ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ಬಳಿಯ ಗೋವು ಗಂಗೆಯ ಬೀಡು ಗಂಟಿಹೊಳೆಯವರಾದ ಗುರುರಾಜ್ ಗಂಟಿಹೊಳೆ ಅವರು ಪ್ರಾಥಮಿಕ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಿನ ಆಸುಪಾಸಿನ ಸರಕಾರಿ ಶಾಲಾ ಕಾಲೇಜಿನಲ್ಲಿ ಪೂರೈಸಿದ ನಂತರ ಉನ್ನತ ಶಿಕ್ಷಣದ ಭಾಗವಾಗಿ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಮೂಲತಃ ಕೃಷಿ ಕುಟುಂಬದಿಂದ ಬಂದ ಅವರ ತಂದೆ-ತಾಯಿ ಅಪ್ಪಟ ಹಳ್ಳಿಯ ರೈತರು. ಗೆಳೆಯರಲ್ಲ ಗೆಳೆಯರ ಬಳಗವೇ ಇತ್ತು. ಇವರ ಬದುಕು ಸಂತಸದಿಂದ ಕೂಡಿದ್ದು, ಇದಕ್ಕೆ ಅರ್ಥಪೂರ್ಣತೆ ತಂದವರು ಸ್ನೇಹಿತರು ಹಾಗೂ ಹಿತೈಷಿಗಳು. ರಾಜಕೀಯಕ್ಕಿಳಿದ ಮೇಲೆ ಮನಸ್ಸು ತುಡಿದದ್ದು ನಮ್ಮಲ್ಲಿ ಎಷ್ಟು ಎಷ್ಟು ಬಗೆಯ ಯೋಜನೆಗಳು, ಅವುಗಳ ಅನುಷ್ಠಾನಕ್ಕೆ ಇರುವ ತೊಡಕುಗಳು, ಹೈರಾಣಾಗುವ ಫಲಾನುಭವಿಗಳು, ಅಭಿವೃದ್ಧಿಯ ಹೆಸರಿನಲ್ಲಿ ಆಗುವ ಅನಾಹುತಗಳು. ಹೀಗೆ ಹಲವು ಆಯಾಮದ ಯೋಚನೆಗಳ ಕುರಿತ ಕಂತೆ ಕಂತೆ ಆಲೋಚನೆಗಳ ಅಂಕಣ ಬರಹವೇ "ಗಂಟಾಘೋಷ" ವಾಗಿ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟ ವಾಗುತ್ತಿದೆ. ಗಂಟಾಘೋಷವು ಆರಂಭದ ಹೆಜ್ಜೆಯಾಗಿದೆ.
ಅಂಕಣ ಬರಹವನ್ನು ಓದಿ ವಿಮರ್ಶಿಸಿ ಹುರಿದುಂಬಿಸಿದ ಮನಸ್ಸುಗಳಿಗೆ, ಬರೆಯಲು ಅವಕಾಶ ಕಲ್ಪಿಸಿದ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟರಿಗೆ, ಅಂಕಣ ಬರಹ ಬರೆಯಲು ಸಹಕರಿಸಿ, ಪ್ರತಿ ವಾರದ ವಿಷಯದ ಕುರಿತು ಕ್ಲಪ್ತ ಸಮಯದಲ್ಲಿ ಸಲಹೆ ಸಹಕಾರ ನೀಡಿದ ನನ್ನೆಲ್ಲ ಸಾಹಿತ್ಯ ಒಡನಾಡಿಗಳಿಗೆ ನನ್ನ ಪ್ರೀತಿಯ ವಂದನೆಗಳು. ಈ ಅಂಕಣ ಬರಹವನ್ನು ಒಟ್ಟಾಗಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸು ತ್ತಿರುವ " ವಿಶ್ವವಾಣಿ ಪುಸ್ತಕ " ದವರಿಗೆ ನಾನು ಆಭಾರಿ. ಓದುಗರಾದ ನೀವೆಲ್ಲ ಎಂದಿನಂತೆ ಜತೆಗಿದ್ದೀರಿ. ಈ ಒಲವು ಸ್ನೇಹ ,ಪ್ರೀತಿ ಹೀಗೆ ಇರಲಿ... ಅದೇ ನನಗೆ ದೊಡ್ಡ ಇನಾಮು..
ವಿಳಾಸ: ಪ್ರೇಮಾಶ್ರಯ ಗಂಟಿಹೊಳೆ, ಬಿಜೂರು, ಬೈಂದೂರು ತಾಲೂಕು, ಉಡುಪಿ ಜಿಲ್ಲೆ –576232