Lokesh Kaayarga Column: ಹೆತ್ತವರನ್ನು ಹೊರಗಟ್ಟಿ ಗಂಗೆಯಲ್ಲಿ ಮಿಂದರೇನು ಫಲ ?
ಬದಲಾದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾಲ ಘಟ್ಟದಲ್ಲಿ ಅತ್ಯಂತ ಹೆಚ್ಚು ಶಿಥಿಲ ವಾಗಿರುವುದು ನಮ್ಮ ಕುಟುಂಬ ವ್ಯವಸ್ಥೆ. ಈ ಕುಟುಂಬ ವ್ಯವಸ್ಥೆಯನ್ನು ಪರಸ್ಪರ ಪ್ರೀತಿ, ವಿಶ್ವಾಸ, ಕಾಳಜಿ, ಗೌರವಗಳಿಂದಷ್ಟೇ ಬಲಪಡಿಸಲು ಸಾಧ್ಯ. ಸಹಾಯವಾಣಿ, ದೂರಿನ ವ್ಯವಸ್ಥೆ, ಕಾನೂನುಗಳು ಹಿರಿಯ ನಾಗರಿಕರಿಗೆ ತಾತ್ಕಾಲಿಕ ಉರುಗೋಲುಗಳಾಗಬಹುದೇ ವಿನಾ ಮನಸ್ಸಿಗೆ ನೆಮ್ಮದಿ, ಸಾಂತ್ವನ ನೀಡಲಾರದು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರೀತಿ, ವಿಶ್ವಾಸದ ಒರತೆ ತುಂಬಿ ಮಾನವೀಯ ಮೌಲ್ಯಗಳು ಬತ್ತಿ ಹೋಗದಂತೆ ನೋಡಿಕೊಳ್ಳಬೇಕಿದೆ. ಹೆತ್ತವರ ಕೈಯಲ್ಲಿ ಆಸ್ತಿ ಬರೆಸಿಕೊಂಡು, ಹೊರ ತಳ್ಳುವ ಮಕ್ಕಳ ಸಂತಾನ ಹೆಚ್ಚಾಗದಿರಲೆಂದು ಪ್ರಾರ್ಥಿಸಬೇಕಿದೆ.

ಕಾರ್ಯನಿರ್ವಾಹಕ ಸಂಪಾದಕ ಹಾಗೂ ಅಂಕಣಕಾರ ಲೋಕೇಶ್ ಕಾಯರ್ಗ

ಲೋಕಮತ
ಲೋಕೇಶ್ ಕಾಯರ್ಗ
ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಮಹಾ ಕುಂಭಮೇಳ ಮುಗಿದ ಬಳಿಕ ಉತ್ತರ ಪ್ರದೇಶ ಸರಕಾರಕ್ಕೆ ಎರಡು ಪ್ರಮುಖ ಸವಾಲುಗಳು ಎದುರಾದವು. ಮೊದಲನೆಯದು ತ್ಯಾಜ್ಯವಿಲೇವಾರಿ. 50 ಕೋಟಿ ಗೂ ಹೆಚ್ಚು ಜನರು ಬಂದು ಮಿಂದ ತ್ರಿವೇಣಿ ಸಂಗಮದ ತಟ ಮತ್ತು ನದಿಯುದ್ದಕ್ಕೂ ಬಟ್ಟೆ, ಪ್ಲಾಸ್ಟಿಕ್ ಬಾಟಲಿ, ಚಪ್ಪಲಿ, ಭಕ್ತರು ಹರಕೆ ರೂಪದಲ್ಲಿ ನದಿಗೆಸೆದ ದ್ರವ್ಯ ಪದಾರ್ಥಗಳಿದ್ದವು. ಈ ಸಮಸ್ಯೆ ನಿರೀಕ್ಷಿತವೇ ಆಗಿತ್ತು. ಕುಂಭ ಮೇಳ ಮುಕ್ತಾಯವಾದ ಮರು ಕ್ಷಣವೇ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾವಿರಾರು ಸಂಖ್ಯೆಯ ಪೌರ ಕಾರ್ಮಿಕರನ್ನು ಸೇರಿ ಕೊಂಡು ಖುದ್ದಾಗಿ ಸ್ವಚ್ಛತಾ ಕಾರ‍್ಯಕ್ಕೆ ಚಾಲನೆ ನೀಡಿದರು. ಪೌರ ಕಾರ್ಮಿಕರ ಜತೆ ಭೋಜನ ಸವಿದು, 10 ಸಾವಿರ ರು.ಗಳ ಬೋನಸ್ ಘೋಷಿಸಿ ಹುರಿದುಂಬಿಸಿದರು.
