ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Siddaramaiah Record: ಅನ್ನದಾತನನ್ನು ಸಾಲದ ಸುಳಿಯಿಂದ ಪಾರು ಮಾಡಿದ ಭಾಗ್ಯ ವಿಧಾತ

ಕೇವಲ ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಗಳಲ್ಲದೇ, ಹೆಚ್ಚುವರಿಯಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸುವುದರೊಂದಿಗೆ, ನೀರಾವರಿ ಇಲಾಖೆಯಂತಹ ಪ್ರಮುಖ ಇಲಾಖೆಗಳಿಗೆ, ಭರವಸೆ ನೀಡಿದ್ದಕ್ಕಿಂತ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಗೊಳಿಸುವ ಮೂಲಕ, ಇಲಾಖಾ ಯೋಜನೆಗಳಿಗೆ ವೇಗ ಸಿಗುವಂತೆ ನೋಡಿಕೊಂಡರು.

ಅನ್ನದಾತನನ್ನು ಸಾಲದ ಸುಳಿಯಿಂದ ಪಾರು ಮಾಡಿದ ಭಾಗ್ಯ ವಿಧಾತ

-

Ashok Nayak
Ashok Nayak Jan 6, 2026 6:00 AM

ಇನ್ನೊಂದು ದಿನ ಕಳೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಗೆ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಲಿದ್ದು, ಅತಿ ಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಇತಿಹಾಸ ಸೃಷ್ಟಿಸಲಿದ್ದಾರೆ. ದೇವರಾಜ ಅರಸರು ಅವರು ಅಧಿಕಾರ ದಲ್ಲಿದ್ದ ಏಳೂವರೆ ವರ್ಷದಲ್ಲಿ 2792 ದಿನಗಳ ಕಾಲ ಅಧಿಕಾರದಲ್ಲಿದ್ದರು. ಸಿದ್ದರಾಮಯ್ಯ ಅವರು 2013-2018ರ ಅವಧಿಯಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ 1829 ದಿನಗಳ ಕಾಲ ಅಧಿಕಾರದಲ್ಲಿದ್ದರು. ಈಗ ಎರಡನೇ ಅವಧಿಗೆ ಆಡಳಿತದ ಸೂತ್ರ ಹಿಡಿದಿರುವ ಅವರು ಜ.7 ಕಳೆದರೆ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿಅತಿಹೆಚ್ಚು ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎನಿಸಿಕೊಳ್ಳ ಲಿದ್ದಾರೆ. ಈ ಎರಡೂ ಅವಧಿಯ ಆಡಳಿತವು ರಾಜ್ಯದ ಸುವರ್ಣಯುಗವೆಂದೇ ಕರೆಯಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಅವಧಿಯಲ್ಲಾದ ಅಭಿವೃದ್ಧಿಯ ಕುರಿತು ಒಂದು ನೋಟ ಇಲ್ಲಿದೆ.

ಸರಕಾರಗಳು ಸದಾ ಜನಪರವಾಗಿರಬೇಕು ಎನ್ನುವುದೇ ಪ್ರತಿಯೊಬ್ಬ ಮತದಾರನ ಸರಕಾರಗಳೂ ಆಶಯವಾಗಿರುತ್ತದೆ. ಆಡಳಿತಕ್ಕೆ ಬರುವ ಇದೇ ಭರವಸೆಯನ್ನು ಕೊಡುತ್ತವೆ. ಆದರೆ ಅಧಿಕಾರಕ್ಕೆ ಬಂದ ಬಳಿಕ, ಕೊಟ್ಟ ಭರವಸೆಯನ್ನು ಈಡೇರಿಸುವು ದಕ್ಕಿಂತ ಹೆಚ್ಚಾಗಿ ಹಾಗೆಯೇ ಸರಕಾರದ ಅವಧಿಯನ್ನು ಪೂರೈಸುವ ರಾಜಕಾರಣಿಗಳೇ ಹೆಚ್ಚು. ಇದಕ್ಕೆ ತತ್ವಿರುದ್ಧವಾಗಿ ನಿಲ್ಲುವುದು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ 13 ಮೇ 2013 - 17 ಮೇ 2018ರವರೆಗಿನ ಐದು ವರ್ಷ ಸರಕಾರ.

ಹೌದು, ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು 165 ಭರವಸೆಗಳನ್ನು ಜನರ ಮುಂದಿಟ್ಟು ಚುನಾವಣೆಗೆ ಹೋಗಿದ್ದರು. ಕುಡಿಯುವುದಕ್ಕೆ ನೀರು ಪ್ರಮುಖವಾಗಿ ಹಸಿದವರಿಗೆ ಅನ್ನ, ಹಾಗೂ ಬಡವರಿಗೆ ಸೂರು ನೀಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದರು. ಅಧಿಕಾರಕ್ಕೆ ಬಂದ ಬಳಿಕ ಪ್ರಣಾಳಿಕೆಯನ್ನು ನೀಡಿದ್ದ ಭರವಸೆಯ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರವನ್ನು ರೂಪಿಸಿದ ಸಿದ್ದರಾಮಯ್ಯ ಅವರು, ತಮ್ಮ ಆಡಳಿತದ ಐದು ವರ್ಷದ ಅವಧಿಯಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತಂದರು.

