Siddaramaiah Record: ರಾಜಕೀಯ ಮೀರಿದ ಸ್ನೇಹ-ಪ್ರೀತಿ ಅವರಲ್ಲಿ ಕಂಡೆ...!
ಸ್ನೇಹಿತ ವಿವೇಕ್ ಎನ್ನುವವರ ಹೋಟೆಲ್‌ಗೆ ಹೋದೆವು. ಅಲ್ಲಿಗೆ ಹೋಗುವ ವೇಳೆಗೆ ಊಟಕ್ಕೆ ಸಕಲವೂ ಸಿದ್ಧವಾಗಿತ್ತು. ಅನಿರೀಕ್ಷಿತವಾಗಿ ಬಂದ ನಮಗೆ ಊಟದ ತಯಾರಿ ಹೇಗಾಯಿತು ಎಂದು ವಿವೇಕ್ ಅವರನ್ನು ಕೇಳಿದಾಗ, ‘ಸಾಹೇಬರು ಕರೆ ಮಾಡಿದ್ದರು’ ಎನ್ನುವ ಉತ್ತರ ಬಂತು, ಅಂದರೆ ಸಹಾಯಕರು ತಂದಿದ್ದ ಊಟವನ್ನು ತಿರಸ್ಕರಿಸಿ ಆತನಿಗೂ ಬೇಸರ ಮಾಡದೇ, ಸ್ನೇಹಿತ ರೊಂದಿಗೆ ಊಟ ಮಾಡಬೇಕೆನ್ನುವ ಕಾರಣಕ್ಕೆ ನಮಗೂ ತಿಳಿಸದೇ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದರು.
-
ಸರೋವರ ಶ್ರೀನಿವಾಸ್
ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಸಿದ್ದರಾಮಯ್ಯ ಅವರ ಸ್ನೇಹ ಬಳಗದಲ್ಲಿ ಯಾರೇ ಹೊಕ್ಕರೂ ಅಲ್ಲಿಂದ ಹೊರ ಬರುವುದು ಸುಲಭವಲ್ಲ, ಅದಕ್ಕೆ ಸಿದ್ದರಾಮಯ್ಯ ಅವರು ಆಸ್ಪದವನ್ನು ಕೊಡುವು ದಿಲ್ಲ. ಅಧಿಕಾರ, ಆಸ್ತಿ, ಅಂತಸ್ತುಗಳೆಲ್ಲವನ್ನು ಮೀರಿ ಸಿದ್ದರಾಮಯ್ಯ ಅವರು ಸ್ನೇಹಕ್ಕೆ ಆದ್ಯತೆ ನೀಡುವುದೇ ಅವರಲ್ಲಿರುವ ದೊಡ್ಡ ಗುಣ. ಅಷ್ಟೇ ಅಲ್ಲದೆ ಯಾರಿಗೂ ಕೆಡಕು ಬಯಸದ, ಬೆನ್ನಿಗೆ ಚೂರಿ ಹಾಕದ ವ್ಯಕ್ತಿತ್ವ ಅವರದ್ದಾಗಿದೆ.
ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುತ್ಸದಿ ರಾಜಕಾರಣಿ ಎನ್ನಬಹುದು. ಆರ್ಥಿಕ ವಿಷಯದಲ್ಲಿ ತಜ್ಞ ಎನ್ನಬಹುದು. ಹಿಂದುಳಿದ ವರ್ಗಗಳ ನಾಯಕನೆಂದು ನಿಸ್ಸಂದೇಹವಾಗಿ ಹೇಳಬಹುದು. ಹೀಗೆ ರಾಜ್ಯ, ರಾಷ್ಟ್ರದ ಜನರಿಗೆ ಸಿದ್ದರಾಮಯ್ಯ ಅವರಲ್ಲಿರುವ ಒಂದೊಂದು ಅಂಶಗಳೂ ಇಷ್ಟವಾಗ ಬಹುದು. ಆದರೆ ಈ ಎಲ್ಲವನ್ನು ಮೀರಿ ಸಿದ್ದರಾಮಯ್ಯ ಅವರ ‘ಸ್ನೇಹ’ದ ಅಪ್ಪುಗೆಯಲ್ಲಿ ನಾನಿದ್ದೇನೆ ಎನ್ನುವ ಖುಷಿಯಿದೆ.