ಆದರೆ ಇದೇ ತಟದಲ್ಲಿ ಒಡ ಹುಟ್ಟಿದ ಮಕ್ಕಳು, ಮನೆಯವರು ಅಕ್ಷರಶ: ತ್ಯಾಜ್ಯದ ರೀತಿಯಲ್ಲಿಯೇ ತೊರೆದು ಹೋದ ಸಾವಿರಾರು ಸಂಖ್ಯೆಯ ಹಿರಿಯ ಜೀವಗಳಿದ್ದರು. ಅವರನ್ನು ಏನು ಮಾಡ ಬೇಕೆಂದು ಸಿಎಂ ಯೋಗಿ ಅದಿತ್ಯನಾಥ್ ಅವರಿಗೂ ತಿಳಿದಿರಲಿಲ್ಲ. ಉತ್ತರ ಪ್ರದೇಶ ಸರಕಾರಕ್ಕೆ ಇದೇನೂ ಹೊಸ ವಿದ್ಯಮಾನವಲ್ಲ. ಕಾಶಿಯಲ್ಲಿ ಆಶ್ರಯ ಪಡೆದ ನೂರಾರು ಹಿರಿ ಜೀವಗಳಲ್ಲಿ ಎಲ್ಲರೂ ತಾವಾಗಿಯೇ ಬಂದವರಲ್ಲ.
ಇದನ್ನೂ ಓದಿ: Lokesh Kaayarga Column: ಮತ್ತದೇ ಬೊಫೋರ್ಸ್ ಫಿರಂಗಿ ಸದ್ದು !
ಅನೇಕರನ್ನು ಅವರ ಮಕ್ಕಳೇ ಇಲ್ಲಿ ತೊರೆದು ಹೋಗುತ್ತಾರೆ. ಹೆತ್ತವರು ಭಾರವೆನಿಸಿದ ಮಕ್ಕಳಿಗೆ ಅವರನ್ನು ಸುಲಭದಲ್ಲಿ ದೂರ ಮಾಡಲು ಇರುವ ಸುಲಭ ಮಾರ್ಗ ಎಂದರೆ ಇಂತಹ ಜಾತ್ರೆಗಳು, ಮೇಳಗಳು. ಇದು ನಮ್ಮ ಪುರಾತನ ಸಂಸ್ಕೃತಿ, ಸಂಪ್ರದಾಯದ ಮತ್ತೊಂದು ಮುಖ. ಬಹುಷ: ಇಂತವರನ್ನು ನೋಡಿಯೇ ಪುರಂದರ ದಾಸರು, ಐದು ಶತಮಾನಗಳ ಹಿಂದೆಯೇ, ‘ಹೀನ ಗುಣಗಳ ಹಿಂಗದೆ ಗಂಗೆಯ ಸ್ನಾನವ ಮಾಡಿದರೇನು ಫಲ ?’ ಎಂದು ಹಾಡಿರಬೇಕು.
ಪ್ರಯಾಗದ ಮಹಾಕುಂಭ ಮೇಳ ಮುಕ್ತಾಯವಾಗಿ ಮೂರು ವಾರಗಳ ಬಳಿಕ ಈ ವಿಷಯ ನೆನಪಾ ಗಲು ಕಾರಣವಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯಲ್ಲಿ ಮಾತನಾಡುತ್ತಾ, ‘ಹಿರಿಯ ನಾಗರಿಕರಿಗೆ ತಮ್ಮ ಮಕ್ಕಳ ಹೆಸರಿಗೆ ಬರೆದ ವಿಲ್ ಅಥವಾ ದಾನಪತ್ರ ರದ್ದು ಪಡಿಸುವ ಅವಕಾಶವಿದೆ. ಒಂದು ವೇಳೆ ಮಕ್ಕಳು ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅನಿಸಿ ದರೆ ಆಯಾ ತಾಲ್ಲೂಕಿನ ಸಹಾಯಕ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿ ದಾನ ಪತ್ರ ಇಲ್ಲವೇ ಮರಣ ಶಾಸನ ಪತ್ರ ರದ್ದು ಮಾಡಬಹುದು’ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹಿರಿಯ ನಾಗರಿಕರನ್ನು ನಿರ್ಲಕ್ಷಿಸುವ, ಮಕ್ಕಳೇ ಹೆತ್ತವರನ್ನು ಬೀದಿಗಟ್ಟುವ, ಆಶ್ರಮ ಗಳಿಗೆ ಸೇರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದ ಸದನದಲ್ಲಿ ನಿಂತು ಈ ಕಾನೂನಿನ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ ಎಂದು ಸಚಿವರು ಈ ಹೇಳಿಕೆಯ ಹಿಂದಿನ ಉದ್ದೇಶವನ್ನೂ ಬಿಚ್ಚಿಟ್ಟರು.
