Vishweshwar Bhat Column: ಹ್ಯಾನ್ಲನ್ಸ್ ರೇಜರ್ ಮತ್ತು ಆಕಮ್ಸ್ ರೇಜರ್ ಎಂದರೇನು ?
ಯಾವುದಾದರೂ ಒಂದು ಕೆಟ್ಟ ಘಟನೆ ನಡೆದಾಗ, ಅದು ದುರುದ್ದೇಶದಿಂದ ನಡೆದಿದೆ ಎಂದು ಭಾವಿಸುವ ಬದಲು, ಅದು ಅಜ್ಞಾನ ಅಥವಾ ಮೂರ್ಖತನದಿಂದ ನಡೆದಿದೆ ಎಂದು ಭಾವಿಸು ವುದು ಲೇಸು. ಇದನ್ನು ‘ರೇಜರ್’ ಎಂದು ಕರೆಯಲು ಕಾರಣವಿದೆ. ತರ್ಕಶಾಸ್ತ್ರದಲ್ಲಿ ‘ರೇಜರ್’ ಎಂದರೆ ಅನಗತ್ಯವಾದ ಊಹೆಗಳನ್ನು ಅಥವಾ ಸಂಕೀರ್ಣ ವಾದ ವಿಚಾರಗಳನ್ನು ಕತ್ತರಿಸಿ ಹಾಕಿ, ಸರಳವಾದ ಸತ್ಯವನ್ನು ಕಂಡುಕೊಳ್ಳುವ ಸಾಧನ ಎಂದರ್ಥ.
-
ಇದೇ ಅಂತರಂಗ ಸುದ್ದಿ
ಯಾವುದಾದರೂ ಒಂದು ಕೆಟ್ಟ ಘಟನೆ ನಡೆದಾಗ, ಅದು ದುರುದ್ದೇಶದಿಂದ ನಡೆದಿದೆ ಎಂದು ಭಾವಿಸುವ ಬದಲು, ಅದು ಅಜ್ಞಾನ ಅಥವಾ ಮೂರ್ಖತನದಿಂದ ನಡೆದಿದೆ ಎಂದು ಭಾವಿಸುವುದು ಲೇಸು. ಇದನ್ನು ‘ರೇಜರ್’ ಎಂದು ಕರೆಯಲು ಕಾರಣವಿದೆ. ತರ್ಕಶಾಸ್ತ್ರದಲ್ಲಿ ‘ರೇಜರ್’ ಎಂದರೆ ಅನಗತ್ಯವಾದ ಊಹೆಗಳನ್ನು ಅಥವಾ ಸಂಕೀರ್ಣವಾದ ವಿಚಾರಗಳನ್ನು ಕತ್ತರಿಸಿ ಹಾಕಿ, ಸರಳವಾದ ಸತ್ಯವನ್ನು ಕಂಡುಕೊಳ್ಳುವ ಸಾಧನ ಎಂದರ್ಥ.
ಇಂಗ್ಲಿಷಿನಲ್ಲಿ ‘ಹ್ಯಾನ್ಲನ್ಸ್ ರೇಜರ್’ (Hanlon's Razor)ಎಂಬ ಪದಬಳಕೆಯನ್ನು ನೀವು ಕೇಳಿರಬಹುದು. ಉದಾಹರಣೆಗೆ- My roommate leaving the dishes out isn't a plot to make me angry; it's simply Hanlon's Razor in action, where ignorance is a better explanation than malice. ಇದು ನಮ್ಮ ದೈನಂದಿನ ಸಂಬಂಧಗಳು, ಸಾಮಾಜಿಕ ವ್ಯವ ಹಾರ ಮತ್ತು ವೃತ್ತಿಜೀವನದಲ್ಲಿ ಎದುರಾಗುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸಲು ಇರುವ ಅತ್ಯಂತ ಉಪಯುಕ್ತ ‘ಮಾನಸಿಕ ಸಾಧನ’ (Mental Model). ‘ಇದು ಒಂದು ಪ್ರಮಾದ, ಆದರೆ ಸಂಚಲ್ಲ’ ಎಂದು ಹೇಳುವಾಗ, ‘ಹ್ಯಾನ್ಲನ್ಸ್ ರೇಜರ್’ ಅಂತಾರೆ.
ಹ್ಯಾನ್ಲನ್ಸ್ ರೇಜರ್ ಅಂದರೇನು?
