Color blindness: ಗಂಡಸರಿಗೆ ಬಣ್ಣಗಳೇಕೆ ತಿಳಿಯುವುದಿಲ್ಲ? ಇದಕ್ಕೆ ವಿಜ್ಞಾನ ಏನೆನ್ನುತ್ತದೆ?
ಕೆಲವು ಬಣ್ಣಗಳನ್ನು ಗುರುತಿಸುವ, ಅದರಲ್ಲೂ ಮುಖ್ಯವಾಗಿ ಕೆಂಪು, ಹಸಿರು ಮತ್ತು ನೀಲಿ ವರ್ಣಗಳನ್ನು ಗುರುತಿಸುವ ಸಾಮರ್ಥ್ಯ ಕುಂಠಿತವಾಗಿರುವ ಗಂಡಸರ ಸಂಖ್ಯೆ, ಹೆಂಗಸರಿಗಿಂತ ಹೆಚ್ಚು. ಅಂದರೆ, ಗಂಡಸರಲ್ಲಿ ಬಣ್ಣ ಕುರುಡುತನ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಹೌದು ಎನ್ನುತ್ತದೆ ವಿಜ್ಞಾನ. ಆದರೆ ಹೆಚ್ಚಿನ ಜನರಿಗೆ ತಮಗೆ ಕೆಲವು ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯವಿಲ್ಲ ಎನ್ನುವುದು ಗೊತ್ತಿರುವುದಿಲ್ಲ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಸೀರೆ ಅಂಗಡಿಯ ದೃಶ್ಯ. ಶ್ರೀಮತಿಯವರು ಸೀರೆ ಯೊಂದನ್ನು ತೋರಿಸಿ, ʻಇದು ಹೇಗಿದೆ?ʼ ಎನ್ನುತ್ತಾರೆ. ʻಆಗಲಿಂದ ಬರೀ ಕೆಂಪು ಸೀರೆನೇ ತೆಗೀತಾ ಇದೀಯಲ್ಲ, ಈ ಅಂಗಡೀಲಿ ಬೇರೆ ಬಣ್ಣ ಇಲ್ವಾ?ʼ ಅಂತ ಯಜಮಾನರು ಕೇಳುತ್ತಾರೆ. ʻಏನ್ರೀ, ಕೇಸರಿ, ಗುಲಾಬಿ, ಕಂದು, ಮರೂನ್, ಮೆಜೆಂಟಾ… ಯಾವ ಬಣ್ಣ ತೋರ್ಸಿದ್ರೂ ಕೆಂಪು ಅಂತೀರಲ್ಲಾ? ಬಣ್ಣನೇ ಗೊತ್ತಾಗಲ್ವಾ!ʼ ಎಂದು ಶ್ರೀಮತಿಯವರು ಮೂದ ಲಿಸುತ್ತಾರೆ. ಇದು ಕೇವಲ ಸೀರೆ ಅಂಗಡಿಯ ದೃಶ್ಯವಲ್ಲ, ಬಣ್ಣಗಳನ್ನು ತಪ್ಪಾಗಿ ಗುರುತಿಸುವ ಗಂಡಸರು ಲೋಕದೆಲ್ಲೆಡೆ ಇದ್ದಾರೆ. ನೀಲಿ ಬಣ್ಣದ ಡಬ್ಬಿ ಎಂದರೆ ಕಂದು ಬಣ್ಣದ ಡಬ್ಬಿ ಹುಡುಕುವ ಗಂಡಸ ರನ್ನು ನೋಡಿ ತಲೆ ಚಚ್ಚಿಕೊಳ್ಳುವ ಹೆಂಗಸರನ್ನು ಕಂಡಾಗ ಬರುವ ಸಹಜ ಪ್ರಶ್ನೆಯೆಂದರೆ, ಈ ಗಂಡಸರಿಗೆ ಬಣ್ಣಗಳೇಕೆ ತಿಳಿಯುವುದಿಲ್ಲ? ಇದಕ್ಕೆ ವಿಜ್ಞಾನ ಏನೆನ್ನುತ್ತದೆ?
