Astro Tips: ಕರ್ಮಾಧಿಪತಿ ಶನಿ ಪ್ರಭಾವದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಶನಿವಾರ ನೀವೇನು ಮಾಡಬೇಕು?
ಶನಿ ದೆಸೆ ಮತ್ತು ಸಾಡೇಸಾತಿಯ ಪ್ರಭಾವದಿಂದ ನಮ್ಮ ಜೀವನದಲ್ಲಿ ಉಂಟಾಗಬಹುದಾದ ತೊಂದರೆಗಳನ್ನು ನಿವಾರಿಸಲು ಈ ದಿನದಂದು ಶನಿ ದೇವನ ಆರಾಧನೆ ಮಾಡುವುದು ಉತ್ತಮ ಎಂಬುದು ಶಾಸ್ತ್ರೋಕ್ತಿ. ಹಾಗಾದರೆ ಶನಿವಾರ ಶನಿ ದೇವನನ್ನು ಆರಾಧಿಸುವ ಕ್ರಮ ಹೇಗೆ ಮತ್ತು ಯಾವ ಮಂತ್ರವನ್ನು ಈ ದಿನ ಜಪಿಸಿದರೆ ಶನಿ ಸಂತುಷ್ಟನಾಗುತ್ತಾನೆ ಎಂಬ ಮಾಹಿತಿ ಇಲ್ಲಿದೆ.
ಶನಿ ದೇವರು -
ಬೆಂಗಳೂರು, ಡಿ. 13: ಕರ್ಮಾಧಿಪತಿ ಆಗಿರುವ ಶನಿ ನಾವು ಮಾಡುವ ಕರ್ಮ ಅಥವಾ ಕೆಲಸಗಳಿಗೆ ಸರಿಯಾದ ಫಲವನ್ನು ನೀಡುವ ಗ್ರಹವಾಗಿ ಗುರುತಿಸಿಕೊಂಡಿದ್ದಾನೆ. ಶನಿ ಎಂದರೆ ಭಯ ಪಡಬೇಕಿಲ್ಲ, ಆದರೆ ನಾವು ಕೆಟ್ಟ ಕೆಲಸ ಮಾಡುವ ಸಂದರ್ಭದಲ್ಲಿ ಶನಿಯನ್ನು ನೆನೆಸಿಕೊಂಡು ಭಯಪಟ್ಟರೆ ಸಾಕು ನಾವು ಮತ್ತೆಂದೂ ಜೀವನದಲ್ಲಿ ಕೆಟ್ಟ ಕೆಲಸಗಳಿಗೆ ಕೈ ಹಾಕುವುದಿಲ್ಲ. ಯಾಕೆಂದರೆ ನಮ್ಮ ಕರ್ಮಫಲಗಳಿಗೆ ಅನುಸಾರವಾಗಿ ಫಲವನ್ನು ನೀಡುವವ ಶನಿದೇವನಾಗಿದ್ದಾನೆ. ಶನಿವಾರವನ್ನು(Saturday) ಶನೈಶ್ಚರನ ವಾರವನ್ನಾಗಿ ಪರಿಗಣಿಸಲಾಗುತ್ತದೆ. ಶನಿ ದೆಸೆ ಮತ್ತು ಸಾಡೇಸಾತಿ ಶನಿಯ ಪ್ರಭಾವದಿಂದ ನಮ್ಮ ಜೀವನದಲ್ಲಿ ಉಂಟಾಗಬಹುದಾದ ತೊಂದರೆಗಳನ್ನು ನಿವಾರಿಸಲು ಈ ದಿನದಂದು ಶನಿ ದೇವನ ಆರಾಧನೆ ಮಾಡುವುದು ಉತ್ತಮ ಎಂಬುದು ಶಾಸ್ತ್ರೋಕ್ತಿ (Astro Tips).
