RSS Headquarters: ಕಾರ್ಪೊರೇಟ್ ಕಚೇರಿಯಂತೆ ಕಂಗೊಳಿಸುತ್ತಿದೆ RSS ಕೇಂದ್ರ ಕಚೇರಿ ‘ಕೇಶವ ಕುಂಜ’- ಏನಿದರ ವಿಶೇಷತೆ?
ಶತಮಾನದ ಹೊಸ್ತಿಲಿನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾರ್ಯಾಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಸಂಘದ ಪ್ರಧಾನ ಕಚೇರಿಯೊಂದು ಭವ್ಯವಾಗಿ ನಿರ್ಮಾಣಗೊಂಡಿದೆ. ಈ ಭವ್ಯ ಕಟ್ಟಡದಲ್ಲಿ ಏನೇನಿದೆ ನೊಡೋಣ ಬನ್ನಿ...

ನವದೆಹಲಿಯಲ್ಲಿ ತಲೆ ಎತ್ತಿ ನಿಂತಿರುವ ಆರೆಸ್ಸೆಸ್ ನ ಪ್ರಧಾನ ಕಚೇರಿ ಕೇಶವ ಕುಂಜ.

ನವದೆಹಲಿ: ಶತಮಾನದ ಹೊಸ್ತಿಲಿನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (Rashtriya Swayamsevak Sangh) ರಾಷ್ಟ್ರ ರಾಜಧಾನಿಯಲ್ಲಿ ಸರ್ವ ಸುಸಜ್ಜಿತ, ಅತ್ಯಾಧುನಿಕ ಮಾದರಿಯ ತನ್ನ ನೂತನ ಕಚೇರಿಯನ್ನು ಶುಭಾರಂಭ ಮಾಡಿದೆ. ಇದಕ್ಕೆ ಕೇಶವ ಕುಂಜ ಎಂದು ಹೆಸರಿಡಲಾಗಿದೆ. 5 ಲಕ್ಷ ಚದರ ಅಡಿ ವಿಸ್ತಾರದಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರುವ ಈ ಹೊಸ ಕಟ್ಟಡದಲ್ಲಿ ಟವರ್ ಗಳು, ಅಡಿಟೋರಿಯಂಗಳು, ಲೈಬ್ರೇರಿ, ಒಂದು ಆಸ್ಪತ್ರೆ ಮತ್ತು ಒಂದು ಹನುಮಾನ್ ದೇವಸ್ಥಾನವಿದೆ (Hanuman temple). ಇದನ್ನು ಸುದೀರ್ಘ ಕಾಲ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಸಂಪೂರ್ಣವಾಗಿ ಸಾರ್ವಜನಿಕ ದೇಣಿಗೆಯಿಂದಲೇ ನಿರ್ಮಿಸಿರುವುದು ಇನ್ನೊಂದು ವಿಶೇಷವಾಗಿದೆ. 150 ಕೋಟಿ ರೂಪಾಯಿಗಳಷ್ಟು ದೇಣಿಗೆ ಈ ಕಟ್ಟಡ ನಿರ್ಮಾಣಕ್ಕಾಗಿ ಹರಿದು ಬಂದಿದೆ.
ಸಂಘದ ಬೆಳೆಯುತ್ತಿರುವ ಚಟುವಟಿಕೆಗಳಿಗೆ ಪೂರಕವಾಗಿ ಈ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕೇಶವ ಕುಂಜ (Keshav Kunj), ಕಾರ್ಯಕ್ರಮಗಳನ್ನು ನಡೆಸಲು, ತರಬೇತು ಮತ್ತು ಮೀಟಿಂಗ್ ನಡೆಸಲು ಪ್ರಶಸ್ತ ಜಾಗವಾಗಿ ಮೂಡಿಬಂದಿದೆ. ಇಲ್ಲಿರುವ ಲೈಬ್ರೇರಿ ಸಂಶೋಧನಾ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಇಲ್ಲಿನ ಆಡಿಟೋರಿಯಂನಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಈ ಕೇಂದ್ರ ಕಚೇರಿಯಲ್ಲಿ ಐದು ಹಾಸಿಗೆಗಳ ಆಸ್ಪತ್ರೆಯಿದ್ದು, ವೈದ್ಯಕೀಯ ಪಾಲನೆಗಾಗಿ ಅಗತ್ಯವಾಗಿದ್ದರೆ, ವಿಶಾಲವಾದ ಲಾನ್ ಸಹ ಗಮನ ಸೆಳೆಯುವಂತಿದೆ. ನವ ದೆಹಲಿಯ (New Delhi) ಝಾಂಡೇವಾಲಾ (Jhandewala) ಪ್ರದೇಶದಲ್ಲಿ ಕೇಶವ ಕುಂಜ ತಲೆ ಎತ್ತಿದ್ದು, ಸುಮಾರು ನಾಲ್ಕು ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿರು ಈ ಕ್ಯಾಂಪಸ್ ನಲ್ಲಿ ಈ ಕಟ್ಟಡ ಸುಮಾರು 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವುದು ವಿಶೇಷವಾಗಿದೆ. ಈ ನೂತನ ಕಟ್ಟಡಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ಚಟುವಟಿಕೆಗಳು ಫೆ.12 ಬುಧವಾರದಂದು ಶಿಫ್ಟಾಗಿದೆ.
