ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Siddaramaiah Record: ಚರಿತ್ರೆಯನ್ನು ಸೃಷ್ಟಿಸಿದ ಧೀಮಂತ ಸಿದ್ದರಾಮಯ್ಯ

ಒಂದೇ ವ್ಯತ್ಯಾಸವೆಂದರೆ-ಅರಸು ಅವರು ಅಡೆತಡೆ ಇಲ್ಲದೆ, ನಿರಂತರ ಆಳ್ವಿಕೆಯ ಮೂಲಕ ಈ ವಿಕ್ರಮವನ್ನು ಸ್ಥಾಪಿಸಿದ್ದರು; ಸಿದ್ದರಾಮಯ್ಯನವರು ಎರಡು ಅವಧಿಗಳಲ್ಲಿ ಈ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಏತನ್ಮಧ್ಯೆ, 2013ರಿಂದ 2018ರವರೆಗೆ ಮೊದಲ ಅವಧಿಯಲ್ಲಿ 5 ವರ್ಷಗಳನ್ನು ಪೂರೈಸಿದ ಸಿದ್ದರಾಮಯ್ಯನವರು, ಕರ್ನಾಟಕದ ರಾಜಕೀಯದ 40 ವರ್ಷಗಳ ಅಧ್ಯಾಯದಲ್ಲಿ ಸತತವಾಗಿ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದ ಪ್ರಪ್ರಥಮ ನಾಯಕ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಚರಿತ್ರೆಯನ್ನು ಸೃಷ್ಟಿಸಿದ ಧೀಮಂತ ಸಿದ್ದರಾಮಯ್ಯ

-

Ashok Nayak
Ashok Nayak Jan 6, 2026 8:33 AM

ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದಾಗಿನಿಂದ ಹಿಡಿದು 16 ಬಜೆಟ್‌ಗಳನ್ನು ಮಂಡಿಸಿರುವ ತನಕ ಸಿದ್ದರಾಮಯ್ಯರ ಖ್ಯಾತಿ ಹಬ್ಬಿದೆ. ತಮ್ಮ ಆರ್ಥಿಕ ಚಿಂತನೆಗಳ ಮೂಲಕ ಅವರು, ಕರ್ನಾಟಕವನ್ನು ಮುಂದುವರಿದ ರಾಜ್ಯಗಳ ಸಾಲಿನಲ್ಲಿ ಪ್ರತಿಷ್ಠಾಪಿಸಿರುವುದು ನಿಜಕ್ಕೂ ಹೆಗ್ಗಳಿಕೆಯ ವಿಚಾರ.

ಸಮಾಜದಲ್ಲಿ ಎರಡು ಬಗೆಯ ಜನರಿರುತ್ತಾರೆ. ಮೊದಲನೆಯವರು ಚರಿತ್ರೆಯನ್ನು ಓದುವವರು; ಇವರ ಸಂಖ್ಯೆ ವಿಪರೀತ, ಎರಡನೆಯವರು, ಚರಿತ್ರೆಯನ್ನು ಸೃಷ್ಟಿಸುವವರು; ಇವರು ಒಂದು ಇಡೀ ನಾಡಿನಲ್ಲಿ ಹುಡುಕಿದರೆ ಐದಾರು ಜನ ಸಿಗಬಹುದಷ್ಟೆ.