ಇದಾದ ಬೆನ್ನಿಗೇ ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬಿಐಎಂಎಎಸ್) ೧೫೦ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಬಂಧು ಬಳಗದವರೇ ಬಿಟ್ಟು ಹೋಗಿರುವ ಸ್ಫೋಟಕ ವಿಷಯ ತೆರೆದಿಟ್ಟರು. ರಾಜ್ಯದಾದ್ಯಂತ ಇತರ ವೈದ್ಯಕೀಯ ಸಂಸ್ಥೆ ಗಳಲ್ಲಿ 100ಕ್ಕೂ ಹೆಚ್ಚು ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ’ ಎಂದು ಸಚಿವರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ, ಹಲವಾರು ವೃದ್ಧ ಪೋಷಕರನ್ನು ಅವರ ಮಕ್ಕಳು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗು ತ್ತಿದ್ದಾರೆ. ತಮ್ಮ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿದ ನಂತರ ಸರಕಾರಿ ಆಸ್ಪತ್ರೆಗಳಲ್ಲಿ ಪೋಷಕ ರನ್ನು ಬಿಟ್ಟು ಹೋಗುವ ಪ್ರಕರಣಗಳಲ್ಲಿ ಮಕ್ಕಳ ಹೆಸರಿಗೆ ಆಗಿರುವ ವಿಲ್ ಮತ್ತು ಆಸ್ತಿ ವರ್ಗಾವಣೆ ಯನ್ನು ರದ್ದುಗೊಳಿಸುವಂತೆ ಸಚಿವ ಶರಣ ಪ್ರಕಾಶ್ ಪಾಟೀಲ್ ಕೂಡ ಸಲಹೆ ನೀಡಿದ್ದಾರೆ.
ಮೌಲ್ಯಗಳ ಕುಸಿತ
ಕಾನೂನಿನ ಮಾತು ಒತ್ತಟ್ಟಿಗಿರಲಿ, ‘ತಂದೆ-ತಾಯಿಯರು, ಗುರು, ಹಿರಿಯರು ದೇವರ ಸಮಾನ’ ಎಂದು ಹೇಳಿಕೊಳ್ಳುವ, ಇದು ನಮ್ಮ ಸಂಸ್ಕೃತಿ ಎಂದು ತಟ್ಟಿಕೊಳ್ಳುವ ದೇಶದಲ್ಲಿ ಇಂತಹ ಹೀನಾ ಯ ಪ್ರಕರಣಗಳು ವರದಿಯಾಗುತ್ತಿರುವುದು ಏಕೆ ಎಂದು ನಾವು ಯೋಚಿಸಬೇಕಾಗಿದೆ. ದಶಕಗಳ ಹಿಂದೆ ಹಿರಿಯರನ್ನು ನೋಡಿಕೊಳ್ಳಲಾಗದೆ ಕಾಶಿಯಂತಹ ಧಾರ್ಮಿಕ ಸ್ಥಳಗಳಲ್ಲಿ ಬಿಟ್ಟು ಹೋಗಲು ‘ಬಡತನ’ದ ಕಾರಣವಿತ್ತು.