ಕೆಲವು ಬಣ್ಣಗಳನ್ನು ಗುರುತಿಸುವ, ಅದರಲ್ಲೂ ಮುಖ್ಯವಾಗಿ ಕೆಂಪು, ಹಸಿರು ಮತ್ತು ನೀಲಿ ವರ್ಣಗಳನ್ನು ಗುರುತಿಸುವ ಸಾಮರ್ಥ್ಯ ಕುಂಠಿತ ವಾಗಿರುವ ಗಂಡಸರ ಸಂಖ್ಯೆ, ಹೆಂಗಸರಿಗಿಂತ ಹೆಚ್ಚು. ಅಂದರೆ, ಗಂಡಸ ರಲ್ಲಿ ಬಣ್ಣ ಗುರುಡುತನ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಹೌದು ಎನ್ನುತ್ತದೆ ವಿಜ್ಞಾನ. ಆದರೆ ಹೆಚ್ಚಿನ ಜನರಿಗೆ ತಮಗೆ ಕೆಲವು ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯವಿಲ್ಲ ಎನ್ನುವುದು ಗೊತ್ತಿರುವುದಿಲ್ಲ. ಹಾಗಾಗಿ ಏನಕ್ಕೇನೋ ಬಣ್ಣಗಳನ್ನು ಹೇಳಿಕೊಂಡು ಮಂಗಳಾರತಿ ಮಾಡಿಸಿ ಕೊಳ್ಳುತ್ತಾರೆ. ಆದರೆ ಇದು ಗಂಡಸರಲ್ಲಿ ಹೆಚ್ಚೇಕೆ?
ವಂಶವಾಹಿಗಳು: ಇದಕ್ಕೆ ನಾವು ದೂಷಿಸಬೇಕಾದ್ದು ಅವರ ವಂಶವಾಹಿಗಳನ್ನು. ಅಂದರೆ ಆನುವಂಶಿಕವಾಗಿ ಇದು ಅವರಿಗೆ ದಾಟಿಸಲ್ಪಟ್ಟಿದೆ. ಈ ಬಣ್ಣಗುರುಡುತನ ಇರುವುದು ಎಕ್ಸ್ ಕ್ರೋಮೋಸೋಮುಗಳ ಮೇಲೆ. ಪುರುಷರಲ್ಲಿರುವುದು ಒಂದು ಎಕ್ಸ್ ಮತ್ತು ಒಂದು ವೈ ಕ್ರೋಮೋಸೋಮುಗಳು. ಮಹಿಳೆಯರಲ್ಲಿ ಇರುವುದು ಎರಡೂ ಎಕ್ಸ್ ಕ್ರೋಮೋಸೋಮುಗಳು. ಹಾಗಾಗಿ ಮಹಿಳೆಯರಿಗೆ ಒಂದು ಎಕ್ಸ್ ದೋಷಪೂರಿತವಾದರೆ, ಇನ್ನೊಂದು ಎಕ್ಸ್ ಕ್ರೋಮೋಸೋಮ್‌ನಿಂದ ಸುಧಾರಿಸಿಕೊಂಡು ಬಿಡುತ್ತಾರೆ. ಆದರೆ ಪುರುಷರಿಗೆ ಇರುವೊಂದು ಎಕ್ಸ್ ದೋಷಪೂರಿತವಾದರೆ ಬಣ್ಣಗಳು ಕಾಣದಂತಾಗುತ್ತವೆ.
ಇದಕ್ಕಿಂತ ವಿಚಿತ್ರವೆಂದರೆ, ಒಂದು ದೋಷಪೂರಿತ ಎಕ್ಸ್ ಇರುವಂಥ ಮಹಿಳೆಗೆ ಸ್ವತಃ ಬಣ್ಣಗುರುಡು ಇರುವುದಿಲ್ಲ. ಆದರೆ ಅದನ್ನಾಕೆ ತನ್ನ ಮಗನಿಗೆ ದಾಟಿಸುವುದಕ್ಕೆ ಸಾಧ್ಯವಿದೆ! ಹಾಗಾಗಿಯೇ ಶೇ. ೮ರಷ್ಟು ಗಂಡಸರಿಗೆ, ಅಂದರೆ ೧೨ರಲ್ಲಿ ಒಬ್ಬರಿಗೆ, ಬಣ್ಣಗಳು ಸರಿಯಾಗಿ ಕಾಣುವುದಿಲ್ಲ. ಆದರೆ ಕೇವಲ ೦.೫ರಷ್ಟು ಮಹಿಳೆಯರಿಗೆ, ಅಂದರೆ ೨೦೦ರಲ್ಲಿ ಒಬ್ಬರಿಗೆ, ಮಾತ್ರವೇ ಬಣ್ಣ ಗುರುತಿಸುವಲ್ಲಿ ತೊಂದರೆಯಿದೆ. ಜಾಗತಿಕ ಅಂಕಿ-ಸಂಖ್ಯೆಗಳನ್ನು ನೋಡುವುದಾದರೆ, ಸುಮಾರು ೩೦೦ ದಶಲಕ್ಷ ಮಂದಿಗೆ ಬಣ್ಣಗಳು ಸರಿಯಾಗಿ ಗೋಚರಿಸುವುದಿಲ್ಲ. ಅಂದರೆ, ಅಜಮಾಸು ಒಂದಿಡೀ ಅಮೆರಿಕ ದೇಶದಲ್ಲಿ ಇರುವಷ್ಟು ಮಂದಿಗೆ ಜಾಗತಿಕವಾಗಿ ಬಣ್ಣಗುರುಡುತನವಿದೆ. ಬಣ್ಣಗಳ ದೋಷ ಇದೆಯೆಂದು ತಿಳಿದಿರುವವರ ಸಂಖ್ಯೆ ಇಷ್ಟಾದರೆ, ದೋಷ ಇರುವುದೇ ತಿಳಿಯದವರು ಇನ್ನೆಷ್ಟು ಮಂದಿಯೊ.