ಹಾಗಾದರೆ ಶನಿವಾರ ಶನಿ ದೇವನನ್ನು ಆರಾಧಿಸುವ ಕ್ರಮ ಹೇಗೆ ಮತ್ತು ಯಾವ ಮಂತ್ರವನ್ನು ಈ ದಿನ ಜಪಿಸಿದರೆ ಶನಿ ಸಂತುಷ್ಟನಾಗುತ್ತಾನೆ ಎಂಬ ಮಾಹಿತಿ ಈ ಲೇಖನದಲ್ಲಿದೆ. ಶನಿಯನ್ನು ಮಂದಗಮನ ಎಂದು ಕರೆಯುತ್ತಾರೆ. ಅಂದರೆ ಶನಿಯ ಚಲನೆ ನಿಧಾನವಾದುದು. ಯಾರ ಜಾತಕವನ್ನಾದರೂ ಶನಿ ಪ್ರವೇಶಿಸಿದನೆಂದಾದರೆ ಅವನ ಪ್ರಭಾವ ಆ ಜಾತಕನ ಮೇಲೆ ಏಳೂವರೆ ವರ್ಷಗಳಷ್ಟು ದೀರ್ಘಕಾಲದವರೆಗೆ ಇರುತ್ತದೆ ಮತ್ತು ಶನಿ ದೆಸೆಯಲ್ಲಿ ಶನಿಯು ಜಾತಕನೊಬ್ಬನನ್ನು 19 ವರ್ಷಗಳವರೆಗೆ ಕಾಡುತ್ತಾನೆ. ಹಾಗಾಗಿ ಶನಿವಾರ ಶನಿ ದೇವನನ್ನು ಆರಾಧಿಸುವುದರಿಂದ ಈ ದೋಷದ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ.
ಶನಿ ದೇವನನ್ನು ನಿಷ್ಕಲ್ಮಷ ಭಕ್ತಿ ಮತ್ತು ಪ್ರಾಮಾಣಿಕ ಹೃದಯದಿಂದ ಪೂಜಿಸಿದರೆ ಆತ ತನ್ನನ್ನು ನಂಬಿದವರನ್ನು ಖಂಡಿತವಾಗಿಯೂ ರಕ್ಷಿಸುತ್ತಾನೆ. ಶನಿ ಪ್ರಭಾವವನ್ನು ನಿಮ್ಮ ಜಾತಕದಲ್ಲಿ ಕಡಿಮೆ ಮಾಡಲು ಶನಿವಾರ ಶನಿ ದೇವರಿಗೆ ಕಪ್ಪು ಎಳ್ಳು ಮತ್ತು ಸಾಸಿವೆ ಎಣ್ಣೆಯನ್ನು ಸಮರ್ಪಿಸಬೇಕು. ಜತೆಗೆ ರುದ್ರಾಕ್ಷಿ ಜಪಮಾಲೆಯಿಂದ ‘ಓಂ ಶನಿಶ್ಚರಾಯ ನಮಃ’ ಎಂದು 108 ಬಾರಿ ಏಕಾಗ್ರತೆಯಿಂದ ಜಪಿಸಿ.
ದಾನದಿಂದ ಎಲ್ಲ ದೇವರು ತೃಪ್ತರಾಗುತ್ತಾರೆ. ಅದೇ ರೀತಿಯಲ್ಲಿ ಶನಿ ಪ್ರಭಾವದಿಂದ ನೀವು ಬಳಲುತ್ತಿದ್ದಲ್ಲಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಪ್ಪು ಎಳ್ಳು, ಕಪ್ಪು ಬಟ್ಟೆ, ಹೊದಿಕೆಗಳು, ಕಬ್ಬಿಣದ ಪಾತ್ರೆಗಳು, ಉದ್ದಿನ ಬೇಳೆಯನ್ನು ದಾನ ಮಾಡುವುದರಿಂದ ಶನಿ ದೇವರು ತೃಪ್ತರಾಗಿ ನಿಮಗೆ ಶುಭ ಫಲಗಳನ್ನು ಕೊಡುತ್ತಾನೆ.