ಈಗ ಮನಸ್ಸಿನ ಬಡತನವಲ್ಲದ ಹೊರತು ಬೇರಾವ ಕಾರಣವೂ ಸಿಗುತ್ತಿಲ್ಲ. ಸರಕಾರವೇ ನಾನಾ ಭಾಗ್ಯಗಳನ್ನು ನೀಡುತ್ತಿರುವ, ಹಿರಿಯ ನಾಗರಿಕರ ಹೆಸರಿನಲ್ಲಿಯೇ ಮಾಸಾಶನ ನೀಡುತ್ತಿರುವ ಈ ದಿನಗಳಲ್ಲಿ ತಮ್ಮನ್ನು ಹೆತ್ತವರಿಗೆ ಮೂರು ಹೊತ್ತು ಅನ್ನ ಹಾಕುವುದು ಯಾವ ಮಕ್ಕಳಿಗೂ ಕಷ್ಟದ ಕೆಲಸವಲ್ಲ.
ಬೆಳಗಾವಿಯಲ್ಲಿ ವರದಿಯಾದ ಹೆಚ್ಚಿನ ಪ್ರಕರಣಗಳಲ್ಲಿ ವೃದ್ಧ ಪೋಷಕರಿಂದ ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿದ ನಂತರವೇ ಮಕ್ಕಳು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾರೆ. ಅಂದರೆ ಹೆತ್ತವರು ಇವರಿಗೆ ಹೊರೆಯಾಗಿದ್ದರೂ ಅವರ ಆಸ್ತಿ ಬೇಕಾಗಿತ್ತು. ಶತಮಾನಗಳಿಂದ ವಿಶ್ವಕ್ಕೆ ಉದಾತ್ತ ಚಿಂತನೆಗಳನ್ನು, ಧ್ಯೇಯಗಳನ್ನು ಬೋಧಿಸುತ್ತಾ ಬಂದ ನೆಲದಲ್ಲಿ ಈ ಮಟ್ಟದ ನೀಚತನ, ಸ್ವಾರ್ಥ, ಕುತ್ಸಿತ ಬುದ್ಧಿ ಏಕೆ ಬಂತು ಎಂದು ಯೋಚಿಸಬೇಕಾಗಿದೆ.
ಸಾಮಾನ್ಯವಾಗಿ ಇಂತಹ ಪ್ರಕರಣಗಳು ವರದಿಯಾದಾಗ ನಾವು, ‘ಸಮಾಜ ಕೆಟ್ಟೋಗಿದೆ’ ಎನ್ನು ತ್ತೇವೆ. ಈ ಸಮಾಜದ ಭಾಗವಾಗಿ ನಮ್ಮ ನಡೆ-ನುಡಿ ಬದಲಾಗಿದೆ. ನಾವು ಕೆಟ್ಟವರಾಗಿದ್ದೇವೆ ಎಂದು ಹೇಳಿಕೊಳ್ಳುವುದಿಲ್ಲ. ಬಡವರಿರಲಿ, ಶ್ರೀಮಂತರಿರಲಿ ತಮ್ಮ ಮಕ್ಕಳನ್ನು ಜತನದಿಂದ ನೋಡಿ ಕೊಳ್ಳದ, ಅವರ ಏಳಿಗೆಯನ್ನೇ ಧ್ಯೇಯವನ್ನಾಗಿಸಿಕೊಳ್ಳದ ಹೆತ್ತವರು ಇರಲಿಕ್ಕಿಲ್ಲ.
ಮಕ್ಕಳಿಗೂ ಅಷ್ಟೇ, ಬಾಲ್ಯದಲ್ಲಿ ತಮ್ಮ ಹೆತ್ತವರೇ ಆದರ್ಶ. ಆದರೆ ಯೌವನಾವಸ್ಥೆಗೆ ಕಾಲಿಟ್ಟ ಬಳಿಕ ಸುತ್ತಲಿನ ಸಮಾಜದಿಂದ ಪ್ರಭಾವಿತವಾದ ಮನಸ್ಸು ಹೆತ್ತವರಲ್ಲೂ ಹುಳುಕುಗಳನ್ನು ಹುಡುಕುತ್ತದೆ. ಮದುವೆಯಾಗಿ ಸಂಸಾರದ ಭಾರ ಬಿದ್ದಾಗ, ನಾನು, ನನ್ನದು ಎಂಬ ಪ್ರಪಂಚದಲ್ಲಿ ಹೆಂಡತಿ, ಮಕ್ಕಳು ಸ್ಥಾಪಿತರಾಗುತ್ತಾರೆ. ಅಲ್ಲಿ ತಂದೆ-ತಾಯಿಗಳಿಗೆ ಸ್ಥಾನ ನೀಡಲು ಒಂದೋ ಅವನು ಒಪ್ಪುವುದಿಲ್ಲ, ಇಲ್ಲವೇ ಅವಳು ಒಪ್ಪುವುದಿಲ್ಲ.