ಮಾನತೆಯ ತತ್ತ ವನ್ನು ಸಾರಿದ ಬಸವಣ್ಣ, ಬೆಂಗಳೂರಿಗೆ ಬುನಾದಿ ಹಾಕಿದ ಕೆಂಪೇ ಗೌಡರು, ಮಾದರಿ ಸಂಸ್ಥಾನದ ನಿರ್ಮಾತೃವಾಗಿ ರಾಜರ್ಷಿಗಳೆನಿಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್, ಕೈಗಾರಿಕೀಕರಣದ ಮೂಲಕ ಚಾರಿತ್ರಿಕ ಸಾಧನೆ ಮಾಡಿದ ಸರ್ ಎಂ. ವಿಶ್ವೇಶ್ವರಯ್ಯ, ಕರ್ನಾಟಕ ಏಕೀಕರಣದ ಹೊಂಗನಸಿಗೆ ಬೀಜ ಬಿತ್ತಿದ ಆಲೂರು ವೆಂಕಟ ರಾವ್, ಅದನ್ನು ತಮ್ಮ ರಾಜಕೀಯ ಸಂಕಲ್ಪದಿಂದ ನನಸು ಮಾಡಿದ ಎಸ್.ನಿಜಲಿಂಗಪ್ಪ, ‘ಉಳುವವನೇ ಹೊಲದೊಡೆಯ’ ಎನ್ನುವುದನ್ನು ಸಾಧಿಸಿ ತೋರಿಸಿದ ಡಿ.ದೇವರಾಜ ಅರಸು, ‘ಪಬ್ಲಿಕ್ ಇಂಟೆಲೆಕ್ಚುಯಲ್ ಆಗಿ ಸುಸಂಸ್ಕೃತ ಸಮಾಜಸೃಷ್ಟಿಗೆ ತುಡಿದ ಡಿ.ವಿ.ಗುಂಡಪ್ಪ, ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು-ಇಂಥವರು ಇತಿಹಾಸವನ್ನು ನಿರ್ಮಿಸಿದವರು, ಜಗತ್ತು ಮುಂದಕ್ಕೆ ಹೋಗುವುದು ಇಂತಹ ಮಹಾಮಹಿಮರಿಂದ.

ಈಗ ಹಾಲಿ ಮುಖ್ಯಮಂತ್ರಿ, ನಮ್ಮೆಲ್ಲರ ನೆಚ್ಚಿನ ನಾಯಕ, ದನಿ ಇಲ್ಲದವರ ದನಿ ಹೀಗೆ ಅನೇಕ ವಿಶೇಷಣಗಳಿಂದ ಕರೆಯಬಹುದಾದ ಸಿದ್ದರಾಮಯ್ಯನವರು ಕೂಡ ಇದೇ ಪಂಕ್ತಿಗೆ ಸೇರಿದ್ದಾರೆ. ಅವರು ಈ ನಾಡಿನ ಮುಖ್ಯಮಂತ್ರಿಯಾಗಿ, 7 ವರ್ಷ 239 ದಿನಗಳನ್ನು ಪೂರೈಸುತ್ತಿರುವ ದಾಖಲೆ ಇದಕ್ಕೆ ಮೂಲ ಕಾರಣರಾಗಿದ್ದಾರಲ್ಲದೆ, ದೇವರಾಜ ಅರಸು ಅವರನ್ನು ಮೀರಿ ನಿಂತಿದ್ದಾರೆ.

ಒಂದೇ ವ್ಯತ್ಯಾಸವೆಂದರೆ-ಅರಸು ಅವರು ಅಡೆತಡೆ ಇಲ್ಲದೆ, ನಿರಂತರ ಆಳ್ವಿಕೆಯ ಮೂಲಕ ಈ ವಿಕ್ರಮವನ್ನು ಸ್ಥಾಪಿಸಿದ್ದರು; ಸಿದ್ದರಾಮಯ್ಯನವರು ಎರಡು ಅವಧಿಗಳಲ್ಲಿ ಈ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಏತನ್ಮಧ್ಯೆ, 2013ರಿಂದ 2018ರವರೆಗೆ ಮೊದಲ ಅವಧಿಯಲ್ಲಿ 5 ವರ್ಷಗಳನ್ನು ಪೂರೈಸಿದ ಸಿದ್ದರಾಮಯ್ಯನವರು, ಕರ್ನಾಟಕದ ರಾಜಕೀಯದ 40 ವರ್ಷಗಳ ಅಧ್ಯಾಯದಲ್ಲಿ ಸತತವಾಗಿ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ಯನ್ನು ಅಲಂಕರಿಸಿದ್ದ ಪ್ರಪ್ರಥಮ ನಾಯಕ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಅಂದ ಹಾಗೆ, ಅರಸು ಮತ್ತು ಸಿದ್ದರಾಮಯ್ಯ ಇಬ್ಬರೂ ಮೈಸೂರು ಜಿಲ್ಲೆಯವರು ಎನ್ನುವುದು ವಿಶೇಷ.

