ಅಧಿಕ ತೂಕದಿಂದ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲೂ ಪರದಾಟ; ಈಗ 85 ಕೆಜಿ ಇಳಿಸಿಕೊಂಡ 22 ವರ್ಷದ ಯುವಕ
Man loses 85 kg for mother: 22 ವರ್ಷದ ಯುವಕನೊಬ್ಬ ತನ್ನ ತಾಯಿಯ ನೆನಪಿಗಾಗಿ ತೂಕ ಇಳಿಸಿಕೊಂಡಿದ್ದಾನೆ. 160 ಕೆಜಿ ತೂಕವಿದ್ದ ಅವನು ಇದೀಗ 75 ಕೆಜಿಗೆ ತೂಕ ಇಳಿಕೆ ಮಾಡಿದ್ದಾನೆ. ನಿರಂತರ ವ್ಯಾಯಾಮ, ಸಮತೋಲಿತ ಆಹಾರ, ದೃಢಸಂಕಲ್ಪದಿಂದ ಈ ಪರಿವರ್ತನೆ ಮಾಡಿಕೊಂಡಿದ್ದು, ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದಾನೆ.
85 ಕೆಜಿ ತೂಕ ಇಳಿಸಿಕೊಂಡ 22 ವರ್ಷದ ಯುವಕ -
ನವದೆಹಲಿ: ತೂಕ ಇಳಿಸಿಕೊಳ್ಳುವುದು (weight loss) ಎಂದಿಗೂ ಸುಲಭವಲ್ಲ. ಇದಕ್ಕೆ ತಾಳ್ಮೆ, ಶಿಸ್ತು, ಸಾಕಷ್ಟು ಪ್ರಯತ್ನ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಎಲ್ಲ ಪ್ರಯತ್ನಗಳ ನಂತರವೂ, ಈ ಪ್ರಕ್ರಿಯೆಯು ಬಹಳ ನಿಧಾನವಾಗಿ ಸಾಗುತ್ತದೆ. ಆದರೆ ದೃಢ ನಿರ್ಧಾರವಿದ್ದರೆ ಎಂಥವೂ ಸಾಧ್ಯ ಅನ್ನೋದನ್ನು ಈ ಯುವಕನೊಬ್ಬ ಸಾಧಿಸಿ ತೋರಿಸಿದ್ದಾನೆ. ಇದರ ವಿಡಿಯೊ ವೈರಲ್ (Viral Video) ಆಗಿದೆ.
ಹೌದು, ಒಂದು ಕಾಲದಲ್ಲಿ 160 ಕೆಜಿ ತೂಕವಿದ್ದ 22 ವರ್ಷದ ಯುವಕ ಸೋಭಿಕ್ ಸಾಹು, ಸ್ಥಿರವಾದ ವ್ಯಾಯಾಮ ಮತ್ತು ಹೆಚ್ಚಿನ ಪ್ರೋಟೀನ್‍ಯುಕ್ತ ಆಹಾರವನ್ನು ಸೇವಿಸುವ ಮೂಲಕ 85 ಕೆಜಿ ತೂಕ ಇಳಿಸಿಕೊಂಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಭಾವನಾತ್ಮಕ ವಿಡಿಯೊದಲ್ಲಿ, ಸೋಭಿಕ್ ತನ್ನ ಪ್ರಯಾಣದ ವಿವರ ತೆರೆದಿಟ್ಟಿದ್ದಾನೆ. ತನ್ನ ದೇಹಕ್ಕಿಂತ ಹೃದಯದಲ್ಲಿ ಹೆಚ್ಚಿನ ಭಾರವನ್ನು ಹೊತ್ತುಕೊಂಡಿದ್ದಾಗಿ ಹೇಳಿದ್ದಾನೆ. ಆತನ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಅಧಿಕ ರಕ್ತದೊತ್ತಡ, ಟೈಪ್ 1 ಮಧುಮೇಹ, ಅಸ್ತಮಾ, ಸಂಧಿವಾತ ಇತ್ಯಾದಿ ಕಾಯಿಲೆಯೂ ವಕ್ಕರಿಸಿತ್ತು ಎಂದಿದ್ದಾನೆ.
