ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

V‌iral Video: ಫ್ಲೈಓವರ್‌ನಿಂದ ಉರುಳಿ ಬಿದ್ದ ಗ್ಯಾಸ್‌ ಟ್ಯಾಂಕರ್- ಶಾಕಿಂಗ್‌ ವಿಡಿಯೊ ಇಲ್ಲಿದೆ

V‌iral Video: ಮಹಾರಾಷ್ಟ್ರದ ಪಾಲ್ಘರ್‌ನ ಮ್ಯಾನರ್‌ನ ಮಸನ್ ನಾಕಾದಲ್ಲಿ ಜನನಿಬಿಡ ಜಂಕ್ಷನ್‌ನಲ್ಲಿರುವ ಫ್ಲೈಓವರ್‌ನಿಂದ ‌ಟ್ಯಾಂಕರ್‌ವೊಂದು ಸರ್ವಿಸ್‌ ರಸ್ತೆಗೆ ಉರುಳಿ ಬಿದ್ದಿದೆ. ಟ್ಯಾಂಕರ್‌ ಬಿದ್ದಿದ್ದೇ ತಡ ತಮ್ಮ ತಮ್ಮ ಜೀವ ಉಳಿಸಿಕೊಳ್ಳಲು ಜನರು ಎದ್ನೋ ಬಿದ್ನೋ ಎಂಬಂತೆ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಯದ್ವಾತದ್ವ ಚಲಿಸಿದ್ದರಿಂದ ಈ ಅಪಘಾತ ಉಂಟಾಗಿದೆ.

ಫ್ಲೈಓವರ್‌ನಿಂದ ಉರುಳಿ ಬಿದ್ದ ಗ್ಯಾಸ್‌ ಟ್ಯಾಂಕರ್; ವಿಡಿಯೊ ಫುಲ್‌ ವೈರಲ್‌

Profile Sushmitha Jain Mar 31, 2025 1:27 PM

ಮುಂಬೈ: ರಸ್ತೆ ಅಪಘಾತ(Road Accident)ಗಳು ಅನಿರೀಕ್ಷಿತ. ಕೆಲವೊಮ್ಮೆ ಅವು ನಮ್ಮ ಜೀವನದಲ್ಲಿ ಅಳಿಸಲಾಗದ ನೋವನ್ನುಂಟು ಮಾಡಿದರೆ, ಇನ್ನು ಕೆಲವೊಮ್ಮೆ ʼಅಬ್ಬಾ… ಬಚಾವಾದೆವುʼ ಎಂದು ನಿಟ್ಟುಸಿರು ಬಿಡುವಂತೆ ಮಾಡುತ್ತವೆ. ಅದರಲ್ಲೂ, ಅತ್ಯಂತ ಅಪಾಯಕಾರಿಯಾದ, ಶೀಘ್ರವೇ ಬೆಂಕಿ ಹೊತ್ತಿಕೊಳ್ಳುವ ಸಾಮರ್ಥ್ಯ ಇರುವ ರಾಸಾಯನಿಕ ಅಥವಾ ಇಂಧನಗಳನ್ನು ಹೊತ್ತೊಯ್ಯುವ ಟ್ಯಾಂಕರ್‌ಗಳ ಅಪಘಾತ, ಕೇವಲ ವಾಹನದಲ್ಲಿ ಇರುವವರಿಗಷ್ಟೇ ಅಲ್ಲದೇ ಆ ಪರಿಸರದಲ್ಲಿ ವಾಸಿಸುವ ಎಲ್ಲರ ಜೀವಕ್ಕೂ ಅಪಾಯವನ್ನು ಉಂಟು ಮಾಡುತ್ತದೆ. ಹೆದ್ದಾರಿಗಳಲ್ಲಿ, ಅದರಲ್ಲೂ ಘಾಟ್‌ ರಸ್ತೆಗಳ ತಿರುವುಗಳಲ್ಲಿ ಈ ಚಾಲಕ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹುದ್ದೇ ಒಂದು ಘಟನೆಗೆ ಮಹಾರಾಷ್ಟ್ರದ ಪಾಲ್ಘರ್‌ ಸಾಕ್ಷಿಯಾಗಿದೆ.

ಮಹಾರಾಷ್ಟ್ರದ ಪಾಲ್ಘರ್‌ನ ಮುಂಬೈ-ಅಹಮದಾಬಾದ್ ಹೆದ್ದಾರಿ(Mumbai-Ahmedabad Highway) ಯಲ್ಲಿ ಭಾನುವಾರ ಎಂದಿನಂತೆ ಸಂಚಾರವಿತ್ತು. ಅತ್ಯಂತ ಸಂಚಾರ ದಟ್ಟಣೆ ಇರುವ ಹೆದ್ದಾರಿ ಇದಾಗಿದ್ದು, ಹಲವಾರು ವಾಹನಗಳು ಸಂಚರಿಸುತ್ತಿದ್ದವು. ಆದರೆ, ಸಂಜೆ 4:55 ಕ್ಕೆ, ಸೀಮೆಎಣ್ಣೆ ತುಂಬಿದ ಟ್ಯಾಂಕರ್(Tanker Filled With Flammable Oil) ಒಂದು ಫ್ಲೈಓವರ್‌ನಿಂದ ಬಿದ್ದ ಬಳಿಕ ಪಾಲ್ಘರ್‌ನ ಮ್ಯಾನರ್‌ನ ಮಸನ್ ನಾಕಾದ ಚಿತ್ರಣವೇ ಬದಲಾಯಿತು. ಎಲ್ಲರೂ ಆತಂಕದ ಸನ್ನಿವೇಶವನ್ನು ಈ ಅಪಘಾತ ಸೃಷ್ಟಿ ಮಾಡಿತ್ತು.