ಯಾವುದಾದರೂ ಒಂದು ಕೆಟ್ಟ ಘಟನೆ ನಡೆದಾಗ, ಅದು ದುರುದ್ದೇಶದಿಂದ ನಡೆದಿದೆ ಎಂದು ಭಾವಿಸುವ ಬದಲು, ಅದು ಅಜ್ಞಾನ ಅಥವಾ ಮೂರ್ಖತನದಿಂದ ನಡೆದಿದೆ ಎಂದು ಭಾವಿಸುವುದು ಲೇಸು. ಇದನ್ನು ‘ರೇಜರ್’ ಎಂದು ಕರೆಯಲು ಕಾರಣವಿದೆ. ತರ್ಕಶಾಸ್ತ್ರದಲ್ಲಿ ‘ರೇಜರ್’ ಎಂದರೆ ಅನಗತ್ಯವಾದ ಊಹೆಗಳನ್ನು ಅಥವಾ ಸಂಕೀರ್ಣ ವಾದ ವಿಚಾರಗಳನ್ನು ಕತ್ತರಿಸಿ ಹಾಕಿ, ಸರಳವಾದ ಸತ್ಯವನ್ನು ಕಂಡುಕೊಳ್ಳುವ ಸಾಧನ ಎಂದರ್ಥ.
ಈ ಸಿದ್ಧಾಂತ ಉಗಮವಾಗಿದ್ದು ಹೇಗೆ ?
ಈ ಹೆಸರನ್ನು ರಾಬರ್ಟ್ ಜೆ.ಹ್ಯಾನ್ಲನ್ ಎಂಬುವವ ಹುಟ್ಟು ಹಾಕಿದ. ಅವರು 1980ರಲ್ಲಿ ಒಂದು ಜೋಕ್ ಪುಸ್ತಕಕ್ಕೆ ಈ ಸಾಲನ್ನು ಬರೆದಿದ್ದ. ಆದರೆ, ಇದೇ ರೀತಿಯ ಆಲೋಚನೆ ಯನ್ನು ನೆಪೋಲಿಯನ್ ಬೋನಪಾರ್ಟೆ, ಗಯಟೆ ಮುಂತಾದ ಮಹಾನ್ ವ್ಯಕ್ತಿಗಳು ಈ ಹಿಂದೆಯೇ ವ್ಯಕ್ತಪಡಿಸಿದ್ದರು.
ನೀವು ಕಾರು ಚಲಾಯಿಸುತ್ತಿರುವಾಗ ಯಾರೋ ಒಬ್ಬರು ಹಠಾತ್ತನೆ ನಿಮ್ಮ ಮುಂದೆ ಅಡ್ಡ ಬಂದು ಬ್ರೇಕ್ ಹಾಕುತ್ತಾರೆ ಎಂದುಕೊಳ್ಳಿ. ನಮಗೆ ತಕ್ಷಣ ಅನ್ನಿಸುವುದು ‘ಇವನು ಬೇಕೆಂದೇ ನನ್ನನ್ನು ಕೆಣಕುತ್ತಿದ್ದಾನೆ’ ಅಥವಾ ‘ನನಗೆ ಅಪಘಾತ ಮಾಡಲು ನೋಡುತ್ತಿದ್ದಾನೆ’ ಎಂದು. ಆದರೆ ಹ್ಯಾನ್ಲ ರೇಜರ್ ಪ್ರಕಾರ, ಆ ವ್ಯಕ್ತಿ ಹೊಸಬನಾಗಿರಬಹುದು, ದಾರಿ ತಪ್ಪಿರಬಹುದು ಅಥವಾ ಆ ಕ್ಷಣಕ್ಕೆ ಗಾಬರಿಯಾಗಿರಬಹುದು. ಅಲ್ಲಿ ದುರುದ್ದೇಶಕ್ಕಿಂತ ಹೆಚ್ಚಾಗಿ ಅಚಾತುರ್ಯವಿರುತ್ತದೆ.
ಇದನ್ನೂ ಓದಿ: Vishweshwar Bhat Column: ಸಣ್ಣ ದೇಹ, ಅಗಾಧ ವೇಗ: ವಿಜ್ಞಾನವೇ ಬೆರಗಾಗುವ ಹಮ್ಮಿಂಗ್ ಬರ್ಡ್ ಲೋಕ
ನಿಮ್ಮ ಬಾಸ್ ಅಥವಾ ಸಹೋದ್ಯೋಗಿ ನಿಮ್ಮ ಮಹತ್ವದ ಇಮೇಲ್ʼಗೆ ರಿಪ್ಲೈ ಮಾಡದಿ ದ್ದಾಗ, ‘ಅವರು ನನ್ನನ್ನು ಕಡೆಗಣಿಸುತ್ತಿದ್ದಾರೆ’ ಅಥವಾ ‘ನನ್ನ ಮೇಲೆ ಅವರಿಗೆ ಸಿಟ್ಟಿದೆ’ ಎಂದು ನಾವು ಭಾವಿಸುತ್ತೇವೆ. ಆದರೆ ಸತ್ಯ ಏನೆಂದರೆ, ಅವರು ಕೆಲಸದ ಒತ್ತಡದಲ್ಲಿ ಅದನ್ನು ಮರೆತಿರಬಹುದು ಅಥವಾ ಇನ್‌ಬಾಕ್ಸ್‌ನ ಹತ್ತಾರು ಇ-ಮೇಲ್‌ಗಳ ಮಧ್ಯೆ ಅದು ಕಾಣಿಸದೇ ಇರಬಹುದು.
