ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

General Asim Munir: ಅಮೆರಿಕ-ಪಾಕಿಸ್ತಾನ ಭಾಯ್‌ ಭಾಯ್‌! ಉಗ್ರ ಪೋಷಕ ಪಾಕ್‌ನ ಸೇನಾ ಮುಖ್ಯಸ್ಥನಿಗೆ ದೊಡ್ಡಣ್ಣನ ಆಹ್ವಾನ

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ವಾಷಿಂಗ್ಟನ್‌ನ ಆಹ್ವಾನದ ಮೇರೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಯುಎಸ್ ಸೈನ್ಯದ 250 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಈ ವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 79 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಪಾಕ್ ಸೇನಾ ಮುಖ್ಯಸ್ಥ ಮುನೀರ್‌ಗೆ ಅಮೆರಿಕೆ ಆಹ್ವಾನ

ಇಸ್ಲಾಮಾಬಾದ್: ವಾಷಿಂಗ್ಟನ್ (Washington) ನಲ್ಲಿ ನಡೆಯಲಿರುವ ಯುಎಸ್ ಮಿಲಿಟರಿ ಮೆರವಣಿಗೆಯಲ್ಲಿ (US military parade) ಪಾಲ್ಗೊಳ್ಳಲು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ (Pakistani Army Chief General Asim Munir) ಗೆ ಅಹ್ವಾನ ನೀಡಲಾಗಿದೆ. ಜೂನ್ 14 ರಂದು ವಾಷಿಂಗ್ಟನ್‌ನಲ್ಲಿ ನಡೆಯಲಿರುವ ಯುಎಸ್ ಮಿಲಿಟರಿ ಮೆರವಣಿಗೆಯಲ್ಲಿ ತಾವು ಉಪಸ್ಥಿತರಿರುವುದಾಗಿ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ದೃಢಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ವಿದೇಶಾಂಗ ಇಲಾಖೆ ಮತ್ತು ಪೆಂಟಗನ್‌ನ ಅಧಿಕಾರಿಗಳನ್ನು ಭೇಟಿ ಮಾಡುವ ನೀರಿಕ್ಷೆ ಇದೆ ಎನ್ನಲಾಗಿದೆ.

ವಾಷಿಂಗ್ಟನ್‌ನ ಆಹ್ವಾನದ ಮೇರೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಯುಎಸ್ ಸೈನ್ಯದ 250 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಈ ವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 79 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ಅಮೆರಿಕ ಈಗ ಮುನೀರ್ ಗೆ ಅಹ್ವಾನ ನೀಡಿದೆ.

ಈ ಭೇಟಿಯ ವೇಳೆ ಮುನೀರ್ ಯುಎಸ್ ನ ವಿದೇಶಾಂಗ ಇಲಾಖೆ ಮತ್ತು ಪೆಂಟಗನ್‌ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಯುಎಸ್ ಸೆಂಟ್ರಲ್ ಕಮಾಂಡ್ ನ ಮುಖ್ಯಸ್ಥ ಜನರಲ್ ಮೈಕೆಲ್ ಕುರಿಲ್ಲಾ ಅವರು ಇತ್ತೀಚೆಗೆ ಮುನೀರ್ ಅವರನ್ನು ಹೊಗಳಿದ್ದು, ಭಯೋತ್ಪಾದನೆ ನಿಗ್ರಹ ಮಾಡುವಲ್ಲಿ ಪಾಕಿಸ್ತಾನ ಅದ್ಭುತ ಕೊಡುಗೆ ನೀಡುತ್ತಿದೆ ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳ ಬಳಿಕ ಮುನೀರ್ ಗೆ ಅಮೆರಿಕದಿಂದ ಅಹ್ವಾನ ಸಿಕ್ಕಿದೆ.

ಅಮೆರಿಕವು ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳೊಂದಿಗೆ ಬಲವಾದ ಸಂಬಂಧವನ್ನು ಬಯಸುತ್ತಿದೆ. ಒಂದು ರಾಷ್ಟ್ರದೊಂದಿಗಿನ ಸಂಬಂಧ ಇನ್ನೊಂದು ರಾಷ್ಟ್ರದೊಂದಿಗಿನ ಸಂಬಂಧಕ್ಕೆ ತಡೆಯಾಗುವುದಿಲ್ಲ ಎಂದು ಈ ಸಂದರ್ಭದಲ್ಲಿ ಕುರಿಲ್ಲಾ ಉಲ್ಲೇಖಿಸಿದ್ದರು. ಮುನೀರ್ ಭೇಟಿಯ ಸಂದರ್ಭದಲ್ಲಿ ಯುಎಸ್ ಸೆಂಟ್ರಲ್ ಕಮಾಂಡ್ ಗೂ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಯಾಕೆಂದರೆ ಮುನೀರ್ ಮತ್ತು ಜನರಲ್ ಕುರಿಲ್ಲಾ ಕಳೆದ ಎರಡು ವರ್ಷಗಳ ಅವಧಿಯಲ್ಲಿ 3 ಬಾರಿ ಭೇಟಿಯಾಗಿದ್ದಾರೆ. ಹೀಗಾಗಿ ಇವರಿಬ್ಬರು ಮತ್ತೆ ಭೇಟಿಯಾದರೂ ಅಚ್ಚರಿಯಿಲ್ಲ ಎನ್ನುತ್ತಾರೆ ವಿಶ್ಲೇಷಕರು.

ವಿಶ್ವದ ಎಲ್ಲ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿರುವ ಅಮೆರಿಕ ಈಗ ಮುನೀರ್ ಗೆ ಅಹ್ವಾನ ನೀಡಿ ತನ್ನ ಹಳೆಯ ಆಟವನ್ನು ಮತ್ತೆ ಆಡಲು ಶುರು ಮಾಡಿದೆ. ಚೀನಾದೊಂದಿಗೆ ಬೆಳೆಯುತ್ತಿರುವ ಉದ್ವಿಗ್ನತೆಯನ್ನು ಎದುರಿಸಲು ಅದರ ಮಿತ್ರರಾಷ್ಟ್ರವಾದ ಪಾಕಿಸ್ತಾನವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ಅದು ಭಾರತದೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ನಡುವೆ ಮುನೀರ್ ಗೆ ಅಹ್ವಾನ ಸಿಕ್ಕಿರುವುದು ಎರಡು ರಾಷ್ಟ್ರಗಳ ನಡುವೆ ನಡೆಯಬಹುದಾಗಿದ್ದ ಪರಮಾಣು ಯುದ್ಧವನ್ನು ತಡೆದಿದ್ದೇ ತಾನು ಎನ್ನುತ್ತಿರುವ ಟ್ರಂಪ್ ಹೇಳಿಕೆಗಳಿಗೆ ಅಧಿಕೃತ ಮುದ್ರೆಯೊತ್ತಲು ಈ ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ ಎನ್ನುತ್ತಾರೆ ವಿಶ್ಲೇಷಕರು. ಅಧಿಕಾರ ವಹಿಸಿಕೊಂಡ ತಮ್ಮ ಮೊದಲ ಅವಧಿಯಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಟ್ರಂಪ್ ಇಸ್ಲಾಮಾಬಾದ್ ಅನ್ನು ಟೀಕಿಸಿದ್ದರು. ಆದರೆ ಈ ಬಾರಿ ಅವರ ನಡೆ ಪಾಕಿಸ್ತಾನ ಪರವಾಗಿ ಇದ್ದಂತಿದೆ.

ಮುನೀರ್ ಆಹ್ವಾನಕ್ಕೆ ಸಾಮಾಜಿಕಜಾಲತಾಣವಾದ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್, ಮುನೀರ್‌ಗೆ ಅಮೆರಿಕದ ಆಹ್ವಾನವು ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಹಿನ್ನಡೆ ಎಂದು ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕೆಲವು ದಿನಗಳ ಮೊದಲು ಉದ್ರೇಕಕಾರಿ ಮತ್ತು ಪ್ರಚೋದನಕಾರಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ ಮುನೀರ್. ಅಮೆರಿಕ ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Ahmedabad Plane Crash: ಪತನಗೊಂಡ ವಿಮಾನದಲ್ಲಿದ್ರು ಗುಜರಾತ್‌ನ ಮಾಜಿ ಸಿಎಂ!

ಮುನೀರ್ ಆಗಮನಕ್ಕೆ ವಾಷಿಂಗ್ಟನ್ ನಲ್ಲಿರುವ ಪಾಕಿಸ್ತಾನಿಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಈ ಸಂದರ್ಭದಲ್ಲಿ ಯುಎಸ್ ರಾಜಧಾನಿಯಲ್ಲಿ ಪ್ರತಿಭಟನೆಗೆ ಮುಂದಾಗಿದೆ. ಈ ಕುರಿತು ಟ್ವಿಟ್ ಮಾಡಿರುವ ಪಿಟಿಐನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸಜ್ಜದ್ ಬುರ್ಕಿ, ಈ ಸರ್ಕಾರದೊಂದಿಗಿನ ಯಾವುದೇ ಒಪ್ಪಂದವು ಪಾಕಿಸ್ತಾನದ ಜನರಿಗೆ ಸ್ವೀಕಾರಾರ್ಹವಲ್ಲ ಎಂದು ಶ್ವೇತಭವನಕ್ಕೆ ತಿಳಿಸಿ ಎಂದು ಹೇಳಿದ್ದಾರೆ. ಇದರೊಂದಿಗೆ ಅವರು ಜೂನ್ 14 ರಂದು ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಹೊರಗೆ ನಡೆಯಲಿರುವ ಪ್ರತಿಭಟನೆಯಲ್ಲಿ ಅಮೆರಿಕದಲ್ಲಿರುವ ಪಾಕಿಸ್ತಾನಿಯರು ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.