ರಾಜ್ಯ ಕಂಡ ಮುತ್ಸದಿ ರಾಜಕಾರಣಿಗಳ ಸಾಲಿನಲ್ಲಿ ದೇವರಾಜ ಅರಸು ಅಗ್ರಪಂಕ್ತಿಯಲ್ಲಿ ನಿಲ್ಲುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಅರಸು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದ ಸಿದ್ದರಾಮಯ್ಯ ಅವರು, ಹಿಂದುಳಿದ ವರ್ಗದ ಏಳ್ಗೆಯ ಜತೆಜತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ, ಸರ್ವರ ಅಭಿವೃದ್ಧಿಗೆ ತಮ್ಮ ಇಡೀ ಜೀವನವನ್ನು ಮೀಸಲಿಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ದೇವರಾಜ ಅರಸು ಅವರು ದಾಖಲಿಸಿದ್ದ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎನ್ನುವ ದಾಖಲೆಯನ್ನು ಮಂಗಳವಾರಕ್ಕೆ ಸಮ ಮಾಡಿದರೆ, ಬುಧವಾರದ ಹೊತ್ತಿಗೆ ಈ ದಾಖಲೆ ಯನ್ನು ಮುರಿಯುತ್ತಾರೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸುದೀರ್ಘ ಸೇವೆ ಸಲ್ಲಿಸು ವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಈ ಎಲ್ಲ ಸವಾಲುಗಳನ್ನು ಮೀರಿ ಈ ಸಾಧನೆ ಮಾಡಲು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯವಾಗಿದೆ.
ಇದನ್ನೂ ಓದಿ: Siddaramaiah Record: ರಾಮಯ್ಯನಿಗೆ ಸಾಮಾಜಿಕ ನ್ಯಾಯವೇ ಸಿದ್ಧಾಂತ
ಅವರ ರಾಜಕೀಯ ಪಟ್ಟುಗಳ ಬಗ್ಗೆ ಮಾತನಾಡುವ ಮೊದಲು ಅವರ ಸ್ನೇಹಿತನಾಗಿ ಕೆಲವೊಂದಷ್ಟು ಅಂಶಗಳನ್ನು ಪ್ರಸ್ತಾಪಿಸದೇ ಇರುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಸ್ನೇಹ ಬಳಗದಲ್ಲಿ ಯಾರೇ ಹೊಕ್ಕರು ಅಲ್ಲಿಂದ ಹೊರಬರುವುದು ಸುಲಭವಲ್ಲ. ಅದಕ್ಕೆ ಸಿದ್ದರಾಮಯ್ಯ ಅವರು ಆಸ್ಪದವನ್ನು ಕೊಡುವುದಿಲ್ಲ.
ಅಧಿಕಾರ, ಆಸ್ತಿ, ಅಂತಸ್ತುಗಳೆಲ್ಲವನ್ನು ಮೀರಿ ಸಿದ್ದರಾಮಯ್ಯ ಅವರು ಸ್ನೇಹಕ್ಕೆ ಆದ್ಯತೆ ನೀಡುವುದೇ ಅವರಲ್ಲಿರುವ ದೊಡ್ಡ ಗುಣ. ಇದರೊಂದಿಗೆ ಯಾರಿಗೂ ಕೆಡಕು ಬಯಸದ, ಬೆನ್ನಿಗೆ ಚೂರಿ ಹಾಕದ ವ್ಯಕ್ತಿತ್ವ.
