Siddaramaiah Record: ರಾಮಯ್ಯನಿಗೆ ಸಾಮಾಜಿಕ ನ್ಯಾಯವೇ ಸಿದ್ಧಾಂತ
ಅಕ್ಷರಾಭ್ಯಾಸದಿಂದ ಮೊದಲ್ಗೊಂಡು ಓದು ಬರಹವನ್ನು ಶ್ರದ್ಧೆಯಿಂದ ಕಲಿಸುತ್ತಾರೆ. ಮುಂದಿನ ಶಿಕ್ಷಣಕ್ಕೆ ಪೂರಕವಾಗುವಂತೆ ಅವನನ್ನು ಅಣಿಗೊಳಿಸುತ್ತಾರೆ. ಆ ದಿನ ಆ ಮೇಷ್ಟ್ರು ಈ ಕೆಲಸ ಮಾಡದೆ ಹೋಗಿದ್ದರೆ ಆ ಹುಡುಗನ ಭವಿಷ್ಯ ದನ, ಕುರಿ ಮೇಯಿಸಿ ಕೊಂಡು ಬೇಸಾಯ ಮಾಡಿಕೊಂಡು ಸಾಮಾನ್ಯ ರೈತಾಪಿ ಬದುಕಿಗೆ ಸೀಮಿತ ಆಗುತ್ತಿತ್ತು. ಆ ಹುಡುಗನೇ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು.
-
ಎಸ್.ಜಿ.ಸಿದ್ದರಾಮಯ್ಯ,
ಹಿರಿಯ ಸಾಹಿತಿ
ಅವಕಾಶಗಳಿಂದ ವಂಚಿತರಾದ ಸಮುದಾಯಗಳನ್ನು ಮೇಲೆತ್ತುವ ಚಿಂತನೆ ಮೈ ಗೂಡಿಸಿಕೊಂಡ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ವೈಚಾರಿಕತೆ ಯನ್ನು ಮುಖ್ಯ ಸಿದ್ಧಾಂತ ಮಾಡಿಕೊಂಡಿದ್ದಾರೆ. ಸಮಸಮಾಜ ನಿರ್ಮಾಣ, ಜನಪರ ಆಡಳಿತ ಎಂದರ್ಥ. ಸಂಪನ್ಮೂಲವನ್ನು ಸಮಾನವಾಗಿ ಹಂಚಿಕೆ ಮಾಡುವ ಉದ್ದೇಶ ದಲ್ಲಿ ಆಡಳಿತ ನಡೆಸಿರುವರು. ಡಿ.ದೇವರಾಜು ಅರಸು ಅವರ ಆಡಳಿತ ಸರಿಗಟ್ಟಿ ಸುದೀರ್ಘ ಸಿಎಂ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗೆ ಬಂದಿರುವುದು ನಮಗೆಲ್ಲ ಹೆಮ್ಮೆ.
ಪ್ರಾಥಮಿಕ ಶಾಲೆಗೆ ಕ್ರಮಬದ್ಧವಾಗಿ ಸೇರಿ ಶಿಕ್ಷಣ ಪಡೆದ ಹುಡುಗನೊಬ್ಬ ರಾಜಪ್ಪ ಮೇಷ್ಟ್ರು ಕಣ್ಣಿಗೆ ಬೀಳುತ್ತಾರೆ. ಹುಡುಗನ ಚುರುಕು ತನ ಕಂಡ ಮೇಷ್ಟ್ರು ಬೆರಗಾಗುತ್ತಾರೆ. ಅವನನ್ನು ಕರೆದುಕೊಂಡು ಬಂದು ನೇರವಾಗಿ ನಾಲ್ಕನೇ ತರಗತಿಗೆ ಸೇರಿಸಿಕೊಳ್ಳುತ್ತಾರೆ.
ಅಕ್ಷರಾಭ್ಯಾಸದಿಂದ ಮೊದಲ್ಗೊಂಡು ಓದು ಬರಹವನ್ನು ಶ್ರದ್ಧೆಯಿಂದ ಕಲಿಸುತ್ತಾರೆ. ಮುಂದಿನ ಶಿಕ್ಷಣಕ್ಕೆ ಪೂರಕವಾಗುವಂತೆ ಅವನನ್ನು ಅಣಿಗೊಳಿಸುತ್ತಾರೆ. ಆ ದಿನ ಆ ಮೇಷ್ಟ್ರು ಈ ಕೆಲಸ ಮಾಡದೆ ಹೋಗಿದ್ದರೆ ಆ ಹುಡುಗನ ಭವಿಷ್ಯ ದನ, ಕುರಿ ಮೇಯಿಸಿ ಕೊಂಡು ಬೇಸಾಯ ಮಾಡಿಕೊಂಡು ಸಾಮಾನ್ಯ ರೈತಾಪಿ ಬದುಕಿಗೆ ಸೀಮಿತ ಆಗುತ್ತಿತ್ತು. ಆ ಹುಡುಗನೇ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು.
