ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Siddaramaiah Record: ಅರಸು ʼಚಿಂತನೆʼ ಜತೆ ಸಾಗಿ ʼಅರಸʼನಾದ ಸಿದ್ದು

ಕರ್ನಾಟಕ ರಾಜಕೀಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ರಾಜಕಾರಣಿ ದೇವರಾಜು ಅರಸು. ಇಂದಿಗೂ ಅವರನ್ನು ಜನ ನೆನಪಿಸಿಕೊಳ್ಳುತ್ತಾರೆ. ಸಾಮಾನ್ಯ ವಾಗಿ ಉತ್ತಮ ಆಡಳಿತ ವೆಂದಾಗ ಅರಸು ಅವರೊಂದಿಗೆ ಹೋಲಿಸುವ ಒಂದು ಕ್ರಮ ರಾಜ್ಯದಲ್ಲಿದೆ. ಸಿದ್ದರಾಮಯ್ಯ ಆಡಳಿತವನ್ನು ಅರಸು ಅವರೊಂದಿಗೆ ಹೋಲಿಸುವುದು ಇನ್ನೂ ಸಹಜ ವೆನ್ನಿಸುತ್ತದೆ. ಸಿದ್ದು ಅವರ ಆಡಳಿತ ಶೈಲಿಯಲ್ಲಿ ಅಂತಹದ್ದೊಂದು ಗುಣವಿದೆ.

ಅರಸು ʼಚಿಂತನೆʼ ಜತೆ ಸಾಗಿ ʼಅರಸʼನಾದ ಸಿದ್ದು

-

Ashok Nayak
Ashok Nayak Jan 6, 2026 1:12 PM

ಕರ್ನಾಟಕ ರಾಜಕೀಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ರಾಜಕಾರಣಿ ದೇವರಾಜು ಅರಸು. ಇಂದಿಗೂ ಅವರನ್ನು ಜನ ನೆನಪಿಸಿಕೊಳ್ಳುತ್ತಾರೆ. ಸಾಮಾನ್ಯ ವಾಗಿ ಉತ್ತಮ ಆಡಳಿತವೆಂದಾಗ ಅರಸು ಅವರೊಂದಿಗೆ ಹೋಲಿಸುವ ಒಂದು ಕ್ರಮ ರಾಜ್ಯದಲ್ಲಿದೆ. ಸಿದ್ದರಾಮಯ್ಯ ಆಡಳಿತವನ್ನು ಅರಸು ಅವರೊಂದಿಗೆ ಹೋಲಿಸು ವುದು ಇನ್ನೂ ಸಹಜ ವೆನ್ನಿಸುತ್ತದೆ. ಸಿದ್ದು ಅವರ ಆಡಳಿತ ಶೈಲಿಯಲ್ಲಿ ಅಂತಹ ದ್ದೊಂದು ಗುಣವಿದೆ.

ರಾಜಕೀಯ ಪ್ರವೇಶಿಸಬೇಕೆಂದು ಲಕ್ಷಾಂತರ ಜನ ಕನಸು ಕಾಣುತ್ತಾರೆ. ಬರುವವರ ಸಂಖ್ಯೆ ಸಾವಿರದ ಲೆಕ್ಕದಲ್ಲಿದ್ದರೆ, ಜನಪ್ರತಿನಿಧಿಗಳ ಸ್ಥಾನ ನೂರರ ಲೆಕ್ಕದಲ್ಲಿ ಇರುತ್ತದೆ. ಆದರೆ ಮುತ್ಸದ್ದಿ ರಾಜಕಾರಣಿ ಎನ್ನುವ ಸ್ಥಾನ ಪಡೆಯುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು! ಈ ಮುತ್ಸದ್ದಿತನ ಸಿಗುವುದು ಅಧಿಕಾರವಿದ್ದಾಗ ಹೇಗೆ ನಡೆದುಕೊಂಡರು ಎನ್ನುವುದಕ್ಕಿಂತ ಅಧಿ ಕಾರ ಮೀರಿ ಜನರೊಂದಿಗೆ ಹೇಗೆಬೆಸೆದರು, ರಾಜ್ಯಕ್ಕೆ, ದೇಶಕ್ಕೆ ನೀಡಿದ ಕೊಡುಗೆ ಏನು ಎನ್ನುವುದರ ಆಧಾರದಲ್ಲಿ ನಿರ್ಧಾರವಾಗುತ್ತದೆ. ಕರ್ನಾಟಕದಲ್ಲಿರುವ ಇಂತಹ ಮುತ್ಸದ್ದಿ ರಾಜಕಾರಣಿಗಳ ಪಟ್ಟಿ ಮಾಡುವ ಸಮಯದಲ್ಲಿ ಸಿಗುವ ಮೊದಲ ಹೆಸರು ದೇವರಾಜ ಅರಸು!

ಅರಸು ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿ ದಶಕಗಳೇ ಕಳೆದರೂ, ಈಗಲೂ ಸಮಾಜಕ್ಕೆ, ಹಿಂದುಳಿದವರಿಗೆ ಅರಸು ನೀಡಿದ ಕೊಡುಗೆಯನ್ನು ಜನ ಮರೆತಿಲ್ಲ. ಅರಸು ಪರಂಪರೆಯ ಚಿಂತನೆಯನ್ನು ಹೊತ್ತು ಸಾಗಿದ ಮತ್ತೊಬ್ಬ ಮುತ್ಸದ್ದಿ ಎಂದರೆ ಅದು ಸಿದ್ದರಾಮಯ್ಯ. ಈ ಕಾರಣಕ್ಕಾಗಿಯೇ ಇಬ್ಬರೂ ನಾಯಕರು ಒಂದು ಕ್ಷೇತ್ರ, ಜಿಲ್ಲೆ ಅಥವಾ ಪ್ರಾಂತ್ಯಕ್ಕೆ ಸೀಮಿತ ವಾಗದೇ ಇಡೀ ರಾಜ್ಯದ ‘ಮಾಸ್ ಲೀಡರ್’ ಆಗಿ ಕಾಣಿಸಿಕೊಂಡರು.

1972ರಿಂದ 1977ರವರೆಗೆ ದೇವರಾಜ ಅರಸರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿ, ಚುನಾವಣೆಗೆ ಹೋಗಿ 1978ರಿಂದ 1980ರ ಜನವರಿವರೆಗೆ ಎರಡನೇ ಅವಧಿಗೂ ಮುಖ್ಯಮಂತ್ರಿಯಾಗುವ ಮೂಲಕ ಒಟ್ಟು 2792 ದಿನಗಳ ಕಾಲ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದ ದಾಖಲೆಯನ್ನು ಬರೆದಿದ್ದರು. ಇದೀಗ ಈ ದಾಖಲೆಯನ್ನು ಮುರಿಯಲು ಅದೇ ‘ಚಿಂತನೆ’ಯ ಮತ್ತೊಬ್ಬ ನಾಯಕ ಸಿದ್ದರಾಮಯ್ಯ ಸಜ್ಜಾಗಿದ್ದಾರೆ.

2013ರ ಮೇ 13ರಿಂದ 2018ರವರೆಗೆ ಐದು ವರ್ಷ ಪೂರೈಸಿದ್ದ ಸಿದ್ದರಾಮಯ್ಯ ಅವರು 2023 ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದು, 2023ರ ಮೇನಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Siddaramaiah Record: ರಾಜಕೀಯ ಮೀರಿದ ಸ್ನೇಹ-ಪ್ರೀತಿ ಅವರಲ್ಲಿ ಕಂಡೆ...!

ಮಂಗಳವಾರದ ವೇಳೆಗೆ ಅರಸು ಅವರ ಸುದೀರ್ಘ ಮುಖ್ಯಮಂತ್ರಿ ದಾಖಲೆಯನ್ನು ಸಮನಾಗಿಸುತ್ತಿರುವ ಸಿದ್ದರಾಮಯ್ಯ ಅವರು ಬುಧವಾರ ಈ ದಾಖಲೆಯನ್ನು ಮುರಿಯ ಲಿದ್ದಾರೆ. ಸಮಾಜವಾದಿ ತತ್ವ ಸಿದ್ಧಾಂತದ ತಳಹದಿಯಲ್ಲಿಯೇ ಅಧಿಕಾರದ ಸೌಧವನ್ನು ಕಟ್ಟುವ ಮೂಲಕ ಅಹಿಂದ ಸಿದ್ದಾಂತದ ಪ್ರತಿಪಾದಕರಾಗಿಯೂ, ಇತರ ವರ್ಗದ ಬಡವರ ಪಾಲಿಗೂ ಭಾಗ್ಯಗಳ ಕರುಣಿಸಿದ ಭಾಗ್ಯದಾತ ಎನಿಸಿಕೊಂಡಿರುವ ಸಿದ್ದರಾಮಯ್ಯ, ಅರಸು ಅವರ ನಂತರ ರಾಜ್ಯ ಕಂಡ ಬಡವರ ಪರ ಕಾಳಜಿಯುಳ್ಳ ಮುಖ್ಯಮಂತ್ರಿ ಎಂದರೆ ತಪ್ಪಲ್ಲ.