ಸಿದ್ದರಾಮಯ್ಯ ಅವರು ಸ್ನೇಹಕ್ಕೆ ನೀಡುವ ಬೆಲೆಗೆ ಒಂದು ಉದಾಹರಣೆ ನೀಡುವುದಾದರೆ, ‘ಕೆಲ ವರ್ಷದ ಹಿಂದೆ ಮೈಸೂರಿನಲ್ಲಿ ನಡೆದ ನಾಡಹಬ್ಬ ದಸರಾ ಸಮಯದಲ್ಲಿ ಒಂದು ಸಭಾ ಕಾರ್ಯಕ್ರಮ ಆಯೋಜನೆಯಾಗಿತ್ತು. ಆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದರಾಮಯ್ಯ ಅವರೇ ವಹಿಸಿದ್ದರು.
ಕಾರ್ಯಕ್ರಮದ ಬಳಿ ನಾನು, ಸಿದ್ದರಾಮಯ್ಯ ಹಾಗೂ ನಾಗರಾಜ್ ಒಟ್ಟಿಗೆ ತೆರಳಿದೆವು. ಸಿದ್ದರಾಮಯ್ಯ ಅವರಿಗಾಗಿ ಸಹಾಯಕರು ಸಿದ್ಧಪಡಿಸಿದ್ದ ಊಟವನ್ನು ತೆಗೆದುಕೊಂಡು ಬಂದು ಬಡಿಸಲು ಮುಂದಾದರು. ಆದರೆ ನಾವು ಮೂರು ಜನರಿದ್ದ ಕಾರಣ, ಮೂವರಿಗೂ ಬಡಿಸುವಂತೆ ಸಹಾಯಕರಿಗೆ ಹೇಳಿದರು.
ಆದರೆ ಒಬ್ಬರಿಗೆ ಆಗುವಷ್ಟು ಮಾತ್ರವಿರುವುದನ್ನು ಹೇಳಿದಾಗ, ಅಲ್ಲಿಯೇ ಇಟ್ಟು ಹೋಗು ವಂತೆ ಸಿದ್ದರಾಮಯ್ಯ ಅವರು ಹೇಳಿ ಕೋಣೆಯೊಳಗೆ ಹೋದರು. ಕೋಣೆಯೊಳಗೆ ಹೋಗಿ ಹೊರಬರುವ ಹೊತ್ತಿಗೆ, ಸಿದ್ದರಾಮಯ್ಯ ಅವರು ಇಂದು ಇಲ್ಲಿ ಊಟ ಮಾಡುವು ದಕ್ಕಿಂತ ಹೊರಗಡೆ ಊಟ ಮಾಡಬೇಕೆನಿಸಿದೆ ನಡೆಯಿರಿ ಎಂದು ನಮ್ಮನ್ನು ಕರೆದುಕೊಂಡು ಹೋದರು.
ಸ್ನೇಹಿತ ವಿವೇಕ್ ಎನ್ನುವವರ ಹೋಟೆಲ್‌ಗೆ ಹೋದೆವು. ಅಲ್ಲಿಗೆ ಹೋಗುವ ವೇಳೆಗೆ ಊಟಕ್ಕೆ ಸಕಲವೂ ಸಿದ್ಧವಾಗಿತ್ತು. ಅನಿರೀಕ್ಷಿತವಾಗಿ ಬಂದ ನಮಗೆ ಊಟದ ತಯಾರಿ ಹೇಗಾಯಿತು ಎಂದು ವಿವೇಕ್ ಅವರನ್ನು ಕೇಳಿದಾಗ, ‘ಸಾಹೇಬರು ಕರೆ ಮಾಡಿದ್ದರು’ ಎನ್ನುವ ಉತ್ತರ ಬಂತು, ಅಂದರೆ ಸಹಾಯಕರು ತಂದಿದ್ದ ಊಟವನ್ನು ತಿರಸ್ಕರಿಸಿ ಆತನಿಗೂ ಬೇಸರ ಮಾಡದೇ, ಸ್ನೇಹಿತರೊಂದಿಗೆ ಊಟ ಮಾಡಬೇಕೆನ್ನುವ ಕಾರಣಕ್ಕೆ ನಮಗೂ ತಿಳಿಸದೇ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದರು.