ಪತ್ರಿಕೆಯಲ್ಲಿ ಯಾವುದೋ ಒಂದು ತಪ್ಪು ಮಾಹಿತಿ ಪ್ರಕಟವಾದಾಗ ಓದುಗರು ‘ಇವರು ಬೇಕೆಂದೇ ಹೀಗೆ ಬರೆದಿದ್ದಾರೆ’ ಎಂದು ದೂರುತ್ತಾರೆ. ಆದರೆ ಬಹುತೇಕ ಬಾರಿ ಅದು ‘ಡೆಡ್ ಲೈನ್’ ಒತ್ತಡದಲ್ಲಿ ಆದ ಪ್ರೂಫ್ ಮಿಸ್ಟೇಕ್ ಆಗಿರುತ್ತದೆಯೇ ಹೊರತು ಉದ್ದೇಶ ಪೂರ್ವಕ ಸಂಚಲ್ಲ.
ಇದರ ಮಹತ್ವ ಮತ್ತು ಅನುಕೂಲಗಳೇನೆಂದರೆ, ಎಲ್ಲರೂ ನಮ್ಮ ವಿರುದ್ಧ ಸಂಚು ಮಾಡು ತ್ತಿದ್ದಾರೆ ಎಂಬ ಭ್ರಮೆಯಿಂದ ನಮಗೆ ಮುಕ್ತಿ ಸಿಗುತ್ತದೆ. ಬೇರೆಯವರನ್ನು ತಕ್ಷಣಕ್ಕೆ ಖಳನಾಯಕ ಎಂದು ಮುದ್ರೆ ಹಾಕುವ ಬದಲು, ಅವರಿಗೆ ಒಂದು ಅವಕಾಶ ನೀಡಲು ಇದು ಸಹಾಯ ಮಾಡುತ್ತದೆ.
‘ಅವರು ಯಾಕೆ ಹೀಗೆ ಮಾಡಿದರು?’ ಎಂದು ಗಂಟೆಗಟ್ಟಲೆ ಯೋಚಿಸಿ ತಲೆ ಕೆಡಿಸಿಕೊಳ್ಳುವ ಬದಲು, ಅದು ಕೇವಲ ಒಂದು ಆಕಸ್ಮಿಕ ತಪ್ಪು ಎಂದು ಸಮಾಧಾನ ಮಾಡಿಕೊಳ್ಳ ಬಹುದು. ಹ್ಯಾನ್ಲನ್ಸ್ ರೇಜರ್ ಎಲ್ಲದಕ್ಕೂ ಮದ್ದಲ್ಲ. ಒಬ್ಬ ವ್ಯಕ್ತಿ ಸತತವಾಗಿ ನಿಮಗೆ ತೊಂದರೆ ಕೊಡುತ್ತಿದ್ದರೆ ಅಥವಾ ಸಂಚು ಮಾಡುತ್ತಿರುವುದು ಸಾಬೀತಾದರೆ, ಆಗಲೂ ಅದನ್ನು ‘ಮೂರ್ಖತನ’ ಎಂದು ನಿರ್ಲಕ್ಷಿಸಬಾರದು. ಹ್ಯಾನ್ಲನ್ಸ್ ರೇಜರ್ ನಮಗೆ ಸಹಾನು ಭೂತಿ ನೀಡಬೇಕೇ ಹೊರತು ನಮ್ಮನ್ನು ದಡ್ಡರನ್ನಾಗಿ ಮಾಡಬಾರದು.
ಹಾಗೆ ಇನ್ನೊಂದು ರೇಜರ್ ಇದೆ. ಅದಕ್ಕೆ ‘ಆಕಮ್ಸ್ ರೇಜರ್’ (Occam's Razor) ಅಂತಾರೆ. ಇದು ಕೇವಲ ತತ್ವಶಾಸ್ತ್ರದ ವಿಷಯವಲ್ಲ, ಅದು ನಮ್ಮ ದೈನಂದಿನ ಗೊಂದಲಗಳನ್ನು ಪರಿಹರಿಸುವ ಒಂದು ಅದ್ಭುತ ‘ತರ್ಕದ ಕತ್ತರಿ’. ನಮಗೆ ಯಾವುದಾದರೂ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದಾಗ, ನಮ್ಮ ಮಿದುಳು ಸಾವಿರಾರು ಸಂಕೀರ್ಣ ಕಾರಣಗಳನ್ನು ಸೃಷ್ಟಿಸಿ ನಮ್ಮನ್ನು ಗಾಬರಿಗೊಳಿಸುತ್ತದೆ.
