ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Navabrindavana: ನವಬೃಂದಾವನ ನಿಜವಾದ ಅರ್ಥದಲ್ಲಿ ಧರ್ಮಕ್ಷೇತ್ರವಾಗಬೇಕೆಂದರೆ ಏನಾಗಬೇಕು ?

ಶ್ರೀ ರಾಮಜನ್ಮಭೂಮಿ ವಿವಾದವನೊಳ್ಳಗೊಂಡಂತೆ ಹಲವು ವಿಷಯಗಳು ಕಾನೂನಾತ್ಮಕವಾಗಿ ಅಥವಾ ರಾಜಿ /ಹೊಂದಾಣಿಕೆಗಳ ಮೂಲಕ ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿರುವುದು ಕಾಲದ ವಿಶೇಷ. ಇದೇ ಸಾಲಿನಲ್ಲಿ ನಿಲ್ಲುವ ಮತ್ತೊಂದು ವಿವಾದವೇ ಹಂಪಿ/ಆನೆಗೊಂದಿ ಪರಿಸರದಲ್ಲಿ ಮಧ್ವ ಪರಂಪರೆಗೆ ಸೇರಿದ ಮೂಲ ಯತಿಗಳು ಬೃಂದಾವನಸ್ಥರಾಗಿ ನೆಲೆಸಿರುವ ನವಬೃಂದಾವನ ಕ್ಷೇತ್ರದ ವಿವಾದ.

ನಿಜವಾದ ಅರ್ಥದಲ್ಲಿ ಧರ್ಮಕ್ಷೇತ್ರವಾಗಬೇಕೆಂದರೆ ಏನಾಗಬೇಕು ?

-

Ashok Nayak
Ashok Nayak Jan 10, 2026 6:38 AM

ರಿತ್ತಿ ಎಸ್. ಕೆ. ರಾಘವೇಂದ್ರ, ಬೆಂಗಳೂರು

ಕಳೆದ ದಶಕವು ಭಾರತೀಯ ಆಧ್ಯಾತ್ಮಿಕ ಹಾಗು ಧಾರ್ಮಿಕ ಕ್ಷೇತ್ರದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿ ಡುವ ಸಮಯವೆಂದರೆ ತಪ್ಪಾಗಲಿಕಿಲ್ಲ. ಶತಮಾಗಳಿಂದ ಸಮಾಜದ ನೆಮ್ಮದಿ ಶಾಂತಿಗಳನ್ನು ಕಲಕಿ, ಧರ್ಮ, ಸಮಾಜ, ಜಾತಿ, ಪಂಗಡ, ಒಳಪಂಗಡ, ಮಠ, ಸಂಪ್ರದಾಯ, ಹೀಗೆ ಸನಾತನ ಧರ್ಮದ ಪ್ರತಿಯೊಂದು ಹಂತಗಳಲ್ಲಿಯೂ ಬಿರುಕು ಹಾಗು ನೆಮ್ಮದಿಯನ್ನು ಕೆಡಿಸಿದ್ದ ವಿಷಯಗಳು ತಾರ್ಕಿಕ ವಾಗಿ ಅಂತ್ಯ ಕಾಣುತ್ತಿರುವುದಕ್ಕೆ ಪ್ರಸ್ತುತ ಪೀಳಿಗೆಯು ಸಾಕ್ಷಿಯಾಗಿದೆ.

ಶ್ರೀ ರಾಮಜನ್ಮಭೂಮಿ ವಿವಾದವನೊಳ್ಳಗೊಂಡಂತೆ ಹಲವು ವಿಷಯಗಳು ಕಾನೂನಾತ್ಮಕವಾಗಿ ಅಥವಾ ರಾಜಿ /ಹೊಂದಾಣಿಕೆಗಳ ಮೂಲಕ ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿರುವುದು ಕಾಲದ ವಿಶೇಷ. ಇದೇ ಸಾಲಿನಲ್ಲಿ ನಿಲ್ಲುವ ಮತ್ತೊಂದು ವಿವಾದವೇ ಹಂಪಿ/ಆನೆಗೊಂದಿ ಪರಿಸರದಲ್ಲಿ ಮಧ್ವ ಪರಂಪರೆಗೆ ಸೇರಿದ ಮೂಲ ಯತಿಗಳು ಬೃಂದಾವನಸ್ಥರಾಗಿ ನೆಲೆಸಿರುವ ನವಬೃಂದಾವನ ಕ್ಷೇತ್ರದ ವಿವಾದ. ಶ್ರೀ ಮಧ್ವಾಚಾರ್ಯರ ನಂತರದ ಕಾಲದಲ್ಲಿ ಅವರ ಪ್ರಮುಖ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥ, ಶ್ರೀ ನರಹರಿ ತೀರ್ಥ, ಶ್ರೀ ಮಾಧವತೀರ್ಥ, ಶ್ರೀ ಅಕ್ಷೋಭ್ಯತೀರ್ಥರು ಮತ್ತು ಅವರ ಶಿಷ್ಯರು ಗಳು ಈ ಪರಂಪರೆಯನ್ನು ಅನೇಕ ಕವಲುಗಳಾಗಿ ವಿಸ್ತರಿಸಿ ಬೆಳೆಸಿದ್ದು ಇತಿಹಾಸ.