ಕೇವಲ ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಗಳಲ್ಲದೇ, ಹೆಚ್ಚುವರಿಯಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸುವುದರೊಂದಿಗೆ, ನೀರಾವರಿ ಇಲಾಖೆಯಂತಹ ಪ್ರಮುಖ ಇಲಾಖೆಗಳಿಗೆ, ಭರವಸೆ ನೀಡಿದ್ದಕ್ಕಿಂತ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಗೊಳಿಸುವ ಮೂಲಕ, ಇಲಾಖಾ ಯೋಜನೆಗಳಿಗೆ ವೇಗ ಸಿಗುವಂತೆ ನೋಡಿಕೊಂಡರು.

ಅದೇ ರೀತಿ ವಸತಿ, ಶಿಕ್ಷಣ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪರಿಶಿಷ್ಟ ಜಾತಿ, ಪಂಗಡ ದವರಿಗೆ ವಿಶೇಷ ಅನುದಾನ, ಕೃಷಿ, ಆರೋಗ್ಯ, ವಸತಿ ಸೇರಿದಂತೆ ಪ್ರತಿ ಇಲಾಖೆಯನ್ನು ಜನಪರ, ಸರ್ವರಿಗೂ ಸಹಾಯವಾಗುವ ಯೋಜನೆಗಳನ್ನು ಜಾರಿಗೊಳಿಸಿದರು. ರೈತರ ಪಾಲಿಗೆ ಕೃಷಿ ಭಾಗ್ಯ ಕೃಷಿ ಭಾಗ್ಯದಂತ ಕ್ರಾಂತಿಕಾರಿ ಯೋಜನೆಯನ್ನು ರೂಪಿಸಿ ಬಂಜರು ಭೂಮಿಯನ್ನೂ ಉಳುಮೆ ಯೋಗ್ಯ ನೆಲವಾಗಿ ಪರಿವರ್ತಿಸಲು ಸಾಧ್ಯ ಎಂದು ತೋರಿಸಿ ಕೊಟ್ಟರು.

ಇದನ್ನೂ ಓದಿ: CM Siddaramaiah: ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ, ಬಜೆಟ್‌ನಲ್ಲೂ ರೆಕಾರ್ಡ್‌

ರೈತರ ಸಾಲ ಮನ್ನಾದ ಮೂಲಕ ಅನ್ನದಾತನನ್ನು ಸಾಲದ ಸುಳಿಯಿಂದ ಪಾರು ಮಾಡಿ, ರೈತರ ಆತ್ಮಹತ್ಯೆಯನ್ನು ತಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಹನಿ ನೀರಾವರಿ ಅಳವಡಿಕೆಗೆ ಪ್ರೋತ್ಸಾಹಧನದ ಮೂಲಕ ನೀರಿನ ಸದ್ಬಳಕೆಗೆ ಒತ್ತು ನೀಡುವ ಜತೆಗೆ ಕೃಷಿ ಯಲ್ಲಿ ಯಂತ್ರೋಪಕರಣಗಳ ಬಳಕೆಗೆ ಬೆಂಬಲವಾಗಿ ನಿಂತು ಕೃಷಿಯ ಆಧುನೀಕರಣ ಕ್ಕಾಗಿ ಶ್ರಮಿಸಿದರು.

ಹೀಗೆ ಇನ್ನು ಹಲವು ವಿನೂತನ ಕಾರ್ಯಕ್ರಮಗಳನ್ನು ನೀಡುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ನಾಡಿನ ರೈತರ ಬಗೆಗಿನ ಕಾಳಜಿ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಯ ಬಗೆಗೆ ಇದ್ದ ಬದ್ಧತೆಯನ್ನು ತೋರಿಸಿತು.

ಸಿದ್ದರಾಮಯ್ಯ ನೇತೃತ್ವದ ಮೊದಲನೇ ಅವಧಿಯಲ್ಲಿ 19561 ಕೋಟಿ ರು.ಗಳನ್ನು ಕೃಷಿ ಅಭಿವೃದ್ಧಿಗೆ ವೆಚ್ಚ ಮಾಡಲಾಯಿತು. ಕೃಷಿ ಭಾಗ್ಯ ಯೋಜನೆಯ ಮೂಲಕ 1.89 ಲಕ್ಷ ಕೃಷಿ ಹೊಂಡ ಮತ್ತು 3546 ಪಾಲಿಹೌಸ್ ನಿರ್ಮಾಣಕ್ಕಾಗಿ 1877.47 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿತ್ತು.