ಒಪ್ಪಿದರೂ ಆಧುನಿಕ ಸಮಾಜದ ಬೇಕು, ಬೇಡಗಳು, ಅನಿವಾರ‍್ಯತೆಗಳ ನಡುವೆ ಸ್ವಾರ್ಥಪರವಾಗಿ ಯೋಚಿಸುವವರೇ ಹೆಚ್ಚು. ಇಂದಿನ ಸಂದಿಗ್ಧ ಮನಸ್ಸಿನ ಮುಂದಿನ ಘಟ್ಟವೇ ವಿರಸ, ಸಂಘರ್ಷ. ಬದುಕಿನ ಸಂಜೆಯಲ್ಲಿ ಬೀದಿಪಾಲಾದ, ಆಶ್ರಮ ಸೇರಿದ ಪೋಷಕರನ್ನು ಒಮ್ಮೆ ಮಾತನಾಡಿಸಿ ನೋಡಿ. ಅವರಲ್ಲಿ ಎಂಟತ್ತು ಮಕ್ಕಳಿದ್ದರೂ ಆಸರೆ ಸಿಗದೆ ಬಂದವರಿದ್ದಾರೆ. ಒಬ್ಬನೇ ಮಗ, ಮಗಳು ದೂರ ಮಾಡಿದ ಕಾರಣಕ್ಕೆ ಹೊರ ಬಿದ್ದವರಿದ್ದಾರೆ.
ಇಲ್ಲಿ ಮಕ್ಕಳ ಸಂಖ್ಯೆ ಮುಖ್ಯವಲ್ಲ. ಹತ್ತು ಮಕ್ಕಳಲ್ಲಿ ಒಬ್ಬ ಮಗ/ ಮಗಳು ಎಬ್ಬಿಸಿದ ರಾಡಿಯಿಂದ ಇಡೀ ಕುಟುಂಬ ಛಿದ್ರವಾದ ಉದಾಹರಣೆಗಳಿವೆ. ಬಹುತೇಕ ಕುಟುಂಬಗಳಲ್ಲಿ ವಿರಸಕ್ಕೆ ಪ್ರಮುಖ ಕಾರಣ ಆಸ್ತಿ ಹಂಚಿಕೆ. ಆಸ್ತಿಯಲ್ಲಿ ಸಿಕ್ಕ ಪಾಲಿನ ಬಗ್ಗೆ ತಗಾದೆ ತೆಗೆಯುವ ಮಗ/ಮಗಳು ಈ ಕಾರಣ ಕ್ಕಾಗಿ ತಂದೆ- ತಾಯಿಯರನ್ನು ದೂರ ಮಾಡುತ್ತಾರೆ.
ತವರಿನಿಂದ ದೂರವಾದರೂ ಹೆಣ್ಣು ಮಕ್ಕಳಿಗೆ ತಂದೆ- ತಾಯಂದಿರ ಮೇಲೆ ತುಸು ಹೆಚ್ಚೇ ಪ್ರೀತಿ. ಆದರೆ ಆಸ್ತಿಯಲ್ಲಿ ಸಮಾನ ಪಾಲು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಇತ್ತೀಚೆಗೆ ಹೆಣ್ಣು ಮಕ್ಕಳೂ ಹೆತ್ತವ ರಿಂದ ದೂರವಾಗುತ್ತಿದ್ದಾರೆ. ಇನ್ನು ಕೆಲವು ಕುಟುಂಬಗಳಲ್ಲಿ ಹೊಂದಾಣಿಕೆಯದ್ದೇ ಸಮಸ್ಯೆ. ಆಧುನಿಕ ಸಮಾಜದ ರೀತಿ ನೀತಿಗಳನ್ನು ಅಳವಡಿಸಿಕೊಂಡ ಮಗ- ಸೊಸೆ ಒಂದು ಕಡೆಯಾದರೆ, ಸಂಪ್ರದಾಯಸ್ಥ ಮನಸ್ಥಿತಿಯ ತಂದೆ-ತಾಯಿ, ಅತ್ತೆ- ಮಾವಂದಿರು ಇನ್ನೊಂದು ಕಡೆ.