ಈ ಪ್ರಧಾನ ಸಂಕೀರ್ಣ 5 ಲಕ್ಷ ಚದರ ಅಡಿಗಳಷ್ಟು ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಇದು ಬಿಜೆಪಿಯ ಪ್ರಧಾನ ಕಚೇರಿಗಿಂತಲೂ ಗಾತ್ರದಲ್ಲಿ ದೊಡ್ಡದಾಗಿದೆ. ಇಲ್ಲಿ ಸಂಘದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಚೇರಿ, ವಾಸ ಸ್ಥಳ ಮೊದಲಾದವುಗಳಿವೆ.
ಇದನ್ನೂ ಓದಿ: World's Most Corrupt Countries: ವಿಶ್ವದ ಭ್ರಷ್ಟ ದೇಶಗಳ ಪಟ್ಟಿ ಬಿಡುಗಡೆ- ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?
#WATCH | Delhi | The new headquarters of the Rashtriya Swayamsevak Sangh (RSS), 'Keshav Kunj,' has been completed in Delhi. The RSS has shifted its office back to its old address in the city. The reconstruction project spans 3.75 acres and consists of three 12-story buildings,… pic.twitter.com/vOkojE4FGE
— ANI (@ANI) February 12, 2025
ಆರೆಸ್ಸೆಸ್ ನ (RSS) ಈ ನೂತನ ಕೇಂದ್ರ ಕಚೇರಿಯಲ್ಲಿ, ‘ಸಾಧನಾ’ ‘ಪ್ರೇರಣಾ’ ಮತ್ತು ‘ಅರ್ಚನಾ’ ಎಂಬ ಹೆಸರಿನ ಮೂರು ಟವರ್ ಗಳಿವೆ. ಈ ಮೂರು ಟವರ್ ಗಳಲ್ಲಿ ಒಟ್ಟಾಗಿ 300 ಕೊಣೆಗಳು, ಕಚೇರಿ ಸ್ಥಳಗಳು, ಕಾನ್ಫರೆನ್ ಕೊಠಡಿಗಳು ಮತ್ತು ಆಡಿಟೋರಿಂಗಳಿವೆ. ಈ ಮೂರು ಟವರ್ ಗಳಲ್ಲಿ ಸಾಧನಾ ಸಂಘದ ಕಚೇರಿಗಾಗಿಯೇ ಮಿಸಲಾಗಿರುವ ಪ್ರದೇಶವಾಗಿದೆ. ಪ್ರೇರಣ ಮತ್ತು ಅರ್ಚನಾ ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್ ಗಳಾಗಿವೆ. ಇನ್ನು, ಪ್ರೇರಣ ಹಾಗೂ ಅರ್ಚನಾ ಟವರ್ ಗಳ ನಡುವೆ ವಿಶಾಲವಾದ ಪ್ರದೇಶವಿದ್ದು, ಇಲ್ಲಿ ಸುಸಜ್ಜಿತವಾದ ಲಾನ್ ಮತ್ತು ಸಂಘದ ಸ್ಥಾಪಕರಾದ ಕೇಶವ್ ಬಲಿರಾಮ್ ಹೆಗ್ಡೆವಾರ್ ಅವರ ಪ್ರತಿಮೆಯಿದೆ.
ಈ ಸ್ಥಳವನ್ನು ದಿನ ನಿತ್ಯ ನಡೆಯುವ ಶಾಖಾ ಚಟುವಟಿಕೆಗಳಿಗಾಗಿ ಮೀಸಲಿಡಲಾಗಿದೆ. ಈ ಕಾಂಪ್ಲೆಕ್ಸ್ ನಲ್ಲಿ 135 ಕಾರುಗಳಿಗೆ ಪಾರ್ಕಿಂಗ್ ಅವಕಾಶವಿದ್ದು, ಮುಂಬರುವ ದಿನಗಳಲ್ಲಿ ಇದನ್ನು 270 ಕಾರುಗಳ ಪಾರ್ಕಿಂಗ್ ಅವಕಾಶಕ್ಕೆ ವಿಸ್ತರಿಸುವ ಯೋಜನೆಯನ್ನೂ ಹೊಂದಲಾಗಿದೆ.

ವಿಶೇಷವೆಂದರೆ, ಸುಮಾರು 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಂಘದ ಈ ಸರ್ವ ಸುಸಜ್ಜಿತ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ಸಂಘದ ಕಾರ್ಯಕರ್ತರು ಮತ್ತು ಹಿತೈಷಿಗಳಿಂದ ಸಂಗ್ರಹಿಸಲಾದ ದೇಣಿಗೆಯಿಂದಲೇ ನಿರ್ಮಿಸಲಾಗಿದೆ.