ಏನು ಹಾಗೆಂದರೆ?: ಕೆಂಪು, ಹಸಿರು ಅಥವಾ ನೀಲ ಬಣ್ಣಗಳು ಕಾಣುವುದಿಲ್ಲ ಎಂದರೇನರ್ಥ? ಅಂದರೆ, ಆ ಬಣ್ಣಗಳ ಬದಲಿಗೆ ಅವರಿಗೆ ಬೇರೆಯದೇ ಬಣ್ಣಗಳು ಕಾಣುತ್ತವೆ. ಉದಾ, ಕೆಂಪು ಬಣ್ಣ ಕಾಣದವರು, ಕೇವಲ ಕೆಂಪು ಗುರುತಿಸುವಲ್ಲಿ ಮಾತ್ರವೇ ಒದ್ದಾಡುವುದಿಲ್ಲ; ನೇರಳೆ ಬಣ್ಣದಲ್ಲಿರುವ ಕೆಂಪೂ ಅವರಿಗೆ ಗೋಚರಿಸದೆ ನೀಲಿಯಂತೆ ಕಾಣಬಹುದು. ಅಥವಾ ಕಡು ನೀಲಿ ಇಲ್ಲವೇ ಕಡು ಹಸಿರು ಬಣ್ಣವು ಕಪ್ಪು ಬಣ್ಣದಂತೆ ಗೋಚರಿಸಬಹುದು.
ಇದನ್ನು ಓದಿ: Health Tips: ಒಂದೇ ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಬೇಕೆ? ಇಲ್ಲಿದೆ ತಜ್ಞರ ಸಲಹೆ!
ಬೇರೆ ಕಾರಣಗಳುಂಟೇ?: ದೃಷ್ಟಿ ಹೀಗಾಗುವುದಕ್ಕೆ ಇತರ ಕಾರಣಗಳು ಇರುವುದಕ್ಕೆ ಸಾಧ್ಯವಿದೆ. ಮಲೇರಿಯ ನಿರೋಧಕ ಮದ್ದು ಸೇರಿದಂತೆ ಕೆಲವು ಔಷಧಿಗಳು ಬಣ್ಣಗುರುಡುತನವನ್ನು ಉದ್ದೀಪಿಸಬಹುದು. ಆಪ್ಟಿಕ್ ನರಗಳ ರೋಗಗಳು, ರೆಟಿನಾ ಸಮಸ್ಯೆಗಳು ಸಹ ಈ ದೋಷಕ್ಕೆ ಕಾರಣವಾಗಬಹುದು. ಇದಲ್ಲದೆ, ಮಧುಮೇಹ, ಮಲ್ಟಿಪಲ್ ಸ್ಕ್ಲೆರೋಸಿಸ್ ಅಥವಾ ಅತಿಯಾದ ಆಲ್ಕೋಹಾಲ್ ಸೇವನೆಯಿಂದಲೂ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ನಾಶವಾಗಬಹುದು. ಆದರೆ ಆನುವಂಶಿಕ ಅಲ್ಲದ ಕಾರಣಗಳು ಮಹಿಳೆ ಮತ್ತು ಪುರುಷರನ್ನು ಸಮಾನವಾಗಿ ಬಾಧಿಸಬಲ್ಲವು ಎನ್ನುತ್ತವೆ ಅಧ್ಯಯನಗಳು.