ಮಳೆ ಬಂದರಷ್ಟೇ ಬೆಳೆ ಎಂಬಂತಾಗಿ, ನಷ್ಟದ ಸುಳಿಗೆ ಸಿಲುಕಿ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದ ನಾಡಿನ ರೈತರಲ್ಲಿ ಕೃಷಿಯೂ ಒಂದು ಲಾಭದಾಯಕ ಉದ್ಯೋಗ ಎಂಬ ಭರವಸೆ ಮೂಡಿಸಿದ್ದು ಸಿದ್ದರಾಮಯ್ಯ ನೇತೃತ್ವದ ಮೊದಲ ಅವಧಿಯ ಸರಕಾರದ ಸಾಧನೆ. ಇನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ 14.7 ಲಕ್ಷ ರೈತರು ಕಡಿಮೆ ಬಾಡಿಗೆಗೆ ಕೃಷಿ ಯಂತ್ರಗಳು ಮತ್ತು ಕೃಷಿ ಸಂಸ್ಕರಣೆಯ ಸೌಲಭ್ಯ ಪಡೆದುಕೊಂಡರು.

ಇದಕ್ಕಾಗಿ ಸರಕಾರವು 1655 ಕೋಟಿ ರು. ವೆಚ್ಚ ಮಾಡಿದೆ. ರಾಜ್ಯದಾದ್ಯಂತ ಸ್ಥಾಪಿಸಿರುವ 335 ಕೃಷಿಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯವನ್ನು 8.16 ಲಕ್ಷ ರೈತರು ಬಳಕೆ ಮಾಡಿಕೊಂಡಿದ್ದಾರೆ.

ನೀರಾವರಿಗೆ 70 ಸಾವಿರ ಕೋಟಿಗೂ ಹೆಚ್ಚು ಅನುದಾನ ಬೃಹತ್ ನೀರಾವರಿ ಯೋಜನೆಗಳಿಗೆ ಮೊದಲನೇ ಅವಧಿಯ ಐದು ವರ್ಷದಲ್ಲಿ ಒಟ್ಟು 64,523 ಕೋಟಿ ರು. ಅನುದಾನ ಹಂಚಿಕೆ ಮಾಡುವ ಮೂಲಕ ರಾಜ್ಯದ ಬೃಹತ್ ಹಾಗೂ ಸಣ್ಣ ನೀರಾವರಿ ಯೋಜನೆಗಳಿಂದ ಫಲವತ್ತಾದ ಭೂಮಿ ಹಾಗೂ ದಾಹ ನೀಗಿಸಬಹುದು ಎನ್ನುವುದನ್ನು ಅರಿತ ಸಿದ್ದರಾಮಯ್ಯ ಅವರು ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆಗಳಿಗೆ ಒಟ್ಟು 70 ಸಾವಿರ ಕೋಟಿ ರು.ಗೂ ಹೆಚ್ಚು ಅನುದಾನ ಹಂಚಿಕೆ ಮಾಡಿದ್ದರು.

ಪ್ರತಿ ವರ್ಷವೂ ರಾಜ್ಯದ ನೀರಾವರಿ ವಲಯಕ್ಕೆ ತಲಾ 10000 ಕೋಟಿ ರು.ಗಳಂತೆ ನೀಡಿದ್ದು, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಿಂತ ಹೆಚ್ಚು, ಅಂದರೆ 58,393 ಕೋಟಿ ರು. ಗಳನ್ನು ನೀರಾವರಿಗೆ ನೀಡಿರುವುದು ಅವರ ಸಾಧನೆ. ಜಲಸಂಪನ್ಮೂಲ ಇಲಾಖೆಗೆ (ಭಾರಿ ಮತ್ತು ಮಧ್ಯಮ ನೀರಾವರಿ) ಸರಕಾರವು 5 ವರ್ಷಗಳಲ್ಲಿ 58,393 ಕೋಟಿ ರು. ಗಳನ್ನು ಒದಗಿಸ ಲಾಗಿದ್ದು, 6.54 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಕಲ್ಪಿಸಿದೆ.