‘ಸುಮಾರು 75 ಸಾವಿರ ಜನರು 5 ಲಕ್ಷದಿಂದ, ಕೆಲವು ಲಕ್ಷಗಳವರೆಗೆ ಈ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ’ ಎಂದು ಸಂಘದ ವಕ್ತಾರರು ಮಾಹಿತಿ ನೀಡಿದ್ದಾರೆ. ಈ ಪ್ರಧಾನ ಕಚೇರಿಯ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಸಂಘದ ಕಾರ್ಯಚಟುವಟಿಕೆಗಳು ಝಾಂಡೇವಾಲದಲ್ಲಿರುವ ಉದಾಸೀನ್ ಆಶ್ರಮದಲ್ಲಿ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಬಳಿಕ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆ ಪ್ರಾರಂಭಗೊಂಡಿತು. ಇದೀಗ ಉದಾಸೀನ್ ಆಶ್ರಮದಲ್ಲಿದ್ದ ತಾತ್ಕಾಲಿಕ ಕಚೇರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೂ ಈ ನೂತನ ಕಟ್ಟಡದಲ್ಲಿ ಕೆಲವೊಂದು ಇಂಟೀರಿಯರ್ ಕೆಲಸ ಕಾರ್ಯಗಳು ಇನ್ನೂ ಪ್ರಗತಿಯಲ್ಲಿದೆ.
ಈ ಪ್ರಧಾನ ಕಚೇರಿಯಲ್ಲಿ ಮೂರು ಬೃಹತ್ ಆಡಿಟೋರಿಯಂಗಳಿವೆ, ಇವುಗಳ ಒಟ್ಟು ಆಸನ ಸಾಮರ್ಥ್ಯ 1300 ಆಗಿದ್ದು, ಇವುಗಳಲ್ಲಿ ಒಂದು ಆಡಿಟೋರಿಯಂಗೆ ವಿಶ್ವ ಹಿಂದು ಪರಿಷತ್ ನ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ಅವರ ಹೆಸರನ್ನು ಇರಿಸಲಾಗಿದೆ. ಈ ಆಡಿಟೋರಿಂಯಗಳು ಕುಷನ್ ಸೋಫಾ ಕುರ್ಚಿಗಳನ್ನು ಹೊಂದಿದೆ.
ಈ ಕಟ್ಟಡದ ಕಿಟಕಿಗಳನ್ನು ರಾಜಸ್ಥಾನ ಮತ್ತು ಗುಜರಾತ್ ನ ಸಾಂಪ್ರದಾಯಿಕ ಶೈಲಿಯಿಂದ ಪ್ರೇರಣೆಗೊಂಡು ನಿರ್ಮಿಸಲಾಗಿದೆ. ಮರದ ಬಳಕೆಯನ್ನು ಕಡಿಮೆಗೊಳಿಸಲೆಂದೇ 1000 ಗ್ರಾನೈಟ್ ಫ್ರೇಂ ಗಳನ್ನು ಇದಕ್ಕಾಗಿ ಬಳಸಲಾಗಿದೆ.
ಕೇಶವ ಕುಂಜದಲ್ಲಿ ಮೆಸ್ ಹಾಗೂ ಕ್ಯಾಂಟೀನ್ ಸೌಲಭ್ಯಗಳಿವೆ. ಇಷ್ಟು ಮಾತ್ರವಲ್ಲದೇ ಕೇಶವ ಪುಸ್ತಕಾಲಯವೆಂಬ ಲೈಬ್ರೇರಿ ಸೌಲಭ್ಯವೂ ಇಲ್ಲಿದೆ. ಇದು ಈ ಕಟ್ಟಡದ 10ನೇ ಮಹಡಿಯಲ್ಲಿದೆ. ಇದು ಸಂಘದ ಇತಿಹಾಸದ ಕುರಿತಾಗಿ ಸಂಶೋಧನೆ ನಡೆಸುವವರಿಗೆ ಪ್ರಶಸ್ತ ಸ್ಥಳವಾಗಿದೆ. ಇದೇ ಕಟ್ಟಡದಲ್ಲಿ ದಿಲ್ಲಿ ಪ್ರಾಂತ್ ಕಾರ್ಯಾಲಯ ಮತ್ತು ಸುರುಚಿ ಪ್ರಕಾಶನದ ಕಚೇರಿಗಳು ಇವೆ.
ಫೆ.19ರಂದು ಈ ಹೊಸ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತ ಮಿಲನ್ ಕಾರ್ಯಕ್ರಮ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಸಂಘದ ಮುಖ್ಯಸ್ಥರಾದ ಮೋಹನ್ ಭಾಗ್ವತ್ ವಹಿಸಿಕೊಳ್ಳಲಿದ್ದಾರೆ. ಮಾರ್ಚ್ 21-23ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೈಠಕ್ ಗೂ ಮುನ್ನ ಈ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷವಾಗಿದೆ.