ಡೊನಾಲ್ಡ್ ಟ್ರಂಪ್ ನಮ್ಮ ಪ್ರಧಾನಿ ನರೇಂದ್ರ ಮೋದಿಯನ್ನೂ ಅಪಹರಿಸ್ತಾರ? ಮತ್ತೊಂದು ವಿವಾದದ ಅಲೆ ಎಬ್ಬಿಸಿದ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್
Prithviraj Chavan: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ವಿವಾದದ ಅಲೆ ಎಬ್ಬಿಸಿದ್ದಾರೆ. ʼʼವೆನೆಜುವೆಲಾದಲ್ಲಿ ಆದಂತೆ ಭಾರತದಲ್ಲೂ ಆಗುತ್ತಾ? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಹರಿಸುತ್ತಾರ?ʼʼ ಎಂದು ಅವರು ಪ್ರಶ್ನಿಸಿದ್ದು ಬಿಜೆಪಿಗರ ಕಣ್ಣು ಕೆಂಪಗಾಗಿಸಿದೆ.
ಪೃಥ್ವಿರಾಜ್ ಚೌಹಾಣ್ (ಸಂಗ್ರಹ ಚಿತ್ರ) -
ಮುಂಬೈ, ಜ. 6: ʼʼವೆನೆಜುವೆಲಾದಲ್ಲಿ ಆದಂತೆ ಭಾರತದಲ್ಲೂ ಆಗುತ್ತಾ? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಪಹರಿಸುತ್ತಾರ?ʼʼ ಎಂದು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ (Prithviraj Chavan) ಪ್ರಶ್ನಿಸುವ ಮೂಲಕ ವಿವಾದದ ಅಲೆ ಎಬ್ಬಿಸಿದ್ದಾರೆ. ಇತ್ತೀಚೆಗೆ ಅಮೆರಿಕ ಸೇನೆ ವೆನೆಜುವೆಲಾದ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಾಸ್ ಮಡುರೊ ಅವರನ್ನು ಬಂಧಿಸಿತ್ತು. ಇದನ್ನೇ ಮುಂದಿಟ್ಟುಕೊಂಡು ಪೃಥ್ವಿರಾಜ್ ಚೌಹಾಣ್ ನಾಲಗೆ ಹರಿಯಬಿಟ್ಟಿದ್ದು, ಬಿಜೆಪಿ ಈ ಹೇಳಿಕೆಗೆ ಕಿಡಿ ಕಾರಿದೆ.
ಭಾರತದ ವಿರುದ್ಧ ಅಮೆರಿಕದ ವ್ಯಾಪಾರ ನೀತಿಯನ್ನು ಟೀಕಿಸಿದ ಪೃಥ್ವಿರಾಜ್ ಚೌಹಾಣ್ ಈ ಹೇಳಿಕೆ ನೀಡಿದರು. ಪ್ರಸ್ತಾವಿತ ಶೇ. 50ರಷ್ಟು ಸುಂಕವು ಭಾರತ-ಅಮೆರಿಕ ವ್ಯಾಪಾರವನ್ನು ಪರಿಣಾಮಕಾರಿಯಾಗಿ ಕುಂಠಿತಗೊಳಿಸುತ್ತದೆ ಎಂದು ಅವರು ವಾದಿಸಿದರು. ʼʼಭಾರತದ ಉತ್ಪನ್ನಗಳನ್ನು ನೇರ ನಿಷೇಧಿಸಲು ಸಾಧ್ಯವಾಗದ ಕಾರಣ ಸುಂಕಗಳನ್ನು ವಿಧಿಸಲಾಗುತ್ತಿದೆ. ಭಾರತ ಈ ಹೆಚ್ಚುವರಿ ಭಾರವನ್ನು ಭರಿಸಬೇಕಾಗುತ್ತದೆ. ಈ ಹಿಂದೆ ಅಮೆರಿಕಕ್ಕೆ ರಫ್ತು ಮಾಡುವುದರಿಂದ ಗಳಿಸಿದ ಲಾಭ ಇನ್ನುಮುಂದೆ ಭಾರತೀಯರಿಗೆ ಲಭ್ಯವಿರುವುದಿಲ್ಲ. ನಾವು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಬೇಕಾಗುತ್ತದೆ ಮತ್ತು ಆ ದಿಕ್ಕಿನಲ್ಲಿ ಪ್ರಯತ್ನಗಳು ಈಗಾಗಲೇ ನಡೆಯುತ್ತಿವೆ" ಎಂದು ಹೇಳಿದರು. ಈ ವೇಳೆ ಅವರು ಟ್ರಂಪ್ ವೆನೆಜುವೆಲಾ ಅಧ್ಯಕ್ಷರಂತೆ ಭಾರತೀಯ ಪ್ರಧಾನಿ ಮೋದಿಯನ್ನೂ ಅಪಹರಿಸಬಹುದಾ? ಎಂದು ಪ್ರಶ್ನಿಸಿದರು.
ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಪೃಥ್ವಿರಾಜ್ ಚೌಹಾಣ್:
We don’t need enemies from out side the country, we have traitors and they belong to @INCIndia.
— Rekha Sharma (@sharmarekha) January 6, 2026
"Will Trump Kidnap Our PM Like Venezuela?" Congress Leader's Shocker https://t.co/oQBWZrVd5x
ಬಿಜೆಪಿಯಿಂದ ತೀವ್ರ ವಿರೋಧ
ಸದ್ಯ ಅವರ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಈ ಬಗ್ಗೆ ಪ್ರತಿಕ್ರಿಯಿಸಿ, ʼʼಕಾಂಗ್ರೆಸ್ ದಿನೇ ದಿನೆ ಅಧಃಪತನಕ್ಕೆ ಇಳಿಯುತ್ತಿದೆ. ಪೃಥ್ವಿರಾಜ್ ಚೌಹಾಣ್ ಭಾರತದ ಪರಿಸ್ಥಿತಿಯನ್ನು ವೆನೆಜುವೆಲಾ ಜತೆ ನಾಚಿಕೆಯಿಲ್ಲದೆ ಹೋಲಿಸುತ್ತಿದ್ದಾರೆ. ವೆನೆಜುವೆಲಾದಲ್ಲಿ ನಡೆದದ್ದು ಭಾರತದಲ್ಲಿಯೂ ಆಗಬಹುದೇ? ಎಂದು ಕೇಳುವ ಮೂಲಕ ಕಾಂಗ್ರೆಸ್ ತನ್ನ ಭಾರತ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ರಾಹುಲ್ ಗಾಂಧಿ ಭಾರತದಲ್ಲಿ ಅವ್ಯವಸ್ಥೆಯನ್ನು ಬಯಸುತ್ತಾರೆ. ರಾಹುಲ್ ಗಾಂಧಿ ಭಾರತದ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ಎದುರು ನೋಡುತ್ತಿದ್ದಾರೆʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ವೆನೆಜುವೆಲಾ ಜತೆ ನಾವಿದ್ದೇವೆ; ಅಮೆರಿಕದ ವಿರುದ್ಧ ನಿಂತ ಭಾರತ
ದೇಶಕ್ಕೆ ಅವಮಾನವಾಗುವಂತಹ ಹೇಳಿಕೆ ನೀಡಿದ ಪೃಥ್ವಿರಾಜ್ ಚೌಹಾಣ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಉನ್ನತ ಪೊಲೀಸ್ ಅಧಿಕಾರಿ ಎಸ್.ಪಿ. ವೈದ್ ತರಾಟೆಗೆ ತೆಗೆದುಕೊಂಡರು. "ಟ್ರಂಪ್ ವೆನೆಜುವೆಲಾ ವಿರುದ್ಧ ಕೈಗೊಂಡ ಕ್ರಮವನ್ನು ಭಾರತದ ವಿರುದ್ಧವೂ ಕೈಗೊಳ್ಳಬೇಕೆಂದು ಪೃಥ್ವಿರಾಜ್ ಬಯಸುವುದು ಇಡೀ ದೇಶಕ್ಕೆ ಅವಮಾನ. ಮಾತನಾಡುವ ಮೊದಲು ಕನಿಷ್ಠ ಪಕ್ಷ ಯೋಚಿಸಬೇಕು ಅಥವಾ ಇದು ಈಗ ಬಹಿರಂಗವಾಗಿ ಹೊರಬರುತ್ತಿರುವ ಕಾಂಗ್ರೆಸ್‌ನ ನಿಜವಾದ ಸಿದ್ಧಾಂತವೇ?" ಎಂದು ವೈದ್ ಪ್ರಶ್ನಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪೃಥ್ವಿರಾಜ್ ಅವರನ್ನು ʼಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿʼ, ʼಅನಕ್ಷರಸ್ಥʼ, ʼಮೂರ್ಖʼ ಮುಂತಾದ ಪದಗಳಿಂದ ಟೀಕಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವ ವಿಚಾರವನ್ನು ಮುಂದಿಟ್ಟುಕೊಂಡು ಟ್ರಂಪ್ ನೀಡುತ್ತಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರಧಾನಿಯನ್ನು ಟೀಕಿಸಿದ ಮರುದಿನವೇ ಪೃಥ್ವಿರಾಜ್ ಈ ಹೇಳಿಕೆ ನೀಡಿದ್ದಾರೆ. ರಷ್ಯಾದಿಂದ ತೈಲ ಖರೀದಿಸುತ್ತಿರವುದಕ್ಕೆ ಭಾರತದ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದ್ದಾಗಿ ಇತ್ತೀಚೆಗೆ ಟ್ರಂಪ್ ಹೇಳಿದ್ದರು.