ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ಅಜಿಂಕ್ಯ ರಹಾನೆ ನಿವೃತ್ತಿಯಿಂದ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮತ್ತೊಂದು ತಲೆ ನೋವು!

ಭಾರತೀಯ ಕ್ರಿಕೆಟ್‌ನ ಹಿರಿಯ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಅವರು ತಮ್ಮ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮುಂದಿನ ನಾಯಕ ಯಾರೆಂಬ ಪ್ರಶ್ನೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾ ಫ್ರಾಂಚೈಸಿ 2027ರ ಟೂರ್ನಿಯ ನಿಮಿತ್ತ ಹೊಸ ನಾಯಕ ಹುಡುಕಾಟದಲ್ಲಿ ತೊಡಗಿದೆ.

ಅಜಿಂಕ್ಯ ರಹಾನೆ ನಿವೃತ್ತಿಯಿಂದ ಕೆಕೆಆರ್‌ಗೆ ಮತ್ತೊಂದು ತಲೆ ನೋವು!

ಕೆಕೆಆರ್‌ಗೆ ತಲೆ ನೋವು ತಂದಿಟ್ಟ ಅಜಿಂಕ್ಯ ರಹಾನೆ. -

Profile
Ramesh Kote Jul 31, 2026 5:46 PM

ನವದೆಹಲಿ: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ (Ajinkya Rahane) ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕೋಲ್ಕತಾ ನೈಟ್‌ ರೈಡರ್ಸ್‌ (KKR) ತಂಡಕ್ಕೆ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2026) ನಿಮಿತ್ತ ದೊಡ್ಡ ಹಿನ್ನಡೆಯಾಗಿದೆ. ಅದೇನೆಂದರೆ, ಕೆಕೆಆರ್ ತಂಡದ ಮುಂದಿನ ನಾಯಕ ಯಾರೆಂಬ ಪ್ರಶ್ನೆಗಳು ಉಂಟಾಗಿವೆ. ಹಾಗಾಗಿ ಕೋಲ್ಕತಾ ಫ್ರಾಂಚೈಸಿಯು ಇಂದಿನಿಂದಲೇ ತಮ್ಮ ನೂತನ ನಾಯಕನ ಹುಟುಕಾಟದಲ್ಲಿ ತೊಡಗಿದೆ.

ಮೂರು ಬಾರಿ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಲ್ಲಿ ನಾಯಕತ್ವದ ಬದಲಾವಣೆ ಹೊಸ ವಿಚಾರವೇನಲ್ಲ. ಕೆಕೆಆರ್ ಸಾಮಾನ್ಯವಾಗಿ ತನ್ನಲ್ಲೇ ಹೊಸ ನಾಯಕರನ್ನು ಬೆಳೆಸುವುದಕ್ಕಿಂತ, ಐಪಿಎಲ್ ಹರಾಜಿನ ಮೂಲಕ ಈಗಾಗಲೇ ನಾಯಕತ್ವದ ಅನುಭವ ಹೊಂದಿರುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪರಂಪರೆಯನ್ನು ಅನುಸರಿಸಿದೆ.

ಈಗ ಅಜಿಂಕ್ಯ ರಹಾನೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿರುವ ಹಿನ್ನೆಲೆಯಲ್ಲಿ, ಕೆಕೆಆರ್ ಮತ್ತೊಮ್ಮೆ ಹೊಸ ನಾಯಕನ ಹುಡುಕಾಟದಲ್ಲಿದೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲ ಸೂಕ್ತ ನಾಯಕನನ್ನು ಆಯ್ಕೆ ಮಾಡುವುದು ಫ್ರಾಂಚೈಸಿಯ ಮುಂದಿರುವ ಪ್ರಮುಖ ಸವಾಲಾಗಿದೆ.