ಇದು ಅವರ ಸೂಕ್ಷ್ಮಮತೀಯತೆ; ಸ್ನೇಹಕ್ಕೆ ಅವರು ನೀಡುವ ಬೆಲೆ. ಇಂತಹ ಸ್ನೇಹ ಬಳಗ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರೆ ತಪ್ಪಾಗುವುದಿಲ್ಲ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಸ್ನೇಹ, ಸಾಂಗತ್ಯ ಸಿಕ್ಕಿದ್ದು ಪುಣ್ಯ ಎಂದು ಹೇಳುತ್ತೇನೆ. ಹೀಗಾಗಿ ಸ್ನೇಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ!
ಸಿದ್ದರಾಮಯ್ಯ ಅವರ ರಾಜಕೀಯ ಮುತ್ಸದಿತನದ ಜತೆಜತೆಗೆ ಅವರ ಭಾಷಣದಲ್ಲಿನ ಮಾತುಗಳು ಅನೇಕರಿಗೆ ಅಚ್ಚರಿ ಮೂಡಿಸುತ್ತದೆ. ಪ್ರೌಢಶಾಲೆಯಲ್ಲಿ ಕಲಿತ ಸಂಧಿ-ಸಮಾಸ ಹಾಗೂ ವ್ಯಾಕರಣದ ಪಾಠಗಳಿರಬಹುದು, ನಾಲಿಗೆಯ ಅಂಚಿನಲ್ಲಿ ಹೇಳುವ ಅಂಕಿ-ಅಂಶಗಳನ್ನು ಭಾಷಣದ ಪ್ರತಿಯನ್ನು ನೋಡಿಕೊಳ್ಳದೇ ಹೇಳುತ್ತಾರೆ.
ಅಂಕಿ-ಅಂಶ ಹೇಳುವಾಗ ಕೇವಲ ಲಕ್ಷ ಕೋಟಿಯಲ್ಲದೇ, ಕೊನೆಯಲ್ಲಿ ಬರುವ ಚಿಲ್ಲರೆ ಯನ್ನು ಪಕ್ಕಾ ಲೆಕ್ಕದಲ್ಲಿ ಹೇಳುವುದು ಅನೇಕರಿಗೆ ಬೆರಗು ಮೂಡಿಸುತ್ತಾರೆ. ಆದರೆ ಈ ಎಲ್ಲವೂ ನೆನಪಿನಲ್ಲಿ ಉಳಿಯಲು ಅವರ ‘ಅಧ್ಯಯನ’ಶೀಲತೆಯೇ ಕಾರಣ.
ಅಧ್ಯಯನಶೀಲ ವ್ಯಕ್ತಿತ್ವ
ನಿತ್ಯವೂ ಸಿದ್ದರಾಮಯ್ಯ ಅವರು ತಮ್ಮ ಕೋಣೆಯಿಂದ 10-11 ಗಂಟೆ ಮೇಲೆಯೇ ಬರುವುದು. ಅಲ್ಲಿಯವರೆಗೆ ಅವರು ವಿಶ್ರಮಿಸುತ್ತಿರುತ್ತಾರೆ ಎಂದು ಅನೇಕರು ಭಾವಿಸು ತ್ತಾರೆ. ಆದರೆ ಅವರು ಆ ಸಮಯದಲ್ಲಿ ವಿಶ್ರಮಿಸುವುದಿಲ್ಲ ಬದಲಿಗೆ ತಮ್ಮ ಇಡೀ ದಿನಕ್ಕೆ ‘ಪ್ಲ್ಯಾನ್’ ಮಾಡಿಕೊಳ್ಳುತ್ತಿರುತ್ತಾರೆ.
