Dr Sadhanashree Column: 'ಪ್ರಯಾಣʼದಲ್ಲಿ ಪಾಲಿಸಿ, ಆಯುರ್ವೇದದ ʼಪ್ರಯಾಣʼ
ಮೇಳದಲ್ಲಿ ಲಕ್ಷಾಂತರ ಭಕ್ತರು, ಸಾಧು-ಸಂತರು, ಪೀಠಾಧಿಪತಿಗಳು ಮತ್ತು ಜನಸಾಮಾನ್ಯರು ಸೇರಿ ಕೊಂಡು ನದಿಯಲ್ಲಿ ಸ್ನಾನ ಮಾಡುತ್ತಾರೆ. ಇದು ಪಾಪವನ್ನು ತೊಡೆದು, ಮೋಕ್ಷವನ್ನು ನೀಡುತ್ತದೆ ಎಂಬ ನಂಬಿಕೆಯಿದೆ. ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲದೆ, ವೈದಿಕ ಸಂಸ್ಕೃತಿ, ಯೋಗ, ಧ್ಯಾನ ಮತ್ತು ಶ್ರದ್ಧಾಳು ಗಳ ಉತ್ಸಾಹವನ್ನು ಪ್ರದರ್ಶಿಸುವ ಅಚ್ಚುಕಟ್ಟಾದ ವೇದಿಕೆಯಾಗಿದೆ

ಅಂಕಣಕಾರ ಡಾ.ಸಾಧನಶ್ರೀ

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ಮಹಾ ಕುಂಭಮೇಳವು ಭಾರತೀಯ ಸಂಸ್ಕೃತಿಯ ಅತ್ಯಂತ ಪವಿತ್ರ ಮತ್ತು ಮಹತ್ವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದು. ಇದು ಪ್ರತಿ 12 ವರ್ಷಗಳಿಗೊಮ್ಮೆ ಗಂಗಾ-ಯಮುನಾ-ಸರಸ್ವತಿ ನದಿ ಗಳ ಸಂಗಮದಲ್ಲಿ, ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್‌ನಂಥ ಪವಿತ್ರ ಸ್ಥಳ ಗಳಲ್ಲಿ ನಡೆಯುತ್ತದೆ.
ಕುಂಭಮೇಳವು ಜ್ಞಾನ, ಶ್ರದ್ಧೆ ಮತ್ತು ಪವಿತ್ರತೆಯ ಸಂಕೇತವಾಗಿದೆ. ಈ ಮೇಳದಲ್ಲಿ ಲಕ್ಷಾಂತರ ಭಕ್ತರು, ಸಾಧು-ಸಂತರು, ಪೀಠಾಧಿಪತಿಗಳು ಮತ್ತು ಜನಸಾಮಾನ್ಯರು ಸೇರಿಕೊಂಡು ನದಿಯಲ್ಲಿ ಸ್ನಾನ ಮಾಡುತ್ತಾರೆ. ಇದು ಪಾಪವನ್ನು ತೊಡೆದು, ಮೋಕ್ಷವನ್ನು ನೀಡುತ್ತದೆ ಎಂಬ ನಂಬಿಕೆಯಿದೆ. ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲದೆ, ವೈದಿಕ ಸಂಸ್ಕೃತಿ, ಯೋಗ, ಧ್ಯಾನ ಮತ್ತು ಶ್ರದ್ಧಾಳು ಗಳ ಉತ್ಸಾಹವನ್ನು ಪ್ರದರ್ಶಿಸುವ ಅಚ್ಚುಕಟ್ಟಾದ ವೇದಿಕೆಯಾಗಿದೆ.
ಮಹಾ ಕುಂಭಮೇಳವು ವೈವಿಧ್ಯಮಯ ಭಾರತದ ಏಕತ್ವವನ್ನು, ಭಾರತೀಯ ಪರಂಪರೆಯ ವೈಶಿಷ್ಟ್ಯವನ್ನು ಮತ್ತು ಆಧ್ಯಾತ್ಮಿಕತೆಯ ಆಳವನ್ನು ತೋರಿಸುತ್ತದೆ. ಇದು ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮಾರಂಭವಾಗಿ ಗುರುತಿಸಲ್ಪಟ್ಟಿದೆ. ಮೊನ್ನೆ ಎಲ್ಲೋ ಓದಿದ ಪ್ರಕಾರ ವಿಶ್ವದ ಶೇ.5 ರಷ್ಟು ಜನರು ಈ ಕುಂಭಮೇಳದಲ್ಲಿ ಭಾಗವಹಿಸುತ್ತಾರೆಂದರೆ ಇದರ ಪ್ರಭಾವವನ್ನು ಊಹಿಸ ಬಹುದು.
