ವಿಜಯ್ ಕೊನೆ ಸಿನಿಮಾ ʻಜನ ನಾಯಗನ್ʼಗೆ ಕೊನೆ ಕ್ಷಣದಲ್ಲಿ ಸಂಕಷ್ಟ; ʻದಳಪತಿʼ ಅಭಿಮಾನಿಗಳ ಆತಂಕಕ್ಕೆ ಕಾರಣವೇನು?
Jana Nayagan Censor Issue: ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜನವರಿ 9ರಂದು ಬಿಡುಗಡೆಯಾಗಬೇಕಿದೆ. ಆದರೆ, ಚಿತ್ರಕ್ಕೆ ಸೆನ್ಸಾರ್ ಮಂಡಳಿಯು (CBFC) ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದಲ್ಲಿ ಈಗಾಗಲೇ ಬುಕಿಂಗ್ ಆರಂಭವಾಗಿ ಹೌಸ್‌ಫುಲ್ ಆಗಿದ್ದರೂ, ತಮಿಳುನಾಡು ಮತ್ತು ತೆಲುಗು ರಾಜ್ಯಗಳಲ್ಲಿ ಬುಕಿಂಗ್ ಆರಂಭವಾಗಿಲ್ಲ.
-
ʻದಳಪತಿʼ ವಿಜಯ್ ಅವರ ಕೊನೆಯ ಸಿನಿಮಾ ʻಜನ ನಾಯಗನ್ʼಗೆ ದೊಡ್ಡ ಆತಂಕ ಎದುರಾಗಿದೆ. ಹೌದು, ಎಲ್ಲಾ ಅಂದುಕೊಂಡಂತೆ ನಡೆದರೆ ಜನ ನಾಯಗನ್ ಸಿನಿಮಾವು ಜನವರಿ 9ರಂದು ಅದ್ದೂರಿಯಾಗಿ ತೆರೆಮೇಲೆ ಬರಬೇಕಿದೆ. ಆದರೆ, ಅದಕ್ಕೀಗ ವಿಘ್ನಗಳು ಎದುರಾಗುವ ಸೂಚನೆ ಕಂಡುಬಂದಿದೆ. ಬಿಡುಗಡೆಗೆ 3 ದಿನ ಬಾಕಿ ಇದ್ದರೂ, ಇನ್ನೂ ಕೂಡ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ!
ಸೆನ್ಸಾರ್ ಸೆರ್ಟಿಫಿಕೇಟ್ ಸಿಗೋದು ಯಾವಾಗ?
ಸೆನ್ಸಾರ್ ಮಂಡಳಿಯು (CBFC) ಜನ ನಾಯಗನ್ ಸಿನಿಮಾವನ್ನು ಡಿಸೆಂಬರ್‌ನಲ್ಲಿಯೇ ವೀಕ್ಷಿಸಿದ್ದರೂ, ನಿರ್ಮಾಪಕರಿಗೆ ಈವರೆಗೆ ಅಧಿಕೃತ ಸೆನ್ಸಾರ್ ಪ್ರಮಾಣಪತ್ರ ದೊರೆತಿಲ್ಲ. ಮಂಡಳಿಯು ಕೆಲವೇ ಕೆಲವು ತಿದ್ದುಪಡಿಗಳನ್ನು ಸೂಚಿಸಿದ್ದು, ಅದರಂತೆ ಪರಿಷ್ಕೃತ ಆವೃತ್ತಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ಆದರೂ ಸಹ ಪ್ರಮಾಣಪತ್ರ ವಿತರಣೆಯನ್ನು ಮಾಡದೇ ಇರುವುದು, ಸಿನಿಮಾ ಬಿಡುಗಡೆಗೆ ಅಡ್ಡಿಯಾಗುವ ಆತಂಕ ಮೂಡಿಸಿದೆ.