ಇಲ್ಲಿ ಒಬ್ಬರದ್ದೇ ತಪ್ಪು ಎನ್ನುವಂತಿಲ್ಲ. ‘ನನ್ನ ಮನೆಯಲ್ಲಿ ನನ್ನದೇ ಮಾತು’ ಎನ್ನುವ ಹಿಟ್ಲರ್ ಮನಸ್ಥಿತಿಯ ಹಿರಿಯರೂ ಇರುತ್ತಾರೆ. ‘ನಿಮ್ಮದೇನೂ ಮಹಾ’ ಎನ್ನುವ ಸೊಸೆಯಂದಿರೂ ಇರು ತ್ತಾರೆ. ಪರಸ್ಪರ ಗೌರವ, ಕೊಡು-ಕೊಳ್ಳುವಿಕೆ ಇಲ್ಲದ ಮನ-ಮನೆಗಳು ಹೆಚ್ಚು ಕಾಲ ಒಂದಾಗಿ ಬಾಳಲು ಸಾಧ್ಯವಿಲ್ಲ. ಮೊನ್ನೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ವೈದ್ಯೆಯೊಬ್ಬರು ತಮ್ಮ ಅತ್ತೆ-ಮಾವನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಇವರದ್ದು ಆಸ್ತಿ ಕಲಹವಲ್ಲ. ಆದರೆ ಮನೆಯ ಯಜಮಾನಿಕೆ ವಿಚಾರದಲ್ಲಿ ಅತ್ತೆ- ಸೊಸೆಯರ ನಡುವಣ ಕಲಹ ಪರಸ್ಪರ ಹಲ್ಲೆ ಮಾಡುವಷ್ಟರ ಮಟ್ಟಿಗೆ ತಲುಪಿದೆ. ಹಿಂದೆ ಇಂತಹ ಏನೇ ಸಂದರ್ಭಗಳು ಬಂದರೂ ಮುನಿಸಿಕೊಂಡ ಮಕ್ಕಳು ಹಳ್ಳಿಯಲ್ಲಿಯೇ ಇನ್ನೊಂದು ಬಿಡಾರ ಕಟ್ಟಿಕೊಳ್ಳುತ್ತಿದ್ದರು. ಕ್ರಮೇಣ ಮತ್ತೆ ಒಂದಾಗುತ್ತಿದ್ದರು. ಈಗ ಹಾಗಲ್ಲ. ದೂರದ ಊರಿನಲ್ಲಿ ಸೂರು ಕಟ್ಟಿಕೊಂಡ ಮಕ್ಕಳು ತಂದೆ-ತಾಯಿಯರನ್ನು ಶಾಶ್ವತವಾಗಿ ದೂರ ಮಾಡುವ ಮನಸ್ಥಿತಿ ಬೆಳೆಸಿ ಕೊಳ್ಳುತ್ತಿದ್ದಾರೆ.
ಹಳ್ಳಿಗಳಲ್ಲಿರುವ ಬಹುತೇಕ ಹಿರಿ ಜೀವಗಳಿಗೆ ಪಟ್ಟಣ ವಾಸ ಒಲ್ಲದ ವಿಷಯ. ಹುಟ್ಟಿ ಬೆಳೆದ ಮನೆ, ಊರು, ತೋಟ, ಪರಿಸರ ಬಿಟ್ಟು ತೆರಳುವುದಕ್ಕಿಂತಲೂ ಮಕ್ಕಳಿಂದ ದೂರವಾಗಿ ಹಳ್ಳಿಗಳಲ್ಲಿಯೇ ಕೊನೆಗಾಲವನ್ನು ಕಳೆಯುವುದು ಹಲವರ ಅನಿವಾರ‍್ಯ ನಿರ್ಧಾರ. ರಾಜ್ಯದ ಕರಾವಳಿ, ಮಲೆನಾಡಿನ ಅದೆಷ್ಟೋ ಮನೆಗಳಲ್ಲಿ ಇಂದು ಹಬ್ಬದ ಸಂದರ್ಭಗಳಲ್ಲಷ್ಟೇ ಮನೆಯ ಎಲ್ಲ ದೀಪಗಳು ಉರಿಯು ತ್ತವೆ.
