Viral Video: ಏಕಾಏಕಿ ಬಾಯಿತೆರೆದು ಬೈಕ್ ಸವಾರನನ್ನು ನುಂಗಿದ ಭೂಮಿ, ಭಯಾನಕ ವೀಡಿಯೋ ವೈರಲ್
Viral Video: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಜನನಿಬಿಡ ರಸ್ತೆಯ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆಯೊಳಗೆ ಬೈಕ್ ಬಿದ್ದಿದ್ದು, ಹೊಂಡದೊಳಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಬೈಕ್ ಸವಾರ ದೈತ್ಯ ಗುಂಡಿಯೊಳಗೆ ಕಣ್ಮರೆಯಾಗುವುದನ್ನು ಮತ್ತು ಅವನ ಮುಂದೆ ಇದ್ದ ಕಾರು ಪಾರಾಗುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.


ಸಿಯೋಲ್; ಮನುಷ್ಯರು ಎಷ್ಟೇ ಆಧುನಿಕತೆಯತ್ತ ಸಾಗಿದರೂ, ಕೆಲವೊಮ್ಮೆ ನಡೆಯುವ ದುರ್ಘಟನೆಗಳನ್ನು ನಮ್ಮಿಂದ ತಡೆಯಲು ಸಾಧ್ಯವಾಗುವುದಿಲ್ಲ. ಮುಗಿಲೆತ್ತರದ ಕಟ್ಟಡಗಳು, ನಯವಾದ ರಸ್ತೆ ಎಲ್ಲವೂ ಇದ್ದರೂ, ಅಪಘಾತಗಳನ್ನು ಮಾತ್ರ ಎಂದಿಗೂ ಊಹಿಸಲಾಗುವುದಿಲ್ಲ. ಇಂತಹುದೇ ಒಂದು ಘಟನೆಗೆ ದಕ್ಷಿಣ ಕೊರಿಯಾ(South Korea)ದ ಜನರು ಸಾಕ್ಷಿಯಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿಯೇ ರಸ್ತೆಯೊಂದು ಇದ್ದಕ್ಕಿದ್ದಂತೆ ಬಾಯ್ತೆರದು(Sinkhole) ಬೈಕ್ ಸವಾರನ (motorcyclist vanished)ಜೀವವನ್ನು ಬಲಿಪಡೆದಿದೆ. ಈ ಘಟನೆ ನಡೆದಿದ್ದು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ. ಬೈಕ್ ಸವಾರನೊಬ್ಬ ಎಂದಿನಂತೆ ರಸ್ತೆಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ತೆರೆದುಕೊಂಡ ಸಿಂಕ್ ಹೋಲ್ ಬೈಕ್ ಸಮೇತ ಆತನನ್ನು ನುಂಗಿ ಹಾಕಿದೆ. ಈ ಭಯಾನಕ ದೃಶ್ಯ, ಬೈಕ್ ಹಿಂದೆ ಇದ್ದ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗುತ್ತಿದೆ.
ಬೈಕ್ ಸವಾರನ ಮುಂದೆ ಇದ್ದಂತಹ ಕಾರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿರುವುದು ಕೂಡಾ ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ. ಆ ಕಾರು ಚಾಲಕನ ಅದೃಷ್ಟ ಚೆನ್ನಾಗಿತ್ತೇನೋ, ಆದರೆ ಬೈಕ್ ಚಾಲಕ ಮಾತ್ರ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ದಿ ಚೋಸನ್ ಡೈಲಿ ಎಂಬ ಮಾಧ್ಯಮದ ವರದಿಯ ಪ್ರಕಾರ, ಮೃತ ಬೈಕ್ ಚಾಲಕನನ್ನು ಪಾರ್ಕ್ ಎಂದು ಗುರುತಿಸಲಾಗಿದೆ. ಈತನ ಮುಂದೆ ಚಲಿಸುತ್ತಿದ್ದ ಕಾರಿನಡಿಯಲ್ಲಿ ನೆಲ ಏಕಾಏಕಿ ಕುಸಿದು, ಬೃಹತ್ ಸಿಂಕ್ ಹೋಲ್ ನಿರ್ಮಾಣವಾಗಿತ್ತು. ಆದರೆ, ಅ ಕಾರು ನೆಲದಿಂದ ಪುಟಿದೆದ್ದು ಅಪಘಾತದಿಂದ ತಪ್ಪಿಸಿಕೊಂಡಿತ್ತು.
NEW: Motorcyclist who vanished into a sinkhole on Monday, found deceased after an 18-hour search.
— Collin Rugg (@CollinRugg) March 25, 2025
The man was seen riding his motorcycle on a road in Seoul, South Korea when a 65 feet wide and 65 feet deep sinkhole opened up.