ಬೆಳಗ್ಗೆ ಎದ್ದ ಕೂಡಲೇ ‘ವಿಶ್ವವಾಣಿ’ಯ ಓದಿನೊಂದಿಗೆ ಆರಂಭವಾಗುವ ಅವರ ಬೆಳಗ್ಗೆಯ ದಿನಚರಿಯ ಬಹುಪಾಲು ಸಮಯ ದಿನಪತ್ರಿಕೆ ಓದುವುದರಲ್ಲಿ ಕಳೆಯುತ್ತಾರೆ. ಇದರೊಂದಿಗೆ ಯಾವುದೇ ಕಡತವಿದ್ದರೆ ಅದನ್ನು ಓದಿ, ಅರ್ಥೈಸಿಕೊಂಡ ಬಳಿಕವೇ ಕ್ರಮ ವಹಿಸಲು ಮುಂದಾಗುತ್ತಾರೆ. ಆ ಕಾರಣಕ್ಕೆ ಬೆಳಗ್ಗೆ ತಮ್ಮ ಕೋಣೆಯಿಂದ ಬರುವಾಗಲೇ, ಅವರು ಕಾರ್ಯಕ್ರಮದಲ್ಲಿ ಏನೆಲ್ಲ ಮಾತಾಡಬೇಕು ಎನ್ನುವ ಸ್ಪಷ್ಟತೆಯೊಂದಿಗೆ ಬರುತ್ತಾರೆ.
ಒಮ್ಮೆ ಕೋಣೆಯಿಂದ ಹೊರಬಂದರೆ ಜನರೊಂದಿಗೆ ಬೆರೆಯುತ್ತಾರೆ. ಆದರೆ ಅವರು ಅದಕ್ಕೂ ಮೊದಲು ಮಾಡುವ ಅಧ್ಯಯನಶೀಲತೆಯ ಕಲ್ಪನೆ ಅನೇಕರಿಗೆ ಇಲ್ಲ. ಆ ಕಾರಣ ಕ್ಕಾಗಿಯೇ ಸಿದ್ದರಾಮಯ್ಯ ಅವರ ಪ್ರತಿಭಾಷಣ ಕೇವಲ ಮಾತಾಗಿರುವುದಿಲ್ಲ. ಬದಲಿಗೆ ಅದರಲ್ಲಿ ಒಂದು ಸಂದೇಶ, ವಿಶೇಷತೆ ಇರುತ್ತದೆ. ನಿತ್ಯ ಅಧ್ಯಯನದ ಕಾರಣಕ್ಕಾಗಿಯೇ ಅವರಿಗೆ ತಾವೇನು ಮಾಡಬೇಕು? ಯಾವ ರೀತಿಯ ತೀರ್ಮಾನ ತಗೆದುಕೊಳ್ಳಬೇಕು ಎನ್ನುವ ಸ್ಪಷ್ಟತೆ ಇದೆ.
ನಮಗೆ ಒಂದು ಸಮಸ್ಯೆ ಎದುರಾದರೆ ಗಲಿಬಿಲಿಯಾಗುತ್ತೇವೆ. ಆದರೆ ಸಿದ್ದರಾಮಯ್ಯ ಅವರು ಎಂದಿಗೂ ಗಲಿಬಿಲಿಯಾಗಿರುವುದನ್ನು ನೋಡಿಲ್ಲ. ನೂರಾರು ಸಮಸ್ಯೆ ಎದುರಾ ದರೂ ಎಲ್ಲವನ್ನು ಸಮಾಧಾನವಾಗಿ ನಿಭಾಯಿಸುವ ಗುಣವಿದೆ. ಎಲ್ಲವನ್ನೂ ಕೂಲ್ ಆಗಿಯೇ ತಗೆದುಕೊಳ್ಳುತ್ತಾರೆ.
ಅದಕ್ಕಾಗಿಯೇ ಅವರು ಅಪರೂಪದ ರಾಜಕಾರಣಿ. ಆದರೆ ಕೆಲವೊಮ್ಮೆ ಅವರು ತೆಗೆದು ಕೊಳ್ಳುವ ನಿರ್ಧಾರಗಳು ಬೆರಗಾಗಿಸಿರುವುದು ಸುಳ್ಳಲ್ಲ. ಅದು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದು ದೇವರಿಗೆ ಗೊತ್ತು, ಒಂದು ಬಡ ಕುಟುಂಬದಲ್ಲಿ ಹುಟ್ಟಿದ ಅವರಿಗೆ ಈ ಶಕ್ತಿ ಹೇಗೆ ಬಂತು ಎನ್ನುವುದು ಗೊತ್ತಿಲ್ಲ.