ಅಂಥ ಸಂದರ್ಭದಲ್ಲಿ ಈ ಸಿದ್ಧಾಂತವು ಅತ್ಯಂತ ಸರಳ ಸತ್ಯದತ್ತ ನಮ್ಮನ್ನು ಕರೆದೊಯ್ಯು ತ್ತದೆ. ಇದನ್ನು ಹದಿನಾಲ್ಕನೇ ಶತಮಾನದ ಇಂಗ್ಲಿಷ್ ತತ್ವಜ್ಞಾನಿ ವಿಲಿಯಂ ಆಫ್ ಆಕಮ್ ಜನಪ್ರಿಯಗೊಳಿಸಿದ. ‘ರೇಜರ್’ ಎಂಬ ಪದವನ್ನು ಇಲ್ಲಿ ಕೇವಲ ರೂಪಕವಾಗಿ ಬಳಸ ಲಾಗಿದೆ. ಅಂದರೆ, ಅನಗತ್ಯವಾದ ಊಹೆಗಳನ್ನು ಅಥವಾ ಸಂಕೀರ್ಣವಾದ ತರ್ಕಗಳನ್ನು ಕತ್ತರಿಸಿ ಹಾಕಿ, ಸತ್ಯದ ಹತ್ತಿರವಿರುವ ಸರಳ ವಿವರಣೆಯನ್ನು ಉಳಿಸಿಕೊಳ್ಳುವುದು ಇದರ ಉದ್ದೇಶ.
ಇದರ ಮೂಲಮಂತ್ರ- ‘ಸರಳತೆಯೇ ಶ್ರೇಷ್ಠ’. ಅಂದರೆ, ಒಂದು ಘಟನೆಗೆ ಎರಡು ವಿವರಣೆ ಗಳಿದ್ದು, ಎರಡೂ ಆ ಘಟನೆಯನ್ನು ವಿವರಿಸುವಂತಿದ್ದರೆ, ಅದರಲ್ಲಿ ಯಾವುದು ಅತಿ ಕಡಿಮೆ ಊಹೆಗಳನ್ನು (Assumptions) ಹೊಂದಿದೆಯೋ ಅದೇ ನಿಜವಾಗಿರುವ ಸಾಧ್ಯತೆ ಹೆಚ್ಚು.
ಉದಾಹರಣೆಗೆ, ನೀವು ಬೆಳಗ್ಗೆ ಎದ್ದಾಗ ನಿಮ್ಮ ಮನೆಯ ಹಿತ್ತಲಿನಲ್ಲಿ ಮರವೊಂದು ಬಿದ್ದಿರುವುದನ್ನು ಕಾಣುತ್ತೀರಿ. ವಿವರಣೆ ಒಂದು: ರಾತ್ರಿ ಜೋರಾಗಿ ಗಾಳಿ ಬಂದಿದ್ದಕ್ಕೆ ಮರ ಬಿದ್ದಿರಬಹುದು. ವಿವರಣೆ ಎರಡು: ಅನ್ಯಗ್ರಹ ಜೀವಿಗಳು ಬಂದು ಯಾವುದೋ ಪ್ರಯೋಗ ಮಾಡಲು ಮರವನ್ನು ಕೆಡವಿರಬಹುದು.
ಇಲ್ಲಿ ಎರಡನೇ ವಿವರಣೆಗಿಂತ ಮೊದಲನೆಯ ವಿವರಣೆ ಸರಳವಾಗಿದೆ ಮತ್ತು ನಮಗೆ ತಿಳಿದಿರುವ ವಾಸ್ತವಕ್ಕೆ ಹತ್ತಿರವಾಗಿದೆ. ಆದ್ದರಿಂದ ಅದೇ ಸತ್ಯ. ಮಾನವನ ಸಹಜ ಗುಣ ವೆಂದರೆ ವಿಷಯಗಳನ್ನು ಸಂಕೀರ್ಣಗೊಳಿಸುವುದು.
ನೀವು ನಿಮ್ಮ ಮಿತ್ರನಿಗೆ ಮೆಸೇಜ್ ಮಾಡುತ್ತೀರಿ, ಅವರು ನೋಡಿಯೂ ರಿಪ್ಲೈ ಮಾಡುವು ದಿಲ್ಲ. ಆಗ ನಿಮ್ಮ ಮಿದುಳು ಹೀಗೆ ಯೋಚಿಸುತ್ತದೆ- ‘ಅವರಿಗೆ ನನ್ನ ಮೇಲೆ ಕೋಪವಿರ ಬೇಕು’, ‘ನಾನು ಮೊನ್ನೆ ಹೇಳಿದ ಮಾತು ಅವರಿಗೆ ಚುಚ್ಚಿರಬೇಕು’, ‘ಅವರು ಈಗ ಹೊಸ ಗೆಳೆಯರ ಜತೆ ಬ್ಯುಸಿ ಆಗಿರಬಹುದು’. ಆದರೆ ಆಕಮ್ಸ್ ರೇಜರ್ ಪ್ರಕಾರ ಇಲ್ಲಿರುವ ಸರಳ ಸತ್ಯವೇನೆಂದರೆ, ‘ಅವರು ಕೆಲಸದ ಒತ್ತಡದಲ್ಲಿ ನೋಡಿ ಮರೆತಿರಬಹುದು ಅಥವಾ ರಿಪ್ಲೈ ಮಾಡಲು ಅವರಿಗೆ ಸಮಯವಿರಲಿಕ್ಕಿಲ್ಲ’.