ಹೀಗೆ ಮುಂದುವರಿದ ಪರಂಪರೆ ಯಲ್ಲಿ ಅನೇಕ ವಿವಾದಗಳು ಬೆಳೆದು ಬಂದಿರುವುದು ತಿಳಿದಿರುವ ವಿಚಾರವೇ ಆಗಿದೆ. ಪ್ರಸ್ತುತ ಸುದ್ದಿಯಲ್ಲಿರುವ ನವ ಬೃಂದಾವನದ ವಿವಾದವು ಅಲ್ಲಿ ನೆಲೆಸಿರುವ ಮೂಲ ಯತಿಗಳಿಗೆ ಸಂಬಂಧಪಟ್ಟ ಪರಂಪರೆಗಳ ಪರಸ್ಪರ ಪೂಜಾ, ಆರಾಧನಾ, ಭೂಮಿಯ ಒಡೆತನ ಸಂಬಂಧಿತವೇ ಆಗಿದೆ.

ಇದನ್ನೂ ಓದಿ: Navavrundavana: ನವವೃಂದಾವನ ಮತ್ತೆ ʼಕುರುಕ್ಷೇತ್ರʼವಾದೀತು !

ಈ ಸಂಬಂಧಿತ ವಿವಾದವು ಹಲವು ದಶಕಗಳ ಕಾಲ ಕೋರ್ಟು ಮತ್ತು ಕಛೇರಿ ಮೆಟ್ಟಲುಗಳನ್ನು ಕಂಡು ಸಮಾಜದ ಎಲ್ಲ ವರ್ಗದ ಜನರಿಗೆ ನುಂಗಲಾಗದ ಕಹಿ ಅನುಭವವನ್ನು ನೀಡುತ್ತಿರುವುದು ಎಲ್ಲರ ಅನುಭವದಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ಬೆಂಗಳೂರು ನಗರದಲ್ಲಿ ನವಬೃಂದಾವನ ವಿವಾದಕ್ಕೆ ಸಂಬಂಧಪಟ್ಟ ಎರಡು ಪರಂಪರೆಗಳಾದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಹಾಗು ಶ್ರೀ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥರ ಸಮಯೋಚಿತ ನಾಯಕತ್ವದಲ್ಲಿ ನಡೆದ ಸಂಧಾನ ಕಾರ್ಯವು ಶ್ಲಾಘನೀಯ.

ಇದು ಧಾರ್ಮಿಕ ಸಮಾಜದಲ್ಲಿ ಹೊಸ ಸ್ಪೂರ್ತಿಯ ಆಶಾಕಿರಣವನ್ನೇ ತೆರೆದಿರಿಸಿದೆ. ಈ ಬೆಳವಣಿಗೆ ಯು ಹಲವಾರು ಚರ್ಚೆಗಳಿಗೆ ಆಯಾಮವನ್ನು ಒದಗಿಸಿದೆ ಎಂಬುದು ಸತ್ಯದ ಮಾತು. ಸದ್ಯದ ಸಂಧಾನ ಕಾರ್ಯವು ಎರಡು ಮಠಗಳ ನಡುವೆ ನಡೆದಿದ್ದ ದೀರ್ಘ ಕಾನೂನು ಹೋರಾಟದ ಪರಿಧಿಯಲ್ಲಿ ತಮ್ಮ ನಿಲುವುಗಳನ್ನು ಸಡಿಲಗೊಳಿಸಿ ನಡೆಸಿದ ಹೊಂದಾಣಿಕೆ ಆಗಿರುತ್ತದೆ ಎಂಬುದು ಗಮನಾರ್ಹ ವಿಷಯ, ಹಾಗಲ್ಲದೆ ಈ ಸಂಧಾನವು ಸಮಗ್ರ ಮಾಧ್ವ ಸಮುದಾಯದ ಹೊಂದಾ ಣಿಕೆಯ ಸೂತ್ರವಲ್ಲ ಎಂಬುದು ವಾಚಕರು ಗಮನಿಸಬೇಕಾದ ವಿಷಯ.