ದೇಹದ ಒಳಗೆ ಅಡಗಿರುವ ಕೊಬ್ಬು ಕರಗಿಸುವುದು ಹೇಗೆ?
ಸೋಭಿಕ್‍ನ ಜೀವನವನ್ನು ಬದಲಾಯಿಸಿದ್ದು ತಾಯಿಯ ನಿಧನ. ಕೊರೋನಾ ಕಾಲದಲ್ಲಿ ಆತನ ತಾಯಿ ನಿಧನರಾದರು. ಆತನ ಗಾತ್ರದ ಕಾರಣದಿಂದಾಗಿ, ಪಿಪಿಇ ಕಿಟ್ ತುಂಬಾ ಚಿಕ್ಕದಾಗಿತ್ತು ಮತ್ತು ತುಂಬಾ ಬಿಗಿಯಾಗಿತ್ತು. ಇದರಿಂದ ಅದನ್ನು ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ತಾಯಿಯ ಅಂತಿಮ ವಿಧಿ-ವಿಧಾನಗಳನ್ನು ನಿರ್ವಹಿಸಲು ಅವಕಾಶವಿರಲಿಲ್ಲ. ಈ ಹೃದಯ ವಿದ್ರಾವಕ ಕಥೆಯನ್ನು ವಿವರಿಸಿದ್ದಾನೆ.
ʼʼನಾನು ಬಿಟ್ಟು ಕೊಡಲಿಲ್ಲ. ಅವಳಿಗೆ ನನ್ನ ಕೊನೆಯ ಕರ್ತವ್ಯವನ್ನು ಪೂರೈಸಲು ನಾನು ಎರಡು ಪಿಪಿಇ ಕಿಟ್ ಧರಿಸಿದ್ದೆ. ಆ ಕ್ಷಣ ಎಲ್ಲವನ್ನೂ ಬದಲಾಯಿಸಿತು. ಆ ದಿನ ನಾನು ಪ್ರತಿಜ್ಞೆ ಮಾಡಿದೆ. ನನ್ನ ಜೀವನಕ್ಕಾಗಿ ಮತ್ತು ನನ್ನನ್ನು ನಂಬಿದ ತಾಯಿಗಾಗಿ ನಾನು ಇನ್ನು ಮುಂದೆ ಹೀಗೆ ಬದುಕುವುದಿಲ್ಲ ಎಂದು ಅಂದೇ ನಿರ್ಧರಿಸಿದ್ದೆʼʼ ಎಂದು ಸೋಭಿಕ್ ಸ್ಮರಿಸಿಕೊಂಡಿದ್ದಾನೆ.
ಅಲ್ಲಿಂದ ಶುರುವಾಗಿದ್ದೇ ತೂಕ ಇಳಿಕೆಯ ಪ್ರಯಾಣ. ಹಾಗಂತ ಸೋಭಿಕ್ ಹಾದು ಬಂದ ದಾರಿ ಅದು ಹೂವಿನ ಹಾಸಿಗೆಯಾಗಿರಲಿಲ್ಲ. ಬೆವರು, ನೋವು ಇತ್ಯಾದಿ ಮೂಲಕ ಕಠಿಣ ಪ್ರಯಾಣ ಪ್ರಾರಂಭವಾಯಿತು. ಈಗ ಅವನ ತೂಕ 75 ಕೆಜಿ. ʼʼಇದು ನಾನು ನನ್ನ ತಾಯಿಗೆ ನೀಡಿದ ಗೌರವ. ಇದು ತೂಕ ಇಳಿಸುವ ಪ್ರಯತ್ನವಲ್ಲ. ಇದು ಪುನರ್ಜನ್ಮʼʼ ಎಂದು ಹೇಳಿದ್ದಾನೆ.
