ʼಸುವರ್ಣʼ ಇತಿಹಾಸ ಬರೆದ ʼಬಂಗಾರʼದ ಮನುಷ್ಯ
ಚಿತ್ರರಸಿಕರು ಇಂಥ ಟೀಕೆ-ಟಿಪ್ಪಣಿಗಳನ್ನು ಕಿವಿಗೆ ಹಾಕಿಕೊಳ್ಳದೆ, ‘ಬಂಗಾರದ ಮನುಷ್ಯ’ ಬಿಂಬಿಸಿದ ಉತ್ತಮಿಕೆಗಳಿಗೆ ಓಗೊಟ್ಟು ಪ್ರವಾಹದೋಪಾದಿಯಲ್ಲಿ ಚಿತ್ರಮಂದಿರಗಳಿಗೆ ದಾಂಗುಡಿಯಿಟ್ಟರು. ಇದಕ್ಕೆ ಪುರಾವೆ ಎಂಬಂತೆ, ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ (ಈಗ ಭೂಮಿಕಾ ಎಂದಾಗಿದೆ) ಬಿಡುಗಡೆ ಯಾದ ಈ ಚಿತ್ರ ಬರೋಬ್ಬರಿ 2 ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡರೆ, ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 60 ವಾರಗಳವರೆಗೆ ಓಡಿತು. ಮಾತ್ರವಲ್ಲದೆ, ರಾಜ್ಯದ ವಿವಿಧೆಡೆ 25 ವಾರಗಳ ಪ್ರದರ್ಶನ ಭಾಗ್ಯವನ್ನು ಕಂಡಿತು. 1988ರಲ್ಲಿ ಮರು ಬಿಡುಗಡೆಯಾದಾಗಲೂ 25 ವಾರಗಳ ಪ್ರದರ್ಶನ ಕಂಡ ಹೆಗ್ಗಳಿಕೆ ‘ಬಂಗಾರದ ಮನುಷ್ಯ’ನದ್ದು.