ಕಾಂಗ್ರೆಸ್ ಸರಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಕಾಮಗಾರಿಗಳನ್ನು 51,149 ಕೋಟಿ ರು.ಗಳಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಿತ್ತು. ಈ ಯೋಜನೆಯ ಉಪ ಯೋಜನೆಗಳಾದ ಮುಳವಾಡ, ಕೊಪ್ಪಳ, ಮ‌ಲ್ಲಾಬಾದ್, ರಾಂಪುರ, ಚಿಮ್ಮಲಗಿ, ಇಂಡಿ ಏತ ನೀರಾವರಿ ಯೋಜನೆಗಳು, ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಮತ್ತು ಹೆರ್ಕಲ್ ಏತ ನೀರಾವರಿ ಯೋಜನೆಗಳನ್ನು ತೀವ್ರಗತಿಯಲ್ಲಿ ಅನುಷ್ಠಾನ ಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಕಾವೇರಿ ಕೊಳ್ಳದಲ್ಲಿ 22 ಅಣೆಕಟ್ಟು ನಾಲೆಗಳಡಿ ಒಟ್ಟು 1522.46 ಕಿಮೀ. ಉದ್ದಕ್ಕೆ ಕಾಂಕ್ರೀಟ್ ಲೈನಿಂಗ್ ಮಾಡುವ ಕಾಮಗಾರಿಗಳನ್ನು 1634 ಕೋಟಿ ರು. ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗಿತ್ತು. ತುಂಗಭದ್ರಾ, ಭದ್ರಾ, ಮಲಪ್ರಭಾ, ಬೆಣ್ಣೆತೊರಾ, ಅಮಜಾರ್, ಕಾರಂಜಾ, ಕೆಳದಂಡೆ ಮತ್ತು ಮೇಲ್ದಂಡೆ ಮುಮಾರಿ, ಹಾಗೂ ಗಂಡೋರಿ ಯೋಜನೆಗಳ ನಾಲಾ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ಕಾಂಗ್ರೆಸ್ ಸರಕಾರ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದ ಲಿಫ್ಟ್ ಕಾಮಗಾರಿಗಳನ್ನು 3716 ಕೋಟಿ ರು. ಮೊತ್ತದಲ್ಲಿ ಐದು ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡು, ಡಿಸೆಂಬರ್ 2017ರ ಅಂತ್ಯದವರೆಗೆ 2565 ಕೋಟಿ ರೂ. ವೆಚ್ಚ ಮಾಡಿತ್ತು. ಇದರ ಜೊತೆಗೆ ನೀರು ಹರಿಸುವ ಕಾಲುವೆ ಕಾಮಗಾರಿಗಳು, ಅಕ್ವಾಡಕ್ಟ್ ಮತ್ತು ಜಲಾಶಯ ಕಾಮಗಾರಿಗಳ 3255 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ಉನ್ನತ ಶಿಕ್ಷಣಕ್ಕೆ ನೆರವು

ಬೆಂಗಳೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಎಂಬ ಅರ್ಥ ಶಾಸ್ತ್ರದ ಸಂಶೋಧನಾ ಸಂಸ್ಥೆ ಸ್ಥಾಪನೆ ಮಾಡಲಾಗಿದೆ. ಎಲ್ಲಕಾಲೇಜು ವಿದ್ಯಾರ್ಥಿ ಗಳಿಗೂ ಉಚಿತವಾಗಿ ಲ್ಯಾಪ್ ಟಾಪ್ ನೀಡಲಾಯಿತು.

ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕದಿಂದ ವಿನಾಯಿತಿ ನೀಡಿದೆ. ಸರಕಾರದ ವಿವಿಧ ಯೋಜನೆಗಳಡಿ 10 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದರು. 2013-18ರ ವರೆಗೆ ರಾಜ್ಯದ ಉನ್ನತ ಶಿಕ್ಷಣ ಪ್ರವೇಶಾನುಪಾತ ರಾಷ್ಟ್ರದ ಸರಾಸರಿ 24.3ಕ್ಕಿಂತ ಉತ್ತಮ ವಾಗಿದ್ದು, 2017ನೇ ಸಾಲಿನಲ್ಲಿ 26.4 ಆಗಿದೆ.

2013-18ರ ಅವಧಿಯಲ್ಲಿ 28 ಹೊಸ ಸರಕಾರಿ ಪಾಲಿಟೆಕ್ನಿಕ್ ಹಾಗೂ 4 ಹೊಸ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸಿರುವುದರಿಂದ ಸುಮಾರು 8064 ಸರಕಾರಿ ಸೀಟುಗಳ ಹೆಚ್ಚಳವಾಗಿದೆ. 2013-18ರ ಅವಽಯಲ್ಲಿ, 26 ಮಹಿಳಾ ಪ್ರಥಮ ದರ್ಜೆ ಕಾಲೇಜು ಗಳು ಸೇರಿದಂತೆ ಒಟ್ಟು 52 ಹೊಸ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸ ಲಾಗಿದೆ. ಇದರಿಂದ ಸುಮಾರು 25800 ಹೆಚ್ಚುವರಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆ ಐತಿಹಾಸಿಕ ತೀರ್ಮಾನ

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ, 2013 ಚಾರಿತ್ರಿಕ ಅಧಿನಿಯಮವನ್ನು ಸಿದ್ದರಾಮಯ್ಯ ನೇತೃತ್ವದ ಮೊದಲ ಸರಕಾರದಲ್ಲಿ ಜಾರಿಗೆ ತರಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಶೇ.17.15 ಮತ್ತು ಶೇ.6.95 ರಷ್ಟು ಅನುದಾನವನ್ನು ಈ ವರ್ಗಗಳಿಗಾಗಿ ಮೀಸಲಿಡಲಾಗಿದೆ.

ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ 2008-09ರಿಂದ 2012-13 ರ ಅವಧಿಯಲ್ಲಿ ಒಟ್ಟು 26,840 ಕೋಟಿ ರು. ಗಳನ್ನು ಒದಗಿಸಲಾಗಿದ್ದು, 22,261 ಕೋಟಿ ರು. ವೆಚ್ಚ ಮಾಡಲಾಗಿತ್ತು.

2013-14 ರಿಂದ 2017-18ರ ಅವಧಿಯಲ್ಲಿ ಈ ಯೋಜನೆಯಡಿ ಒಟ್ಟು 88,395 ಕೋಟಿ ರು. ಗಳನ್ನು ಒದಗಿಸಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಗೆ 2008ರಿಂದ 2013ರ ಅವಧಿಯಲ್ಲಿ 9542 ಕೋಟಿ ರು. ಹಣ ಒದಗಿಸಿತ್ತು, ಒಟ್ಟಾರೆ 23,798 ಕೋಟಿ ರು. ಹಣವನ್ನು ಒದಗಿಸಿತ್ತು.

ಕಾಂಗ್ರೆಸ್ ಸರಕಾರವು ಹೋಬಳಿಗೊಂದು ವಸತಿ ಶಾಲೆಯ ಪರಿಕಲ್ಪನೆಯಲ್ಲಿ 270 ಹೊಸ ವಸತಿ ಶಾಲೆಗಳನ್ನು ಹಾಗೂ 200 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿದೆ.

ಇದರಿಂದ 74300 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಾವಕಾಶ ಕಲ್ಪಿಸಲಾಗಿದೆ. 3561 ವಿವಿಧ ಹುದ್ದೆಗಳಿಗೆ ನೇಮಕಕ್ಕೆ ಕ್ರಮ ಕೈಗೊಂಡಿತ್ತು. ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ 1494 ಕೋಟಿ ರು. ಗಳನ್ನು ಮಂಜೂರು ಮಾಡಲಾಗಿತ್ತು. 2.5 ಲಕ್ಷ ಜನರ ಸಾಲ ಮನ್ನಾ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಸಿದ್ದರಾಮಯ್ಯನವರು ಸಾಲದ ಸುಳಿಯಲ್ಲಿ ಸಿಲುಕಿದ್ದ ಬಡಜನರನ್ನು ಋಣಮುಕ್ತಗೊಳಿಸಬೇಕೆಂಬ ದೃಢ ನಿರ್ಧಾರ ಮಾಡಿದ್ದರು.

ಬಡಜನರು ತಮ್ಮ ಹಳೆಯ ಸಾಲಗಳಿಂದ ಮುಕ್ತರಾಗಿ ಹೊಸ ಆರ್ಥಿಕ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಜೀವನ ನಡೆಸಬೇಕು ಎನ್ನುವುದು ಅವರ ಆಶಯವಾಗಿತ್ತು. ಇದಕ್ಕಾಗಿ ಜಾರಿಗೆ ತಂದ ಋಣಮುಕ್ತ ಯೋಜನೆಯಿಂದ ಪರಿಶಿಷ್ಟ ಜಾತಿ/ಪಂಗಡ ಮತ್ತು ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ 10.18 ಲಕ್ಷ ಜನರು ಸಾಲ ದಿಂದ ಮುಕ್ತಿ ಹೊಂದಿದ್ದರು.

ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ಜನ ಸಮುದಾಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳಿಂದ ಒಂದು ಕೋಟಿಗೂ ಅಧಿಕ ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ.

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 2008 ರಿಂದ 2013ರವರೆಗೆ 3407 ಕೋಟಿ ರು. ಒದಗಿಸಿದ್ದು, 37 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. 2013 ರಿಂದ 2018 ರವರೆಗೆ 10,442 ಕೋಟಿ ರು.ಗಳ ಅನುದಾನವನ್ನು ಒದಗಿಸಿದ್ದು, 1.20 ಕೋಟಿ ಫಲಾನುಭವಿ ಗಳು ಪ್ರಯೋಜನ ಪಡೆದಿದ್ದಾರೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆ ಯಲ್ಲಿ ಹಿಂದುಳಿದ ವರ್ಗಗಳ ಆರ್ಥಿಕಾಭಿವೃದ್ಧಿಗಾಗಿ 2.10 ಲಕ್ಷ ಫಲಾನುಭವಿಗಳಿಗೆ 765.2 ಕೋಟಿ ರು. ಗಳಷ್ಟು ಸಾಲ ಮತ್ತು ಸಹಾಯಧನ ನೀಡಲಾಗಿದೆ.