ಈ ಸರಳ ಸತ್ಯವನ್ನು ಒಪ್ಪಿಕೊಂಡರೆ ನಮ್ಮ ಅರ್ಧದಷ್ಟು ಮಾನಸಿಕ ಒತ್ತಡ ಮಾಯ ವಾಗುತ್ತದೆ. ವೈದ್ಯಕೀಯ ಲೋಕದಲ್ಲಿ ಒಂದು ಮಾತಿದೆ- ‘ನೀವು ಕುದುರೆಯ ಕಾಲಿನ ಖುರಪುಟದ ಸದ್ದು ಕೇಳಿದಾಗ ಅದು ಕುದುರೆಯೇ ಇರಬಹುದು ಎಂದು ಯೋಚಿಸಿ, ಜೀಬ್ರಾ ಇರಬಹುದು ಎಂದು ಕಲ್ಪಿಸಿಕೊಳ್ಳಬೇಡಿ’.
ಅಂದರೆ, ರೋಗಿಯೊಬ್ಬನಿಗೆ ಸಾಮಾನ್ಯ ಲಕ್ಷಣಗಳಿದ್ದರೆ, ಅದು ಯಾವುದೋ ಅಪರೂಪದ ರೋಗವಿರಬಹುದು ಎಂದು ಯೋಚಿಸುವ ಮೊದಲು, ಸಾಮಾನ್ಯವಾಗಿ ಬರುವ ಕಾಯಿಲೆ ಯೇ ಎಂದು ಪರೀಕ್ಷಿಸುವುದು ಸೂಕ್ತ.
ಪತ್ರಕರ್ತರಾಗಿ ನಾವು ಹಲವು ಸುದ್ದಿಗಳನ್ನು ವಿಶ್ಲೇಷಿಸುತ್ತೇವೆ. ಯಾವುದೋ ಒಂದು ರಾಜಕೀಯ ಬೆಳವಣಿಗೆ ನಡೆದಾಗ ಅದರ ಹಿಂದೆ ಯಾವುದೋ ದೊಡ್ಡ ‘ಅಂತಾರಾಷ್ಟ್ರೀಯ ಸಂಚು’ ಇದೆ ಎಂದು ಊಹಿಸುವ ಬದಲು, ಅದು ಸ್ಥಳೀಯ ಕಾರಣಗಳಿಗಾಗಿ ಅಥವಾ ವ್ಯಕ್ತಿಗತ ಹಿತಾಸಕ್ತಿಗಳಿಗಾಗಿ ನಡೆದಿರಬಹುದು ಎಂದು ಯೋಚಿಸಿದರೆ ಸುದ್ದಿಯ ನಿಖರತೆ ಹೆಚ್ಚುತ್ತದೆ. ಅತಿಯಾದ ಊಹೆಗಳು ಸುದ್ದಿಯನ್ನು ದಾರಿ ತಪ್ಪಿಸುತ್ತವೆ.
ಆಕಮ್ಸ್ ರೇಜರ್ ಅಂದರೆ ಸರಳವಾದದ್ದು ಯಾವಾಗಲೂ ಸರಿಯೇ ಆಗಿರುತ್ತದೆ ಎಂದಲ್ಲ. ಅದರ ಅರ್ಥವೇನೆಂದರೆ, ‘ಸರಿಯಾಗಿದೆ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆ ಗಳಿಲ್ಲದಿದ್ದಾಗ, ಸರಳವಾದದ್ದನ್ನೇ ಆಯ್ಕೆ ಮಾಡುವುದು ಸುರಕ್ಷಿತ’.
ಕೆಲವೊಮ್ಮೆ ಸತ್ಯವು ಸಂಕೀರ್ಣವಾಗಿರಬಹುದು, ಆದರೆ ಪುರಾವೆಗಳು ಸಿಗುವವರೆಗೂ ಸಂಕೀರ್ಣತೆಯ ಬೆನ್ನತ್ತಿ ಸಮಯ ವ್ಯರ್ಥ ಮಾಡುವುದು ಬೇಡ ಎನ್ನುತ್ತದೆ ಈ ಸಿದ್ಧಾಂತ. ಬದುಕು ನಾವು ಅಂದುಕೊಂಡಷ್ಟು ಸಂಕೀರ್ಣವಾಗಿಲ್ಲ, ನಮ್ಮ ಅನಗತ್ಯ ಊಹೆಗಳೇ ಅದನ್ನು ಸಂಕೀರ್ಣವಾಗಿಸಿವೆ.