ಆದರೆ ಆ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಸಂಬಂಧ ದಿನಾಂಕ 8/1/2026ರ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕೆ.ಗಿರಿಧರ ಆಚಾರ್ಯರ ಲೇಖನ ನವಬೃಂದಾ ವನ ಮತ್ತೆ ಕುರುಕ್ಷೇತ್ರವಾದೀತು ಎಂಬ ಲೇಖನ ವಿಷಯವಾದ ಶ್ರೀ ವ್ಯಾಸರಾಜ ಮಠ ಮತ್ತು ಶ್ರೀಪಾದರಾಜ ಮಠಗಳನ್ನೂ ಶ್ರೀ ಪದ್ಮನಾಭತೀರ್ಥರ ವಿಷಯಕ್ಕೆ ಸಂಬಂಧಿಸಬೇಕೆಂಬ ಅಭಿಪ್ರಾಯವು ಉತ್ತಮವಾಗಿದ್ದರೂ ಪೂರ್ಣವಾದ ಪರಿಹಾರವಲ್ಲ ಎಂಬ ಸೂಕ್ಷ್ಮವನ್ನು ಗ್ರಹಿಸುವುದು ಗಮನಾರ್ಹ.

ಇದನ್ನೂ ಓದಿ: Navavrundavana: ʼಕುರುಕ್ಷೇತ್ರʼವಾಗಿದ್ದ ನವ ವೃಂದಾವನ ಇನ್ನು ʼಧರ್ಮಕ್ಷೇತ್ರʼ

ಪ್ರಸ್ತುತ ಮಧ್ವ ಪರಂಪರೆಯಲ್ಲಿ 8 ಮಠಗಳು ಶ್ರೀ ಪದ್ಮನಾಭತೀರ್ಥರನ್ನು ತಮ್ಮ ಪರಂಪರೆಯಲ್ಲಿ ಗುರುತಿಸುತ್ತವೆ, ಹಾಗೆಯೆ ನವ ಬೃಂದಾವನದಲ್ಲಿರುವ ಶ್ರೀ ಜಯತೀರ್ಥರನ್ನು 3 ಮಠಗಳ ಪರಂಪರೆಯು ಗುರುತಿಸುತ್ತವೆ.

ಅದೇ ಬೃಂದಾವನವು ಶ್ರೀ ರಘುವರ್ಯರ ಬೃಂದಾವನ ವೆಂದು ಉತ್ತರಾದಿ ಮಠದ ಪರಂಪರೆಯು ಗುರುತಿಸುತ್ತದೆ. ಶ್ರೀ ಕವೀಂದ್ರತೀರ್ಥರು ಶ್ರೀ ವಾಗೀಶತೀರ್ಥರನ್ನು 2 ಪರಂಪರೆಗಳು ಗುರುತಿಸುತ್ತವೆ. ನವ ಬೃಂದಾವನ ಹೊರತಾಗಿ ಹಂಪಿಯಲ್ಲಿರುವ ಶ್ರೀ ನರಹರಿತೀರ್ಥರನ್ನು 7 ಪರಂಪರೆಗಳು ಗುರುತಿಸುತ್ತವೆ, ಶ್ರೀ ಮಾಧವತೀರ್ಥರ ಹಾಗು ಶ್ರೀ ಅಕ್ಷೋಭ್ಯ ತೀರ್ಥರ ಬೃಂದಾವನದ ವಿಷಯವು ಇದಕ್ಕೆ ಹೊರತಾಗಿಲ್ಲ.

