IPL 2026, 243rd Match: ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಗೆಲುತ್ತಾ? ಉಭಯ ತಂಡಗಳ ಮುಖಾಮುಖಿ ದಾಖಲೆ ಹೀಗಿದೆ!
RCB vs LSG: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಏಪ್ರಿಲ್ 15) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ತವರು ಅಂಗಣದಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ, ಇದೀಗ ಮತ್ತೊಂದು ಗೆಲುವಿಗಾಗಿ ಎದುರು ನೋಡುತ್ತಿದೆ.
ಬೆಂಗಳೂರು-ಲಖನೌ ತಂಡಗಳ ನಡುವಣ ಐಪಿಎಲ್ ಪಂದ್ಯ. -
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಖನೌ ಸೂಪರ್ ಜಯಂಟ್ಸ್ (LSG) ತಂಡಗಳು ಇಂದು (ಬುಧವಾರ) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (RCB vs LSG) ಟೂರ್ನಿಯ 23ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ತವರು ಅಂಗಣದಲ್ಲಿ ಈಗಾಗಲೇ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ, ಇದೀಗ ಗೆಲುವಿನ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಮತ್ತೊಂದು ಕಡೆ ರಿಷಭ್ ಪಂತ್ ಸಾರಥ್ಯದ ಎಲ್‌ಎಸ್‌ಜಿ ಕಳೆದ ಪಂದ್ಯದಲ್ಲಿ ಸೋತಿದ್ದು, ಗೆಲುವಿನ ಲಯಕ್ಕೆ ಮರಳಲು ಬಯಸುತ್ತಿದೆ.
ಹಾಲಿ ಚಾಂಪಿಯನ್ಸ್ ಆರ್‌ಸಿಬಿ ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಒಂದು ಪಂದ್ಯದಲ್ಲಿ ಸೋತಿದೆ. ಒಟ್ಟು ಆರು ಅಂಕಗಳಿಂದ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳಿಂದ ಮೊದಲ ಜಯ ಸಾಧಿಸಿತ್ತು, ತರುವಾಯ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 43 ರನ್‌ಗಳಿಂದ ಸೋಲಿಸಿತ್ತು. ಇದರ ನಂತರ, ರಾಜಸ್ಥಾನ ರಾಯಲ್ಸ್, ಆರ್‌ಸಿಬಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತ್ತು. ತನ್ನ ನಾಲ್ಕನೇ ಪಂದ್ಯದಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳ ಜಯ ಸಾಧಿಸಿತ್ತು.
IPL 2026: ವಿರಾಟ್ ಕೊಹ್ಲಿ ಔಟ್? ಎಲ್‌ಎಸ್‌ಜಿ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI ವಿವರ!
ಇನ್ನು ಲಖನೌ ತಂಡ ಇದುವರೆಗೆ ಆಡಿದ 4 ಪಂದ್ಯಗಳಲ್ಲಿ ಎರಡರಲ್ಲಿ ಸೋತಿದೆ. ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳಿಂದ ಸೋತಿತ್ತು, ನಂತರ ಸನ್‌ರೈಸರ್ಸ್ ಹೈದರಾಬಾದ್ (5 ವಿಕೆಟ್‌ಗಳಿಂದ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (3 ವಿಕೆಟ್‌ಗಳಿಂದ) ವಿರುದ್ಧ ಜಯಗಳಿಸುವ ಮೂಲಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿತ್ತು. ನಂತರ, ಗುಜರಾತ್ ಟೈಟನ್ಸ್ ವಿರುದ್ಧ 7 ವಿಕೆಟ್‌ಗಳ ಸೋಲನ್ನು ಅನುಭವಿಸಿತು.
RCB vs LSG ಮುಖಾಮುಖಿ ದಾಖಲೆ
ಲಖನೌ ಸೂಪರ್ ಜಯಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ದಾಖಲೆಯಲ್ಲಿ ಮೇಲುಗೈ ಸಾಧಿಸಿದೆ. ಇಲ್ಲಿಯವರೆಗೆ ಎರಡೂ ತಂಡಗಳು 6 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ; ಇವುಗಳಲ್ಲಿ ಆರ್‌ಸಿಬಿ 4 ಪಂದ್ಯಗಳಲ್ಲಿ ಗೆದ್ದಿದ್ದರೆ, ಎಲ್‌ಎಸ್‌ಜಿ ಕೇವಲ 2 ಗೆಲುವುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. 2022ರಲ್ಲಿ ಆರ್‌ಸಿಬಿ ತಮ್ಮ ಎರಡೂ ಪಂದ್ಯಗಳಲ್ಲಿ ಎಲ್‌ಎಸ್‌ಜಿಯನ್ನು ಸೋಲಿಸಿತು. ನಂತರ 2023 ರಲ್ಲಿ ಎರಡೂ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿದವು. 2024ರಲ್ಲಿ ಎಲ್‌ಎಸ್‌ಜಿ 28 ರನ್‌ಗಳಿಂದ ಪಂದ್ಯವನ್ನು ಗೆದ್ದಿತು. 2025 ರ ಐಪಿಎಲ್ ಸಾಲಿನಲ್ಲಿ ಈ ಎರಡೂ ತಂಡಗಳು ಕೊನೆಯ ಬಾರಿಗ ಮುಖಾಮುಖಿಯಾದಾಗ, ಆರ್‌ಸಿಬಿ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು.
RCB vs LSG: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಮಯಾಂಕ್ ಯಾದವ್ ಫಿಟ್, ಲಖನೌಗೆ ಸಿಕ್ತು ಆನೆ ಬಲ!
ಆರ್‌ಸಿಬಿ ಪಂದ್ಯ ಗೆಲ್ಲುವ ನೆಚ್ಚಿನ ತಂಡ
ಮುಖಾಮುಖಿ ದಾಖಲೆಯಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸಿದ್ದರೂ, ಪ್ರಸ್ತುತ ಆಟಗಾರರ ಫಾರ್ಮ್ ಹಾಗೂ ಬೆಂಗಳೂರಿನ ತವರು ಅಂಗಣದಲ್ಲಿ ಆರಂಭಿಕ ಎರಡು ಗೆಲುವುಗಳನ್ನು ಆಧಾರದ ಮೇಲೆ, ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಇಂದಿನ (ಬುಧವಾರ) ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಅಂದಾಜಿಸಬಹುದು.
ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ, ಸುಯಾಶ್ ಶರ್ಮಾ
ಲಖನೌ ಸೂಪರ್ ಜಯಂಟ್ಸ್: ಮಿಚೆಲ್ ಮಾರ್ಷ್, ಏಡೆನ್ ಮಾರ್ಕ್ರಮ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಆಯುಷ್ ಬದೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಆವೇಶ್ ಖಾನ್, ದಿಗ್ವೇಶ್ ಸಿಂಗ್ ರಾಠಿ, ಪ್ರಿನ್ಸ್ ಯಾದವ್
ಆರ್‌ಸಿಬಿ vs ಲಖನೌ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೀಗಿದೆ
ಪಂದ್ಯದ ವಿವರ
2026ರ ಐಪಿಎಲ್ -23ನೇ ಪಂದ್ಯ
ದಿನಾಂಕ: ಏಪ್ರಿಲ್ 15, 2025
ಸಮಯ: ಸಂಜೆ 07: 30ಕ್ಕೆ
ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್