ಭಾವುಕ ವಿಡಿಯೊ ಹಂಚಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಂಜಿಕ್ಯ ರಹಾನೆ

ಕೆಕೆಆರ್‌ನ ನಾಯಕತ್ವ ಆಯ್ಕೆಯ ಯಶಸ್ವಿ ಸೂತ್ರ

ಐಪಿಎಲ್‌ ಟೂರ್ನಿಯಲ್ಲಿ ನಾಯಕತ್ವದ ಸಮಸ್ಯೆಗೆ ಹರಾಜಿನ ಮೂಲಕ ಪರಿಹಾರ ಕಂಡುಕೊಳ್ಳುವ ತಂಡಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮುಂಚೂಣಿಯಲ್ಲಿದೆ. ತಂಡದ ಆಧುನಿಕ ಯಶಸ್ಸಿನ ಪಯಣ 2011ರಲ್ಲಿ ಆರಂಭವಾಗಿತ್ತು. ಆ ವರ್ಷ ಗೌತಮ್ ಗಂಭೀರ್ ಅವರನ್ನು ಹರಾಜಿನಲ್ಲಿ ಖರೀದಿಸಿದ ಕೆಕೆಆರ್, ಕೂಡಲೇ ನಾಯಕತ್ವದ ಜವಾಬ್ದಾರಿಯನ್ನೂ ಅವರಿಗೆ ವಹಿಸಿತ್ತು. ಆ ನಿರ್ಧಾರ ತಂಡದ ಭವಿಷ್ಯವನ್ನೇ ಬದಲಿಸಿತು. ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ 2012 ಮತ್ತು 2014ರ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದು, ಲೀಗ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು.

ಗೌತಮ್‌ ಗಂಭೀರ್ ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡಕ್ಕೆ ಸೇರ್ಪಡೆಯಾದಾಗಲೂ, ಕೆಕೆಆರ್ ತನ್ನ ಹಳೆಯ ಆಟಗಾರರಿಗಿಂತ ಹೊಸ ನಾಯಕನನ್ನೇ ಹರಾಜಿನ ಮೂಲಕ ಹುಡುಕಿತು. 2018ರ ಐಪಿಎಲ್‌ಗೂ ಮುನ್ನ ತಂಡಕ್ಕೆ ಸೇರ್ಪಡೆಯಾದ ದಿನೇಶ್ ಕಾರ್ತಿಕ್ ಅವರಿಗೆ ನಾಯಕತ್ವ ನೀಡಲಾಯಿತು. ಕಾರ್ತಿಕ್ ತಂಡವನ್ನು ಪ್ಲೇಆಫ್‌ವರೆಗೆ ಮುನ್ನಡೆಸಿದರೂ, 2020ರ ಐಪಿಎಲ್ ಮಧ್ಯದಲ್ಲೇ ನಾಯಕತ್ವ ತ್ಯಜಿಸಿದ್ದರು. ಬಳಿಕ ಮತ್ತೊಬ್ಬ ಹರಾಜಿನ ಆಟಗಾರ ಇಯಾನ್ ಮಾರ್ಗನ್ ತಂಡದ ನಾಯಕರಾಗಿ ಅಧಿಕಾರ ವಹಿಸಿಕೊಂಡು, 2021ರಲ್ಲಿ ಕೆಕೆಆರ್ ಅನ್ನು ಐಪಿಎಲ್ ಫೈನಲ್‌ಗೆ ತಲುಪಿಸಿದ್ದರು.

ನಾಯಕನಾಗಿ, ಆಟಗಾರನಾಗಿ ಅಜಿಂಕ್ಯ ರಹಾನೆ ದಾಖಲೆ ಪಟ್ಟಿ ಹೀಗಿವೆ

2022ರಲ್ಲಿ ಕೆಕೆಆರ್ ನಾಯಕನಾಗಿದ್ದ ಶ್ರೇಯಸ್‌ ಅಯ್ಯರ್‌

ಈ ಪರಂಪರೆ 2022ರಲ್ಲೂ ಮುಂದುವರಿಯಿತು. ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿದ ಕೆಕೆಆರ್, ತಕ್ಷಣವೇ ನಾಯಕತ್ವದ ಜವಾಬ್ದಾರಿಯನ್ನೂ ಅವರಿಗೆ ನೀಡಿತ್ತು. ಅಯ್ಯರ್ ಕೂಡ ಫ್ರಾಂಚೈಸಿಯ ವಿಶ್ವಾಸವನ್ನು ಉಳಿಸಿಕೊಂಡು, 2024ರ ಐಪಿಎಲ್ ಪ್ರಶಸ್ತಿಯನ್ನು ಕೆಕೆಆರ್‌ಗೆ ಗೆದ್ದು ಕೊಟ್ಟಿದ್ದರು. ಅಯ್ಯರ್ ತಂಡವನ್ನು ತೊರೆದ ಬಳಿಕವೂ ಕೆಕೆಆರ್ ತನ್ನ ಹಳೆಯ ತಂತ್ರವನ್ನೇ ಅನುಸರಿಸಿತು. ಹರಾಜಿನ ಮೂಲಕ ಅಜಿಂಕ್ಯ ರಹಾನೆ ಅವರನ್ನು ಮತ್ತೆ ತಂಡಕ್ಕೆ ಕರೆತಂದು, 2025ರ ಐಪಿಎಲ್ ಋತುವಿಗೆ ನಾಯಕರಾಗಿ ನೇಮಿಸಿತು.