ಉಳಿದ ದಿನಗಳಲ್ಲಿ ಒಂದೆರಡು ಒಂದೆರಡು ಕೋಣೆಗಳಲ್ಲಷ್ಟೇ ಬೆಳಕು. ಇತ್ತೀಚೆಗೆ ಮಕ್ಕಳ ಅನಿವಾ ರ‍್ಯತೆಯನ್ನು ಮನಗಂಡು ತಾವೇ ಆಶ್ರಮ ಸೇರಿಕೊಳ್ಳುವ ಹಿರಿ ಜೀವಗಳ ಸಂಖ್ಯೆಯೂ ಕಡಿಮೆ ಏನಿಲ್ಲ. ಪಕ್ಕಾ ಪಾಶ್ಚಾತ್ಯರಂತೆ ಪರಸ್ಪರ ಗೌರವದಿಂದ ದೂರವಿದ್ದು ಕೊಂಡು ಬದುಕುವ, ಹಬ್ಬ ಹರಿದಿನಗಳಲ್ಲಿ ಮಾತ್ರ ಒಂದಾಗುವ ಕುಟುಂಬಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಈ ಟ್ರೆಂಡ್ ಇನ್ನಷ್ಟು ಹೆಚ್ಚಾಗಬಹುದು.
ಬದಲಾದ ಕೌಟುಂಬಿಕ ಬದುಕು
ಇನ್ನು ಅಧ್ಯಯನಗಳ ವಿಚಾರಕ್ಕೆ ಬಂದರೆ ದೇಶದಲ್ಲಿ ಹಿರಿಯ ನಾಗರಿಕರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಬಿಹಾರ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ನಡೆಸಿದ ಸಮೀಕ್ಷೆಯೊಂದರಲ್ಲಿ ರಾಜ್ಯದ ಹಿರಿಯ ನಾಗರಿಕರಲ್ಲಿ ಶೇ 10ರಷ್ಟು ಮಂದಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ. ದೇಶದ ಹಿರಿಯ ನಾಗರಿಕರಲ್ಲಿ ಶೇ 14ರಷ್ಟು ಮಂದಿ ಮನೆಗಳಲ್ಲಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳ ಲಾಗುತ್ತಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.
ಹೀಗೆ ಸಮೀಕ್ಷೆಗೆ ಒಳಗಾದವರಲ್ಲಿ ಹೆಚ್ಚಿನವರು ಒಂದಲ್ಲ ಒಂದು ದೈಹಿಕ, ಮಾನಸಿಕ ಸಮಸ್ಯೆ ಗಳಿಂದ ಬಳಲುತ್ತಿದ್ದವರು. ಬಹುತೇಕ ಸಂದರ್ಭಗಳಲ್ಲಿ ಆರೋಗ್ಯದ ವಿಚಾರದಲ್ಲಿಯೇ ಮಕ್ಕಳೊಂ ದಿಗೆ ವಿರಸ ಆರಂಭವಾಗಿದೆ. ಮದುವೆಯಾದ ತಕ್ಷಣವೇ ಮಕ್ಕಳು ಮತ್ತು ಹೆತ್ತವರು ದೂರವಾಗಿ ಪ್ರತ್ಯೇಕವಾಗಿ ವಾಸಿಸುವ ಪಾಶ್ಚಾತ್ಯ ದೇಶಗಳಲ್ಲಿ ಹಿರಿಯ ನಾಗರಿಕರ ಆರೋಗ್ಯ ಸಂರಕ್ಷಣೆಗೆ ಸಾಕಷ್ಟು ಕಾಳಜಿ ವಹಿಸಲಾಗುತ್ತದೆ. ಆದರೆ ನಮ್ಮಲ್ಲಿ ಹಿರಿಯ ನಾಗರಿಕರೂ ಆರೋಗ್ಯ ಸೇವೆಗಾಗಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಅಧ್ಯಯನದ ಪ್ರಕಾರ ವಿವಿಧ ಚಿಕಿತ್ಸೆ ಗಳಿಗಾಗಿ ರಾಜ್ಯದ ಹಿರಿಯ ನಾಗರಿಕರು ವಾರ್ಷಿಕ ಸರಾಸರಿ 1.25 ಲಕ್ಷ ವೆಚ್ಚ ಮಾಡಬೇಕಾಗುತ್ತದೆ. ದೇಶದ ಬೇರೆ ರಾಜ್ಯಗಳಿಗಿಂತ ಕರ್ನಾಟಕದ ಈ ವೆಚ್ಚ ಹೆಚ್ಚು.