ಇದನ್ನೂ ಓದಿ: Dr Sadhanashree Column: ಶಿರಸ್ಸೆಂಬ ಹೊನ್ನ ಕಳಸದ ಕಾಳಜಿ
ಈ ಕುಂಭಮೇಳಕ್ಕೆ ಹೋಗಿ ಅನನ್ಯ ಅನುಭವ ಪಡೆದ ಮೂವರು ಸ್ನೇಹಿತರು ಮೊನ್ನೆ ನನ್ನ ಕ್ಲಿನಿಕ್ಕಿಗೆ ಬಂದ ಪ್ರಸಂಗ ಅದು. ಬಂದ ಕಾರಣ, ಕುಂಭಮೇಳದಿಂದ ಹಿಂತಿರುಗಿದ ನಂತರದ ಅನಾರೋಗ್ಯ. ಒಬ್ಬನಿಗೆ ಹೊಟ್ಟೆ ನೋವು ಮತ್ತು ಮಲಸ್ತಂಭವಾದರೆ, ಇನ್ನೊಬ್ಬನಿಗೆ ವಾಂತಿ-ಬೇಧಿ ಮತ್ತು ಜ್ವರ. ಮೂರನೇ ವ್ಯಕ್ತಿಗೆ ಆಯಾಸ, ತಲೆನೋವು ಮತ್ತು ಮೈ ಕೈ ನೋವು. ಅವರ ಕಳೆದ ವಾರದ ಆಹಾರ-ವಿಹಾರಗಳನ್ನು ವಿಚಾರಿಸಿದಾಗ, ನನಗೆ ಹೊಳೆದ ಮೊದಲ ವಿಚಾರವೇನೆಂದರೆ- “ಅಯ್ಯೋ, ಪ್ರಯಾ ಣದ ವೇಳೆ ಆಯುರ್ವೇದದ ಕೆಲವು ಸರಳ ನಿಯಮಗಳನ್ನು ಪಾಲಿಸಿದ್ದರೆ ಈ ಏರುಪೇರು ಗಳನ್ನು ನಿವಾರಿಸಬಹುದಿತ್ತಲ್ಲಪ್ಪ!" ಅಂತ.
ಹಾಗಾಗಿ ಈ ವಾರ, ಪ್ರಯಾಣದಲ್ಲಿ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ಕುರಿತಾಗಿ ಮಾಹಿತಿ ಹಂಚಿಕೊಳ್ಳುವೆ. ನಾವೆಲ್ಲರೂ ಪ್ರಯಾಣ ಅಥವಾ ಪ್ರವಾಸವನ್ನು ಅತಿಯಾಗಿ ಇಷ್ಟಪಡಲು ಕೆಲವು ಕಾರಣಗಳೆಂದರೆ, ಪ್ರಯಾಣದಿಂದ ಶರೀರವು ಆಲಸ್ಯವನ್ನು ತೊಡೆದು ಚೈತನ್ಯ ವನ್ನು ತುಂಬಿಕೊಳ್ಳುತ್ತದೆ, ಮನಸ್ಸಿಗೆ ಮುದ ದೊರೆಯುತ್ತದೆ ಹಾಗೂ ಸಂಬಂಧಗಳಲ್ಲಿ ನಾವೀನ್ಯ ಬರುತ್ತದೆ.
ಬೇಕೋ ಬೇಡವೋ, ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎಂಬುವಂತೆ ಅಪಾರ ಜ್ಞಾನ ಸಂಚಯವೂ ಆಗುತ್ತದೆ. ಆದ್ದರಿಂದ, ಪ್ರಯಾಣವೆಂದರೆ ಎಲ್ಲರಿಗೂ ಇಷ್ಟ. ಹೋಗುವ ಮುನ್ನ ಅತಿ ಯಾಗಿ ಇಷ್ಟಪಟ್ಟು ಹೊರಡುವುದಂತೂ ನಿಜ. ಆದರೆ, ಬಂದ ಮೇಲೆ ಪಡುವ ಕಷ್ಟ ಯಾರಿಗೂ ಬೇಡ. ಪ್ರಯಾಣದ ನಂತರ ೯೦ ಪ್ರತಿಶತ ಜನರು ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುವುದು ಖಚಿತ.