403 ಕೋಟಿ ರೂ ವೆಚ್ಚದಲ್ಲಿ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ 79,566 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ನೀಡಲಾಗಿದೆ. ದೇಶದ ಪ್ರಥಮ ಬಾರಿಗೆ ರಾಜ್ಯದ ಎಲ್ಲ ಜನಾಂಗದವರ ಮನೆಮನೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ನಡೆಸಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಊಟದ ವೆಚ್ಚವನ್ನು 5 ವರ್ಷಗಳಲ್ಲಿ ಪ್ರತಿ ವರ್ಷವೂ ಹೆಚ್ಚಿಸಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಮೆಡಿಕಲ, ಎಂಜಿನಿಯರಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಾಲದ ಮೊತ್ತವನ್ನು ಪ್ರತಿ ವರ್ಷ 10000 ರೂ.ಗಳಿಂದ 1 ಲಕ್ಷ ರು.ಗಳಿಗೆ ಹೆಚ್ಚಿಸಿದೆ. 12,138 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 58.52 ಕೋಟಿ ರು.ಗಳ ಸಾಲ ಸೌಲಭ್ಯವನ್ನು ನೀಡಲಾಗಿದೆ.

ಸಣ್ಣ ನೀರಾವರಿಗೂ ಆದ್ಯತೆ

2013-2018 ರವರೆಗಿನ ಐದು ವರ್ಷಗಳಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒದಗಿಸಿರುವ ಅನುದಾನ 6283 ಕೋಟಿ ರು.ಗಳಲ್ಲಿ ಒಟ್ಟು 3.43 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿತ್ತು. ರಾಜ್ಯದಲ್ಲಿರುವ ಸುಮಾರು 30 ಸಾವಿರಕ್ಕೂ ಹೆಚ್ಚು ಕೆರೆಗಳ ಕ್ರಮಬದ್ಧ ಅಭಿವೃದ್ಧಿಗಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸ ಲಾಗಿದೆ. 100 ಕೋಟಿ ರು.ಗಳ ಮೊತ್ತದಲ್ಲಿ ಕೆರೆಗಳ ಒತ್ತುವರಿ ತೆರವು ಮತ್ತು ಕೆರೆಗಳ ಪೋಷಕ ಕಾಲುವೆ/ರಾಜಕಾಲುವೆಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು 2402 ಕೋಟಿ ರು.ಗಳ ವೆಚ್ಚ ದಲ್ಲಿ ಕೋಲಾರ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 253 ಕೆರೆಗಳಿಗೆ ತುಂಬಿಸಲು ಕಾರ್ಯಕ್ರಮ ರೂಪಿಸಿ, ಜಾರಿಗೊಳಿಸಲಾಗಿತ್ತು.

ಕಾಂಗ್ರೆಸ್ ಸರ್ಕಾರದ ಈ ಯೋಜನೆ ದೇಶದ ಗಮನ ಸೆಳೆದಿತ್ತು. ಕೆರೆ ಸಂಜೀವಿನಿ ಯೋಜನೆ ಯಡಿ 105 ಕೋಟಿ ರೂ. ಯೋಜನಾ ಗಾತ್ರದಲ್ಲಿ 1428 ಕೆರೆಗಳ ಹೂಳೆತ್ತುವ ಕಾಮಗಾರಿ ಯನ್ನು ಪೂರ್ಣಗೊಳಿಸಲಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ನದಿಗಳ ಹರಿವನ್ನು ಸಂರಕ್ಷಿಸಲು ಮತ್ತು ಸಂಗ್ರಹಿಸಲು ಪಶ್ಚಿಮ ವಾಹಿನಿ ಯೋಜನೆಯಡಿ 200 ಕೋಟಿ ರು. ಮೊತ್ತದಲ್ಲಿ 53 ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಲಾಗಿದೆ.

ಗುಣಮಟ್ಟದ ಆರೋಗ್ಯ ಸೇವೆ

ಗುಣಮಟ್ಟದ ಆರೋಗ್ಯ ಸೇವೆಗಳನ್ನು ಎಲ್ಲರಿಗೂ ಒದಗಿಸುವ ಗುರಿಯೊಂದಿಗೆ ಸರಕಾರ ಕೈಗೊಂಡ ಕ್ರಮಗಳಿಂದಾಗಿ ಜನಸಾಮಾನ್ಯರಿಗೆ ಸಮೀಪದ ಆಸ್ಪತ್ರೆಗಳು ಕಾರ್ಯ ನಿರ್ವಹಿಸುವಂತಾದವು. ಪ್ರತಿ ಜಿಲ್ಲೆಯಲ್ಲೂ ಜನರಿಕ್ ಔಷಧಿ ಕೇಂದ್ರಗಳನ್ನು ಆರಂಭಿಸ ಲಾಗಿದೆ.