ನಂಜುಂಡಸ್ವಾಮಿ ಗಾಢ ಪ್ರಭಾವ
ಕೇವಲ ಅಂಕಗಳಿಸುವ ವಿದ್ಯಾರ್ಥಿ ಆಗಿರದೆ ಅವರು, ಓದುವ ಸಮಯದಲ್ಲೇ ಸಾಮಾಜಿಕ ಸಂಕಷ್ಟಗಳಿಗೆ ಸ್ಪಂದಿಸುವ ಹೋರಾಟ ಪ್ರಜ್ಞೆಯನ್ನು ರೂಪಿಸಿಕೊಂಡರು. ಪ್ರೊ.ನಂಜುಂಡ ಸ್ವಾಮಿಯವರನ್ನು ರಾಜಕೀಯ ಗುರುವಾಗಿ ಸ್ವೀಕರಿಸಿದ ಇವರಿಗೆ ರಾಜಕೀಯವೆಂಬುದು ಅಧಿಕಾರದ ಅಹಂಕಾರವಾಗಲಿಲ್ಲ.
ಬದಲಾಗಿ ವಂಚಿತ ಜನಸಮುದಾಯಗಳಿಗೆ ಪ್ರಜಾಪ್ರಭುತ್ವದ ಅನುಕೂಲಗಳನ್ನು ಅವರ ಹಕ್ಕಿನ ಭಾಗವಾಗುವಂತೆ ಆಡಳಿತ ನಿರ್ವಹಿಸಲು ಒದಗಿ ಬಂದ ಅವಕಾಶವಾಯಿತು. ಪ್ರೊ.ನಂಜುಂಡಸ್ವಾಮಿಯವರ ರೈತ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಿದ್ದರಾಮಯ್ಯನವರಿಗೆ ಮೈಸೂರಿನ ಸಮಾಜವಾದಿ ಗೆಳೆಯರ ಚಿಂತನೆಗಳು ಅವರ ವ್ಯಕ್ತಿತ್ವವವನ್ನು ರೂಪಿಸಿದ ಧಾತುದ್ರವ್ಯಗಳಾದವು.
ಇದನ್ನೂ ಓದಿ: Siddaramaiah Record: ಅರಸು ಚಿಂತನೆ ನನಸಾಗಿಸಿದ ಸಿದ್ದರಾಮಯ್ಯ
ಕನ್ನಡ ಕಾವಲು ಸಮತಿಗೆ ಅಧ್ಯಕ್ಷ ಶಾಸಕರಾಗಿ, ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಹಲವು ಇಲಾಖೆಗಳ ಸಚಿವರಾಗಿ ಮುಖ್ಯವಾಗಿ ಅರ್ಥ ಸಚಿವರಾಗಿ, ಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ರಾಜ್ಯದ ರಾಜಕೀಯದಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಸಿದ್ದರಾಮಯ್ಯನವರು ಅಖಂಡ ಕರ್ನಾಟಕದ ಜನತೆಯ ಅಭಿಮಾನದ ರಾಜಕಾರಣಿ.
ನಿಜವಾದ ಅರ್ಥದಲ್ಲಿ ಒಬ್ಬ ಪರಿಪೂರ್ಣ ಜನನಾಯಕ, ಈ ಏರುಗತಿ ಯಾರದೋ ಕೃಪಾ ಶೀರ್ವಾದದ ಫಲವಾಗಿ ಬಂದಿದ್ದಲ್ಲ, ವ್ಯಕ್ತಿಗತ ನೆಲೆಯೂ ನಡೆನುಡಿ ಸಿದ್ದಾಂತದ ಬದ್ದತೆ ಕ್ರಿಯಾಶೀಲತೆಗಳ ಪರಿಣಾಮ ರೂಪಿಯಾಗಿ ಆರ್ಜಿಸಿದ ಸಾಧನೆ.
ಅರಸು ದಾಖಲೆ ಸರಿಗಟ್ಟಿದ ಧೀರ: ದಿವಂಗತ ಡಿ.ದೇವರಾಜ ಅರಸು ಅವರು ಕರ್ನಾಟಕ ಕಂಡ ಅಪರೂಪದ ಮಖ್ಯಮಂತ್ರಿ. ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲಿಗೆ ದನಿ ಇಲ್ಲದವರಿಗೆ ದನಿ ಕೊಟ್ಟ ನೇತಾರ. ಹಲವು ಬಗೆಯ ಪ್ರಗತಿಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮುಖೇನ ಬಡವರ ಬಾಳಿಗೆ ದೀನ ದುರ್ಬಲರ ಬದುಕಿಗೆ ಆಶಾ ದೀವಿಗೆಯಾದ ರಾಜಕೀಯ ಮತ್ಸದಿ.