ಹಾಗಾದರೆ, ಪ್ರಯಾಣ ಮುಗಿಸಿ ಬಂದಾಗಲೆಲ್ಲ ಆರೋಗ್ಯದ ಏರುಪೇರು ಆಗುವುದು ಸಹಜವೇ? ಎಲ್ಲರೂ ಹೀಗೆ ನರಳಲೇಬೇಕೆ? ಸುಖಪ್ರಯಾಣ ಮುಗಿಸಿ ಬಂದ ಮೇಲೂ ಸುಖವಾಗಿರುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪ ಚರ್ಚಿಸೋಣ. ಪ್ರಯಾಣ ಮಾಡುವಾಗ ನಮ್ಮ ಶರೀರದಲ್ಲಿ ಏನು ಬದಲಾ ವಣೆಗಳಾಗುತ್ತವೆ ಎಂಬುದನ್ನು ಮೊದಲು ಅರಿಯೋಣ.
ಸಾಮಾನ್ಯವಾಗಿ ಪ್ರಯಾಣದಲ್ಲಿ ಎಲ್ಲರಿಗೂ ಆಗುವ ವ್ಯತ್ಯಾಸವೆಂದರೆ ನಮ್ಮ ಹಸಿವು, ಬಾಯಾರಿಕೆ, ಮಲ-ಮೂತ್ರ ಮತ್ತು ನಿದ್ದೆಗಳಲ್ಲಿ ಏರುಪೇರು. ಇದು ನೇರವಾಗಿ ನಮ್ಮ ಜೈವಿಕ ಗಡಿಯಾರವನ್ನು ಬದಲಿಸುತ್ತದೆ. ಮೊಟ್ಟ ಮೊದಲಿಗೆ ಪ್ರಯಾಣ ಮಾಡುವಾಗ ನಾವು ದೇಹದ ಸಹಜ ಪ್ರವೃತ್ತಿಗಳನ್ನು ತಡೆಯದೆ ಅಥವಾ ಅವುಗಳನ್ನು ಒತ್ತಾಯದಿಂದ ಪ್ರವೃತ್ತಿಗೊಳಿಸದೆ ಇರುವುದರಿಂದ ಸಹಜವಾಗಿ ಆರೋಗ್ಯದ ರಕ್ಷಣೆಯಾಗುತ್ತದೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ನೋಡೋಣ.
ಮಲ-ಮೂತ್ರ-ಅಪಾನವಾಯು ಪ್ರವೃತ್ತಿಗಳು: ಪ್ರಯಾಣದಲ್ಲಿ ಸಾಮಾನ್ಯವಾಗಿ ನಾವು ಮಲ, ಮೂತ್ರ ಹಾಗೂ ಅಪಾನವಾಯುವಿನ ಪ್ರವೃತ್ತಿ ಯನ್ನು ತಡೆಯುತ್ತೇವೆ. ಇದರಿಂದ ಖಂಡಿತ ವಾಗಿಯೂ ಹೊಟ್ಟೆ ನೋವು, ತಲೆನೋವು, ಆಯಾಸ ಮತ್ತು ಅಜೀರ್ಣದ ಸಮಸ್ಯೆಗಳು ಉದ್ಭವಿಸ ಬಹುದು. ಅಂತೆಯೇ, ಮೂತ್ರ ಪ್ರವೃತ್ತಿಯನ್ನು ತಡೆಯು ವುದರಿಂದ ಮೂತ್ರಾಶ್ಮರಿ, ಕೆಳಹೊಟ್ಟೆ ನೋವು ಮತ್ತು ಮೂತ್ರ ಮಾರ್ಗಗಳಲ್ಲಿ ವೇದನೆಯ ತೊಂದರೆಗಳು ಕಾಣಿಸಿಕೊಳ್ಳಬಹುದು.