ಈ ಎಲ್ಲ ಜಂಜಾಟಗಳ ಜೊತೆಯಲ್ಲಿ ಕೆಲವು ಮಠಗಳು (ಶ್ರೀ ವ್ಯಾಸರಾಜ ಮಠ (ಸೋಸಲೆ)) ಕಾನೂನು ಹೋರಾಟದ ಫಲವಾಗಿ ಕೆಲವು ನಿಬಂಧನೆ / ತೊಡಕುಗಳನ್ನು ಹೊಂದಿವೆ. ಕೆಲವು ಮಠಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲವಾಗಿರುವುದಿಲ್ಲ ಮತ್ತು ತಮ್ಮ ಅನಿಸಿಕೆಗಳನ್ನು ತೋರದಿರಬಹುದು, ಆದರೆ ಆ ಪರಂಪರೆ ಗಳನ್ನೂ ಕೂಡ ಗೌರವಯುತವಾಗಿ ಈ ವಿವಾದದ ಹೊಂದಾಣಿಕೆಯ ಭಾಗಿಗಳನ್ನಾಗಿ ಮಾಡುವುದು ಸರಿಯಾದ ಮೊದಲ ಹೆಜ್ಜೆ ಎಂಬುದನ್ನು ಮರೆಯಬಾರದು. ಕೇವಲ ಕೆಲವು ಮಠಗಳನ್ನು ಕೂಡಿಸುವುದರಿಂದ ಸಮಗ್ರ ಸಂಧಾನದ ವಿಷಯವಾಗಲಾರದು ಎಂಬುದನ್ನು ಮನಗಾಣಬೇಕು.

ವಿಜಯನಗರ ಪತನ ನಂತರ ಕಾಲದಲ್ಲಿ ಶ್ರೀ ವ್ಯಾಸರಾಜ ಮಠದ ಪರಿಸ್ಥಿತಿಯಂತೆ ಉಳಿದ ಪರಂಪರೆಗಳು (ಶ್ರೀ ರಾಘವೇಂದ್ರ ತೀರ್ಥರ ಪರಂಪರೆ, ಶ್ರೀ ಉತ್ತರಾದಿ ಮಠ, ಶ್ರೀಪಾದರಾಜ ಮಠ , ತಂಬಿಹಳ್ಳಿ ಮಠ) ಭೌಗೋಳಿಕವಾಗಿ ವಿಜಯನಗರದಿಂದ ದೂರವುಳಿದು ತಮ್ಮ ಶ್ರದ್ಧೆಗಳನ್ನು ಉಳಿಸಿಕೊಂಡಿರುವುದು ವಿಶೇಷ.

ಹಾಗಾಗಿ ಅಂದಿನ ಕಾಲದ ವ್ಯವಸ್ಥೆಯ ಕಲ್ಪನೆಯು ಕಠಿಣವೇ ಸರಿ. ವಿಜಯನಗರ ಪತನದ ನಂತರವೂ ಸಹ ನವಬೃಂದಾವನದಲ್ಲಿನ ಕೊನೆಯ ಬೃಂದಾವನವನ್ನು (ಶ್ರೀ ಸುಧೀಂದ್ರ ತೀರ್ಥರ ಬೃಂದಾವನ) ನಿರ್ಮಿಸಿರುವುದು ಶ್ರೀ ರಾಘವೇಂದ್ರ ತೀರ್ಥರು ಎಂಬುದನ್ನು ಅತ್ಯಂತ ವಿನಯವಾಗಿ ಈ ಸಂದರ್ಭದಲ್ಲಿ ನೆನೆಸಬೇಕು.

ಹಾಗಾದರೆ ನವ ಬೃಂದಾವನವು ನಿಜವಾದ ಅರ್ಥದಲ್ಲಿ ಧರ್ಮಕ್ಷೇತ್ರವಾಗಬೇಕೆಂದರೆ ಏನಾಗ ಬೇಕು? ಎಂಬ ಚರ್ಚೆ ಆಗಬೇಕಿದೆ. ನವಬೃಂದಾವನ ಕ್ಷೇತ್ರವು ಎಲ್ಲ ವಿವಾದಗಳಿಂದ ಮುಕ್ತ ವಾಗಬೇಕಿದೆ, ಮಧ್ವಪರಂಪರೆಯ, ಅದನ್ನೂ ಮೀರಿ ಎಲ್ಲ ಶ್ರದ್ಧಾವಂತರಿಗೂ ತಮ್ಮ ಸಂಪ್ರದಾಯ ಗಳಿಗನುಗುಣವಾಗಿ ಸೇವಾದಿಗಳನ್ನು ನಡೆಸುವ ವಾತಾವರಣ ನಿರ್ಮಾಣಗೊಳ್ಳುವ ಕಾರ್ಯವು ನಡೆಯಬೇಕಿದೆ.

