ಕರಾವಳಿಯ ಕುಮಟಾ ತಾಲ್ಲೂಕಿನ ಮೂರೂರಿನವರು. ಇವರದು ಯಕ್ಷಗಾನ ಕುಟುಂಬ. ಇವರ ಅಜ್ಜ ದೇವರು ಹೆಗಡೆಯವರು ಜನಪ್ರಿಯ ಯಕ್ಷಗಾನ ಕಲಾವಿದರು. ತಂದೆ ಕನ್ನಡದ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಕನ್ನಡ ಮತ್ತು ಕಲೆಯ ವಾತಾವರಣದ ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದು ಇವರ ಹೆಗ್ಗಳಿಕೆ. ಕುಮಟಾ ಮತ್ತು ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ನಡೆಯಿತು. ಓದಿದ್ದು ಇಂಜಿನಿಯರಿಂಗ್, ಶಾಸ್ತ್ರೀಯವಾಗಿ ಯಕ್ಷಗಾನವನ್ನು ಕಲಿತು ಕೆಲವು ಪ್ರದರ್ಶನಗಳಲ್ಲಿ ಭಾಗಿಯಾದವರು. ವೃತ್ತಿಯಲ್ಲಿ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಯಲ್ಲಿ ನಿರ್ದೇಶಕ. ದಶಕದಿಂದ ಅಮೆರಿಕಾದಲ್ಲಿ ವಾಸ. ಶಿಕಾಗೋದ ಬೋಲಿಂಗ್ ಬ್ರೂಕ್‌ನಲ್ಲಿ ಹೆಂಡತಿ ಮೇಘಾ ಮತ್ತು ಮಗಳು ಮೈನಾ ಜೊತೆ ಬದುಕು. ಇದಕ್ಕಿಂತ ಮೊದಲು ದಕ್ಷಿಣ ಅಮೆರಿಕಾದ ಉರುಗೈ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್ ದೇಶಗಳಲ್ಲಿ ಕೆಲ ಕಾಲ ವಾಸ. ಹತ್ತಕ್ಕೂ ಹೆಚ್ಚು ದೇಶ ನೋಡಿದ, ತಿರುಗಾಡಿದ ಅನುಭವ. ಕಳೆದ ನಾಲ್ಕು ವರ್ಷದಿಂದ ವಿಶ್ವವಾಣಿಯಲ್ಲಿ ಅಂಕಣಕಾರರಾಗಿ ಸಕ್ರಿಯ. ಓದು, ಬರವಣಿಗೆ, ಫೋಟೋಗ್ರಾಫಿ, ಪ್ರವಾಸ, ಕ್ರಿಕೆಟ್, ವಾಲಿಬಾಲ್ ಹವ್ಯಾಸಗಳು.