ಬಿಡುಗಡೆ ಬಗ್ಗೆ ಉಂಟಾಗಿರುವ ಈಗ ಗೊಂದಲಗಳು ಅಭಿಮಾನಿಗಳನ್ನು ಹತಾಶೆಗೊಳಿಸಿವೆ. ಸುಮಾರು 400 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರದ ಮೇಲೆ ವಿಜಯ್ ಅಭಿಮಾನಿಗಳು ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕಾರಣ, ಇದು ವಿಜಯ್ ಅವರ ಕೊನೆಯ ಸಿನಿಮಾ ಆಗಿರುವುದರಿಂದ, ತೆರೆಮೇಲೆ ನೆಚ್ಚಿನ ನಟನನ್ನು ಮೆರೆಸಲು ಕಾಯುತ್ತಿದ್ದಾರೆ. ಆದರೆ ಸೆನ್ಸಾರ್ ಗೊಂದಲಗಳು ಫ್ಯಾನ್ಸ್‌ಗೆ ಆತಂಕ ಮೂಡಿಸಿವೆ.
ಇನ್ನು, ಕಳೆದ ವಾರ ಬಿಡುಗಡೆಯಾದ ಜನ ನಾಯಗನ್ ಚಿತ್ರದ ಟ್ರೈಲರ್‌ನಲ್ಲಿ ರಾಜಕೀಯ ಪ್ರೇರಿತ ಸಂಭಾಷಣೆಗಳಿರುವ ಸ್ಪಷ್ಟ ಸುಳಿವು ಸಿಕ್ಕಿತ್ತು. ಈ ಚಿತ್ರವು ಇನ್ನೂ ತನ್ನ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿದೆ. ಮಂಡಳಿಯು ಸರಿಯಾದ ಸಮಯಕ್ಕೆ ಪ್ರಮಾಣ ಪತ್ರ ನೀಡಲಿದೆಯಾ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ.
ಒಂದು ವೇಳೆ ಪ್ರಮಾಣ ಪತ್ರ ಸಿಗುವುದು ವಿಳಂಬವಾದರೆ ಚಿತ್ರವು ಜನವರಿ 9ರಂದು ಬಿಡುಗಡೆ ಆಗುವುದು ಡೌಟ್ ಎನ್ನಲಾಗಿದೆ. ಇದರಿಂದ ಸಂಕ್ರಾಂತಿಗೆ ರಿಲೀಸ್ ಆಗುತ್ತಿರುವ ಇತರೆ ಸಿನಿಮಾಗಳಿಗೆ ಅನುಕೂಲವಾಗಬಹುದು. ಸದ್ಯದ ಮಾಹಿತಿ ಪ್ರಕಾರ, ಸೆನ್ಸಾರ್ ಪ್ರಮಾಣ ಪತ್ರ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡವು ನ್ಯಾಯಾಲಯದ ಮೊರೆ ಹೋಗಲು ರೆಡಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬುಕಿಂಗ್ ಓಪನ್ ಆಗಿಲ್ಲ
ಜನ ನಾಯಗನ್‌ಗೆ ಕರ್ನಾಟಕದಲ್ಲಿ ಮೂರು ದಿನಗಳ ಹಿಂದೆಯೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿತ್ತು. ಆದರೆ 1000 ರೂ.ಗಳಿಗೆ ಟಿಕೆಟ್‌ಗಳನ್ನು ಮಾರಾಟ ಕೂಡ ಮಾಡಲಾಗಿದೆ. ಆದರೆ ತಮಿಳುನಾಡಿನಲ್ಲಿಯೇ ಇನ್ನೂ ಕೂಡ ಬುಕಿಂಗ್ ಓಪನ್ ಆಗದೇ ಇರುವುದು ಅಚ್ಚರಿ ಮೂಡಿಸಿದೆ. ತೆಲಂಗಾಣ - ಆಂಧ್ರಪ್ರದೇಶದಲ್ಲೂ ಕೂಡ ಜನ ನಾಯಗನ್‌ಗೆ ಬುಕಿಂಗ್ ಶುರುವಾಗಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಈಗಾಗಲೇ ನೂರಾರು ಶೋಗಳು ಹೌಸ್‌ಫುಲ್ ಆಗಿವೆ.