ನವಬೃಂದಾವನವು ಕೇವಲ ಶ್ರೀ ರಾಘವೇಂದ್ರ ಮಠ, ಶ್ರೀ ಉತ್ತರಾದಿ ಮಠ, ಶ್ರೀ ವ್ಯಾಸರಾಜ ಮಠ (ಸೋಸಲೆ), ಶ್ರೀಪಾದರಾಜ ಮಠಗಳಿಗೆ ಮಾತ್ರ ಸೀಮಿತವಾಗದೆ ಶ್ರೀ ಪದ್ಮನಾಭ ತೀರ್ಥರ ಉಳಿದ ಪರಂಪರೆಗಳಾದ ಶ್ರೀ ಮಾಧವತೀರ್ಥ ಪರಂಪರೆಯ ತಂಬಿಹಳ್ಳಿ ಮಠ, ಶ್ರೀ ಅಕ್ಷೋಭ್ಯ ತೀರ್ಥ ಪರಂಪರೆಯ ಕೂಡಲಿ ಮತ್ತು ಬಾಳಗಾರು ಮಠಗಳು, ಶ್ರೀ ವ್ಯಾಸರಾಜ ಪರಂಪರೆಯ ಕುಂದಾಪುರ ವ್ಯಾಸರಾಜಮಠಗಳ ಶಿಷ್ಯರು, ಭಕ್ತರು, ಪೀಠಾಧಿಪತಿಗಳೂ ಸಹ ತಮ್ಮ ಶ್ರದ್ಧೆ, ಸಂಪ್ರದಾಯದಂತೆ ಪೂಜೆ, ಆರಾಧನೆ ಮುಂತಾದ ಕಾರ್ಯಗಳನ್ನು ಯಾವ ಅಡ್ಡಿ ಆತಂಕಗಳಿಲ್ಲದೆ ನೆರವೇರಿಸುವ ವ್ಯವಸ್ಥೆಯನ್ನು ಕಟ್ಟಬೇಕಾಗಿರುವುದು ಅನಿವಾರ್ಯ.

ಕಳೆದ ವಾರ ನಡೆದ ಸಂಧಾನದ ಸ್ಪೂರ್ತಿಯೊಂದಿಗೆ ಮಧ್ವಸಮಾಜದ ಪ್ರಮುಖರು, ಪೀಠಾಧಿಪತಿ ಗಳು ಕೈ ಜೋಡಿಸಿ ಎಲ್ಲ ಸಂಬಂಧಪಟ್ಟ ಪರಂಪರಾ ಮಠಗಳನ್ನು ಸರಿಸಿ ಹೊಂದಾಣಿಕೆಯ ಸೂತ್ರದ ಒಪ್ಪಂದವನ್ನು ಜಾರಿಗೊಳಿಸಿದಾಗ ಮಾತ್ರ ನವಬೃಂದಾವನವು ಮಧ್ವಪರಂಪರೆಯ ಶ್ರದ್ಧಾಕೇಂದ್ರವಾಗಿ ಧರ್ಮಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ.

ಯಾವುದೇ ಕ್ಷೇತ್ರವನ್ನು ಧರ್ಮಕ್ಷೇತ್ರವನ್ನಾಗಿಸಲು ಮನುಷ್ಯ ಪ್ರಯತ್ನ ಹಾಗು ಹೊಂದಾಣಿಕೆ ಅನಿವಾರ್ಯ ಆದರೆ ಪ್ರಯತ್ನವಿಲ್ಲದಿದ್ದರೆ ಕುರುಕ್ಷೇತ್ರವಾಗುವುದು ಬಹುತೇಕ ಖಚಿತ. ಹಾಗಾಗಿ ಸಮಾನ ಮನಸ್ಸುಗಳು ಕೂಡಿ ಪ್ರಯತ್ನಗಳ ಮೂಲಕ ನವಬೃಂದಾವನವು ಬಲು ಬೇಗ ಧರ್ಮಕ್ಷೇತ್ರ ವಾಗಲಿ ಎಂದು ಆಶಿಸೋಣ.