Salman Khan: ಸಲ್ಮಾನ್ ಖಾನ್‌ಗೆ ಮಾನಸಿಕ ಅಸ್ವಸ್ಥನಿಂದ ಪ್ರಾಣ ಬೆದರಿಕೆ
ಸಲ್ಮಾನ್ ಖಾನ್‌ಗೆ ಮತ್ತೊಂದು ಜೀವ ಬೆದರಿಕೆ ಬಂದಿದ್ದು, ಅವರನ್ನು ಮನೆಯೊಳಗೆ ನುಗ್ಗಿ ಕೊಲ್ಲುವುದಾಗಿ, ಅವರ ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೀಗೆ ಕೊಲೆ ಬೆದರಿಕೆಯ ಸಂದೇಶ ಕಳುಹಿಸಿರುವ ಆರೋಪಿ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್.

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಪ್ರಾಣ ಬೆದರಿಕೆ (Death Threat) ಇರುವುದು ಗೊತ್ತೇ ಇದೆ. ಹಾಗಾಗಿ, ಅವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಸಲ್ಮಾನ್ ಖಾನ್ ಅವರನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಟಾರ್ಗೆಟ್ ಮಾಡಿದೆ, ಅಟ್ಯಾಕ್ ಮಾಡಲು ಹವಣಿಸುತ್ತಿದೆ. ಈ ಮಧ್ಯೆ ಮತ್ತೆ ಸಲ್ಲು ಬಾಯ್‌ಗೆ ಜೀವ ಬೆದರಿಕೆ ಬಂದಿದ್ದು, ಅವರನ್ನು ಮನೆಯೊಳಗೆ ನುಗ್ಗಿ ಕೊಲ್ಲುವುದಾಗಿ, ಅವರ ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ವಿಷಯ ಏನಪ್ಪ ಅಂದರೆ ಹೀಗೆ ಕೊಲೆ ಬೆದರಿಕೆಯ ಸಂದೇಶ ಕಳುಹಿಸಿರುವ ಆರೋಪಿ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.
ಏನಿದು ಘಟನೆ ?
ಏಪ್ರಿಲ್ 13ರಂದು ವರ್ಲಿ ಸಾರಿಗೆ ಇಲಾಖೆಯ ಅಧಿಕೃತ ಸಂಖ್ಯೆಗೆ ವಾಟ್ಸ್ಆ್ಯಪ್ಗೆ ಬಂದ ಸಂದೇಶ ಇದಾಗಿದೆ. ಆದರೆ ಈ ಬೆದರಿಕೆಯನ್ನು ಯಾರು ನೀಡಿದ್ದಾರೆ ಎಂಬುದು ತಿಳಿದು ಬಂದಿರಲಿಲ್ಲ.ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಬೆದರಿಕೆ ಸಂದೇಶ ಕಳಿಸಿದ ಅಪರಾಧಿ ಶೋಧಕ್ಕಾಗಿ ಬೆನ್ನತ್ತಿ ಹೊರಟ ಮುಂಬೈ ಪೊಲೀಸರಿಗೆ ಈ ಕಿಡಿಗೇಡಿ ಗುಜರಾಜ್ನ ವಡೋದರದಲ್ಲಿ ಇದ್ದಾನೆ ಎಂಬ ವಿಷಯ ತಿಳಿಯಿತು. ತಕ್ಷಣವೇ ವಡೋದರದ ಸ್ಥಳೀಯ ಪೊಲೀಸರ ಸಂಪರ್ಕ ಬೆಳಸಿದ ಮುಂಬೈ ಪೊಲೀಸರು ಸೋಮವಾರ (ಏಪ್ರಿಲ್ 14) ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮಯಾಂಕ್ ಪಾಂಡೆ (26) ಎಂದು ಗುರುತಿಸಲಾಗಿದ್ದು, ಆತನ ಮಾನಸಿಕ ಆರೋಗ್ಯ ಸರಿ ಇಲ್ಲ ಎಂಬುದು ಗೊತ್ತಾಗಿದೆ. ಅಲ್ಲದೇ ಆತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾನೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಆತನಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಮಯಾಂಕ್ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು, ಆತನನ್ನು ವಿಚಾರಣೆಗಾಗಿ ಮುಂಬೈಗೆ ಬರಲು ನೋಟಿಸ್ ನೀಡಿ, ವಾಪಸ್ ಮರಳಿದ್ದಾರೆ ಎಂದು ರೋಹನ್ ಆನಂದ್ ತಿಳಿಸಿದ್ದಾರೆ.
ಇನ್ನು ನಿರಂತರವಾಗಿ ಆಗಾಗ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಬರುತ್ತಲ್ಲೇ ಇದ್ದು, ಕೆಲ ತಿಂಗಳ ಹಿಂದಷ್ಟೇ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಗುಂಡಿನ ದಾಳಿ ನಡೆದಿತ್ತು. ಅಂದಿನಿಂದ ಅವರ ಭದ್ರತೆ ಹೆಚ್ಚಿಸಲಾಗಿದೆ. ಕೆಲ ವರ್ಷಗಳಲ್ಲಿ ಬಾಲಿವುಡ್ ನಟನಿಗೆ ನಾನಾ ಭಾರಿ ನೇರ ಹಾಗೂ ಪರೋಕ್ಷವಾಗಿ ಜೀವ ಬೆದರಿಕೆ ಸಂದೇಶ ಮತ್ತು ಕರೆಗಳು ಬಂದಿವೆ. 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಒಂದು ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಯಾಗಿದ್ದು, ಅಂದಿನಿಂದ ಸಲ್ಲು ಬಾಯ್‌ಗೆ ಕೊಲೆ ಬೆದರಿಕೆ ಸಂದೇಶಗಳು ಬರುತ್ತಲೇ ಇವೆ.
ಈ ಸುದ್ದಿಯನ್ನು ಓದಿ: Salman Khan: ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ; ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು
ಕಳೆದ ವರ್ಷಕೃಷ್ಣಮೃಗ ಹತ್ಯೆಗೆ ಪಾಪ ಪ್ರಾಯಶ್ಚಿತವಾಗಿ ಸಲ್ಮಾನ್ ಖಾನ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂಪಾಯಿ ಪಾವತಿಸಬೇಕು ಎಂದು ಒತ್ತಾಯಿಸಲಾಗಿತ್ತು. ಅದೇ ವರ್ಷ ಅಕ್ಟೋಬರ್ 30ರಂದು, ನಟನಿಗೆ ಮತ್ತೆ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿ 2 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದರು. 2024ರಲ್ಲೇ ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಗುರುತಿನ ಚೀಟಿಗಳನ್ನು ಬಳಸಿ ಖಾನ್ ಅವರ ಪನ್ವೇಲ್ ತೋಟದ ಮನೆಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದರು. 2023ರಲ್ಲಿ ಗ್ಯಾಂಗ್ಸ್ಟರ್ ಓರ್ವನಿಂದ ಬೆದರಿಕೆ ಇಮೇಲ್ ಬಂದಿತ್ತು.
ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸಲ್ಮಾನ್ ಖಾನ್ ಅವರಿಗೆ ಬೆದರಿಕೆಗಳ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಬೆದರಿಕೆಗಳ ನಂತರ, ಸಲ್ಮಾನ್, ಮನೆ ಮತ್ತು ಶೂಟಿಂಗ್ ಸೆಟ್ಗಳಿಗಷ್ಟೇ ಪ್ರಯಾಣಿಸುವುದಾಗಿ ಹೇಳಿದ್ದಾರೆ.