ಇಂದಿನಿಂದ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ : ನಿಯಮ ಪಾಲಿಸಿ ದಂಡದಿಂದ ಪಾರಾಗಲು ಜಿಲ್ಲಾಡಳಿತ ಮನವಿ
ಕರ್ನಾಟಕ ಹೈಕೋರ್ಟ್, ದ್ವಿಚಕ್ರ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದು ವೇಗಮಿತಿ ಗಂಟೆಗೆ ೪೦ ಕಿ.ಮೀ. ಮೀರಬಾರದು
-
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದಿನಿಂದ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಯಾಗಲಿದ್ದು ದ್ವಿಚಕ್ರ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ನಾಗರೀಕರಲ್ಲಿ ಮನವಿ ಮಾಡಿದೆ.
ಹೌದು ಕರ್ನಾಟಕ ಹೈಕೋರ್ಟ್, ದ್ವಿಚಕ್ರ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿದ್ದು ವೇಗಮಿತಿ ಗಂಟೆಗೆ ೪೦ ಕಿ.ಮೀ. ಮೀರಬಾರದು ಎಂದು ಹೇಳಿದೆ.
ಹೀಗಾಗಿ ಈ ನಿಯಮವನ್ನು ಜಿಲ್ಲೆಯಲ್ಲೂ ಕೂಡ ಜಾರಿಗೊಳಿಸಲಾಗುತ್ತಿದ್ದು ಸಾರ್ವಜನಿಕರು ಇದನ್ನು ಅರಿತು ಡಿ.೧೨ ರಿಂದ ಕಡ್ಡಾಯವಾಗಿ ಈಎಸ್‌ಐ ಗುರುತಿನ ಗುಣ ಮಟ್ಟದ ಹೆಲ್ಮೆಟ್ ಧರಿಸು ವುದು ಕಡ್ಡಾಯವಾಗಲಿದೆ.
ಜಿಲ್ಲೆಯಲ್ಲಿ ನಡೆದಿರುವ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರ ಸಾವಿನ ಸಂಖ್ಯೆಯೇ ಹೆಚ್ಚಾ ಗಿರುವುದನ್ನು ಖಚಿತ ಪಡಿಕೊಂಡು ಈ ನಿಯಮವನ್ನು ಕಟ್ಟಿನಿಟ್ಟಾಗಿ ಜಾರಿಗೊಳಿಸಲು ಪ್ರಧಾನ ಕಾರಣವಾಗಿದೆ. ಹೆಲ್ಮೆಟ್ ಧರಿಸಿದರೆ ಸಾವಿನ ಸಂಖ್ಯೆ ಕಡಿಮೆಯಾಗುತ್ತಿತ್ತು. ಮೊಬೈಲನ್ನು ಸುರಕ್ಷೆ ಮಾಡುವ ಜನತೆ ತಮ್ಮ ಜೀವನದ ಬಗ್ಗೆ ತಾತ್ಸಾರ ಮಾಡುತ್ತಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ಕೂಡ ಹೆಲ್ಮೆಟ್ ನಿಯಮ ಪಾಲಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಹೆಲ್ಮೆಟ್ ಕಡ್ಡಾಯ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ.
ಚಾಲನಾ ಪರವಾನಗಿ!!!
ದ್ವಿಚಕ್ರ ವಾಹನ ಸವಾರರು ರಸ್ತೆಗೆ ಗಾಡಿಯನ್ನು ತರುವ ಮುನ್ನ ನಿಮ್ಮ ವಾಹನವು ಸಂಚಾರಿ ನಿಯಮಗಳನುಸಾರ ಸುರಕ್ಷಿತವಾಗಿದೆಯಾ? ಎಂದು ಪರಿಶೀಲಿಸಿಕೊಳ್ಳಬೇಕು.ಅಲ್ಲದೆ ವಾಹನ ಏರುವ ಮೊದಲು ವಾಹನ ಚಾಲನಾ ಪರವಾನಗಿ ಇದೆಯಾ? ಇನ್ಸೂರೆನ್ಸ್ ಇದೆಯೇ?ಎಮಿಷನ್ ಪರೀಕ್ಷೆ ಆಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.ಮುಖ್ಯವಾಗಿ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಇದನ್ನು ಮೀರುವವರಿಗೆ ದಂಡ ಖಚಿತ.
ಹೀಗಾಗಿ ನಾಗರೀಕರು ತಪ್ಪದೆ ನಿಯಮ ಪಾಲಿಸಿ ಎನ್ನುವುದು ಪೊಲೀಸ್ ಇಲಾಖೆ ಅಧಿಕಾರಿಗಳ ಮಾತಾಗಿದೆ.
ನೆಪಗಳಿಗೆ ಬೆಲೆಯಿಲ್ಲ
ಡಿ.೧೨ ರ ನಂತರ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿರುವ ಕಾರಣ, ಯಾರೇ ಆಗಲಿ ಕೂದಲು ಉದುರುತ್ತಿದೆ, ನನ್ನ ಕೇಶವಿನ್ಯಾಸ ಹಾಳಾಗಲಿದೆ, ಅನಾರೋಗ್ಯವಿದೆ, ತಲೆನೋವಿದೆ, ಸೌಂದರ್ಯ ಹಾಳಾಗುತ್ತದೆ ಇತ್ಯಾದಿ ಯಾವುದೇ ಸಬೂಬು ಹೇಳುವ ಅಗತ್ಯವಿಲ್ಲ.ಇಂತಹ ಯಾವುದೇ ಸಬೂಬು ಗಳನ್ನು ಪೊಲೀಸರು ಕೇಳಬಾರದು. ನಿಯಮಗಳಿಗೆ ಯಾರೂ ಕೂಡ ಅತೀತರಲ್ಲ.ಯಾರು ಪಾಲಿಸುವುದಿಲ್ಲವೋ ಅವರಿಗೆ ಕಾನೂನು ಪ್ರಕಾರ ದಂಡ ಹಾಕಲಾಗುವುದು. ಈ ನಿಯಮ ಸಾರ್ವಜನಿಕರ ಉಪಯೋಗಕ್ಕಾಗಿ ಮಾಡುತ್ತಿರುವುದರಿಂದ ಯಾರೂ ಕ್ಷಲ್ಲಕ ಕಾರಣಗಳನ್ನು ಮುಂದು ಮಾಡಿ ತಪ್ಪಿಸಿಕೊಳ್ಳಬಾರದು ಎಂಬುದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರ ಖಡಕ್ ಮಾತಾಗಿದೆ.
ಜಿಲ್ಲೆಯಲ್ಲಿ ವಾಣಿಜ್ಯ ನಗರಿ ಎಂದೇ ಖ್ಯಾತಿಯಾಗಿರುವ ಚಿಂತಾಮಣಿ, ರೇಷ್ಮೆ ನಗರಿ ಎಂದೇ ಖ್ಯಾತಿಯಾಗಿರುವ ಶಿಡ್ಲಘಟ್ಟ, ಗಡಿ ತಾಲೂಕಾದ ಬಾಗೇಪಲ್ಲಿ ಗುಡಿಬಂಡೆ, ವಿದುರಾಶ್ವತ ಸ್ಮಾರಕ ಹೊಂದಿರುವ ಗೌರಿಬಿದನೂರು, ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ.
ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ನಾನ ಕಾರಣಗಳಿಗಾಗಿ ನಾಗರಿಕರು ಬರುತ್ತಿರುತ್ತಾರೆ.
ಹೀಗೆ ಬರುವವರು ತಮ್ಮ ಜೀವ ಮತ್ತು ಜೀವನದ ಭದ್ರತೆಗಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಿ ಬರುವುದರಿಂದ ಅನುಕೂಲವಾಗಲಿದೆ.
ಜಿಲ್ಲಾಡಳಿತ ಜಾರಿಗೊಳಿಸಿರುವ ಸಂಚಾರಿ ನಿಯಮವನ್ನು ಎಲ್ಲರೂ ಪಾಲಿಸೋಣ. ಅಮೂಲ್ಯ ವಾದ ಜೀವವನ್ನು ಕಾಪಾಡಿಕೊಳ್ಳೋಣ ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ.
*
ನಾಗರೀಕರ ಜೀವ ಮತ್ತು ಜೀವನ ಸುಗಮವಾಗಿ ಸಾಗಲಿ ಎಂಬ ಸದುದ್ದೇಶದಿಂದ ಸೂಕ್ತ ದಾಖಲೆ ಗಳನ್ನು ಇಟ್ಟುಕೊಳ್ಳುವ ಜತೆಗೆ ಹೆಲ್ಮಟ್ ಧರಿಸಿ ವಾಹನ ಚಲಾಯಿಸಿ ಎಂಬ ನಿಯಮವನ್ನು ಡಿ.12ರಿಂದ ಜಿಲ್ಲೆಯಲ್ಲಿ ಜಾರಿ ಮಾಡಲಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಇಲಾಖೆ ಈ ನಿಯಮ ಜಾರಿಗೆ ಪೂರ್ವದಲ್ಲಿ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗಿದೆ.
ಆದರೂ ಇದನ್ನು ಮೀರಿ ಹೆಲ್ಮೆಟ್ ಧರಿಸದೆ , ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳದೆ ಪುಂಡಾಟ ಮೆರೆಯುವವರಿಗೆ ಸಂಚಾರಿ ನಿಯಮಗಳಂತೆ ದಂಡದ ಜತೆಗೆ ಕೇಸು ದಾಖಲಿಸಲಾಗುವುದು.
-ಪಿ .ಎನ್. ರವೀಂದ್ರ. ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ.
ದ್ವಿಚಕ್ರ ವಾಹನ ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಡಿ.12ರ ನಂತರ ಜಿಲ್ಲಾಡಳಿತ ಭವನಕ್ಕೆ ಬರುವ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿಯೇ ಬರಬೇಕು. ಹೆಲ್ಮೆಟ್ ಧರಿಸದವರಿಗೆ ಪ್ರವೇಶ ನಿಷೇಧಿಸಲಾಗುವುದು. ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯ.
-ಡಾ. ವೈ. ನವೀನ್ ಭಟ್.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿಕ್ಕಬಳ್ಳಾಪುರ .