ಹಾಗಾಗಿ, ಸಕಾಲದಲ್ಲಿ ಮಲ ಮೂತ್ರಗಳ ಪ್ರವೃತ್ತಿಗೆ ಅನುಕೂಲವಾಗುವಂತೆ ಪ್ರಯಾಣದ ವ್ಯವಸ್ಥೆ ಯನ್ನು ಮಾಡಿಕೊಳ್ಳಬೇಕು. ಇಲ್ಲವೇ, ಕನಿಷ್ಠ 3-4 ತಾಸುಗಳಿಗೊಮ್ಮೆ ಆದರೂ ಮೂತ್ರ ನಿಸ್ಸರಣಕ್ಕೆ ಅವಕಾಶವಿರುವ ವಾಹನದಲ್ಲಿ ಪ್ರಯಾಣಿಸಬೇಕು.
ಹಸಿವು-ನೀರಡಿಕೆಗಳ ಪ್ರವೃತ್ತಿ: ವಾಹನ ನಿಲ್ಲಿಸಿದಾಗಲೆಲ್ಲ ಆಹಾರ ಸೇವಿಸುವುದು ಅಥವಾ ಆಹಾರ ಕಾಲದಲ್ಲಿ ಆಹಾರ ತೆಗೆದುಕೊಳ್ಳದೆ ಇರುವುದು ಅಥವಾ ಪ್ರಯಾಣದುದ್ದಕ್ಕೂ ಏನನ್ನಾ ದರೂ ಸೇವಿಸುತ್ತಿರುವುದು ನಾವು ಮಾಡುವ ಪ್ರಮುಖ ತಪ್ಪುಗಳು. ಹೀಗೆ ಕ್ರಮರಹಿತವಾಗಿ ಆಹಾರ ಸೇವಿಸಿ ಪ್ರಯಾಣಿಸುವುದರಿಂದ ಅಗ್ನಿಮಾಂದ್ಯ, ಮಲಬದ್ಧತೆ, ತಲೆನೋವು ಮತ್ತು ಅಮ್ಲ ಪಿತ್ತಗಳು ಕಾಣಿಸಿಕೊಳ್ಳಬಹುದು. ಅಂತೆಯೇ, ಅಭ್ಯಾಸವಿಲ್ಲದ ಆಹಾರ, ಕರಿದ ಪದಾರ್ಥಗಳು ಅಥವಾ ಜಡ ಆಹಾರವನ್ನು ಪ್ರಯಾಣದ ವೇಳೆ ಸೇವಿಸಿದಾಗ ವಾಂತಿ-ಬೇಧಿ ಹಾಗೂ ತೀವ್ರ ಜ್ವರ ಕಾಣಿಸಿಕೊಳ್ಳ ಬಹುದು.
ಅಂತೆಯೇ, ಬಾಯಾರಿಕೆಯನ್ನು ತಡೆದರೆ ತಲೆ ತಿರುಗುವಿಕೆ ಹಾಗೂ ತಲೆನೋವು ಉಂಟಾಗ ಬಹುದು. ದಾಹವನ್ನು ತಡೆಯುವುದರಿಂದ ತೊಂದರೆಯಾಗುವಂತೆ ಬಾಯಾರಿಕೆ ಇಲ್ಲದೆಯೇ ಪದೇಪದೆ ದ್ರವಹಾರವನ್ನು ಸೇವಿಸುವುದರಿಂದಲೂ, ಕಾರಣವಿಲ್ಲದೆಯೇ ಹೆಚ್ಚಾಗಿ ನೀರು ಕುಡಿಯುವುದರಿಂದಲೂ, ಪದೇ ಪದೆ ಜ್ಯೂಸ್ ಮತ್ತು ಎಳನೀರು ಹೀರುವುದರಿಂದಲೂ ಪಚನಶಕ್ತಿ ಕಡಿಮೆಯಾಗಿ ಅಮ್ಲ ಪಿತ್ತ, ತಲೆನೋವು, ತಲೆಭಾರ, ನೆಗಡಿ ಮತ್ತು ಹೊಟ್ಟೆ ನೋವುಗಳ ತೊಂದರೆ ಗಳಾಗಬಹುದು.