ಕಾನೂನು ಒಂದೇ ಪರಿಹಾರವಲ್ಲ ಕಂದಾಯ ಸಚಿವ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಸೂಚಿಸಿದ ಕಾನೂನು ಕ್ರಮ ಈ ಕೌಟುಂಬಿಕ ಸಮಸ್ಯೆಗೆ ಹೆಚ್ಚೇನೂ ಪರಿಹಾರ ನೀಡಲಾರವು. ಏಕೆಂದರೆ ನಮ್ಮ ಹೆಚ್ಚಿನ ರೈತಾಪಿ ಕುಟುಂಬಗಳ ಜಮೀನಿನ ವಿಸ್ತೀರ್ಣ ಒಂದೆರಡು ಎಕರೆಯೊಳ ಗಿದೆ. ಅದರಲ್ಲೂ ಬಹುತೇಕರದ್ದು ಪಿತ್ರಾರ್ಜಿತ ಆಸ್ತಿ. ಮನೆ ಪಾಲಾದಾಗ ತಂದೆ- ತಾಯಿಗಳು ತಮ್ಮ ಪಾಲನ್ನು ಇರುವ ಮಕ್ಕಳಲ್ಲಿ ಹಂಚಿಕೊಳ್ಳುವವರೇ ಹೆಚ್ಚು.
ಸ್ವಯಾರ್ಜಿತ ಆಸ್ತಿಯನ್ನು ಮಕ್ಕಳಿಗೆ ಹಂಚಿದ ಬಳಿಕ ‘ಮೋಸ ಹೋದ’ ಹೆತ್ತವರೂ ಕಾನೂನು ಅಸ ಬಳಸಿ ಆಸ್ತಿಯನ್ನು ಮರು ವಶಕ್ಕೆ ಪಡೆಯುವ ಚೈತನ್ಯ ಹೊಂದಿರುವುದಿಲ್ಲ. ತಾಲ್ಲೂಕು ವಿಭಾಗಾ ಧಿಕಾರಿ ಇಲ್ಲವೇ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ತಕ್ಷಣ ನ್ಯಾಯ ಸಿಗುವ ಆದರ್ಶಮಯ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ. ತಮ್ಮ ಸರ್ವಸ್ವವನ್ನೂ ಮಕ್ಕಳಿಗಾಗಿ ಧಾರೆ ಎರೆದು ಕೊನೆಗಾಲದಲ್ಲಿ ಬರಿಗೈಯಲ್ಲಿ ಬೀದಿಪಾಲಾಗುವ ಹೆತ್ತವರಲ್ಲಿ ದೂರು ನೀಡುವ, ನ್ಯಾಯ ಕೇಳುವ, ಮುಯ್ಯಿ ತೀರಿಸು ವುವವರಿಗಿಂತ ತನಗೆ ಹೀಗಾಯಿತಲ್ಲಾ ಎಂದು ಕೊರಗುತ್ತಲೇ ಕೊನೆ ಉಸಿರು ಎಳೆಯುವವರು ಹೆಚ್ಚು.
ನಮ್ಮ ಬದಲಾದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾಲ ಘಟ್ಟದಲ್ಲಿ ಅತ್ಯಂತ ಹೆಚ್ಚು ಶಿಥಿಲವಾಗಿರುವುದು ನಮ್ಮ ಕುಟುಂಬ ವ್ಯವಸ್ಥೆ. ಈ ಕುಟುಂಬ ವ್ಯವಸ್ಥೆಯನ್ನು ಪ್ರೀತಿ, ವಿಶ್ವಾಸ, ಕಾಳಜಿ, ಗೌರವಗಳಿಂದಷ್ಟೇ ಬಲಪಡಿಸಲು ಸಾಧ್ಯ. ಹೆತ್ತವರ ಕೈಯಲ್ಲಿ ಆಸ್ತಿ ಬರೆಸಿಕೊಂಡು, ಹೊರ ತಳ್ಳುವ ಮಕ್ಕಳ ಸಂತಾನ ಹೆಚ್ಚಾಗದಿರಲೆಂದು ನಾವು ಪ್ರಾರ್ಥಿಸಬೇಕಿದೆ. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರೀತಿ, ವಿಶ್ವಾಸದ ಒರತೆ ತುಂಬಿ ಮಾನವೀಯ ಮೌಲ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕಿದೆ.