ ನನಗೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕೆಂದ ಮೊಹ್ಸಿನ್‌ ನಖ್ವಿ. -

Profile
Ramesh Kote Oct 5, 2026 6:15 PM

ನವದೆಹಲಿ: ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ಖಾಸಗಿ ತಂಡ ‘ಪಾಕಿಸ್ತಾನ ಚಾಂಪಿಯನ್ಸ್’ಗೆ 2026ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2026) ಮೂರನೇ ಆವೃತ್ತಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅನುಮತಿ ನೀಡಿಲ್ಲ. ಮೊಹ್ಸಿನ್ ನಖ್ವಿ ನೇತೃತ್ವದ ಪಿಸಿಬಿ, 2025ರ ಆವೃತ್ತಿಯಲ್ಲಿ ‘ಇಂಡಿಯಾ ಚಾಂಪಿಯನ್ಸ್’ ತಂಡ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧದ ಎರಡು ಪಂದ್ಯಗಳನ್ನು ಬಹಿಷ್ಕರಿಸಿದ ಬಳಿಕ, ಕಳೆದ ವರ್ಷವೇ ಪಾಕಿಸ್ತಾನ ತಂಡವನ್ನು ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸದಂತೆ ನಿಷೇಧಿಸಿತ್ತು. ಬಳಿಕ ಪಾಕಿಸ್ತಾನ ಚಾಂಪಿಯನ್ಸ್ ತಂಡದ ಮಾಲೀಕ ಕಮಿಲ್ ಖಾನ್, ಪಿಸಿಬಿ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು. ಆದರೆ ಮಂಡಳಿ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ.

ಭಾರತೀಯ ಮಾಧ್ಯಮಗಳ ವರದಿಗಳ ಪ್ರಕಾರ, ಪಾಕಿಸ್ತಾನ ತಂಡಕ್ಕೆ ಡಬ್ಲ್ಯುಸಿಎಲ್‌ನಲ್ಲಿ ಭಾಗವಹಿಸಲು ಅಗತ್ಯವಿರುವ ನೋ-ಆಬ್ಜೆಕ್ಷನ್ ಸರ್ಟಿಫಿಕೇಟ್ (NOC) ನೀಡಲು ಪಿಸಿಬಿ ಕೆಲವು ಷರತ್ತುಗಳನ್ನು ವಿಧಿಸಿತ್ತು. ಭಾರತ ತಂಡದ ಆಟಗಾರರು ಕಳೆದ ವರ್ಷದ ಪಂದ್ಯ ಬಹಿಷ್ಕಾರಕ್ಕಾಗಿ ‘ಲಿಖಿತ ಕ್ಷಮೆಯಾಚನೆ’ ಸಲ್ಲಿಸಬೇಕು ಹಾಗೂ ಪಾಕಿಸ್ತಾನದ ಆಟಗಾರರೊಂದಿಗೆ ಹಸ್ತಲಾಘವ ಮಾಡಬೇಕು ಎಂಬುದು ಪ್ರಮುಖ ಷರತ್ತುಗಳಾಗಿದ್ದವು. ಆದರೆ WCL ಆಡಳಿತ ಮಂಡಳಿ ಈ ಷರತ್ತುಗಳನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪಿಸಿಬಿ, NOC ನೀಡಲು ನಿರಾಕರಿಸಿದೆ ಎಂದು ವರದಿಯಾಗಿದೆ.

ವಿರಾಟ್‌ ಕೊಹ್ಲಿಯ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ವಾಸೀಮ್‌ ಜಾಫರ್‌!

“ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಗತ್ಯ ಎನ್‌ಒಸಿ ನೀಡಲು ನಿರಾಕರಿಸಿದ ನಿರ್ಧಾರವನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ತಂಡ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ವಿಷಾದದಿಂದ ತಿಳಿಸುತ್ತೇವೆ. ಪಿಸಿಬಿಯ ಅಧಿಕಾರ ಮತ್ತು ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಆದರೆ ಜಾಗತಿಕ ಮಟ್ಟದ ಈ ಕ್ರಿಕೆಟ್ ದಿಗ್ಗಜರ ಟೂರ್ನಿಯಲ್ಲಿ ನಮ್ಮ ಆಟಗಾರರಿಗೆ ಪಾಕಿಸ್ತಾನ ಚಾಂಪಿಯನ್ಸ್ ಪರ ಪ್ರತಿನಿಧಿಸುವ ಅವಕಾಶ ಸಿಗದಿರುವುದು ನಿರಾಶಾದಾಯಕವಾಗಿದೆ. ನಮ್ಮ ಆಟಗಾರರು, ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಅವರ ತಾಳ್ಮೆ, ಅರ್ಥಮಾಡಿಕೊಳ್ಳುವಿಕೆ ಹಾಗೂ ನಿರಂತರ ಬೆಂಬಲಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು,” ಎಂದು ಪಾಕಿಸ್ತಾನ ಚಾಂಪಿಯನ್ಸ್ ತಂಡ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2025ರ ಡಬ್ಲ್ಯುಸಿಎಲ್‌ ಆವೃತ್ತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಈ ದಾಳಿಯಲ್ಲಿ 25 ಭಾರತೀಯರು ಮತ್ತು ಓರ್ವ ನೇಪಾಳಿ ನಾಗರಿಕ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ತಂಡ, ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧದ ಲೀಗ್ ಹಂತದ ಪಂದ್ಯದಿಂದ ಹಿಂದೆ ಸರಿದಿತ್ತು.