ನಿಮ್ಮ ಮನದಾಸೆಗಳು ಈಡೇರಬೇಕಾ? ಹಾಗಾದ್ರೆ ಗುರುವಾರ ತಪ್ಪದೇ ಈ ಮಂತ್ರಗಳನ್ನು ಪಠಿಸಿ
ಇನ್ನು, ಶನಿ ಕಾಟದಿಂದ ನಿಮಗೆ ಮುಕ್ತಿ ಬೇಕೆಂದಿದ್ದಲ್ಲಿ, ಶನಿವಾರ ಅರಳಿ ಮರಕ್ಕೆ ನೀರನ್ನು ಅರ್ಪಿಸಿ ಏಳು ಬಾರಿ ಪ್ರದಕ್ಷಿಣೆ ಬನ್ನಿ. ಮತ್ತು ಅದೇ ದಿನ ಸಾಯಂಕಾಲ ಅರಳಿ ಮರದ ಬೇರಿನ ಬಳಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ.
ಶನಿ ದೇವರಿಗೆ ಸಂಬಂಧಿಸಿದ ಅಡೆ ತಡೆಗಳನ್ನು ನಿವಾರಿಸಲು, ಶನಿವಾರ ಸೂರ್ಯಾಸ್ತದ ಸಮಯದಲ್ಲಿ ಕಪ್ಪು ಕುದುರೆ ಲಾಳದಿಂದ ಅಥವಾ ಕಬ್ಬಿಣದಿಂದ ತಯಾರಿಸಿದ ಉಂಗುರವನ್ನು ನಿಮ್ಮ ಮಧ್ಯದ ಬೆರಳಿಗೆ ಧರಿಸಬೇಕು. ಆದರೆ ಹೀಗೆ ಉಂಗುರವನ್ನು ಧರಿಸುವ ಮುನ್ನ ನಿಮ್ಮ ಜಾತಕವನ್ನೊಮ್ಮೆ ಜ್ಯೋತಿಷರ ಬಳಿ ತೋರಿಸಿ ಸಲಹೆ ಪಡೆದುಕೊಳ್ಳುವುದು ಉತ್ತಮ.
ವಾಯು ಪುತ್ರನಾದ ಹನುಮಂತನ ಭಕ್ತರಿಗೆ ಶನಿ ಕಾದ ಪ್ರಭಾವ ಕಡಿಮೆ ಎಂಬ ನಂಬಿಕೆಯಿದೆ. ಸ್ವತಃ ಶನಿ ದೇವನೇ ಆಂಜನೇಯನಿಗೆ ಈ ವಾಗ್ದಾನವನ್ನು ನೀಡಿದ್ದಾನೆ ಎಂಬ ಕಥೆ ನಮಗೆ ಪುರಾಣಗಳಲ್ಲಿ ಸಿಗುತ್ತದೆ. ಹಾಗಾಗಿ ಶನಿವಾರದಂದು ಆಂಜನೇಯನನ್ನು ನಿಮ್ಮ ಶಕ್ತ್ಯಾನುಸಾರ ಪೂಜಿಸಿದಲ್ಲಿ ಶನಿ ಪೀಡನೆಯಿಂದ ಮುಕ್ತಿ ಪಡೆಯಬಹುದು.
ಪ್ರತೀ ಶನಿವಾರ ಇರುವೆಗಳಿಗೆ ಕಪ್ಪು ಎಳ್ಳು, ಹಿಟ್ಟು ಮತ್ತು ಸಕ್ಕರೆಯನ್ನು ಮಿಶ್ರ ಮಾಡಿ ತಿನ್ನಲು ನೀಡಿದಲ್ಲಿ ಶನಿ ಪ್ರಭಾವ ನಿಮ್ಮ ಜಾತಕದಲ್ಲಿ ಕಡಿಮೆಯಾಗುತ್ತದೆ.