ಈಗ ರಹಾನೆ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ, ಕೆಕೆಆರ್ ಮತ್ತೊಮ್ಮೆ ಪರಿಚಿತ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಐದನೇ ಬಾರಿ ಹೊಸ ನಾಯಕನನ್ನು ಹುಡುಕಬೇಕಾದ ಪರಿಸ್ಥಿತಿ ತಂಡಕ್ಕೆ ಎದುರಾಗಿದೆ.

ಇದೀಗ ಕೆಕೆಆರ್ ಮತ್ತೊಮ್ಮೆ ಹರಾಜಿನ ಮೂಲಕ ಅನುಭವಿ ನಾಯಕನನ್ನು ತಂಡಕ್ಕೆ ಸೇರಿಸಿಕೊಳ್ಳುವ ತನ್ನ ಸಾಂಪ್ರದಾಯಿಕ ತಂತ್ರವನ್ನೇ ಮುಂದುವರಿಸುತ್ತದೆಯೇ ಅಥವಾ ಮೊದಲ ಬಾರಿ ತಂಡದೊಳಗಿನ ಆಟಗಾರನಿಗೆ ನಾಯಕತ್ವದ ಅವಕಾಶ ನೀಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಈ ವಾರ ಬೌಲಿಂಗ್ ಆರಂಭಿಸಲಿರುವ ಜಸ್ಪ್ರೀತ್ ಬುಮ್ರಾ; ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಫಿಟ್ ಸಾಧ್ಯತೆ

ಕೆಕೆಆರ್‌ನ ಮುಂದಿನ ನಾಯಕ ರಿಂಕು ಸಿಂಗ್‌?

ಕೆಕೆಆರ್ ತನ್ನ ಪ್ರಸ್ತುತ ತಂಡದೊಳಗೇ ಹೊಸ ನಾಯಕನನ್ನು ಆಯ್ಕೆ ಮಾಡಲು ನಿರ್ಧರಿಸಿದರೆ, ರಿಂಕು ಸಿಂಗ್ ಪ್ರಮುಖ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳುತ್ತಾರೆ. ಫ್ರಾಂಚೈಸಿ ಪರ ಹಲವು ವರ್ಷಗಳಿಂದ ಆಡುತ್ತಿರುವ ರಿಂಕು, ವಿಶ್ವಾಸಾರ್ಹ ಪಂದ್ಯ ವಿಜೇತರಾಗಿ ಗುರುತಿಸಿಕೊಂಡಿದ್ದು, ಡ್ರೆಸ್ಸಿಂಗ್ ರೂಮ್‌ನಲ್ಲೂ ಸಹ ಆಟಗಾರರ ಅಪಾರ ಗೌರವ ಗಳಿಸಿದ್ದಾರೆ. ಆದರೆ, ನಾಯಕತ್ವದ ಅನುಭವ ಮಾತ್ರ ಅವರಿಗೆ ಅತ್ಯಂತ ಸೀಮಿತವಾಗಿದೆ. ಹೀಗಾಗಿ ತಕ್ಷಣವೇ ಯಶಸ್ಸಿನ ಹಾದಿಗೆ ಮರಳುವ ಗುರಿಯಲ್ಲಿರುವ ಕೆಕೆಆರ್‌ಗೆ ರಿಂಕು ಅವರನ್ನು ನಾಯಕರನ್ನಾಗಿ ನೇಮಿಸುವುದು ಒಂದು ದೊಡ್ಡ ನಿರ್ಧಾರವಾಗಬಹುದು. ಆದರೂ ಅವರ ನಾಯಕತ್ವದ ಗುಣಗಳು ಮತ್ತು ತಂಡದೊಂದಿಗೆ ಇರುವ ಬಾಂಧವ್ಯ ಅವರನ್ನು ಪ್ರಮುಖ ಆಯ್ಕೆಯನ್ನಾಗಿ ಮಾಡಿದೆ.