ಭಾರತ ವಿರುದ್ಧ ಟಿ20 ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ತಂಡಕ್ಕೆ ಆಮಿರ್‌ ಜಂಗೋ ಸೇರ್ಪಡೆ!

ಪಂದ್ಯ ನಡೆಯದಿದ್ದರೂ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿತ್ತು. ಈ ಅಂಕ ಭಾರತಕ್ಕೆ ನಿರ್ಣಾಯಕವಾಗಿತ್ತು. ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸುವವರೆಗೆ ಭಾರತ ಯಾವುದೇ ಪಂದ್ಯ ಗೆದ್ದಿರಲಿಲ್ಲ. ಆದರೂ ಅಂಕಗಳ ಆಧಾರದ ಮೇಲೆ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು.

ಸೆಮಿಫೈನಲ್‌ನಲ್ಲೂ ಭಾರತ ಚಾಂಪಿಯನ್ಸ್ ತಂಡಕ್ಕೆ ಪಾಕಿಸ್ತಾನ ಚಾಂಪಿಯನ್ಸ್ ಎದುರಾಳಿಯಾಗಿತ್ತು. ಆದರೆ ಭಾರತ ತಂಡ ಆ ಪಂದ್ಯದಿಂದಲೂ ಹಿಂದೆ ಸರಿದ ಕಾರಣ ಪಾಕಿಸ್ತಾನ ಫೈನಲ್‌ಗೆ ವಾಕ್‌ಓವರ್ ಮೂಲಕ ಪ್ರವೇಶಿಸಿತು. ಶಾಹಿದ್ ಅಫ್ರಿದಿ, ಶೋಯೆಬ್ ಮಲಿಕ್ ಮತ್ತು ಮಿಸ್ಬಾ-ಉಲ್-ಹಕ್ ಅವರಂತಹ ಮಾಜಿ ಕ್ರಿಕೆಟಿಗರನ್ನು ಒಳಗೊಂಡಿದ್ದ ಪಾಕಿಸ್ತಾನ ತಂಡವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ವಿರುದ್ಧ 9 ವಿಕೆಟ್‌ಗಳಿಂದ ಸೋತು ಪ್ರಶಸ್ತಿ ಕೈಚೆಲ್ಲಿತು.

ಇದೇ ಅವಧಿಯಲ್ಲಿ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿಯೂ ಭಾರತ ತಂಡ, ಪಾಕಿಸ್ತಾನಿ ಆಟಗಾರರೊಂದಿಗೆ ನಡೆಯುವ ಸಾಂಪ್ರದಾಯಿಕ ಹಸ್ತಲಾಘವವನ್ನು ಬಹಿಷ್ಕರಿಸಲು ಆರಂಭಿಸಿತ್ತು. ಈ ನಡೆ ನಂತರವೂ ಮುಂದುವರಿದಿದೆ. ಈ ಬಾರಿಯ ಡಬ್ಲುಸಿಎಲ್‌ ಆವೃತ್ತಿಯಲ್ಲೂ ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಅಕ್ಟೋಬರ್ 10ರಂದು ಮುಖಾಮುಖಿಯಾಗಬೇಕಿತ್ತು. ಆದರೆ ಪಿಸಿಬಿ ಎನ್‌ಒಸಿ ನೀಡದ ಹಿನ್ನೆಲೆಯಲ್ಲಿ ಆ ಪಂದ್ಯ ನಡೆಯುವುದಿಲ್ಲ. ವಿಶ್ವಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಸಹ-ಮಾಲೀಕರಾಗಿ ಹರ್ಷಿತ್ ತೋಮರ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ಇದ್ದಾರೆ.