ಭಾರತ ಮಹಿಳಾ ತಂಡದ ನೂತನ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಸ್ಥಾನ ತುಂಬಿದ ಸ್ಮೃತಿ ಮಂಧಾನಾ!
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಿದ್ದು, ಹರ್ಮನ್‌ಪ್ರೀತ್ ಕೌರ್ ಸ್ಥಾನಕ್ಕೆ ಸ್ಮೃತಿ ಮಂಧಾನಾ ಅವರನ್ನು ಹೊಸ ನಾಯಕಿಯಾಗಿ ನೇಮಕ ಮಾಡಲಾಗಿದೆ. ಹರ್ಮನ್‌ಪ್ರೀತ್ ಆಟಗಾರ್ತಿಯಾಗಿ ಮುಂದುವರಿಯಲಿದ್ದು, ಮಂಧಾನಾ ನಾಯಕತ್ವದಲ್ಲಿ ಭಾರತ ತಂಡ ಹೊಸ ಅಧ್ಯಾಯ ಆರಂಭಿಸಲಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಸ್ಮೃತಿ ಮಂಧಾನಾ ನಾಯಕಿ. -
ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಹರ್ಮನ್‌ಪ್ರೀತ್ ಕೌರ್ ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ (Smriti Mandhana) ಅವರನ್ನು ಭಾರತ ಮಹಿಳಾ ತಂಡದ ಹೊಸ ನಾಯಕಿಯಾಗಿ ನೇಮಕ ಮಾಡಿದೆ.
ಭಾರತ ತಂಡದೊಂದಿಗೆ 2013ರಿಂದ ಇರುವ ಮಂಧಾನಾ, ಇದೀಗ ಪೂರ್ಣಾವಧಿಯ ವೈಟ್-ಬಾಲ್ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಷ್ಟ್ರೀಯ ತಂಡದ ಜೊತೆಗೆ ದೇಶಿ ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲೂ ನಾಯಕತ್ವದ ಅನುಭವ ಹೊಂದಿರುವುದು ಅವರ ಆಯ್ಕೆಗೆ ಪ್ರಮುಖ ಕಾರಣವಾಗಿದೆ. ಮಂಧಾನಾ ಈ ಹಿಂದೆ ಭಾರತವನ್ನು 18 ಟಿ20ಐ ಪಂದ್ಯಗಳು ಹಾಗೂ 4 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.
ವಿಶೇಷವಾಗಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿರುವ ಮಂಧಾನಾ, 2024 ಮತ್ತು 2026ರಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಹೀಗಾಗಿ ರಾಷ್ಟ್ರೀಯ ತಂಡದ ನಾಯಕತ್ವಕ್ಕೂ ಅವರು ಸೂಕ್ತ ಆಯ್ಕೆ ಎಂಬ ವಿಶ್ವಾಸವನ್ನು ಬಿಸಿಸಿಐ ವ್ಯಕ್ತಪಡಿಸಿದೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವಕ್ಕೆ ವಿದಾಯ
ಹರ್ಮನ್‌ಪ್ರೀತ್ ಕೌರ್ ಅಕ್ಟೋಬರ್ 6ರಂದು ಭಾರತ ಮಹಿಳಾ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದರು. ಆದರೆ ಅವರು ಆಟಗಾರ್ತಿಯಾಗಿ ಭಾರತ ತಂಡದ ಪರ ಮುಂದುವರಿಯಲಿದ್ದಾರೆ. 2016ರಲ್ಲಿ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದ ಹರ್ಮನ್‌ಪ್ರೀತ್, ನಂತರ ಏಕದಿನ ಹಾಗೂ ಟೆಸ್ಟ್ ತಂಡಗಳಿಗೂ ಪೂರ್ಣಾವಧಿ ನಾಯಕಿಯಾದರು.
ಹರ್ಮನ್‌ಪ್ರೀತ್ ಅವರ ನಾಯಕತ್ವದ ಅವಧಿ ಭಾರತೀಯ ಮಹಿಳಾ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಅಧ್ಯಾಯಗಳಲ್ಲಿ ಒಂದಾಗಿದೆ. ಅವರ ನಾಯಕತ್ವದಲ್ಲಿ ಭಾರತ 2025ರಲ್ಲಿ ತವರಿನಲ್ಲಿ ಮೊದಲ ಬಾರಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿತ್ತು. 2026ರ ಏಷ್ಯನ್ ಗೇಮ್ಸ್‌ನಲ್ಲೂ ಭಾರತ ಮಹಿಳಾ ತಂಡ ಚಿನ್ನದ ಪದಕವನ್ನು ಉಳಿಸಿಕೊಂಡಿತು.