ಪ್ಯಾರೆಟೋ ತತ್ವ
ಹಾಗೆಯೇ ಇನ್ನೊಂದು ಪದಬಳಕೆಯಿದೆ. ಅದು ಪ್ಯಾರೆಟೋ ತತ್ವ (Pareto Principle). ಇದನ್ನು 80/20 ಅಂತಾನೂ ಕರೆಯುತ್ತಾರೆ. 1896ರಲ್ಲಿ ಇಟಲಿಯ ಅರ್ಥಶಾಸ್ತ್ರಜ್ಞ ವಿಲ್-ಡೋ ಪ್ಯಾರೆಟೋ ಎಂಬುವವ ತನ್ನ ತೋಟದಲ್ಲಿ ಬಟಾಣಿ ಗಿಡಗಳನ್ನು ಗಮನಿಸುತ್ತಿದ್ದ. ಆಗ ಅವನಿಗೆ ಒಂದು ವಿಚಿತ್ರ ಸತ್ಯ ಗೋಚರವಾಯಿತು- ಅವನ ತೋಟದ ಒಟ್ಟು ಬಟಾಣಿ ಇಳುವರಿಯಲ್ಲಿ ಶೇ.80ರಷ್ಟು ಪಾಲು, ಕೇವಲ ಶೇ.20ರಷ್ಟು ಗಿಡಗಳಿಂದ ಬರುತ್ತಿತ್ತು!
ಇದನ್ನೇ ಅವನು ಇಟಲಿಯ ಆರ್ಥಿಕತೆಗೆ ಅನ್ವಯಿಸಿ ನೋಡಿದಾಗ, ಅಲ್ಲಿನ ಶೇ.80ರಷ್ಟು ಭೂಮಿ ಕೇವಲ ಶೇ.20ರಷ್ಟು ಜನರ ಕೈಯಲ್ಲಿದೆ ಎಂಬುದು ತಿಳಿಯಿತು. ಮುಂದೆ ಇದು ‘ಪ್ಯಾರೆಟೋ ಪ್ರಿನ್ಸಿಪಲ್ʼಎಂದು ಜಗತ್ತಿನಾದ್ಯಂತ ಪ್ರಖ್ಯಾತವಾಯಿತು.
ಸರಳವಾಗಿ ಹೇಳುವುದಾದರೆ, ‘ಜೀವನದ ಬಹುಪಾಲು ಫಲಿತಾಂಶಗಳು (Outputs) ಅತ್ಯಂತ ಕಡಿಮೆ ಸಂಖ್ಯೆಯ ಕಾರಣಗಳಿಂದ (Inputs) ಉಂಟಾಗುತ್ತವೆ’. ನಮ್ಮ ಶ್ರಮ ಮತ್ತು ಅದರ ಫಲಿತಾಂಶದ ನಡುವೆ ಒಂದು ಅಸಮತೋಲನವಿರುತ್ತದೆ.
ನಾವು ಮಾಡುವ ಎಲ್ಲ ಕೆಲಸಗಳೂ ಸಮಾನವಾದ ಪ್ರತಿಫಲ ನೀಡುವುದಿಲ್ಲ ಇಂದು ಹೇಳು ವಾಗ, ಅದನ್ನು ‘ಪ್ಯಾರೆಟೋ ತತ್ವ’ ಎಂದು ಹೇಳುತ್ತಾರೆ. ಯಾವುದೇ ಕಂಪನಿಯಲ್ಲಿ ಶೇ.80 ರಷ್ಟು ಲಾಭವು ಕೇವಲ ಶೇ.20ರಷ್ಟು ಪ್ರಮುಖ ಗ್ರಾಹಕರಿಂದ ಬರುತ್ತದೆ.
ದಿನವಿಡೀ ನೀವು ಮಾಡುವ ನೂರಾರು ಕೆಲಸಗಳಲ್ಲಿ, ಕೇವಲ ಶೇ.20ರಷ್ಟು ಕೆಲಸಗಳು ಮಾತ್ರ ನಿಮ್ಮ ವೃತ್ತಿಜೀವನದ ಯಶಸ್ಸಿಗೆ ಶೇ.80ರಷ್ಟು ಕೊಡುಗೆ ನೀಡುತ್ತವೆ. ಉಳಿದ ಶೇ.80 ರಷ್ಟು ಕೆಲಸಗಳು ಕೇವಲ ‘ಅಗತ್ಯ’ ಎನಿಸುವ ಸಣ್ಣಪುಟ್ಟ ಕೆಲಸಗಳಾಗಿರುತ್ತವೆ.