ದೇಶ ಸ್ವತಂತ್ರವಾದ ನಂತರದ ದಿನಗಳಲ್ಲಿ ಉಳ್ಳವರ ಪಡಸಾಲೆಯಲ್ಲಿ ಕಾಲು ಮುರಿದು ಕೊಂಡು ಬಿದ್ದಿದ್ದ ಅಧಿಕಾರ ಮತ್ತು ಸರಕಾರಿ ಸೌಲಭ್ಯಗಳ ಸತ್ವವನ್ನು ಬಡವರ ಬೀದಿ ಗಳಿಗೆ ಹರಿಸಿದ ಖ್ಯಾತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಆದರೆ, ಬೀದಿ ಹತ್ತಿರದ ಹಂಚಿ ಹೋಗುತ್ತಿದ್ದ ಆಯೋಜನೆಗಳ ಫಲವನ್ನು ಬಡವರ ಮನೆಮನೆಗಳಿಗೆ ಹರಿವಾಣ ದಲ್ಲಿ ತುಂಬಿಕೊಟ್ಟ ಖ್ಯಾತಿ ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.

ಅರಸು ಮತ್ತು ಸಿದ್ದರಾಮಯ್ಯ ನಡುವಿನ ರಾಜಕೀಯ ಸಾಮ್ಯತೆಯನ್ನು ವಿಶ್ಲೇಷಕರು ಅನೇಕ ಬಗೆಗಳಲ್ಲಿ ಗುರುತಿಸುತ್ತಾರೆ. ಅರಸು ಅವರು ಮೇಲ್ವರ್ಗದ ಹಂಚಿ ಹೋಗಿದ್ದ ಅಧಿಕಾರ ಮತ್ತು ಸರಕಾರದ ಸೌಲಭ್ಯವನ್ನು ಹಿಂದುಳಿದ ವರ್ಗದ ಕೈಗೆ ಕೊಡಿಸುವಲ್ಲಿ ಸಫಲರಾದರೆ, ಸಿದ್ದರಾಮಯ್ಯ ಅವರು ಆ ಅಧಿಕಾರ ಮತ್ತು ಸರಕಾರದ ಸೌಲಭ್ಯಗಳು ಹಿಂದುಳಿದ ವರ್ಗ, ಅದಕ್ಕಿಂತ ಕೆಳವರ್ಗದ ಜನರ ಕೈಗೆ ಸಿಗುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ.

ಹೀಗಾಗಿಯೇ, ಅವರನ್ನು ದೇವರಾಜು ಅರಸು ಅವರ ಜತೆಗೆ ಹೋಲಿಸುವ ಪರಿಪಾಠ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಆರಂಭವಾಗಿದೆ.

ಸಿದ್ದರಾಮಯ್ಯ ಅವರು ತಾವೇ ಹೇಳಿಕೊಂಡಂತೆ, ‘ಬಡವರು, ಬೀದಿಯ ಜನರು ಹಬ್ಬ-ಹುಣ್ಣಿಮೆಯಲ್ಲಿ ಮಾತ್ರ ಅನ್ನ ಮಾಡುತ್ತಿದ್ದರು. ಅನಾರೋಗ್ಯ ಪೀಡಿತ ಮಕ್ಕಳಿಗೆ ಅನ್ನ ಉಣ್ಣಿಸಲು ನಿತ್ಯ ಅನ್ನ ಉಣ್ಣುವ ಸಿರಿವಂತರ ಮನೆಯ ಬಾಗಿಲಲ್ಲಿ ಕಾದು ಕುಳಿತು, ಒಂದು ಮಿದಿಕೆ ಅನ್ನ ಪಡೆದು ಮಕ್ಕಳಿಗೆ ಕೊಡುತ್ತಿದ್ದರು.

ಇಂತಹ ಸ್ಥಿತಿಯನ್ನು ಕಣ್ಣಾರೆ ಕಂಡು, ನಾನು ಅನ್ನಭಾಗ್ಯವನ್ನು ಜಾರಿಗೊಳಿಸಿದೆ’ ಎಂಬ ಮಾತಿನಂತೆ, ಬಡತನ, ಜಾತೀಯತೆ ಅವಮಾನಗಳೆಲ್ಲವನ್ನು ಸ್ವತಃ ಅನುಭವಿಸಿದ್ದರು. ಅವರ ಈ ಅವಮಾನ ಮತ್ತು ಅನುಭವವೇ ಮುಂದೆ ಅವರು ಮುಖ್ಯಮಂತ್ರಿಯಾಗಿ ಬಡವರ, ದಲಿತರ ಪರವಾದ ಚಿಂತನೆ ಮಾಡಲು ಪ್ರೇರಕವಾಯಿತು ಎನ್ನಬಹುದು.

