Dating app scam: ಗೇ ಡೇಟಿಂಗ್ ಆ್ಯಪ್ ಬಳಸಿ ಈ ವಂಚಕರು ಮಾಡಿದ್ದೇನು ಗೊತ್ತಾ?
ಗೇ ಡೇಟಿಂಗ್(Dating app scam) ಆ್ಯಪ್ ಬಳಸಿ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಅದನ್ನು ರೆಕಾರ್ಡ್ ಮಾಡಿ ನಂತರ ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡಿದ್ದ ಮೂವರನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತರೊಬ್ಬರ ದೂರಿನ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಗ್ಯಾಂಗ್ ಅನೇಕ ಸಂತ್ರಸ್ತರನ್ನು ಬ್ಲ್ಯಾಕ್‍ಮೇಲ್ ಮಾಡಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.
ಲಖನೌ: ಸಂಗಾತಿಯನ್ನು ಹುಡುಕಲು ಜನರಿಗೆ ಅನುಕೂಲವಾಗುವಂತೆ ಒಂದಷ್ಟು ಡೇಟಿಂಗ್ ಆ್ಯಪ್‍ಗಳು ಇವೆ. ಆದರೆ ಇದನ್ನು ಬಳಸಿಕೊಂಡು ಕೆಲವು ವಂಚಕರು ಜನರನ್ನು ವಂಚನೆ ಜಾಲಕ್ಕೆ ಸಿಲುಕಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪ್ರಕರಣಗಳು ಈ ಹಿಂದೆ ಹಲವು ವರದಿಯಾಗಿದ್ದವು, ಇದೀಗ ಗೇ ಡೇಟಿಂಗ್(Dating app scam) ಆ್ಯಪ್ ಬಳಸಿ ವ್ಯಕ್ತಿಗಳೊಂದಿಗೆ ಸಂಬಂಧವನ್ನು ಬೆಳೆಸಿ, ಆ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸಿ ನಂತರ ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ರಿಂಕು, ಅಜಯ್ ಮತ್ತು ಶುಭಂ ಎಂದು ಗುರುತಿಸಲಾಗಿದ್ದು, ಇತರ ಇಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತರೊಬ್ಬರು ವಂಚಕರು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ವರದಿ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು ಸಂಬಂಧ ಹೊಂದಿ ಕೊನೆಗೆ ಅದನ್ನು ಅನುಮತಿಯಿಲ್ಲದೆ ರೆಕಾರ್ಡ್ ಮಾಡಿಕೊಂಡು ಅವರಿಂದ 1.40 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದಾರಂತೆ. ಈ ಬಗ್ಗೆ ಸಂತ್ರಸ್ತ ಪೊಲೀಸರನ್ನು ಸಂಪರ್ಕಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಎನ್‍ಡಿಆರ್‌ಎಫ್ ರಸ್ತೆಯ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಸ್ವತಂತ್ರ ಕುಮಾರ್ ಸಿಂಗ್ ಹೇಳಿದ್ದಾರೆ. ವರದಿ ಪ್ರಕಾರ, ಮಾಸ್ಟರ್ ಮೈಂಡ್ ಎಂದು ಹೇಳಲಾದ ರಿಂಕು ಈ ಯೋಜನೆಯನ್ನು ಆಯೋಜಿಸಿದ್ದರೆ, ಅಜಯ್ ಸಂತ್ರಸ್ತರನ್ನು ಆಕರ್ಷಿಸುವ ಕೆಲಸ ಮಾಡಿದ್ದಾನಂತೆ.
ಈ ಸುದ್ದಿಯನ್ನೂ ಓದಿ:Viral News: ಕೆಲ್ಸ ಕೊಡಿಸೋ ನೆಪದಲ್ಲಿ ನಡೆಯುತ್ತಿದೆ ಭಾರೀ ವಂಚನೆ-ಯುವಕರೇ ಎಚ್ಚರ...ಎಚ್ಚರ!
ರಿಂಕುನಿಂದ ಮೂರು ಮೊಬೈಲ್ ಫೋನ್‍ಗಳು, 10,000 ರೂ ನಗದು ಮತ್ತು ಗುರುತಿನ ಚೀಟಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜನವರಿ 2 ರಂದು ಬಾಡಿಗೆ ಫ್ಲ್ಯಾಟ್‍ಗೆ ಸ್ಥಳಾಂತರಗೊಂಡಾಗಿನಿಂದ ಈ ಗ್ಯಾಂಗ್ ಅನೇಕ ಸಂತ್ರಸ್ತರನ್ನು ಬ್ಲ್ಯಾಕ್‍ಮೇಲ್ ಮಾಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.