A dawn of a new era ✨ Smriti Mandhana takes charge as the Captain of the Indian Women's cricket team 🇮🇳 Go well, Captain 🫡 More details ▶️ https://t.co/tbLb4jOiCn #TeamIndia | @mandhana_smriti https://t.co/27AxmrUhKt
— BCCI (@BCCI) October 6, 2026
ನಾಯಕತ್ವ ತೊರೆಯುವ ನಿರ್ಧಾರ ಸುಲಭವಾಗಿರಲಿಲ್ಲ ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ. ತಂಡವನ್ನು ಮುನ್ನಡೆಸಿದ ವರ್ಷಗಳ ನೆನಪುಗಳು, ಭಾವನೆಗಳು ಮತ್ತು ಜವಾಬ್ದಾರಿಗಳು ತಮ್ಮೊಂದಿಗೆ ಸದಾ ಉಳಿಯಲಿವೆ ಎಂದು ಅವರು ತಿಳಿಸಿದ್ದಾರೆ. ನಾಯಕತ್ವ ಮುಗಿದರೂ ಭಾರತದ ಪರ ಆಟಗಾರ್ತಿಯಾಗಿ ತಮ್ಮ ಪ್ರಯಾಣ ಮುಂದುವರಿಯಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಮಂಧಾನಾಗೆ ಹೊಸ ಜವಾಬ್ದಾರಿ
ನಾಯಕಿಯಾಗಿ ನೇಮಕಗೊಂಡ ಬಳಿಕ ಮಂಧಾನಾ, ಭಾರತವನ್ನು ಮುನ್ನಡೆಸುವ ಅವಕಾಶ ತಮ್ಮ ಪಾಲಿಗೆ ಅತ್ಯಂತ ವಿಶೇಷ ಗೌರವ ಎಂದು ಹೇಳಿದ್ದಾರೆ. ಬಿಸಿಸಿಐ, ಆಯ್ಕೆದಾರರು, ಸಹ ಆಟಗಾರರು ಹಾಗೂ ತಮ್ಮ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
ಹರ್ಮನ್‌ಪ್ರೀತ್ ಅವರ ಕೊಡುಗೆಯನ್ನು ಸ್ಮರಿಸಿದ ಮಂಧಾನಾ, ಹಲವು ವರ್ಷಗಳ ಕಾಲ ಅವರು ತಂಡವನ್ನು ಅತ್ಯಂತ ಬದ್ಧತೆಯಿಂದ ಮುನ್ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ತಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
IND vs WI: ಶ್ರೇಯಸ್ ಅಯ್ಯರ್ ಅಬ್ಬರದ ಶತಕದಿಂದ ವೆಸ್ಟ್ ಇಂಡೀಸ್‌ಗೆ ಶಾಕ್ ನೀಡಿದ ಭಾರತ!
ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಕೂಡ ಮಂಧಾನಾ ಅವರ ಅನುಭವ ಮತ್ತು ಆಟದ ಕುರಿತ ತಿಳುವಳಿಕೆ ತಂಡದ ಮುಂದಿನ ಹಂತದಲ್ಲಿ ಬಹಳ ಉಪಯುಕ್ತವಾಗಲಿದೆ ಎಂದು ಹೇಳಿದ್ದಾರೆ. ನಾಯಕತ್ವದ ಜವಾಬ್ದಾರಿಯನ್ನು ಅವರು ಬದ್ಧತೆ ಮತ್ತು ವೃತ್ತಿಪರತೆಯಿಂದ ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಈ ನಾಯಕತ್ವ ಬದಲಾವಣೆಯೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದೆ. ಅನುಭವ ಹೊಂದಿರುವ ಮಂಧಾನಾ ಅವರ ನಾಯಕತ್ವದಲ್ಲಿ ಭಾರತ ತಂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸುವ ನಿರೀಕ್ಷೆ ಮೂಡಿದೆ.