ನಿನ್ನೆ ನಡೆದ ಈ ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಾಲ್ಘರ್‌ನ ಮ್ಯಾನರ್‌ನ ಮಸನ್ ನಾಕಾದಲ್ಲಿ ಜನನಿಬಿಡ ಜಂಕ್ಷನ್‌ನಲ್ಲಿರುವ ಫ್ಲೈಓವರ್‌ನಿಂದ ‌ಟ್ಯಾಂಕರ್‌ವೊಂದು ಸರ್ವಿಸ್‌ ರಸ್ತೆಗೆ ಉರುಳಿ ಬಿದ್ದಿದೆ. ಟ್ಯಾಂಕರ್‌ ಬಿದ್ದಿದ್ದೇ ತಡ ತಮ್ಮ ತಮ್ಮ ಜೀವ ಉಳಿಸಿಕೊಳ್ಳಲು ಜನರು ಎದ್ನೋ ಬಿದ್ನೋ ಎಂಬಂತೆ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಯದ್ವಾತದ್ವ ಚಲಿಸಿದ್ದರಿಂದ ಈ ಅಪಘಾತ ಉಂಟಾಗಿದೆ.



ಈ ಸುದ್ದಿಯನ್ನು ಓದಿ: Viral Video: ಧೋತಿ ಉಟ್ಟ ಅಜ್ಜನ ಕ್ರಿಕೆಟ್‌ ಕ್ರೇಜ್‌ಗೆ ಫಿದಾ ಆಗದವರುಂಟೇ? ಈ ವಿಡಿಯೊ ನೋಡಿ

ಟ್ಯಾಂಕರ್‌ ಸರ್ವಿಸ್‌ ರಸ್ತೆಗೆ ಉರುಳಿದ ಮರುಕ್ಷಣವೇ ಅದಕ್ಕೆ ಬೆಂಕಿ ಹತ್ತಿಕೊಂಡಿದ್ದು, ರಸ್ತೆಯ ಮೇಲೆಲ್ಲಾ ಕಪ್ಪು ಸೀಮೆಎಣ್ಣೆ ಹರಡಲು ಆರಂಭವಾಗಿದೆ. ಟ್ಯಾಂಕರ್‌ ಸ್ಫೋಟಗೊಳ್ಳುವ ಭಯದಿಂದ ಎಲ್ಲರೂ ದೂರ ಓಡಿ ಸೇಫಾಗಿದ್ದಾರೆ.

ಅಪಘಾತದ ಮಾಹಿತಿ ಅರಿತ ತಕ್ಷಣವೇ ಸ್ಥಳಕ್ಕೆ ತಲುಪಿದ ಅಧಿಕಾರಿಗಳು ಟ್ರಾಫಿಕ್‌ ತಡೆದು, ಟ್ಯಾಂಕರ್‌ಗೆ ಹತ್ತಿದ ಬೆಂಕಿಯನ್ನು ಆರಿಸಲು ಕ್ರಮ ಕೈಗೊಂಡಿದ್ದಾರೆ. ಮಾತ್ರವಲ್ಲದೇ, ಸ್ಥಳದಲ್ಲಿ ಚೆಲ್ಲಿದ ಸೀಮೆಎಣ್ಣೆಯನ್ನು ಸುರಕ್ಷತಾ ನಿಯಮಗಳ ಪ್ರಕಾರ ಸ್ವಚ್ಛಗೊಳಿಸಿದ್ದಾರೆ. ಜನರು ಈ ಪ್ರದೇಶದಿಂದ ದೂರವಿರಲು ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಘಟನೆ ಏಕೆ ನಡೆಯಿತು? ಇದು ಚಾಲನ ನಿರ್ಲಕ್ಷ್ಯವೇ? ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಕರ್ನಾಟಕದಲ್ಲೂ ನಡೆದಿತ್ತು ಟ್ಯಾಂಕರ್‌ ದುರಂತ:

2013ರ ಏಪ್ರಿಲ್ 9ರಂದು ದಕ್ಷಿಣ ಕನ್ನಡದ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ಅಪಾಯಕಾರಿ ಅನಿಲ ಹೊತ್ತೊಯ್ಯುತ್ತಿದ್ದ ಟ್ಯಾಂಕರ್‌ ಪಲ್ಟಿಯಾಗಿ ದುರಂತವೇ ಸಂಭವಿಸಿತ್ತು. ಘಟನೆಯಿಂದಾಗಿ 9 ಜನರು ಸ್ಥಳದಲ್ಲಿಯೇ ಬೆಂಕಿ ಹೊತ್ತುಕೊಂಡು ಮೃತಪಟ್ಟರೆ, ಇನ್ನೂ ನಾಲ್ಕು ಜನರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಘಟನೆ ನಡೆದು 12 ವರ್ಷಗಳು ಕಳೆದಿದ್ದರೂ, ಇನ್ನೂ ಆ ಘಟನೆ ನೋವು ಅಲ್ಲಿನ ಜನರ ಮನಸ್ಸಿನಿಂದ ಮಾಸಿಲ್ಲ.