ನಿದ್ರೆಯ ಪ್ರವೃತ್ತಿ: ಪ್ರತಿಯೊಬ್ಬರಿಗೂ ಅವರವರ ಪ್ರಕೃತಿಗೆ ಅನುಸರಿಸಿ 6 ರಿಂದ 9 ತಾಸಿನವರೆಗೆ ನಿದ್ರೆಯ ಅವಶ್ಯಕತೆ ಇರುತ್ತದೆ. ಅನೇಕ ಸಲ ರಾತ್ರಿ ಪ್ರಯಾಣದಲ್ಲಿ ಈ ನಿದ್ರೆಗೆ ಬಾಧೆ ಉಂಟಾಗುತ್ತದೆ. ಹೀಗೆ, ನಿದ್ರೆಗೆಡುವುದರಿಂದ ಆಕಳಿಕೆ, ಮೈಕೈ ನೋವು, ತಲೆ ಸುತ್ತುವುದು, ಅರೆ ತಲೆನೋವು, ಕಣ್ಣು ಭಾರವಾಗುವುದು ಇತ್ಯಾದಿ ಸಮಸ್ಯೆಗಳಾಗಬಹುದು. ಆದಷ್ಟು ರಾತ್ರಿ ಪ್ರಯಾಣವನ್ನು ವರ್ಜಿಸಿ, ಅನಿವಾರ್ಯದಲ್ಲಿ ಮಾತ್ರ ರಾತ್ರಿ ನಿದ್ರೆಗೆಡದೆ ಇರುವಂತೆ ಪ್ರಯಾಣದ ವ್ಯವಸ್ಥೆ ಮಾಡಿ ಕೊಳ್ಳುವುದು ಒಳಿತು.
ವಾಂತಿಯ ಪ್ರವೃತ್ತಿ: ಹಲವರಿಗೆ ವಾಹನದಲ್ಲಿನ ಪ್ರಯಾಣದಿಂದ ವಾಂತಿಯಾಗುವುದು ಸಾಮಾ ನ್ಯ. ನಮ್ಮಲ್ಲಿ ವಾಂತಿಯ ಕುರಿತು ಅಕಾರಣ ಭೀತಿ ಮನೆಮಾಡಿದೆ. ಯಾರಿಗೆ ವಾಂತಿಯಾದರೂ ತಕ್ಷಣವೇ ಅದನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತೇವೆ. ಔಷಧಿಗಳನ್ನು ತೆಗೆದುಕೊಂಡು ಅದನ್ನು ಬಲವಂತವಾಗಿ ಅವರೋಧಿಸುತ್ತೇವೆ.
ಹೀಗೆ ವಾಂತಿಯನ್ನು ತಡೆಯುವುದರಿಂದ ಭಯಾನಕ ಚರ್ಮರೋಗಗಳು, ಹೊಟ್ಟೆ ಉಬ್ಬರ, ಕಣ್ಣಿನ ತೊಂದರೆ, ಅರ್ದಿತ, ಅಜೀರ್ಣ, ಯಕೃತ್ ವಿಕಾರ, ಹೊಟ್ಟೆ ನೋವು, ಜಲೋದರದವರೆಗೂ ಆಗಬ ಹುದು. ಪ್ರಯಾಣಕ್ಕೆ ಮೊದಲೇ ವಾಂತಿ ನಿಲ್ಲಿಸುವ ಮಾತ್ರೆಗಳನ್ನು ಸೇವಿಸುವುದನ್ನು ನಾವು ಬಿಡ ಬೇಕು. ಇಂಥ ಅಸಹಜ ಒತ್ತಡಗಳಿಂದ ಸಹಜವಾಗಿ ಶರೀರದ ಧಾತುಗಳಲ್ಲಿ ವಿಷಮತೆ ಮನೆ ಮಾಡಿ ಕ್ರಮೇಣ ಗುಣಪಡಿಸಲಾಗದ ವ್ಯಾಧಿಗಳು ಉದ್ಭವಿಸಬಹುದು.
