Viral Video: ವಿಮಾನದಲ್ಲಿ ತಾಂತ್ರಿಕ ದೋಷ; ಸಿಟ್ಟಾದ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?
ದೆಹಲಿಯಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ಸಮಸ್ಯೆಗಳಿಂದಾಗಿ ಹೊರಡುವುದು ತಡವಾಯ್ತು. ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನದಲ್ಲಿ ಕರೆಂಟ್ ಇಲ್ಲದೆ ಪ್ರಯಾಣಿಕರು ಒಂದೂ ಗಂಟೆಗೂ ಹೆಚ್ಚು ಕಾಲ ವಿಮಾನದೊಳಗೆ ಕಳೆದಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಪ್ರಯಾಣಿಕರು ಸಿಬ್ಬಂದಿಗಳ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ.ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ನವದೆಹಲಿ: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನದಲ್ಲಿ ಇತ್ತೀಚೆಗೆ ತಾಂತ್ರಿಕದೋಷ ಉಂಟಾದ ಕಾರಣ ಸಮಯಕ್ಕೆ ಸರಿಯಾಗಿ ಹೊರಡುವುದು ವಿಳಂಬವಾಗಿದೆ. ಈ ಕಾರಣಕ್ಕೆ ಪ್ರಯಾಣಿಕರು ಸಿಟ್ಟಿಗೆದ್ದು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಸಂಜೆ 5 ಗಂಟೆಗೆ ಹೊರಡಬೇಕಿದ್ದ ವಿಮಾನ ತಾಂತ್ರಿಕ ಸಮಸ್ಯೆಗಳಿಂದಾಗಿ ಪ್ರಯಾಣಿಕರು ಕಾಯುವಂತೆ ಮಾಡಿದೆ. ಅದೇ ಸಮಯಕ್ಕೆ ವಿಮಾನದಲ್ಲಿ ಕರೆಂಟ್ ಇಲ್ಲದೆ ಪ್ರಯಾಣಿಕರು 90 ನಿಮಿಷಗಳಿಗೂ ಹೆಚ್ಚು ಕಾಲ ವಿಮಾನದೊಳಗೆ ಕುಳಿತಿದ್ದಾರೆ. ಈ ಘಟನೆಯಿಂದ ಬೇಸತ್ತ ಪ್ರಯಾಣಿಕರು ಸಿಬ್ಬಂದಿಗಳ ಜೊತೆ ಜಗಳವಾಡಿದ್ದಾರೆ. ಇದರ ವಿಡಿಯೊ ವೈರಲ್(Viral Video) ಆಗಿದೆ.
ವರದಿ ಪ್ರಕಾರ, ತಾಂತ್ರಿಕ ಸಮಸ್ಯೆಯಿಂದ ವಿಮಾನ ಹೊರಡುವುದು ತಡವಾದಾಗ ಎರಡು ಗಂಟೆಗಳ ಕಾಲ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರು ತಮ್ಮನ್ನು ಕೆಳಗೆ ಇಳಿಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರನ್ನು ಸಮಾಧಾನಗೊಳಿಸಲು ನೀರು ಮತ್ತು ತಿಂಡಿಗಳನ್ನು ನೀಡಿದ್ದಾರೆ. ಆದರೆ ವಿಮಾನದೊಳಗೆ ಪವರ್ ಸಮಸ್ಯೆ ಎದುರಾದಾಗ ಕೆಲವು ಪ್ರಯಾಣಿಕರು ಉಸಿರುಗಟ್ಟುವ ಅನುಭವವಾಗುತ್ತಿದೆ ಎಂದು ದೂರಿದ ನಂತರ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರಂತೆ. ಕೊನೆಗೆ ವಿಮಾನದ ತಾಂತ್ರಿಕ ಸಮಸ್ಯೆ ಬಗೆ ಹರಿದು ಪ್ರಯಾಣಿಕರು ವಿಮಾನ ಹತ್ತಲು ಬಂದಾಗ, ಸಿಬ್ಬಂದಿ ವಿಮಾನದೊಳಗೆ ಮತ್ತೆ ಹ್ಯಾಂಡ್ ಬ್ಯಾಗೇಜ್ ಪರಿಶೀಲನೆ ನಡೆಸಿದ್ದಾರಂತೆ. ಇದರಿಂದ ಪ್ರಯಾಣಿಕರು ಸಿಟ್ಟಿಗೆದ್ದಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಇದಕ್ಕೂ ಮೊದಲು, ದೆಹಲಿಯಿಂದ ಪಾಟ್ನಾಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದಿದ್ದ ಕಾರಣ ಪ್ರಯಾಣಿಕರನ್ನು ವಿಮಾನದೊಳಗೆ ಗಂಟೆಗಟ್ಟಲೆ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ಬಿಸಿಲಿನ ತಾಪವನ್ನು ತಾಳಲಾರದೆ ಪ್ರಯಾಣಿಕರು ವಿಮಾನದೊಳಗಿನ ಮ್ಯಾಗಜೀನ್‌ಗಳನ್ನು ಹ್ಯಾಂಡ್ ಫ್ಯಾನ್‌ಗಳಾಗಿ ಬಳಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ತಂದೆಯನ್ನೇ ಫೂಲ್ ಮಾಡಿದ ಕಿಲಾಡಿ ಮಗಳು; ಸಿಕ್ಕಾಪಟ್ಟೆ ಫನ್ನಿಯಾಗಿದೆ ಈ ವಿಡಿಯೊ ನೋಡಿ!
ಹಾಗೇ ಈ ಹಿಂದೆ ಮುಂಬೈನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸಹ ತಾಂತ್ರಿಕ ದೋಷದಿಂದಾಗಿ ಐದು ಗಂಟೆಗಳ ಕಾಲ ವಿಳಂಬವಾಗಿತ್ತು. ಇದರಿಂದ ಪ್ರಯಾಣಕರು ಪರದಾಡುವಂತಾಗಿತ್ತು.ಕೊನೆಗೆ ಪ್ರಯಾಣಿಕರು ಸಿಟ್ಟಿಗೆದ್ದು, ಸಿಬ್ಬಂದಿಯ ಬಳಿ ಹೊರಗೆ ಕಳುಹಿಸುವಂತೆ ಒತ್ತಾಯಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.