The motorcyclist was identified by officials as… pic.twitter.com/K0uE8PKHLR
ಈ ಸುದ್ದಿಯನ್ನು ಓದಿ:Viral Video: ಭಾರತ vs ಪಾಕಿಸ್ತಾನ- ಆತಿಥ್ಯದ ವಿಷಯದಲ್ಲಿ ಯಾರು ಉತ್ತಮರು? ಕೆನಡಾ ಪ್ರವಾಸಿಗ ಹೇಳೋದೇನು?
ಆ ಕಾರಿನ ಹಿಂದೆಯೇ ಸಾಗುತ್ತಿದ್ದ ಪಾರ್ಕ್ ತನ್ನ ಬೈಕ್ ನಿಲ್ಲಿಸಲು ಸಾಧ್ಯವಾಗದ ಕಾರಣ ನೇರವಾಗಿ ಸಿಂಕ್ ಹೋಲ್ ಒಳಗೆ ಬಿದ್ದಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಸುಮಾರು 2 ಗಂಟೆಗಳ ಕಾರ್ಯಾಚರಣೆಯ ನಂತರ ತಂಡವು ಮೋಟಾರ್ ಸೈಕಲನ್ನು ಪತ್ತೆ ಹಚ್ಚಿದ್ದು, ಅದು ನೆಲಮಟ್ಟದಿಂದ ಸುಮಾರು 30 ಮೀಟರ್ ಆಳದಲ್ಲಿತ್ತು. ಬೈಕ್ ಸಿಕ್ಕಿದರೂ, ಸವಾರನ ಸುಳಿವೇ ಸಿಗದ ಕಾರಣ ಮತ್ತೆ ರಕ್ಷಣಾ ಕಾರ್ಯಾಚರಣೆಯನ್ನು ಎರಡನೇ ದಿನವೂ ಮುಂದೂಡಲಾಯಿತು.
ಸತತ 18 ಗಂಟೆಗಳ ಕಾರ್ಯಾಚರಣೆಯ ನಂತರ ಸಿಂಕ್ ಹೋಲ್‌ಗೆ ಬಿದ್ದಿದ್ದ ಪಾರ್ಕ್ ಹೃದಯಾಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಅಷ್ಟರಲ್ಲಾಗಲೇ ಅವರು ಜೀವ ಕಳೆದುಕೊಂಡಿದ್ದರು. ಆ ಸಿಂಕ್ ಹೋಲ್ ಸುಮಾರು 20 ಮೀಟರ್ ಅಗಲವಿತ್ತು ಎಂದು ವರದಿಗಳು ಹೇಳಿವೆ.
"30ರ ಹರೆಯದ ಆ ವ್ಯಕ್ತಿ ಬೆಳಿಗ್ಗೆ 11:22ಕ್ಕೆ ಹೃದಯ ಸ್ತಂಭನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ" ಎಂದು ಗ್ಯಾಂಗ್‌ಡಾಂಗ್ ವಾರ್ಡ್‌ನ ಅಗ್ನಿಶಾಮಕ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದ ತಕ್ಷಣವೇ ಗ್ಯಾಂಗ್‌ಡಾಂಗ್ ವಾರ್ಡ್‌ನ ಆಸುಪಾಸಿನಲ್ಲಿದ್ದ ನಾಲ್ಕು ಶಾಲೆಗಳನ್ನು ಭದ್ರತಾ ಕಾರಣಗಳಿಗಾಗಿ ಮುಚ್ಚಲಾಗಿದ್ದು, ನೀರು ಮತ್ತು ಅನಿಲ ಪೂರೈಕೆಯನ್ನೂ ಸ್ಥಗಿತಗೊಳಿಸಲಾಗಿದೆ.
"ಸುರಂಗಮಾರ್ಗ ನಿರ್ಮಾಣ ಕಾರ್ಯ ಕೈಗೊಂಡಿದ್ದರಿಂದ ಈ ರೀತಿ ಸಂಭವಿಸಬಹುದು. ಆ ಸಾಧ್ಯತೆಯನ್ನು ನಾವು ತಳ್ಳಿಹಾಕುತ್ತಿಲ್ಲ. ಘಟನೆಗೆ ನಿಖರವಾದ ಕಾರಣ ಏನೆಂದು ತಿಳಿಯಲು ನಾವು ಅದರ ಮೌಲ್ಯಮಾಪನ ಮಾಡಬೇಕಿದೆ. ಅಲ್ಲಿಯವರೆಗೂ ಏನೂ ಹೇಳಲಾಗುವುದಿಲ್ಲ" ಎಂದು ಸಿಯೋಲ್ ಮೆಟ್ರೋಪಾಲಿಟನ್ ಸರ್ಕಾರಿ ಅಧಿಕಾರಿಯೊಬ್ಬರು ದಿ ಚೋಸನ್ ಡೈಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.