ಆದ್ದರಿಂದ ಪ್ರಯಾಣದಲ್ಲಿ ವಾಂತಿಯಾದಾಗ ಯಾವುದೇ ಸಂಕೋಚವಿಲ್ಲದೆ ಸಂಪೂರ್ಣವಾಗಿ ವಾಂತಿ ಮಾಡಬೇಕು. ವಾಂತಿ ನಿಲ್ಲಿಸುವ ಔಷಧಗಳನ್ನು ಪ್ರಯೋಗ ಮಾಡಬಾರದು. ವಾಂತಿ ನಿಂತ ಮೇಲೆ ಕನಿಷ್ಠ 4-6 ತಾಸು ಏನೂ ಕೊಡದೆ ವಿಶ್ರಾಂತಿ ಮಾಡಿಸಬೇಕು. ವಾಂತಿಯಾದ ಮೇಲೆ ಹುಳಿ-ಸಿಹಿ ಹಣ್ಣಿನ ರಸಗಳನ್ನು ಹನಿ ಹನಿಯಾಗಿ ನಾಲಿಗೆಗೆ ನೆಕ್ಕಿಸಬೇಕು. ಕ್ರಮೇಣ ಪಚನಕ್ಕೆ ಹಗುರವಾದ ಆಹಾರಗಳನ್ನು ಸ್ವಲ್ಪ ಸ್ವಲ್ಪವಾಗಿ ಕೊಟ್ಟರೆ ತೊಂದರೆ ಆಗದು.
ಪ್ರಯಾಣಿಸುವಾಗ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಲು, ಮೇಲೆ ಹೇಳಿರುವ ಪ್ರವೃತ್ತಿಗಳನ್ನು ಕಾಪಾಡಿಕೊಳ್ಳುವುದು ಮೊದಲ ಕರ್ತವ್ಯವಾಗುತ್ತದೆ. ಇದರೊಂದಿಗೆ ಇನ್ನಿತರ ಕೆಲವು ಸುಲಭ ನಿಯಮಗಳನ್ನು ಹಂಚಿಕೊಳ್ಳಲು ಬಯಸುವೆ.ಹೊರಡುವ ಮುನ್ನ ಕೆಲವು ಪೂರ್ವ ತಯಾರಿ ಗಳನ್ನು ಮಾಡಿಕೊಂಡರೆ ಸಹಕಾರಿ.
ಉದಾಹರಣೆಗೆ, ಹೋಗುತ್ತಿರುವ ಪ್ರದೇಶದ ವಾತಾವರಣ, ಅಲ್ಲಿನ ಆಹಾರ, ಜೀವನ ಕ್ರಮದ ಪರಿ ಚಯ ಮಾಡಿಕೊಳ್ಳುವುದು. ವಾತಾವರಣವನ್ನು ಎದುರಿಸಲು ಅಗತ್ಯವಾದ ಬಟ್ಟೆ, ಹಾಸಿಗೆ-ಹೊದಿಕೆ ಮತ್ತು ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು. ಪ್ರವಾಸ ಮಾಡುವಾಗ ದಿನನಿತ್ಯದ ಆಹಾರ ನಿದ್ರೆಗಳ ಸಮಯವು ವ್ಯತ್ಯಾಸವಾಗದ ಹಾಗೆ ಯೋಜನೆ ಹಾಕಿಕೊಳ್ಳುವುದು. ಹೀಗೆ ಮಾಡಿ ದಲ್ಲಿ ಸಾಕಷ್ಟು ತೊಂದರೆಗಳನ್ನು ತಪ್ಪಿಸಬಹುದು.
ಪ್ರಯಾಣದಿಂದ ಮೈ ಕೈ ನೋವು, ಆಯಾಸ, ಮಲಬದ್ಧತೆ, ಕಾಲಿನ ಊತ ಮತ್ತು ತಲೆ ನೋವು ಸಾಮಾನ್ಯವಾಗಿ ಕಾಡುತ್ತದೆ. ಇವೆಲ್ಲವೂ ವಾತ ದೋಷದಿಂದಲೇ ಸಂಭವಿಸುವುದು. ಆದ್ದರಿಂದ, ಪ್ರಯಾಣ ಮಾಡುವ ಮುನ್ನ, ಮಾಡುವಾಗ ಮತ್ತು ಮಾಡಿ ಬಂದ ಬಳಿಕ ನಿತ್ಯವೂ ಬೆಚ್ಚಗಿನ ಎಳ್ಳೆಣ್ಣೆಯನ್ನು ಇಡೀ ಮೈಗೆ ಸವರಿಕೊಳ್ಳುವುದು, ನಂತರ ಬಿಸಿನೀರಿನ ಸ್ನಾನ ಮಾಡುವುದು ಅತ್ಯಂತ ಹಿತಕರ.