ಸೋಭಿಕ್ ರೂಪಾಂತರವನ್ನು ಸಂಪೂರ್ಣವಾಗಿ ತನ್ನ ತಾಯಿಗೆ ಅರ್ಪಿಸಿದ್ದಾನೆ. ಈ ರೂಪಾಂತರವು ಕೇವಲ ಒಂದು ಪ್ರಯಾಣವಲ್ಲ, ನನ್ನ ತಾಯಿ ನನಗೆ ಕಲಿಸಿದ ಎಲ್ಲದಕ್ಕೂ ಮತ್ತು ಅವರು ನನಗೆ ನೀಡಿದ ಪಾಲನೆಗೂ ಇದು ಗೌರವ. ಭರವಸೆ ಈಡೇರಿದೆ. ನಾನು ಫಿಟ್ ಆಗಿರುವುದನ್ನು ನೋಡುವುದು ಅವಳ ಕೊನೆಯ ಆಸೆಗಳಲ್ಲಿ ಒಂದಾಗಿತ್ತು. ಅದರಂತೆ, ಇಂದು ನಾನು 85 ಕೆಜಿ ಕಡಿಮೆ ಆಗಿದ್ದೇನೆ. 160 ಕೆಜಿಯಿಂದ ನನ್ನ ಪ್ರಯಾಣವನ್ನು ಪ್ರಾರಂಭಿಸಿ, 75 ಕೆಜಿಗೆ ಇಳಿದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದ್ದಾನೆ.
ಕಡಿಮೆ ಕ್ಯಾಲೋರಿ ಆಹಾರ ಸೇವಿಸಿ ತೂಕ ಇಳಿಸಿ- ಫಿಟ್‌ನೆಸ್ ತಜ್ಞರು ಹೇಳೋದೇನು?
ಸಾಮಾಜಿಕ ಮಾಧ್ಯಮ ಬಳಕೆದಾರರು ಸೋಭಿಕ್‍ನ ತೂಕ ಇಳಿಕೆಯ ಪ್ರಯಾಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ತಾಯಿ ಖಂಡಿತವಾಗಿಯೂ ಹೆಮ್ಮೆ ಪಡುತ್ತಾರೆ ಎಂದು ಹಲವರು ಉದ್ಗರಿಸಿದರು. ಜಗತ್ತು ಒಬ್ಬ ಹೋರಾಟಗಾರನನ್ನು ನೋಡುವ ಮೊದಲೇ ಅವಳು ಒಬ್ಬ ಹೋರಾಟಗಾರನನ್ನು ಬೆಳೆಸಿದಳು. ಇದು ಅವಳ ಗೆಲುವು ಕೂಡ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ತಾಯಿಗೊಂದು ಸಂದೇಶ
ನನ್ನ ತಾಯಿ ನನ್ನನ್ನು ಗಮನಿಸುತ್ತಿದ್ದರೆ, ಈಗ ಅವನ ಮಗ ದಿನಕ್ಕೆ ಹಲವಾರು ಬಾರಿ ತನ್ನ ರಕ್ತದೊತ್ತಡವನ್ನು ಪರೀಕ್ಷಿಸಬೇಕಾಗಿಲ್ಲ ಅಥವಾ ಪ್ರತಿ ಊಟದ ಸಮಯದಲ್ಲಿ ಹಲವಾರು ಔಷಧಿಗಳನ್ನು ಸೇವಿಸಬೇಕಾಗಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ನನ್ನ ಇಡೀ ಜೀವನದಲ್ಲಿ ನನಗೆ ಒಂದೇ ಒಂದು ವಿಷಾದವಿದೆ: ನನ್ನನ್ನು ಬೆಳೆಸಿದ ಮಹಿಳೆ ನಾನು ಎಷ್ಟು ದೂರ ಬಂದಿದ್ದೇನೆಂದು ನೋಡಲು ಸಾಧ್ಯವಾಗಲಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಸೋಭಿಕ್ ವಿವರಿಸಿದ್ದಾರೆ. ಈ ರೂಪಾಂತರವನ್ನು ಹೊಸ ಜೀವನದ ಆರಂಭ ಎಂದು ಕರೆದ ಸೋಭಿಕ್, ತನ್ನ ಪ್ರಯಾಣವು ತಾಯಿಗೆ ಹೆಮ್ಮೆ ತರುತ್ತದೆ ಎಂದು ಆಶಿಸಿದ್ದಾರೆ.