ರಾತ್ರಿ ಎಷ್ಟೇ ತಡವಾಗಿ ಹೋದರೂ ಒಂದಿಷ್ಟು ಓದಿದ ಬಳಿಕವೇ ಮಲಗುವುದು. ಅನೇಕರಿಗೆ ಸಿದ್ದರಾಮಯ್ಯ ಅವರ ಈ ಗುಣದ ಬಗ್ಗೆ ಗೊತ್ತಿಲ್ಲ. ಕೆಲವೊಮ್ಮೆ ನಾನು, ಸಿದ್ದರಾಮಯ್ಯ ಹಾಗೂ ವಿಶ್ವೇಶ್ವರ ಭಟ್ ಅವರು ನಮ್ಮ ಫಾರ್ಮ್‌ಹೌಸ್‌ಗೆ ಹೋಗಿರುತ್ತೇವೆ. ಈ ರೀತಿ ಬಂದಾಗ ಸಿದ್ದರಾಮಯ್ಯ ಅವರು ಅವರಿಗೆ ಇಷ್ಟದ ಕೆಲವೊಂದಷ್ಟು ಪುಸ್ತಕಗಳನ್ನು ಕೋಣೆಯಲ್ಲಿರುವಂತೆ ಹೇಳುತ್ತಾರೆ.
ಕೆಲ ಗಂಟೆ ಚರ್ಚಿಸಿದ ಬಳಿಕ ಕೋಣೆಯೊಳಗೆ ಸೇರಿಕೊಂಡರೆ, ನಾಲ್ಕೈದು ಗಂಟೆ ನಿರಂತರ ವಾಗಿ ಓದುತ್ತಾರೆ. ಪುಸ್ತಕ, ಅಂಕಣಗಳನ್ನು ಸಿದ್ದರಾಮಯ್ಯ ಅವರು ಓದುವುದು ಅನೇಕರಿಗೆ ಗೊತ್ತಿಲ್ಲ. ಆದರೆ ಅವರ ಈ ಪ್ರಮಾಣದ ಜ್ಞಾನರ್ಜನೆಯಲ್ಲಿ ಪುಸ್ತಕಗಳ ಓದು ಬಹುಮುಖ್ಯ ಪಾತ್ರವಹಿಸಿದೆ.
ಅರಸುರನ್ನು ಮೀರಿಸಿದ ವ್ಯಕ್ವಿತ್ವ
ಅನೇಕ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ದೇವರಾಜು ಅರಸು ಅವರಿಗೆ ಹೋಲಿ ಸುವುದುಂಟು. ಹತ್ತು ಹಲವು ಕ್ರಾಂತಿಕಾರಿಕ ತೀರ್ಮಾನವನ್ನು ಕೈಗೊಂಡಿದ್ದ ಅರಸರು, ಹಿಂದುಳಿದ ವರ್ಗಗಳಿಗೆ ಸೇರಿದ ಸಣ್ಣ ಸಣ್ಣ ಸಮುದಾಯದಲ್ಲಿರುವವರನ್ನು ಗುರುತಿಸಿ ಅವರಿಗೆ ‘ಸ್ಥಾನಮಾನ’ ಕೊಡುವ ಕೆಲಸವನ್ನು ಮಾಡಿದರು.
ಅನೇಕರಿಗೆ ತಮ್ಮ ಸಚಿವ ಸಂಪುಟದಲ್ಲಿ ಅವಕಾಶ ನೀಡಿದರೆ, ಇನ್ನು ಕೆಲವರಿಗೆ ಬೇರೆ ಬೇರೆ ರೀತಿಯಲ್ಲಿ ಅಧಿಕಾರವನ್ನು ನೀಡುವ ಮೂಲಕ ಹಿಂದುಳಿದ ವರ್ಗಗಳ ಏಳ್ಗೆಗೆ ಶ್ರಮಿಸಿ ದರು.