ಇದು ಸಹಜವಾಗಿಯೇ ವಾತ ದೋಷವನ್ನು ನಿಯಂತ್ರಿಸಲು ಸಹಕಾರಿ. ಇದು ನಿದ್ರೆಯಗುವ ಏರು ಪೇರುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಮೈಯನ್ನು ಹದವಾಗಿಸಿ ನೋವುಗಳನ್ನು ನಿವಾರಿಸುತ್ತದೆ. ಆದರೆ ಪ್ರಯಾಣದಿಂದ ಅಜೀರ್ಣವಾಗಿದ್ದರೆ, ಜ್ವರ ಇದ್ದರೆ ಅಭ್ಯಂಗ ಮಾಡಬಾ ರದು.
ಪ್ರಯಾಣ ಮಾಡುವಾಗ ತಲೆಸುತ್ತುವುದು, ಕಿವಿಯಲ್ಲಿ ಶಬ್ದ, ಕಣ್ಣು ಕತ್ತಲೆ ಸಾಮಾನ್ಯವಾಗಿ ಸಂಭ ವಿಸುವುದು ತಲೆಯಲ್ಲಿ ಆಗುವ ರಕ್ತ ಸಂಚಾರದ ವ್ಯತ್ಯಾಸದಿಂದ. ಹಾಗಾಗಿ, ಪ್ರಯಾಣ ಮಾಡುವ ಮುನ್ನ ಸಾಕಷ್ಟು ಜಿಡ್ಡಿನ ಪೋಷಣೆಯನ್ನು ತಲೆಗೆ/ಕಿವಿಗಳಿಗೆ ನೀಡಿ. ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿ ಕೊಳ್ಳುವುದು, ಕಿವಿಗಳಿಗೆ ಬೆಚ್ಚಗಿನ ಎಣ್ಣೆಯನ್ನು ಹಾಕುವುದು ನಮ್ಮನ್ನು ರಕ್ಷಿಸುತ್ತದೆ.
ಇನ್ನು ಚಲಿಸುವ ವಾಹನದಲ್ಲಿ ವಾಂತಿ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಇದಕ್ಕೆ ಮುಖ್ಯ ಕಾರಣವೆಂದರೆ ಹೊಟ್ಟೆ ತುಂಬಾ ತಿಂದು, ತಿಂದ ಕೂಡಲೇ ಪ್ರಯಾಣಿಸುವುದು. ಹಾಗಾಗಿ ಹಗುರ ವಾದ, ಜೀರ್ಣಕ್ಕೆ ಸುಲಭವಾದ ಆಹಾರವನ್ನು ಕನಿಷ್ಠ ಪಕ್ಷ ಪ್ರಯಾಣಕ್ಕೆ ಒಂದು ತಾಸು ಮುನ್ನವೇ ಸೇವಿಸುವುದು ಒಳ್ಳೆಯದು. ಹಾಗೆಯೇ, ಪ್ರಯಾಣದಲ್ಲಿ ಮಧ್ಯ ಮಧ್ಯ ತಿನ್ನುವುದನ್ನು ತಡೆದರೆ ಒಳಿತು.
ಇನ್ನು ಪ್ರಯಾಣ ಮಾಡುವಾಗ ಪಾಲಿಸಬೇಕಾದ ಆಹಾರ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ. ಪ್ರಯಾಣದಲ್ಲಿ ಹಸಿವೆ ಇದ್ದಾಗ ಮಾತ್ರ ಆಹಾರವನ್ನು, ಬಾಯಾರಿಕೆ ಆದಾಗ ಮಾತ್ರ ಪಾನೀಯ ವನ್ನು ಕುಡಿಯುವುದು. ಇಲ್ಲವಾದರೆ ಕಾಯುವುದು. ಇದು ಬಹುದೊಡ್ಡ ರಕ್ಷಾಕವಚ. ಪ್ರಯಾಣ ಮಾಡುವಾಗ ಸದಾ ಅಭ್ಯಾಸವಿರುವ, ಜೀರ್ಣಕ್ಕೆ ಹಗುರವಾಗುವ ಆಹಾರವೇ ಸೂಕ್ತ.