ನೀವು ಒಂದು ದೇಶಕ್ಕೆ ಹೋದಾಗ ಅಲ್ಲಿನ ನೂರಾರು ಪ್ರವಾಸಿ ತಾಣಗಳ ಪೈಕಿ, ಕೇವಲ ಶೇ. 20ರಷ್ಟು ತಾಣಗಳು ನಿಮಗೆ ಶೇ.80ರಷ್ಟು ಸಂತೋಷ ಮತ್ತು ನೆನಪುಗಳನ್ನು ನೀಡುತ್ತವೆ.
ಈ ತತ್ವವನ್ನು ಹೇಗೆ ಬಳಸಿಕೊಳ್ಳಬೇಕು?
ನಿಮ್ಮ ದಿನನಿತ್ಯದ ಕೆಲಸಗಳ ಪಟ್ಟಿಯಲ್ಲಿ (To-do list) ಯಾವ ಎರಡು ಕೆಲಸಗಳು ನಿಮ್ಮ ದಿನದ ಯಶಸ್ಸನ್ನು ನಿರ್ಧರಿಸುತ್ತವೆ ಎಂದು ನೋಡಿ. ಆ ಶೇ.20ಕ್ಕೆ ಹೆಚ್ಚು ಶಕ್ತಿ ವ್ಯಯಿಸಿ. ಫಲಿತಾಂಶ ನೀಡದ ಶೇ.80ರಷ್ಟು ಕೆಲಸಗಳನ್ನು ಬೇರೆಯವರಿಗೆ ವಹಿಸಿ (Delegate) ಅಥವಾ ಅವುಗಳಿಗೆ ಕಡಿಮೆ ಸಮಯ ನೀಡಿ. ಕೆಲವೊಮ್ಮೆ ಕೆಲಸವನ್ನು ಶೇ.80ರಷ್ಟು ಉತ್ತಮವಾಗಿ ಮಾಡಲು ಶೇ.20ರಷ್ಟು ಸಮಯ ಸಾಕಾಗುತ್ತದೆ.
ಉಳಿದ ಶೇ.20ರಷ್ಟು ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಲು ನಾವು ಶೇ.80ರಷ್ಟು ಸಮಯ ವ್ಯರ್ಥ ಮಾಡುತ್ತೇವೆ. ಇದನ್ನು ತಪ್ಪಿಸಬೇಕು. ಪ್ಯಾರೆಟೋ ತತ್ವ ಎಂದರೆ ಶೇ.80ರಷ್ಟು ಕೆಲಸ ಮಾಡಬಾರದು ಎಂದಲ್ಲ. ಬದಲಿಗೆ, ಯಾವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಿರ್ಧರಿಸುವ ದಿಕ್ಸೂಚಿ ಇದು.
ಸಂಖ್ಯೆಗಳು ಯಾವಾಗಲೂ 80 ಮತ್ತು 20 ಆಗಿರಬೇಕಿಲ್ಲ. ಅದು 70/30 ಅಥವಾ 90/10 ಕೂಡ ಆಗಿರಬಹುದು. ಸಾರಾಂಶವೆಂದರೆ, ‘ಇನ್‌ಪುಟ’ ಮತ್ತು ‘ಔಟ್‌ಪುಟ್’ ನಡುವಿನ ಅಸಮಾನತೆಯನ್ನು ಅರಿಯುವುದು. ನೀವು ನಿಮ್ಮ ಕಪಾಟಿನಲ್ಲಿರುವ ಶೇ.80ರಷ್ಟು ಬಟ್ಟೆ ಗಳನ್ನು ಕೇವಲ ಶೇ.20ರಷ್ಟು ಸಂದರ್ಭಗಳಲ್ಲಿ ಮಾತ್ರ ಧರಿಸುತ್ತೀರಿ! ಇದು ‘ಪ್ಯಾರೆಟೋ ತತ್ವ’.
‘ಸಂಕ್ ಕಾ ಫಾಲಸಿ’ ಎಂದರೇನು?
‘ಸಂಕ್ ಕಾ ಫಾಲಸಿ’ (Sunk Cost Fallacy) ಅಥವಾ ‘ವ್ಯರ್ಥ ವೆಚ್ಚದ ಭ್ರಮೆ’ ಎಂಬ ಪದ ಬಳಕೆಯಿದೆ. ಒಂದು ಸಿನಿಮಾವನ್ನು ಅರ್ಧ ನೋಡಿದ ಮೇಲೆ ತುಂಬಾ ಬೋರ್ ಅನಿಸಿ ದರೂ, ‘ಟಿಕೆಟ್ ದುಡ್ಡು ಕೊಟ್ಟಿದ್ದೇನಲ್ಲ’ ಎಂದು ಪೂರ್ತಿ ನೋಡುವುದು ಅಥವಾ ಲಾಭ ಕೊಡದ ಉದ್ಯಮಕ್ಕೆ ಈಗಾಗಲೇ ಹೂಡಿದ ಹಣದ ಮೇಲಿನ ವ್ಯಾಮೋಹದಿಂದ ಮತ್ತೆ ಮತ್ತೆ ಹಣ ಸುರಿಯುವುದಕ್ಕೆ ‘ಸಂಕ್ ಕಾ ಫಾಲಸಿ’ ಅಂತಾರೆ.