ಸಿದ್ದರಾಮಯ್ಯ ಅವರು ಅರಸರು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾಗಿದರೂ, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಬೇಕಿರುವ ಸೌಲಭ್ಯ, ಸವಲತ್ತು ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಹಿಂದುಳಿದ ಇಡೀ ಸಮುದಾಯ ವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಾಗಿನಿಂದ ಮಾಡಿಕೊಂಡು ಬಂದಿದ್ದಾರೆ.
ಅರಸು ಅವರು ಗುರುತಿಸಿ, ಬೆಳೆಸುವ ಪ್ರಯತ್ನ ಮಾಡಿದರು. ಆದರೆ ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯಗಳೊಂದಿಗೆ ‘ಧ್ವನಿ’ಯಿಲ್ಲದವರ ಧ್ವನಿಯಾಗಿ, ಅವರಿಗೆ ಇಡೀ ಸಮುದಾಯಕ್ಕೆ ಸ್ಥಾನಮಾನ ಸಿಗುವಂತೆ ಹಾಗೂ ಇಡೀ ಸಮುದಾಯಗಳು ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ನೋಡಿಕೊಂಡರು. ಈ ಕಾರಣಕ್ಕೆ ಅರಸು ಅವರ ವ್ಯಕ್ತಿತ್ವವನ್ನು ಮೀರಿಸಿದ ವ್ಯಕ್ತಿತ್ವ ಸಿದ್ದರಾಮಯ್ಯ ಅವರದ್ದು ಎಂದರೆ ಅತಿಶಯೋಕ್ತಿಯಲ್ಲ.
ಇದರೊಂದಿಗೆ ದೇವರಾಜು ಅರಸು ಅವರ ಕಾಲಘಟ್ಟದಲ್ಲಿದ್ದ ರಾಜಕೀಯ ಮೌಲ್ಯಗಳಿಗೂ ಇಂದಿನ ರಾಜಕೀಯ ಮೌಲ್ಯಗಳಿಗೂ ಅಜಗಜಾಂತರವಿದೆ. ಅರಸು ಅವರ ಸಚಿವ ಸಂಪುಟ ದಲ್ಲಿದ್ದ ಸಚಿವರಿಗೆ ಪ್ರಾಮಾಣಿಕತೆ, ಕಾಳಜಿ ಹಾಗೂ ಬದ್ಧತೆ ಇತ್ತು. ಅರಸು ಅವರ ಸಿದ್ಧಾಂತ ದಲ್ಲಿ ಬಂದ ಬಹುತೇಕರು ಈ ಅಂಶವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.
ಆದರೆ ಆ ಸಿದ್ಧಾಂತ, ಬದ್ಧತೆಯ ಕೊನೆಯ ಕೊಂಡಿಯಾಗಿ ಸಿದ್ದರಾಮಯ್ಯ ಅವರಿದ್ದಾರೆ. ಅವರ ನಂತರ ಈ ಪರಂಪರೆಯನ್ನು ಯಾರು ಮುನ್ನಡೆಸುತ್ತಾರೆ ಎನ್ನುವ ಆತಂಕ ನನಗಿದೆ. ಅಷ್ಟೇ ಏಕೆ, ಸ್ವತಃ ಸಿದ್ದರಾಮಯ್ಯ ಅವರು ಒಮ್ಮೆ ಚರ್ಚಿಸುವಾಗ, ‘ಅಧಿಕಾರ ಯಾವತ್ತಾ ದರೂ ಇರುತ್ತದೆ. ಆದರೆ ಕರ್ನಾಟಕದ ಹೆಸರನ್ನು ಉಳಿಸಿ-ಬೆಳೆಸುವ ಬದ್ಧತೆಯಿರುವ ನಾಯಕತ್ವ ಇಂದಿನ ಅಗತ್ಯ.