ಕರ್ನಾಟಕದಲ್ಲಿ ಪ್ರಬಲ ಜಾತಿಗಳ ಮುಖ್ಯಮಂತ್ರಿಗಳು ತಮ್ಮ ಜಾತಿ ಬಲಾಢ್ಯತೆಯ ಕಾರಣದಲ್ಲಿ ರಾಜಕೀಯ ನಡೆಸಿದ್ದು ಉದ್ದಕ್ಕೂ ಕಂಡುಬರುವ ವಾಸ್ತವ ಸತ್ಯ. ಮೊಟ್ಟ ಮೊದಲ ಬಾರಿಗೆ ಈ ಜಾತಿ ರಾಜಕಾರಣಕ್ಕೆ ನಾಂದಿಹಾಡಿದವರು ಡಿ.ದೇವರಾಜ ಅರಸರು. ಅರಸು ಅವರ ಈ ಸುದೀರ್ಘ ಆಡಳಿತದ ಕಾಲಾವಧಿಯನ್ನು ಯಾರೂ ದಾಟಲು ಸಾಧ್ಯ ವಿಲ್ಲವೆಂಬ ವಾತಾವರಣ ರಾಜಕೀಯದಲ್ಲಿತ್ತು. ಆದರೆ ಅದನ್ನು ಯಶಸ್ವಿಯಾಗಿ ದಾಟಿದ ಮತ್ತು ದಕ್ಷ ಆಡಳಿತದ ಮುಖೇನ ಜನಮಾನಸದ ನಾಯಕರಾಗಿ ಬಿಂಬಿತ ರಾಗಿದವರು ಮಾನ್ಯ ಸಿದ್ದರಾಮಯ್ಯನವರು.
ಸಮಾಜವಾದಿ ತತ್ವಕ್ಕೆ ಬದ್ಧ: ಸಿದ್ದರಾಮಯ್ಯನವರು ರಾಜಕೀಯದಲ್ಲಿ ಒಕ್ಕೂಟ್ಟ ವ್ಯವಸ್ಥೆಗೆ ವಿರೋಧಿಯಾದ ಪಕ್ಷವನ್ನಲ್ಲ. ಇಂಥ ಅಬದ್ಧ ನಡೆಯನ್ನು ಇವರು ಕನಸು ಮನಸಿನಲ್ಲಿಯೂ ಎಣಿಸಲಾರರು. ಇದು ಇವರ ತಾತ್ವಿಕ ನಿಷ್ಠೆ ಮತ್ತು ಬದ್ಧತೆ.
ಕವಿಗಳ ಭೇಟಿಮಾಡಿ ಪ್ರಮಾಣ ವಚನ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಅವರ ನಡೆ ಇಡೀ ಕರ್ನಾಟಕದ ರಾಜಕಾರಣದಲ್ಲಿ ಒಂದು ಸೋಲು ಗೆಲವು ಎರಡರ ಅನುಭವವನ್ನು ಉಂಡವರು. ಅಲ್ಲದೆ ತಾತ್ವಿಕವಾಗಿ ಸಮಾಜವಾದಿ ಚಿಂತಕರಾಗಿ ಅವರು ಕೋಮುವಾದಿ ಬಲಪಂಥಿಯ ನಡೆಗಳನ್ನು ಸಹಿಸದವರಲ್ಲ. ಪಕ್ಷ ಸೇರ್ಪಡೆಯ ಇಕ್ಕಟ್ಟು ಬಿಕ್ಕಟ್ಟುಗಳು ಅವರ ರಾಜಕೀಯ ಬದುಕಿನಲ್ಲಿ ಎದುರಾಗಲು ಅವರು ಆಯ್ದುಕೊಂಡದ್ದು,
ಸಂವಿಧಾನದ ಮೂಲ ಆಶಯಗಳನ್ನು ಗೌರವಿಸುವ ರಾಷ್ಟ್ರೀಯ ಪಕ್ಷವನ್ನೇ ಹೊರತು ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂಬ ಅಪರೂಪದ ನಡೆಯಾಗಿದೆ. ಅವರು ಯಾವುದೇ ದೇವಸ್ಥಾನ ಮಠ ಮಂದಿರಗಳಿಗೆ ಹೋಗಿ ಆಶೀರ್ವಾದ ಪಡೆಯದೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೇರು ಸದೃಶರಾಗಿದ್ದ ರಾಷ್ಟ್ರ ಕವಿ ಡಾ.ಜಿ.ಎಸ್.ಶಿವರುದ್ರಪ್ಪ, ಜ್ಞಾನಪೀಠ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ಹಾಗೂ ದೇವನೂರ ಮಹದೇವ ಇವರ ಮನೆಗಳಿಗೆ ಹೋಗಿ ಸಮಾಲೋಚಿಸಿದರು.
