Bisiyuta: ಬಿಸಿಯೂಟ ನೌಕರರು ಸರಕಾರಗಳಿಗೆ ಬಿಸಿ ಮುಟ್ಟಿಸುವಂತೆ ಸಂಘಟಿತರಾಗಬೇಕು: ಮುಸ್ತಾಫ
Bisiyuta: ಬಿಸಿಯೂಟ ನೌಕರರು ಸರಕಾರಗಳಿಗೆ ಬಿಸಿ ಮುಟ್ಟಿಸುವಂತೆ ಸಂಘಟಿತರಾಗಬೇಕು: ಮುಸ್ತಾಫ
Ashok Nayak
Dec 22, 2024 11:18 PM
ಬಾಗೇಪಲ್ಲಿ: ತಾಲೂಕಿನ ಸರಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ನೌಕರರಿಗೆ ಸರಕಾರವು ಹಲವಾರು ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ.ಹಾಗಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನಾತ್ಮಕವಾಗಿ ಹೋರಾಟಗಳನ್ನು ನಡೆಸುವ ಮೂಲಕ ಸರಕಾರಗಳಿಗೆ ಬಿಸಿ ಮುಟ್ಟಿಸಬೇಕಿದೆ ಎಂದು ಸಿಐಟಿಯು ಸಂಘಟನೆಯ ತಾಲೂಕು ಕಾರ್ಯದರ್ಶಿ ಮುಸ್ತಾಫ ತಿಳಿಸಿದರು.
ಪಟ್ಟಣದ ಸುಂದರಯ್ಯ ಭವನದಲ್ಲಿ ಅಕ್ಷರ ದಾಸೋಹ ನೌಕರರ ಸಭೆಯನ್ನು ಭಾನುವಾರ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ದಶಕಗಳಿಂದಲೂ ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನೂರಾರ ಮಂದಿ ಜೀವನ ಭದ್ರತೆ, ವೇತನದಲ್ಲಿ ಹೆಚ್ಚಳ ಸೇರಿದಂತೆ ಹಲವು ಸೌಲಭ್ಯಗಳಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸರಕಾರಗಳು ಹೆಚ್ಚುವರಿ ಜವಬ್ದಾರಿ ಮತ್ತು ಕಾರ್ಯಭಾರಗಳನ್ನು ಹೇರುತ್ತಿದ್ದಾ ರೆಯೇ ಹೊರೆತು ಸಮರ್ಪಕ ಸೌಲಭ್ಯಗಳು ಒದಗಿಸುತ್ತಿಲ್ಲ. ಹಾಗೇಯೇ ಕಳೆದ ಬೇಸಿಗೆ ರಜೆಗಳಲ್ಲೂ ಅಕ್ಷರ ದಾಸೋಹ ನೌಕರರು ಕರ್ತವ್ಯ ನಿರ್ವಹಿಸಿದರೂ ಅವರಿಗೆ ವೇತನ ಬಿಡುಗಡೆ ಮಾಡಿಲ್ಲ. ಕೂಡಲೇ ವೇತನ ಬಿಡುಗಡೆ ಮಾಡ ಬೇಕು. ಹಾಗಾಗಿ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಸಂಘಟನಾತ್ಮಕ ರೀತಿಯಲ್ಲಿ ಹೋರಾಟಗಳು ನಡೆಸಲು ಸಿದ್ಧತೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮೊಟ್ಟೆ ಸುಲಿಯುವ ಹಣ ನೀಡಲಿ: ಸರಕಾರವು ಅಕ್ಷರ ದಾಸೋಹ ನೌಕರರಿಗೆ ಬಿಸಿಯೂಟದೊಂದಿಗೆ ನೀಡುವ ಮೊಟ್ಟೆಗಳನ್ನು ಸುಲಿಯಲು ಪ್ರತಿ ಮಗುವಿಗೆ ೩೦ ಪೈಸೆಯಂತೆ ನೀಡಲು ಆದೇಶಿಸಿದೆ. ಆದರೆ ಇದುವರೆಗೆ ಶೇ.೯೦ ನೌಕರರಿಗೆ ಅದರ ಸೌಲಭ್ಯ ಸಿಕ್ಕಿಲ್ಲ. ಇದರ ಕುರಿತು ಸರಕಾರ ಕ್ರಮ ಜರುಗಿಸಬೇಕಿದೆ ಎಂದು ಮುಸ್ತಾಫ ತಿಳಿಸಿದರು.