‘ಸಂಕ್ ಕಾ’ ಎಂದರೆ ಏನು? ಅರ್ಥಶಾಸದಲ್ಲಿ ‘ಸಂಕ್ ಕಾ’ ಎಂದರೆ ಈಗಾಗಲೇ ಖರ್ಚಾಗಿ ಹೋದ ಮತ್ತು ಯಾವುದೇ ಕಾರಣಕ್ಕೂ ಮರಳಿ ಪಡೆಯಲು ಸಾಧ್ಯವಿಲ್ಲದ ಹಣ ಅಥವಾ ಸಂಪನ್ಮೂಲ ಎಂದರ್ಥ. ಉದಾಹರಣೆಗೆ, ನೀವು ತಿಂದ ಆಹಾರದ ಬಿಲ್ ಅಥವಾ ನೋಡಿದ ಸಿನಿಮಾದ ಟಿಕೆಟ್ ದರ. ಈ ಹಣವನ್ನು ನೀವು ಏನು ಮಾಡಿದರೂ ವಾಪಸ್ ಪಡೆಯಲು ಸಾಧ್ಯವಿಲ್ಲ.
‘ನಾನು ಈಗಾಗಲೇ ಇದಕ್ಕೆ ಇಷ್ಟೊಂದು ಹಣ ಸುರಿದಿದ್ದೇನೆ, ಈಗ ಇದನ್ನು ಅರ್ಧಕ್ಕೆ ಬಿಟ್ಟರೆ ಅದೆಲ್ಲ ವ್ಯರ್ಥವಾಗುತ್ತದಲ್ಲ’ ಎಂಬ ಆಲೋಚನೆಯೇ ಈ ಭ್ರಮೆಗೆ ಮೂಲ. ‘ಹೋದದ್ದು ಹೋಯಿತು, ಇನ್ನು ಮುಂದಿನದನ್ನು ಉಳಿಸಿಕೊಳ್ಳೋಣ’ ಎನ್ನುವ ಬದಲು ‘ಹೋದ ದ್ದನ್ನು ಉಳಿಸಿಕೊಳ್ಳಲು ಇನ್ನಷ್ಟು ಕಳೆದುಕೊಳ್ಳೋಣ’ ಎನ್ನುವ ತಪ್ಪು ನಿರ್ಧಾರವಿದು.
ಕೆಲವು ಸ್ನೇಹ ಅಥವಾ ಸಂಬಂಧಗಳು ನಮಗೆ ಮಾನಸಿಕ ನೆಮ್ಮದಿ ನೀಡುತ್ತಿರುವುದಿಲ್ಲ. ಆದರೆ ‘ನಾವು ಹತ್ತು ವರ್ಷಗಳಿಂದ ಸ್ನೇಹಿತರಾಗಿದ್ದೇವಲ್ಲ’ ಎಂಬ ಹಳೆಯ ಹೂಡಿಕೆಯ ಕಾರಣಕ್ಕೆ ಆ ಕಹಿ ಸಂಬಂಧವನ್ನು ಎಳೆಯುತ್ತಲೇ ಇರುತ್ತೇವೆ. ಲಾಭ ತರದ ಉದ್ಯಮವನ್ನು ‘ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ’ ಎಂಬ ಕಾರಣಕ್ಕೆ ಮುಂದುವರಿಸುವು ದರಲ್ಲಿ ಅರ್ಥವಿಲ್ಲ.
ತಪ್ಪು ಹೂಡಿಕೆ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವುದು ಸೋಲಲ್ಲ, ಅದು ಬುದ್ಧಿವಂತಿಕೆ. ಹಡಗು ಮುಳುಗುತ್ತಿದೆ ಎಂದು ತಿಳಿದಾಗ, ನೀವು ಈ ಹಿಂದೆ ಅದಕ್ಕೆ ಎಷ್ಟು ಬಣ್ಣ ಹಚ್ಚಿದ್ದೀರಿ ಎಂಬುದು ಮುಖ್ಯವಾಗುವುದಿಲ್ಲ. ತಕ್ಷಣ ದೋಣಿಯಿಂದ ಇಳಿದು ಜೀವ ಉಳಿಸಿ ಕೊಳ್ಳುವುದು ಮುಖ್ಯವಾಗುತ್ತದೆ.