ಪ್ರಯಾಣದ ನಂತರ ಆಹಾರದಲ್ಲಿ ತುಪ್ಪ, ಬೆಣ್ಣೆ , ಹಾಲು, ಮಾಂಸ ರಸಗಳ ಬಳಕೆಯು ಪ್ರಯಾಣ ದಿಂದ ಉಂಟಾದ ಆಯಾಸವನ್ನು ನಿವಾರಿಸುತ್ತದೆ. ಹಾಗೆಯೇ ಮಲಬದ್ಧತೆಯನ್ನು ಪರಿಹರಿಸುತ್ತದೆ. ಇದು ನೋವುನಿವಾರಕ ಹಾಗೂ ನಿದ್ರಾಜನಕ. ಪ್ರಯಾಣ ಮಾಡುವಾಗ ಸದಾ ಆಹಾರದ ಜತೆ ಕಾಯಿ ಸಿದ ಬಿಸಿನೀರನ್ನೇ ಸೇವಿಸುವುದು ಒಳ್ಳೆಯದು. ಅತಿಯಾದ ತಂಪಾದ ಪಾನೀಯ, ಐಸ್ ಕ್ರೀಮ್, ಎಳ ನೀರುಗಳನ್ನು ಊಟದ ನಂತರ ಪದೇ ಪದೆ ಸೇವಿಸುವುದರಿಂದ ಗಂಟಲುನೋವು, ನೆಗಡಿ, ತಲೆಭಾರ ಕಾಣಿಸಿಕೊಳ್ಳುತ್ತದೆ.
ಇನ್ನು ನಿದ್ರೆಯ ವ್ಯತ್ಯಾಸವನ್ನು ಸುಧಾರಿಸಿಕೊಳ್ಳುವ ಬಗ್ಗೆ ಹೇಳುವುದಾದರೆ, ಬೆಳಿಗ್ಗೆ ತಲುಪ ಬೇಕಾದ ಸ್ಥಳವನ್ನು ತಲುಪಿದ ಕೂಡಲೇ ೩-೪ ತಾಸು ಸುಖನಿದ್ರೆ ಮಾಡಿ, ನಂತರ ಮೈಗೆ ಬೆಚ್ಚಗಿನ ಎಣ್ಣೆ ಹಚ್ಚಿ, ಅಭ್ಯಂಜನ ಸ್ನಾನ ಮಾಡಿ, ನಂತರ ಪಚನಕ್ಕೆ ಹಗುರವಾದ ಸಿಹಿಯಾದ ಆಹಾರ ಸೇವನೆ ಮಾಡುವುದು ಒಳ್ಳೆಯದು. ಆ ದಿನ ಶರೀರಕ್ಕೆ ಶ್ರಮವಾಗದ ಕೆಲಸಗಳನ್ನು ಮಾಡಿ ಹೆಚ್ಚು ವಿಶ್ರಾಂತಿ ಪಡೆದರೆ ಅನುಕೂಲವಾಗುತ್ತದೆ.
ಪ್ರಯಾಣದ ಅನುಕೂಲತೆಗಳು ವಿಸ್ತರಿಸುತ್ತಿರುವಂತೆ ವಿಶ್ವವೂ ಕಿರಿದಾಗುತ್ತಿದೆ. ಕಿರಿದಾದ ವಿಶ್ವದಲ್ಲಿ ಪ್ರಯಾಣದ ಸಂದರ್ಭಗಳು ಹೆಚ್ಚಾಗುತ್ತಿವೆ. ದೀರ್ಘಕಾಲದ ಪ್ರಯಾಣ ಅಥವಾ ಅನಿವಾರ್ಯವಾಗಿ ಪ್ರತಿನಿತ್ಯ ನಡೆಯುವ ಪ್ರಯಾಣದಿಂದ ರೋಗೋತ್ಪತ್ತಿಯ ಸಾಧ್ಯತೆಯೂ ಹೆಚ್ಚುತ್ತಿದೆ. ಹಾಗಾಗಿ, ಮೇಲೆ ಹೇಳಿದ ಎಚ್ಚರಿಕೆಯ ಕ್ರಮಗಳನ್ನು ಪ್ರಯಾಣಕ್ಕೆ ಹೊರಡುವ ಮೊದಲು ಹಾಗೂ ಪ್ರಯಾಣ ದ ನಂತರ ಪಾಲಿಸಿದರೆ ಪ್ರಯಾಣವು ಸುಖಕರವು ಆಹ್ಲಾದಕರವೂ ಆಗುವುದರಲ್ಲಿ ಸಂದೇಹವೇ ಇಲ್ಲ! ಬನ್ನಿ, ಆಯುರ್ವೇದದೊಂದಿಗೆ ವಿಶ್ವವನ್ನೇ ಗೆಲ್ಲೋಣ !