5 ವರ್ಷಗಳಲ್ಲಿ ಆರೋಗ್ಯ ಇಲಾಖೆಯಿಂದ 3.7 ಕೋಟಿಗೂ ಅಧಿಕ ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ರಾಜ್ಯದ ಎಲ್ಲ ಜನರ ಸ್ವಾಸ್ಥ್ಯಕ್ಕಾಗಿ, ರೋಗಗಳ ನಿಯಂತ್ರಣ, ಆರೋಗ್ಯವರ್ಧನೆ, ಚಿಕಿತ್ಸೆ ಹಾಗೂ ಪುನರ್ವಸತಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸಮಗ್ರ ಸಾರ್ವಜನಿಕ ಆರೋಗ್ಯ ನೀತಿ-2017ನ್ನು ಜಾರಿಗೊಳಿಸಲಾಗಿದೆ. ಅಪಘಾತ ನಡೆದ 2 ದಿನದಲ್ಲಿ ಸಂತ್ರಸ್ತ ವ್ಯಕ್ತಿಗೆ 25000 ರು.ವರೆಗಿನ ಚಿಕಿತ್ಸಾ ವೆಚ್ಚವನ್ನು ನೀಡಲು 2016ರಲ್ಲಿ ಈ ಯೋಜನೆ ಜಾರಿಗೆ ತರಲಾಯಿತು.

2 ವರ್ಷದ ಅವಧಿಯಲ್ಲಿ ಈ ಯೋಜನೆಯಡಿ 43000 ವ್ಯಕ್ತಿಗಳು 290 ಕೋಟಿ ನೆರವು ಪಡೆದಿದ್ದಾರೆ. ಶಿಶು ಮರಣ ಹಾಗೂ ತಾಯಂದಿರ ಮರಣ ಪ್ರಮಾಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನದೊಂದಿಗೆ ಸಾವಿರ ರು.ಗಳ ಹೆಚ್ಚುವರಿ ಗೌರವಧನ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಯಂತ್ರಣಕ್ಕೆ ಯಶಸ್ವಿನಿ ಆರೋಗ್ಯ ಸುರಕ್ಷಾ ಯೋಜನೆಗಳನ್ನು ತರಲಾಗಿದೆ. ಕ್ಯಾನ್ಸರ್, ಹೃದಯ ರೋಗಗಳ ಚಿಕಿತ್ಸೆಗೆ ವಿವಿಧ ಜಿಲ್ಲೆಯಲ್ಲಿ ತಲಾ 25 ಕೋಟಿ ರೂ.ಗಳ ವೆಚ್ಚದಲ್ಲಿ 5 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿತ್ತು.

1.1 ಕೋಟಿ ಜನರಿಗೆ ಸೇವೆ

ಬಡಜನರಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ಲಭಿಸಬೇಕು ಎನ್ನುವ ಕಾರಣಕ್ಕೆ ಹೊಸದಾಗಿ ಆರು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿತು. 5 ವರ್ಷದಲ್ಲಿ ಸರಕಾರಿ ಬೋಧನಾ ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 2900 ಹೆಚ್ಚುವರಿ ಹಾಸಿಗೆ ಸಾಮರ್ಥ್ಯವನ್ನು ಸೇರಿಸಲಾಗಿದೆ. ಇದರಿಂದ 1.1 ಕೋಟಿಗೂ ಅಧಿಕ ಮಂದಿ ಆರೋಗ್ಯ ಸೇವೆಗಳ ಪ್ರಯೋಜನ ಪಡೆದುಕೊಂಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಐದು ವರ್ಷದಲ್ಲಿ 18459 ಕೋಟಿ ರು. ಅನುದಾನ. ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಟ್ಟು 8515 ಕೋಟಿ ರು. ಅನುದಾನ.

ಶಿಕ್ಷಣ ಕ್ಷೇತ್ರಕ್ಕೆ ಪ್ರಾಧಾನ್ಯತೆ

ಪತಿಯೊಂದು ಮಗು ಶಾಲೆಯಲ್ಲಿ ಮತ್ತು ಉತ್ತಮ ಕಲಿಕೆಯೊಂದಿಗೆ ಎನ್ನುವ ಗುರಿಯೊಂದಿಗೆ 2013-2018 ರವರೆಗಿನ ಸಿದ್ದರಾಮಯ್ಯ ನೇತೃತ್ವದ ಸರಕಾರವು ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕಾಗಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ, ಮಧ್ಯಾಹ್ನದ ಬಿಸಿಯೂಟ ಮತ್ತು ಬಿಸಿಹಾಲನ್ನು ನೀಡಿತ್ತು. 1 ಕೋಟಿಗೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆದು ಕೊಂಡಿದ್ದಾರೆ.

