ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸಬೇಕೆಂಬ ಮನವಿಯನ್ನು ತಿರಸ್ಕರಿಸಿದ ಯುಎಇ!
ಭಾರತ ಹಾಗೂ ಪಾಕಿಸ್ತಾನ ಗಡಿ ಭಾಗಗಳಲ್ಲಿ ಉದ್ವಿಗ್ನತೆಯ ಕಾರಣ 2025ರ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಯುಎಇಯಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಯತ್ನ ನಡಸುತ್ತಿದೆ. ಆದರೆ, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಇದನ್ನು ತಿರಸ್ಕರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪಿಎಸ್‌ಎಲ್ ಪಂದ್ಯಗಳ ಆತಿಥ್ಯದ ಮನವಿಯನ್ನು ಯುಎಇ ತಳ್ಳಿ ಹಾಕಿದೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆಯ ಕಾರಣ 2025ರ ಪಾಕಿಸ್ತಾನ ಸೂಪರ್ ಲೀಗ್ (PSL 2025) ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಯುಎಇ ಆತಿಥ್ಯ ವಹಿಸಿಕೊಳ್ಳಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬಯಸುತ್ತಿದೆ. ಆದರೆ, ಯುಎಇಯಲ್ಲಿ ನಡೆಸುವ ಪಿಸಿಬಿಯ ಯೋಜನೆಯನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು (ECB) ತಡೆಹಿಡಿಯಬಹುದು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಅಂತಹ ಯಾವುದೇ ವಿನಂತಿಯನ್ನು ಮಂಡಳಿ ತಿರಸ್ಕರಿಸುವ ಸಾಧ್ಯತೆಯಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮೂಲಗಳು ತಿಳಿಸಿವೆ. ಒಂದು ವೇಳೆ ಪಿಸಿಬಿಯ ಮನವಿಯನ್ನು ಯುಎಇ ಸ್ವೀಕರಿಸಿದರೆ, ವಿಶ್ವದ ಅತ್ಯಂತ ಶ್ರೀಮಂತ ಮಂಡಳಿಯಾಗಿರುವ ಬಿಸಿಸಿಐನ ಕೆಂಗಣ್ಣಿಗೆ ಗುರಿಯಾಗಬೇಕಾಗಬಹುದು.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ 2025ರ ಪಿಎಸ್‌ಎಲ್‌ನ ಇನ್ನುಳಿದ ಭಾಗವನ್ನು ಯುಎಇಯಲ್ಲಿ ನಡೆಸುವುದಾಗಿ ಘೋಷಿಸಿದೆ. ಭದ್ರತಾ ಕಾರಣಗಳಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆಂದು ತಿಳಿಸಿದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಪಿಸಿಬಿಯ ಮನವಿಯನ್ನು ಸ್ವೀಕರಿಸುವ ಸಾಧ್ಯತೆ ಕಾಣುತ್ತಿಲ್ಲ, ಭದ್ರತೆಯ ಕಾರಣದಿಂದ ಪಿಸಿಬಿ ಮನವಿಯನ್ನು ಇಸಿಬಿ ತಿರಸ್ಕರಿಸಬಹುದು. ಏಕೆಂದರೆ, ಒಂದು ವೇಳೆ ಪಿಸಿಬಿ ಮನವಿಯನ್ನು ಸ್ವೀಕರಿಸಿದರೆ, ವಿಶ್ವದ ಇತರೆ ಕ್ರಿಕೆಟ್ ಮಂಡಳಿಗಳಿಗೆ ತಪ್ಪು ಸಂದೇಶ ರವಾನೆಯಾಗಬಹುದು.
PSL 2025: ಪಾಕಿಸ್ತಾನ ಸೂಪರ್ ಲೀಗ್ ತೊರೆಯಲು ಮುಂದಾದ ವಿದೇಶಿ ಆಟಗಾರರು!
ಭಾರತದೊಂದಿಗೆ ಇಸಿಬಿ ಉತ್ತಮ ಬಾಂಧವ್ಯ
"ಇತ್ತೀಚಿನ ವರ್ಷಗಳಲ್ಲಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಬಿಸಿಸಿಐ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. 2021ರ ಟಿ20 ವಿಶ್ವಕಪ್ ಮತ್ತು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಭಾರತದ ಪಂದ್ಯಗಳಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳಿಗೂ ಕೂಡ ಯುಎಇ ಆತಿಥ್ಯ ವಹಿಸಿದೆ. ಜಯ್ ಶಾ ಅಧ್ಯಕ್ಷರಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪ್ರಧಾನ ಕಛೇರಿ ಕೂಡ ದುಬೈನಲ್ಲಿದೆ," ಎಂದು ಇಸಿಎ ಮೂಲಗಳು ತಿಳಿಸಿವೆ.
ಯುಎಇಯಲ್ಲಿ ಕ್ರಿಕೆಟ್ ಪ್ರೀತಿಸುವ ದಕ್ಷಿಣ ಏಷ್ಯಾದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಇಷ್ಟೊಂದು ಉದ್ವಿಗ್ನತೆಯ ನಡುವೆ ಪಿಎಸ್‌ಎಲ್ ಅನ್ನು ಆಯೋಜಿಸುವುದರಿಂದ ಭಾರತ ಹಾಗೂ ಯುಎಇ ನಡುವೆ ಸಾಮರಸ್ಯ ಹಾಳಾಗಬಹುದು. ಭದ್ರತಾ ಬೆದರಿಕೆ ಕೂಡ ಉಂಟಾಗಬಹುದು. ಅಲ್ಲದೆ ಎರಡೂ ರಾಷ್ಟ್ರಗಳ ನಡುವೆ ಸಾಮರಸ್ಯ ಉಂಟಾಗಬಹುದು," ಎಂದು ಅವರು ಹೇಳಿದ್ದಾರೆ.
🚨 BIG BREAKING 🚨
— Indian Cricket Team (@incricketteam) May 9, 2025
UAE declines to host Pakistan Super League (PSL). ❌
Pakistan had already announced that the PSL would be held in the UAE.
BCCI in talks to host #IPL2025 in UAE ✅#IPLSuspended | #IPL | #IndiaPakistanWar pic.twitter.com/NCOBhRKcCz
2025ರ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ ಇನ್ನುಳಿದ 8 ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗುವುದು ಎಂದು ಪಿಸಿಬಿ ಶುಕ್ರವಾರ ಬೆಳಗ್ಗೆ ತಿಳಿಸಿತ್ತು. ಈ ಪಂದ್ಯಗಳು ರಾವಲ್ಪಿಂಡಿ, ಮುಲ್ತಾನ್ ಮತ್ತು ಲಾಹೋರ್‌ನಲ್ಲಿ ನಡೆಯಬೇಕಿತ್ತು.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು.