ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದಲ್ಲಿ ಲಾಕ್‌ಡೌನ್‌ ಪರಿಸ್ಥಿತಿ: ವಾಹನ ಖರೀದಿಗೆ ನಿಷೇಧ, ಇಂಧನ ಬಳಕೆ ಶೇ.50 ಕಡಿತ, ಮದುವೆ, ಪ್ರವಾಸಕ್ಕೆ ಹೊಸ ರೂಲ್ಸ್‌

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಹಾರ್ಮುಜ್ ಮತ್ತು ಕೆಂಪು ಸಮುದ್ರದ ಸಾಗರ ಮಾರ್ಗಗಳಲ್ಲಿನ ಅಡಚಣೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಹೊಸ ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರಿ ವಾಹನಗಳ ಖರೀದಿಗೆ ಸಂಪೂರ್ಣ ನಿಷೇಧ, ಅಧಿಕೃತ ವಾಹನಗಳ ಇಂಧನ ಹಂಚಿಕೆಯಲ್ಲಿ ಶೇ.50ರಷ್ಟು ಕಡಿತ ಹಾಗೂ ಸರ್ಕಾರಿ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಮೂರು ತಿಂಗಳ ನಿರ್ಬಂಧ ವಿಧಿಸಲಾಗಿದೆ. ಮದುವೆ ಸಮಾರಂಭಗಳಲ್ಲಿ ಒಂದೇ ಖಾದ್ಯ ನೀಡುವ ನಿಯಮ ಜಾರಿಗೆ ತರಲಾಗಿದ್ದು, ಅಂಗಡಿಗಳು ರಾತ್ರಿ 9 ಗಂಟೆಗೆ ಮತ್ತು ಮದುವೆ ಹಾಲ್‌ಗಳು ರಾತ್ರಿ 10 ಗಂಟೆಗೆ ಮುಚ್ಚುವಂತೆ ಸೂಚಿಸಲಾಗಿದೆ.

ನೆಲಕಚ್ಚಿದ ಆರ್ಥಿಕ ಸ್ಥತಿ; ಪಾಕಿಸ್ತಾನದಲ್ಲಿ ಲಾಕ್‌ಡೌನ್‌ ಪರಿಸ್ಥಿತಿ

ಸಾಂದರ್ಭಿಕ ಚಿತ್ರ -

Profile
Sushmitha Jain Sep 18, 2026 8:11 PM

ಇಸ್ಲಾಮಾಬಾದ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಹಾರ್ಮುಜ್ ಜಲಸಂಧಿ (Strait of Hormuz) ಹಾಗೂ ಕೆಂಪು ಸಮುದ್ರದ ಮಾರ್ಗಗಳಲ್ಲಿ ಉಂಟಾಗಿರುವ ಅಡಚಣೆಗಳ ಹಿನ್ನೆಲೆಯಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲು ಪಾಕಿಸ್ತಾನ ಸರ್ಕಾರ ಹೊಸ ಮಿತವ್ಯಯ ಮತ್ತು ಇಂಧನ ಸಂರಕ್ಷಣಾ ಕ್ರಮಗಳನ್ನು (Austerity and Fuel Conservation Measures) ಜಾರಿಗೆ ತಂದಿದೆ. ಸೆಪ್ಟೆಂಬರ್ 17ರಂದು ಕ್ಯಾಬಿನೆಟ್ ವಿಭಾಗ ಹೊರಡಿಸಿದ ಅಧಿಸೂಚನೆಯಂತೆ ಈ ಕ್ರಮಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ಹೊಸ ಕ್ರಮಗಳ ಅಡಿಯಲ್ಲಿ ಸರ್ಕಾರಿ ವಾಹನಗಳಿಗೆ ಇಂಧನ ಹಂಚಿಕೆಯಲ್ಲಿ ಶೇ.50ರಷ್ಟು ಕಡಿತ ಮಾಡಲಾಗಿದ್ದು, ಈ ನಿರ್ಬಂಧ ಮೂರು ತಿಂಗಳ ಕಾಲ ಜಾರಿಯಲ್ಲಿರಲಿದೆ. ಸೇನೆ, ಕಾನೂನು ಜಾರಿ ಸಂಸ್ಥೆಗಳು ಹಾಗೂ ಅಗತ್ಯ ಸೇವೆಗಳ ಕಾರ್ಯಾಚರಣಾ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಅಭಿವೃದ್ಧಿ ಯೋಜನೆಗಳಿಗೂ ಈ ಇಂಧನ ಕಡಿತ ಅನ್ವಯಿಸುವುದಿಲ್ಲ.

ಇದರ ಜೊತೆಗೆ ಎಲ್ಲಾ ರೀತಿಯ ಸರ್ಕಾರಿ ವಾಹನಗಳ ಖರೀದಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಖರೀದಿಗಳನ್ನು ಹೊರತುಪಡಿಸಿ ಇತರ ಬಾಳಿಕೆ ಬರುವ ವಸ್ತುಗಳ ಖರೀದಿಗೂ ನಿರ್ಬಂಧ ವಿಧಿಸಲಾಗಿದೆ. ಸರ್ಕಾರಿ ಕಚೇರಿಗಳ ನೌಕರರಲ್ಲದ ವೆಚ್ಚದಲ್ಲಿ 2026–27ರ ಹಣಕಾಸು ವರ್ಷದಲ್ಲಿ ಪ್ರತಿ ತಿಂಗಳು ಶೇ.5ರಷ್ಟು ಕಡಿತ ಮಾಡಲು ಸೂಚಿಸಲಾಗಿದೆ.

ಸರ್ಕಾರಿ ಅಧಿಕಾರಿಗಳ ವಿದೇಶ ಪ್ರವಾಸಕ್ಕೂ ಮೂರು ತಿಂಗಳ ನಿರ್ಬಂಧ ಹೇರಲಾಗಿದೆ. ಕೆಲವು ನಿರ್ದಿಷ್ಟ ವಿನಾಯಿತಿಗಳನ್ನು ಹೊರತುಪಡಿಸಿ ವಿದೇಶ ಪ್ರವಾಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಸಚಿವರು, ಸಲಹೆಗಾರರು ಹಾಗೂ ಇತರ ಅಧಿಕಾರಿಗಳು ಎಕಾನಮಿ ಕ್ಲಾಸ್‌ನಲ್ಲಿ ಮಾತ್ರ ಪ್ರಯಾಣಿಸಬೇಕು ಎಂದು ಸೂಚಿಸಲಾಗಿದೆ. ಸರ್ಕಾರಿ ಸಭೆಗಳನ್ನು ಸಾಧ್ಯವಾದಷ್ಟು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವಂತೆ ಸೂಚಿಸಲಾಗಿದ್ದು, ಸರ್ಕಾರಿ ವೆಚ್ಚದ ಸೆಮಿನಾರ್, ತರಬೇತಿ ಹಾಗೂ ಸಮ್ಮೇಳನಗಳ ಮೇಲೂ ನಿರ್ಬಂಧ ಹೇರಲಾಗಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಆತಂಕ: ಭಾರತೀಯ ಸಿಬ್ಬಂದಿಯಿದ್ದ ಎರಡು ಹಡಗುಗಳ ಮೇಲೆ ದಾಳಿ

ಮದುವೆ ಸಮಾರಂಭಗಳಲ್ಲಿಯೂ ಒಂದು ಖಾದ್ಯ ಮಾತ್ರ ನೀಡುವ ನಿಯಮ ಜಾರಿಗೆ ತರಲಾಗಿದೆ. ಇಂಧನ ಬಳಕೆ ಮತ್ತು ಅನಗತ್ಯ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ವ್ಯಾಪಾರ ಸಂಸ್ಥೆಗಳ ಕೆಲಸದ ಸಮಯದಲ್ಲಿಯೂ ನಿರ್ಬಂಧ ಮುಂದುವರಿಯಲಿದೆ. ಅಂಗಡಿಗಳು, ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳು ರಾತ್ರಿ 9 ಗಂಟೆಗೆ, ಮದುವೆ ಹಾಲ್‌ಗಳು ಮತ್ತು ಇತರ ಸಮಾರಂಭದ ಸ್ಥಳಗಳು ರಾತ್ರಿ 10 ಗಂಟೆಗೆ, ರೆಸ್ಟೋರೆಂಟ್‌ಗಳು, ಕೆಫೆಗಳು ಹಾಗೂ ಆಹಾರ ಮಳಿಗೆಗಳು ರಾತ್ರಿ 11 ಗಂಟೆಗೆ ಮುಚ್ಚಬೇಕು. ಟೇಕ್‌ಅವೇ ಮತ್ತು ಹೋಮ್ ಡೆಲಿವರಿ ಸೇವೆಗಳಿಗೆ ಈ ಸಮಯದ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಆದರೆ ಆಸ್ಪತ್ರೆಗಳು, ಔಷಧ ಅಂಗಡಿಗಳು, ಕ್ಲಿನಿಕ್‌ಗಳು, ಪ್ರಯೋಗಾಲಯಗಳು, ಇಂಧನ ಮತ್ತು CNG ಕೇಂದ್ರಗಳು, ಬೇಕರಿಗಳು, ಹಾಲು ಮತ್ತು ಡೈರಿ ಅಂಗಡಿಗಳು, ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು, ಜಿಮ್‌ಗಳು, ಕ್ರೀಡಾ ಸೌಲಭ್ಯಗಳು, IT ಕಂಪನಿಗಳು ಮತ್ತು ಕಾಲ್ ಸೆಂಟರ್‌ಗಳಿಗೆ ಸಮಯದ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ಇಂಧನ ಪೂರೈಕೆ ಮತ್ತು ಸಾಗಣೆ ಮಾರ್ಗಗಳ ಮೇಲೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಈ ಕ್ರಮಗಳನ್ನು ಕೈಗೊಂಡಿದೆ. ಇದೇ ವರ್ಷದ ಮಾರ್ಚ್‌ನಲ್ಲಿಯೂ ಪಾಕಿಸ್ತಾನ ಸರ್ಕಾರ ಇಂತಹ ಇಂಧನ ಸಂರಕ್ಷಣಾ ಹಾಗೂ ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದಿತ್ತು.