ಮೊದಲ ಅವಧಿಯ ಐದು ವರ್ಷದಲ್ಲಿ ಬಡವರ ಕಾಳಜಿಯ ಭಾಗ್ಯಗಳ ಜತೆಗೆ, ರಾಜ್ಯದ ಅಭಿವೃದ್ಧಿ, ಆರ್ಥಿಕ ಸ್ಥಿತಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಸಾಧನೆ ಅಮೋಘ. ಬಂಡವಾಳ ಹೂಡಿಕೆ ಯಲ್ಲಿ ರಾಜ್ಯ ನಂ.1 ಸ್ಥಾನ ಪಡೆದರೆ, ಆರೋಗ್ಯ, ನೀರಾವರಿ, ಪಡಿತರ ವ್ಯವಸ್ಥೆ ಹಾಗೂ ದಲಿತ ಪರವಾದ ಯೋಜನೆಗಳನ್ನು ರೂಪಿಸುವಲ್ಲಿ ಸರಕಾರ ಅತ್ಯುತ್ತಮ ಸಾಧನೆ ಮಾಡಿದೆ. ಇದೆಲ್ಲವೂ ಸಾಧ್ಯವಾಗಿದ್ದು ಸಿದ್ದರಾಮಯ್ಯ ಅವರ ಸಮಾಜವಾದಿ ಚಿಂತನೆ ಮತ್ತು ಬಡವರ ಪರವಾದ ಕಾಳಜಿಯಿಂದ ಎಂಬುದು ಮಾತ್ರ ಗಮನಿಸಬಹುದಾದ ಅಂಶ.

ಸಿದ್ದರಾಮಯ್ಯ ಅವಧಿಯ ಸಾಧನೆಗಳು

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಕಿಕೊಟ್ಟ ಮಾರ್ಗದಲ್ಲೇ ನಡೆದು ಇನ್ನಷ್ಟು ಕ್ರಾಂತಿಕಾರಕ ಬದಲಾವಣೆ ಜಾರಿ

ಮುಖ್ಯಮಂತ್ರಿ ಆಗಿದ್ದ ಮೊದಲ ಅವಧಿಯಲ್ಲಿ ಹಲವು ಭಾಗ್ಯಗಳ ಮೂಲಕ ಬಡ ಜನರನ್ನು ಮೇಲೆತ್ತಲು ಪ್ರಾಮಾಣಿಕ ಕ್ರಮ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಎಸ್ ಟಿಪಿ-ಟಿಎಸ್‌ಪಿ ಎನ್ನುವ ಮೀಸಲು ಅನುದಾನಕ್ಕೆ ಚಿಂತನೆ

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕ 52 ಸಾವಿರ ಕೋಟಿ ರು.ಗೂ ಹೆಚ್ಚು ಅನುದಾನ ವಿನಿಯೋಗ, ಹೊಸ ಆರ್ಥಿಕ ದಾಖಲೆ

ನೀರಾವರಿ ಯೋಜನೆಗೆ ಹೆಚ್ಚು ಒತ್ತು ನೀಡುವ ಮೂಲಕ ಬರಡು ಭೂಮಿಗಳಿಗೆ ಚೈತನ್ಯ ತುಂಬಿ, ರೈತರ ಬದುಕಿಗೆ ಭರವಸೆಯಾದರು.

ಅರಸು ಅವಧಿಯ ಸಾಧನೆಗಳು

ಉಳುವವನೇ ಭೂಮಿಯ ಒಡೆಯ ಕಾಯಿದೆಯನ್ನು ಜಾರಿ ಮಾಡಿ, ಭೂಮಿರಹಿತರಿಗೆ ಭೂಮಿ ಹಂಚಿಕೆ

ಹಿಂದುಳಿದ ವರ್ಗಗಳ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ರಾಜಕೀಯ ಬಲ ನೀಡಲು ಯತ್ನ

ರಾಜ್ಯದ ಹಿಂದುಳಿದ ವರ್ಗಗಳ ಜನರಿಗೆ ಶಿಕ್ಷಣ, ಸರಕಾರಿ ಕೆಲಸ ಗಳಲ್ಲಿ ಮೀಸಲಾತಿ ಹಂಚಿಕೆಗೆ ದಿಟ್ಟ ಹೆಜ್ಜೆ

ಗ್ರಾಮೀಣ, ಬಡ, ಇತರೆ ಹಿಂದುಳಿದ ಸಮುದಾಯಕ್ಕೆ ಶಿಕ್ಷಣ ಒದಗಿಸಲು ಹಲವು ಪ್ರಮುಖ ತೀರ್ಮಾನ

ಜನಪರ ಆಡಳಿತದ ಮೂಲಕ ಎಲ್ಲ ವರ್ಗಗಳ ಜನರಿಗೂ ನ್ಯಾಯ ಸಿಗುವ ನಿಟ್ಟಿನಲ್ಲಿ ಆಡಳಿತದ ಸುಧಾರಣೆ.