ಆನಂತರ ಪ್ರಮಾಣ ವಚನ ಸ್ವೀಕಾರದ ವೇದಿಕೆಗೆ ಬಂದರು. ಇದು ಇವರ ತತ್ವ ಬದ್ಧತೆ ಯನ್ನು ದೃಢ ನಿಲುವಿನಲ್ಲಿ ಕ್ರಿಯೆಯಾಗಿಸುವ ಅರಿವಿನ ನಡೆ. ವಚನ ಚಳವಳಿ ಪ್ರಭಾವ ಸಿದ್ದರಾಮಯ್ಯನವರ ಪ್ರಮಾಣವಚನ ಸ್ವೀಕಾರ ಮಾಡಿದ ತರುವಾಯದಲ್ಲಿಯೇ ಘೋಷಿಸಿದ ಮೊದಲ ಜನಪರ ಕಾರ್ಯ ಕ್ರಮವೇ ಅನ್ನ ಭಾಗ್ಯ.
ಸಿದ್ದರಾಮಯ್ಯನವರನ್ನು ಹನ್ನೆರಡನೇ ಶತಮಾನದ ವಚನ ಚಳವಳಿ ಹೆಚ್ಚು ಪ್ರಭಾವಿಸಿದೆ. ಅದು ಶ್ರಮ ಜೀವಗಳು ಸಂಘಟಿತವಾಗಿ ನಡೆಸಿದ ಕಾಯಕ ಜೀವಿಗಳ ಮೊಟ್ಟ ಮೊದಲ ಕಾರ್ಮಿಕ ಚಳವಳಿ. ಅದರ ಸಂಘಟಕ ಶಕ್ತಿ ಬಸವಣ್ಣನವರು.
ಆದ್ದರಿಂದಲೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ದ್ದು ಬಸವ ಜಯಂತಿಯಂದು, ಬಸವಣ್ಣನವರ ಸಮಸಮಾಜದ ಕಲ್ಯಾಣ ರಾಜ್ಯದ ಅರಿವು ಸಿದ್ದರಾಮಯ್ಯನವರ ರಾಜಕೀಯದ ಕನಸು. ಅರಿವು ಕ್ರಿಯೆಯಾಗುವ ಪ್ರಜ್ಞಾಶಕ್ತಿಯ ಪರಿಣಾಮ ಅವರು ಹಲವು ಗ್ಯಾರಂಟಿ ಯೋಜನೆಗಳು, ಭಾಗ್ಯದ ಅನುಷ್ಠಾನಗಳು.
ತತ್ವ ನಿಷ್ಠೆಯ ಪ್ರತೀಕ
ಬಿಜ್ಜಳನ ರಾಜ್ಯದ ವಿತ್ತ ಮಂತ್ರಿಯಾಗಿದ್ದ ಬಸವಣ್ಣನವರ ದಾಸೋಹ ನೀತಿಯ ಭಾಗ ವೆಂಬಂತೆ ಈ ಗ್ಯಾರಂಟಿ ಯೋಜನೆಗಳು ಮತ್ತು ಭಾಗ್ಯದ ಅನುಷ್ಠಾನಗಳು. ಆದ್ದರಿಂದಲೇ ಬಸವಣ್ಣರವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದು ತತ್ವ ನಿಷ್ಠೆಯ ಪ್ರತೀಕವಾಗಿಯೇ ಹೊರತು ಬೇರೆ ಅಲ್ಲ. ಅಲ್ಲದೆ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದು ಕೂಡ ತಮ್ಮ ರಾಜಕೀಯ ನಡೆಯನ್ನು ಅರಿವಿನೆಚ್ಚರದಲ್ಲಿ ಮುನ್ನಡೆಸುವ ಶಕ್ತಿಯೂ ಪಾಕ್ಷಿಕ ರೂಪವಾಗಿ ಎಂಬುದು ಅವರ ಕನ್ನಡ ಪ್ರಜ್ಞೆಯ ಪ್ರತೀಕ. ಇಂದಿಗೂ ಅವರ ರಾಜಕೀಯ ಯೋಜನೆಗಳು ಬಸವ ಪ್ರಜ್ಞೆಯ ಯೋಜನೆಗಳು ಮುಂದುವರಿದಿರುವುದು ಜನತೆಗೆ ಅನುಭವಕ್ಕೆ ಬಂದ ಸತ್ಯವಾಗಿದೆ.