ನಮ್ಮ ಪರಂಪರೆಯನ್ನು ಮುಂದೆ ಯಾರು ನಡೆಸುತ್ತಾರೆ ಎನ್ನುವುದು ಯಾರು?’ ಎನ್ನುವ ಪ್ರಶ್ನೆಯಿದೆ ಎಂದಿದ್ದರು. ಅನೇಕ ಸಮಯದಲ್ಲಿ ಸಿದ್ದರಾಮಯ್ಯ ಅವರನ್ನು ಅಹಿಂದ ನಾಯಕತ್ವನೆಂದು ಲೆಬಲ್ ಮಾಡಿರುವುದನ್ನು ನೋಡಿದ್ದೇನೆ. ಆದರೆ ಅವರು ಕೇವಲ ಅಹಿಂದಕ್ಕೆ ಸೀಮಿತವಾಗಿರುವ ನಾಯಕರಲ್ಲ. ಅವರನ್ನು ಯಾವುದೇ ಒಂದು ಸಮಾಜ, ವರ್ಗ, ಸಿದ್ಧಾಂತಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರನ್ನು ಕಳೆದ ಮೂರುವರೆ ದಶಕದಿಂದ ತೀರಾ ಹತ್ತಿರದಿಂದ ನೋಡಿರುವ ಕಾರಣಕ್ಕೆ ಈ ಮಾತನ್ನು ಯಾವುದೇ ಅನುಮಾನವಿಲ್ಲದೇ ಹೇಳುತ್ತೇನೆ.
ಸಿದ್ದರಾಮಯ್ಯ ಅವರೊಬ್ಬ ಮುತ್ಸದಿ ರಾಜಕಾರಣಿ. ರಾಜ್ಯ, ರಾಷ್ಟ್ರ ನಾಯಕನಾಗುವ ಎಲ್ಲ ಅರ್ಹತೆಯಿದೆ. ಆದರೆ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಒಲವಿಲ್ಲ ಎನ್ನುವುದು ಬೇರೆ ಮಾತು. ಸಿದ್ದರಾಮಯ್ಯ ಅವರನ್ನು ಕೇವಲ ಅಹಿಂದ ನಾಯಕನೆಂದು ಗುರುತಿಸು ವುದಕ್ಕಿಂತ, ಎಲ್ಲ ವರ್ಗಗಳಿಗೆ ಸೇರಿದ ನಾಯಕ ಎನ್ನುವುದು ಸೂಕ್ತ. ಆದರೆ ಅವರಿಗೆ ಹಿಂದುಳಿದವರ ಮೇಲೆ ವಿಶೇಷ ಕಾಳಜಿಯಿದೆ. ಹಾಗೆಂದು ಇತರರ ಮೇಲೆ ಪ್ರೀತಿಯಿಲ್ಲ ಎಂದಲ್ಲ ಎನ್ನುವುದು ಸ್ಪಷ್ಟ.
ಅಂತಿಮವಾಗಿ ಕಳೆದ ನಾಲ್ಕು ದಶಕದ ರಾಜಕೀಯ ಜೀವನದಲ್ಲಿ ನಾನು ಮರೆಯದ ವ್ಯಕ್ತಿಗಳು ಇದ್ದರು ಅದು ಇಬ್ಬರು. ಅದರಲ್ಲಿ ಒಬ್ಬರು ಜೆ.ಎಚ್.ಪಾಟೀಲ್ ಮತ್ತೊಬ್ಬರು ಸಿದ್ದರಾಮಯ್ಯ ನವರು. ರಾಜಕೀಯ ಮೌಲ್ಯಗಳನ್ನು ಈ ಇಬ್ಬರು ವ್ಯಕ್ತಿಗಳು ನನ್ನಲ್ಲಿ ತುಂಬಿದವರು. ಈ ಇಬ್ಬರು ಮೇರು ರಾಜಕಾರಣಿಗಳಿಂದ ಕಲಿತದ್ದು ಬಹಳಷ್ಟಿದೆ, ಕೊನೆ ಯವರೆಗೂ ಈ ಇಬ್ಬರನ್ನು ಮರೆಯುವುದಿಲ್ಲ.