ಶಿಕ್ಷಣ ಇಲಾಖೆಯು 61 ಲಕ್ಷ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು, 47 ಲಕ್ಷ ವಿದ್ಯಾರ್ಥಿ ಗಳಿಗೆ ಸಮವಸ್ತ್ರ, ಶೂಗಳು ಮತ್ತು ಸಾಕ್ಸ್‌ ಗಳನ್ನು, 5 ಲಕ್ಷ ವಿದ್ಯಾರ್ಥಿಗಳಿಗೆ ಬೈಸೈಕಲ್‌ ಗಳನ್ನು ಉಚಿತವಾಗಿ ವಿತರಿಸಿರುವುದಲ್ಲದೆ, ಪ್ರತಿದಿನ 60 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ ಕೆನೆ ಭರಿತ ಹಾಲನ್ನು ನೀಡಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಸುಮಾರು 1 ಕೋಟಿ ವಿದ್ಯಾರ್ಥಿಗಳ ಹಾಜರಾತಿ ಮತ್ತು ಶೈಕ್ಷಣಿಕ ಪ್ರಗತಿಯ ಮೇಲುಸ್ತುವಾರಿ ಮಾಡಲು ತಂತ್ರಜ್ಞಾನ ಆಧಾರಿತ ಶಿಕ್ಷಣ ಕಿರಣ ಪ್ರಾರಂಭಿಸಲಾಗಿದೆ. ಹಿಂದಿನ ದಾಖಲಾತಿಗಳನ್ನು ಆಧಾರ್‌ನೊಂದಿಗೆ ಜೋಡಿಸುವ ಮೂಲಕ ಒಂದಕ್ಕಿಂತ ಹೆಚ್ಚು ಶಾಲೆಯಲ್ಲಿ ವಿದ್ಯಾರ್ಥಿಗಳು ನಕಲಿ ಪ್ರವೇಶ ಪಡೆದಿಲ್ಲವೆಂಬುದನು ಖಚಿತಪಡಿಸಿಕೊಳ್ಳುವಲ್ಲಿ ಇಲಾಖೆ ಯಶಸ್ವಿಯಾಗಿದೆ.

ಇದು ವಿದ್ಯಾರ್ಥಿ ಪ್ರೋತ್ಸಾಹಕಗಳ ದುರ್ಬಳಕೆಯಾಗುವುದನ್ನು ತಡೆಗಟ್ಟಲು ಮತ್ತಷ್ಟು ಸಹಕಾರಿಯಾಗಿತ್ತು. 2016ರಲ್ಲಿ 7911 ಶಿಕ್ಷಕರ ನೇಮಕಾತಿ ಮಾಡಿದೆ. 2017-18ರಲ್ಲಿ ಪ್ರಾಥಮಿಕ ಶಾಲೆಗಳಿಗೆ ಹೊಸದಾಗಿ 10000 ಪದವೀಧರ ಶಿಕ್ಷಕರು, 1626 ಪ್ರೌಢ ಶಾಲಾ ಶಿಕ್ಷಕರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು 2013-14ನೇ ಸಾಲಿನಿಂದ 2018ರ ವರೆಗೆ 1763 ಉಪನ್ಯಾಸಕರನ್ನು ನೇಮಕಾತಿ ಮಾಡಲಾಗಿದೆ. ಸರಕಾರೇತರ ಸಂಸ್ಥೆಗಳೊಂದಿಗಿನ ಸಹಭಾಗಿತ್ವದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹಾಗೂ ಶಿಕ್ಷಕರ ಸಾಮರ್ಥ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.

ಒಟ್ಟಾರೆ 5 ವರ್ಷಗಳಲ್ಲಿ 20 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಲಾಗಿತ್ತು. ಎಲ್ಲ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು 20 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಒಂದು ಲಕ್ಷ ವಿದ್ಯಾರ್ಥಿಗಳ ಪೈಕಿ ಪ್ರತಿ ಜಿಲ್ಲೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಈ ಕಾರ್ಯಕ್ರಮದಿಂದ 180 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.

2013-2018 ರವರೆಗಿನ ಅನುದಾನ

ಕೃಷಿ ಇಲಾಖೆಗೆ ಒಟ್ಟು 19561 ಕೋಟಿ ರು. ಅನುದಾನ ಹಂಚಿಕೆ.

ತೋಟಗಾರಿಕಾ ಇಲಾಖೆಗೆ ಐದು ವರ್ಷದಲ್ಲಿ 3926 ಕೋಟಿ ರು. ಅನುದಾನ.

ಪಶುಸಂಗೋಪನಾ ಇಲಾಖೆಗೆ 9695 ಕೋಟಿ ರು. ಅನುದಾನ.

ರೇಷ್ಮೆ ಕೃಷಿಗೆ ಪೂರಕ ವಾತಾವರಣ ನಿರ್ಮಿಸಲು 1367 ಕೋಟಿ ರು. ಅನುದಾನ

ಮೀನುಗಾರಿಕೆಗೆ ಪ್ರೋತ್ಸಾಹಿಸಲು ಐದು ಬಜೆಟ್‌ನಲ್ಲಿ ಒಟ್ಟು 1392 ಕೋಟಿ ರು. ಹಂಚಿಕೆ.