Chikkaballapur News: 16ನೇ ಈಶ ಗ್ರಾಮೋತ್ಸವದಲ್ಲಿ ಕರ್ನಾಟಕ ತಂಡಕ್ಕೆ ಗೆಲುವಿನ ಹೊನಲು - ಥ್ರೋಬಾಲ್ ಮತ್ತು ವಾಲಿಬಾಲ್ ಎರಡರಲ್ಲೂ ಚಾಂಪಿಯನ್
Chikkaballapur News: 16ನೇ ಈಶ ಗ್ರಾಮೋತ್ಸವದಲ್ಲಿ ಕರ್ನಾಟಕ ತಂಡಕ್ಕೆ ಗೆಲುವಿನ ಹೊನಲು - ಥ್ರೋಬಾಲ್ ಮತ್ತು ವಾಲಿಬಾಲ್ ಎರಡರಲ್ಲೂ ಚಾಂಪಿಯನ್
Ashok Nayak
December 29, 2024
ಚಿಕ್ಕಬಳ್ಳಾಪುರ : ೧೬ ನೇ ಈಶ ಗ್ರಾಮೋತ್ಸವದಲ್ಲಿ ಕರ್ನಾಟಕದ ಮಹಿಳೆಯರ ಥ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ತಂಡಗಳು ಚಾಂಪಿಯನ್ ಶಿಫ್ ಅನ್ನು ತನ್ನದಾಗಿಸಿಕೊಳ್ಳುವ ಮೂಲಕ ಗೆಲುವಿನ ಹೊನಲನ್ನು ಹರಿಸಿವೆ ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದ್ದಾರೆ.
ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆಯುತ್ತಿರುವ ೧೬ ನೇ ಈಶ ಗ್ರಾಮೋತ್ಸವದ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕರ್ನಾಟಕದ ಮೂರ್ನಾಡಿನ (ಮಾರಗೋಡು) ಕಾಂತೂರು ಫ್ರೆಂಡ್ಸ್ ತಂಡವು ಮಹಿಳೆಯರ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕೊಯಂಬತ್ತೂರಿನ ಪಿಜಿ ಪುದೂರ್ ತಂಡವನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ವಿಜೇತರಾಯಿತು. ಇನ್ನು ಚಿಕ್ಕಮಗಳೂರಿನ ಅಲೀಫ್ ಸ್ಟಾರ್ ತಂಡವು ಪುರುಷರ ವಾಲಿಬಾಲ್ ಪಂದ್ಯದಲ್ಲಿ ಉಡುಪಿಯ ಪಲ್ಲಿ ಫ್ರೆಂಡ್ಸ್ ತಂಡವನ್ನು ರೋಮಾಂಚಕ ಪೈಪೋಟಿಯಲ್ಲಿ ಮಣಿಸಿತು.
ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ ೧೧೨ ಅಡಿ ಎತ್ತರದ ಆದಿಯೋಗಿಯ ಸಮ್ಮುಖದಲ್ಲಿ ಅದ್ಭುತ ಅಂತಿಮ ಪಂದ್ಯಗಳು ನಡೆದವು. ವಿಜೇತ ತಂಡಗಳು ?೫ ಲಕ್ಷ ನಗದು ಬಹುಮಾನವನ್ನು ಗೆದ್ದುಕೊಂಡು ಕಾರ್ಯಕ್ರಮಕ್ಕೆ ಅದ್ಭುತ ಮುಕ್ತಾಯ ನೀಡಿದವು.
ಸದ್ಗುರುಗಳ ಜೊತೆಗೆ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಮತ್ತು ವೆಂಕಟೇಶ್ ಪ್ರಸಾದ್ ಅವರು ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಿ ಮೆರುಗು ನೀಡಿದರು. ಭಾರತ ಮತ್ತು ವಿದೇಶಗಳಿಂದ ಸಾವಿರಾರು ಪ್ರೇಕ್ಷಕರು ಈ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದರು.
ಈಶ ಗ್ರಾಮೋತ್ಸವವು ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ರಾಜ್ಯಗಳಾದ್ಯಂತ ನಡೆಯುವ ಎರಡು ತಿಂಗಳ ಕ್ರೀಡಾ ಮಹೋತ್ಸವವಾಗಿದೆ. 162ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಈ ಉತ್ಸವದಲ್ಲಿ 43000ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದರು. ಇದರಲ್ಲಿ 10000ಕೂ ಹೆಚ್ಚು ಗ್ರಾಮೀಣ ಮಹಿಳೆಯರಿದ್ದು ಅದರಲ್ಲಿ ಹೆಚ್ಚಿನವರು ಗೃಹಿಣಿಯರು - ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಗಳಲ್ಲಿ ಭಾಗವಹಿಸಿದರು.
೨೦೦೪ಲ್ಲಿ ಸದ್ಗುರುಗಳು ಪ್ರಾರಂಭಿಸಿದ ಈಶ ಗ್ರಾಮೋತ್ಸವವು ಗ್ರಾಮೀಣ ಸಮುದಾಯಗಳ ಜೀವನದಲ್ಲಿ ಕ್ರೀಡೆ ಮತ್ತು ಆಟದ ಮನೋಭಾವವನ್ನು ತರುವ ಗುರಿಯನ್ನು ಹೊಂದಿದೆ. ಈ ಉತ್ಸವವು ವೃತ್ತಿಪರ ಆಟಗಾರರನ್ನು ಹೊರತುಪಡಿಸಿ, ದಿನಗೂಲಿ ಕಾರ್ಮಿಕರು, ಮೀನುಗಾರರು ಮತ್ತು ಗೃಹಿಣಿಯರು ಸೇರಿದಂತೆ ಸಾಮಾನ್ಯ ಗ್ರಾಮೀಣ ಜನರಿಗೆ ತಮ್ಮ ದೈನಂದಿನ ಚಟುವಟಿಕೆಗಳಿಂದ ದೂರ ಸರಿದು, ಕ್ರೀಡೆಯ ಆಚರಣೆ ಮತ್ತು ಒಗ್ಗಟ್ಟಿನ ಶಕ್ತಿಯನ್ನು ಅನುಭವಿಸಲು ಒಂದು ವೇದಿಕೆಯನ್ನು ನೀಡುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಇದೇ ವೇಳೆ ತಿಳಿಸಿದರು.