ಇದನ್ನೂ ಓದಿ: Siddaramaiah Record: ಟೀಕೆಗಳನ್ನು ಮೀರಿ ಗೆದ್ದ ಪಂಚ ಗ್ಯಾರಂಟಿ

ವರ್ಚನಾಯಕ: ಅಂತರಂಗದಲ್ಲಿ ಸಮಾಜವಾದಿ, ಸೈದ್ಧಾಂತಿಕ ಬದ್ಧತೆ, ನಿಷ್ಕಳಂಕ ವ್ಯಕ್ತಿತ್ವ, ನಿಷ್ಠುರ ಮಾತಿನ ದಾಢಸಿತನ, ಅಲ್ಪಸಂಖ್ಯಾತರು- ಹಿಂದುಳಿದವರು ಮತ್ತು ದಲಿತರಿಗೆ ರಾಜಕೀಯ ಶಕ್ತಿ ತಂದಿತ್ತ ‘ಅಹಿಂದ’ದ ಪರಿಕಲ್ಪನೆ, ಬಸವಣ್ಣ ಮತ್ತು ಅಂಬೇಡ್ಕರ್ ತತ್ತ ಗಳ ಪರಿಪಾಲನೆ, ದುರ್ಬಲರ ಪರವಾದ ಕಳಕಳಿ, ಹಳ್ಳಿಯ ಮುಗ್ಧ ಮನಸ್ಸು, ಬಲಪಂಥೀಯ ಐಡಿಯಾಲಜಿಗೆ ಬದ್ಧ ವಿರೋಧ-ಇವು ಸಿದ್ದರಾಮಯ್ಯನವರಲ್ಲಿ ಎದ್ದು ಕಾಣುವ ಗುಣಲಕ್ಷಣಗಳು.

ಇವುಗಳ ಮೂಲಕ ಅವರು ಕರ್ನಾಟಕದ ಮಟ್ಟಿಗೆ ರಾಜಕೀಯದ ಚಹರೆಗಳನ್ನೇ ಬದಲಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಕಾಂಗ್ರೆಸ್ ವಿರೋಧಿ ಪಾಳೆಯದಲ್ಲಿ ರಾಜಕಾರಣ ಶುರು ಮಾಡಿದ ಸಿದ್ದರಾಮಯ್ಯನವರು, ಕೊನೆಗೆ ಕಾಂಗ್ರೆಸ್ ಪಕ್ಷಕ್ಕೆ ಬಂದು ಮುಖ್ಯಮಂತ್ರಿಗಳಾಗಿದ್ದು ಪ್ರಜಾಪ್ರಭುತ್ವದ ಸೌಂದರ್ಯ. ಈ ವಿಚಾರದಲ್ಲಿ ಅವರು ರಾಮಕೃಷ್ಣ ಹೆಗಡೆ ಮತ್ತು ಎಸ್.ಎಂ.ಕೃಷ್ಣ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಈ ರೀತಿಯ ಮಹಾಪಲ್ಲಟ ಧೀಮಂತರಿಗೆ ಮಾತ್ರ ಸಾಧ್ಯವಷ್ಟೆ.

ಸಿದ್ದರಾಮಯ್ಯನವರು ತೀರಾ ಸಾಧಾರಣ ಹಿನ್ನೆಲೆಯ, ದುರ್ಬಲ ಸಮುದಾಯದಿಂದ ಬಂದವರು. ತಮ್ಮ ಕುಟುಂಬದಲ್ಲಿ ಮೊಟ್ಟಮೊದಲ ಅಕ್ಷರಸ್ಥರಾದ ಇವರು, ಕಳೆದ ನಾಲ್ಕೂವರೆ ದಶಕಗಳಲ್ಲಿ ಸಾರ್ವಜನಿಕ ಬದುಕಿನಲ್ಲಿ ಮೂಡಿಸಿರುವ ಛಾಪು ಅನನ್ಯ.

ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದಾಗಿನಿಂದ ಹಿಡಿದು 16 ಬಜೆಟ್ ಗಳನ್ನು ಮಂಡಿಸಿರುವ ತನಕ ಇದರ ಹರಹು ಹಬ್ಬಿದೆ. ತಮ್ಮ ಆರ್ಥಿಕ ಚಿಂತನೆಗಳ ಮೂಲಕ ಅವರು, ಕರ್ನಾಟಕವನ್ನು ಮುಂದುವರಿದ ರಾಜ್ಯಗಳ ಸಾಲಿನಲ್ಲಿ ಪ್ರತಿಷ್ಠಾಪಿಸಿರುವುದು ನಿಜಕ್ಕೂ ಹೆಗ್ಗಳಿಕೆಯ ವಿಚಾರ.

ಇದರಲ್ಲಿ ಅವರು ವಿಚಾರಲಹರಿ ಯಾವತ್ತೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನಾಗಿ, ವಸ್ತುನಿಷ್ಠತೆಯನ್ನಾಗಲಿ ಯಾವತ್ತೂ ಬಿಟ್ಟುಕೊಟ್ಟಿಲ್ಲ. ಇದು ಮಾತೃಹೃದಯ ಇರುವ ನಾಯಕರು ಮಾತ್ರ ಆಗುವಂಥ ವಿದ್ಯಮಾನ. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಇಂದಿರಾ ಕ್ಯಾಂಟೀನ್ ಮುಂತಾದ ಯೋಜನೆಗಳೇ ಇದಕ್ಕೆ ಒಳ್ಳೆಯ ನಿದರ್ಶನಗಳು.

ಸಿದ್ದರಾಮಯ್ಯನವರು ತಮ್ಮ ಮುಖ್ಯ ಮಂತ್ರಿಗಿರಿಯ ಮೊದಲ ಅವಧಿಯಲ್ಲಿ ನನಗೆ ಜಲಸಂಪನ್ಮೂಲದಂತಹ ಮಹತ್ತರ ಖಾತೆಯನ್ನು ವಹಿಸಿದರು. ಕರ್ನಾಟಕ- ತಮಿಳು ನಾಡು ನಡುವಿನ ಕಾವೇರಿ ಜಲ ವಿವಾದದ ಅಂತಿಮ ತೀರ್ಪು ಬಂದಿದ್ದು ಆಗಲೇ!

ಆಗ ನಮ್ಮ ಈ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು, ನ್ಯಾಯವಾದಿ ಫಾಲಿ ನಾರಿಮನ್ ಅವರೊಡನೆ ವ್ಯವಹರಿಸಿ, ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಆಮೇಲೆ ರಾಜ್ಯದ ಪರವಾಗಿ ಒಳ್ಳೆಯ ತೀರ್ಪು ಬಂದ ಮೇಲೆ, ನಾರಿಮನ್ ಅವರನ್ನು ಇಬ್ಬರೂ ಒಟ್ಟಿಗೆ ಹೋಗಿ ಅಭಿನಂದಿಸಿದ್ದೆವು, ಹಾಗೆಯೇ ಕೃಷ್ಣಾ ಕೊಳ್ಳದ ವಿಚಾರದಲ್ಲೂ ಅವರು ನನಗೆ ಮುಕ್ತ ಅವಕಾಶ ಕೊಟ್ಟಿದ್ದ ಕಾರಣ ನೀರಾವರಿ ಪ್ರದೇಶ ವಿಸ್ತರಿಸಲು ಸಾಧ್ಯವಾಯಿತು.

ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ನಾನು, ನೀರಾವರಿ ಸೌಲಭ್ಯ ಕಲ್ಪಿಸುವ ವಿಚಾರ ದಲ್ಲಿ ಕ್ರಾಂತಿಕಾರಕವಾಗಿ ಕೆಲಸ ಮಾಡಲು ಸಾಧ್ಯವಾಯಿತು. ಇದರಿಂದಾಗಿ ಇಂದು ಲಕ್ಷಾಂತರ ಎಕರೆ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ.

ಪ್ರೇರಕ ಶಕ್ತಿ: ಈಗಿನ ಸಂಪುಟದಲ್ಲೂ ಅವರು ನನ್ನ ಮೇಲೆ ಇದೇ ನಂಬಿಕೆಯೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಖಾತೆಗಳನ್ನು ಕೊಟ್ಟಿದ್ದಾರೆ. ನಮ್ಮ ಇಲಾಖೆಯಿಂದ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶವೇ ಇರಲಿ, ಹೊಸ ಕೈಗಾರಿಕಾ ನೀತಿಯೇ ಇರಲಿ, ಹೂಡಿಕೆದಾರರನ್ನು ಸೆಳೆಯಲು ಕೈಗೊಂಡಿ ರುವ ವಿದೇಶ ಪ್ರವಾಸಗಳೇ ಇರಲಿ,

ಕ್ವಿನ್ ಸಿಟಿ ಪರಿಕಲ್ಪನೆಯೇ ಇರಲಿ, ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಚಿಂತನೆಯೇ ಇರಲಿ, ಸರಕಾರಿ ಉದ್ದಿಮೆಗಳ ಪುನಶ್ಚೇತನವೇ ಇರಲಿ-ಇವೆಲ್ಲವುಗಳ ಹಿಂದೆ ನನಗೆ ಸಿದ್ದರಾಮಯ್ಯನವರ ಉತ್ತೇಜನವಿದೆ. ನಾಯಕರಾದವರು ತಮ್ಮ ಸಹೋದ್ಯೋಗಿಗಳಲ್ಲಿ ಮಿತ್ರತ್ವದ ಭಾವನೆಯಲ್ಲಿ ಹೀಗೆ ನಡೆದುಕೊಳ್ಳುವುದು ಸತ್ಸಂಪ್ರದಾಯಕ್ಕೆ ಇನ್ನೊಂದು ಹೆಸರಾಗಿದೆ.

ಸಿದ್ದರಾಮಯ್ಯನವರು ಗಾಂಧೀಜಿ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಲೋಹಿಯಾ, ಅಂಬೇಡ್ಕರ್, ಕುವೆಂಪು-ಇಂಥವರಿಂದ ತಮಗೆ ಬೇಕಾದ ಸ್ಪೂರ್ತಿ, ಪ್ರೇರಣೆ ಪಡೆದಿರುವವರು. ಅವರು ರಾಜ್ಯದ ಜನಪ್ರಿಯ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಜಕಾರಣ ನಿಂತ ನೀರಲ್ಲ; ಅಧಿಕಾರ ಯಾರಿಗೂ ಶಾಶ್ವತವಲ್ಲ ಎನ್ನುವುದು ಅಂತಿಮ ಸತ್ಯ. ಆದರೆ ಸಿಕ್ಕಿರುವ ಅವಕಾಶದಲ್ಲಿ ಮೂಡಿಸಿದ ಹೆಜ್ಜೆಗುರುತುಗಳು ಮಾತ್ರ ಉಳಿಯುತ್ತ ವಷ್ಟೆ. ಈ ವಿಚಾರದಲ್ಲಿ ಸಿದ್ದರಾಮಯ್ಯನವರು ಅತ್ಯದ್ಭುತ ಸಾಲಿನಲ್ಲಿ ವಿರಾಜಿಸಲಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಇವರ ಹೆಸರು ಆಚಂದ್ರಾರ್ಕ. ಈ ವಿಶೇಷ ಸಂದರ್ಭದಲ್ಲಿ ಅವರಿಗೆ ಅಭಿನಂದಿಸುತ್ತೇನೆ.